ಇಂಧನ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡಲು ಪವರ್ ಗ್ರಿಡ್ ನಿಂದ ಹಲವು ಉಪಕ್ರಮ


ಸಿಎಸ್ಆರ್ ಅಡಿ 1,14,30,000 ಮೌಲ್ಯದ 9 ಐಸಿಯು ವೆಂಟಿಲೇಟರ್ ಹಸ್ತಾಂತರಿಸಿದ ಪವರ್ ಗ್ರಿಡ್

ಲಸಿಕೀಕರಣ ಶಿಬಿರಗಳ ಆಯೋಜನೆ

ಕೋವಿಡ್ ಐಸೋಲೇಷನ್ ಕೇಂದ್ರಗಳ ಸ್ಥಾಪನೆ

Posted On: 15 MAY 2021 5:12PM by PIB Bengaluru

        ಭಾರತ ಸರ್ಕಾರದ ಇಂಧನ ಸಚಿವಾಲಯದಡಿ ಬರುವ ಸಾರ್ವಜನಿಕ ಸ್ವಾಮ್ಯದ ‘ಮಹಾರತ್ನ’, ಕಂಪನಿ ಭಾರತೀಯ ಪವರ್ ಗ್ರಿಡ್ ಕಾರ್ಪೊರೇಷನ್ ಲಿಮಿಟೆಡ್(ಪವರ್ ಗ್ರಿಡ್) ದೇಶಾದ್ಯಂತ ಸಕ್ರಿಯವಾಗಿ ತನ್ನೆಲ್ಲಾ ಕಚೇರಿಗಳಲ್ಲಿ ತನ್ನ ನೌಕರರಿಗೆ ಸಕಾಲದಲ್ಲಿ ನೆರವು ನೀಡುವ ಮೂಲಕ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ.

ಈ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ಒಂದು ಪ್ರಮುಖ ಅಸ್ತ್ರವಾಗಿದೆ ಮತ್ತು ಅದರಿಂದ ಸೋಂಕು ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಪವರ್ ಗ್ರಿಡ್ ಸಂಸ್ಥೆ ಗುರುಗ್ರಾಮದಲ್ಲಿರುವ ತನ್ನ ಕಾರ್ಪೊರೇಟ್ ಕೇಂದ್ರ ಕಚೇರಿ, ಎಲ್ಲಾ ಪ್ರಾದೇಶಿಕ ಕೇಂದ್ರ ಕಚೇರಿಗಳು ಒಳಗೊಂಡಂತೆ ದೇಶದ ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಉಪ ಕೇಂದ್ರಗಳು ಸೇರಿ ಎಲ್ಲಾ ಕಚೇರಿಗಳಲ್ಲಿ ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿದೆ. ಸಿಬ್ಬಂದಿ ಮತ್ತು ಅವರ ಕುಟುಂಬದವರ ಲಸಿಕೆಯ ವೆಚ್ಚವನ್ನು ಕಂಪನಿಯೇ ಭರಿಸುತ್ತಿದೆ. 18 ರಿಂದ 45 ವಯೋಮಾನ ಮತ್ತು 45 ವರ್ಷ ಮೇಲ್ಪಟ್ಟ ಎರಡು ವರ್ಗದವರಿಗೂ ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿದ್ದು, ನಿರಂತರವಾಗಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ನೆರವನ್ನು ಪವರ್ ಗ್ರಿಡ್ ಸಂಸ್ಥೆ ತನ್ನ ನಿವೃತ್ತ ಸಿಬ್ಬಂದಿ, ಗುತ್ತಿಗೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೂ ಸಹ ವಿಸ್ತರಿಸಿದೆ. ಅಲ್ಲದೆ ಇಂಧನ ಸಚಿವಾಲಯ ಮತ್ತು ಇಂಧನ ಸಚಿವಾಲಯ ಪಿಎಸ್ ಯುಗಳೂ ಸಹ ತನ್ನ ಸಿಬ್ಬಂದಿಗಳಿಗಾಗಿ ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿವೆ. ಈ ಲಸಿಕಾ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

        ಪವರ್ ಗ್ರಿಡ್ ಸಂಸ್ಥೆ ಎಲ್ಲಾ ಸೋಂಕಿತ ನೌಕರರು ಮತ್ತು ಅವರ ಕುಟುಂಬಗಳಿಗೆ ಉಚಿತ ಊಟದ ಸೇವೆ ಒದಗಿಸುತ್ತಿದೆ. ಅದೇ ಪದ್ಧತಿಯನ್ನು ಪವರ್ ಗ್ರಿಡ್ ನ ಇತರೆ ಕಚೇರಿಗಳಲ್ಲಿ ಮತ್ತು ಪ್ರಾದೇಶಿಕ ಕೇಂದ್ರ ಕಚೇರಿಗಳಲ್ಲಿ ಅನುಸರಿಸಲಾಗುತ್ತಿದೆ.

 

        ಪವರ್ ಗ್ರಿಡ್ ಸಂಸ್ಥೆ 2020ರಲ್ಲಿ ಸಾಂಕ್ರಾಮಿಕದ ಮಧ್ಯೆಯೇ ಗುರುಗ್ರಾಮದ ಸೆಕ್ಟರ್ 46ರಲ್ಲಿ ಸ್ಥಾಪಿಸಿದ್ದ ಐಸೋಲೇಷನ್ ಕೇಂದ್ರದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಅಲ್ಲದೆ ಮಾನೆಸರ್ ನಲ್ಲಿ ಹೊಸ ಐಸೋಲೇಷನ್ ಕೇಂದ್ರವನ್ನು ಸ್ಥಾಪಿಸಿದ್ದು, ಅದು ಈಗ ನಿವೃತ್ತ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗಾಗಿ ಲಭ್ಯವಿದೆ. ಮಾನೆಸರ್ ನಲ್ಲಿರುವ ಐಸೋಲೇಷನ್ ನಲ್ಲಿರುವ ಕೇಂದ್ರ 50 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಅಲ್ಲಿ ಕ್ವಾರಂಟೈನ್ ಅಗತ್ಯವಿರುವವರಿಗಾಗಿ ಪ್ರತ್ಯೇಕ ಹಾಸಿಗೆ ಸೌಕರ್ಯವೂ ಇದೆ.  ಐಸೋಲೇಷನ್ ಕೇಂದ್ರದಲ್ಲಿ ಸ್ಥಾನಿಕ ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಇದ್ದು, ಹಿರಿಯ ವೈದ್ಯರ ಸಮಾಲೋಚನೆ ಆನ್ ಲೈನ್ ಮೂಲಕ ಲಭ್ಯವಿದೆ. ಕೋವಿಡ್ ಚಿಕಿತ್ಸೆಗೆ ಅಗತ್ಯ ಆಕ್ಸಿಜನ್ ಸಾಂದ್ರಕಗಳು ಮತ್ತು ಸಿಲಿಂಡರ್, ಔಷಧಿಗಳ ವ್ಯವಸ್ಥೆ ಮಾಡಲಾಗಿದೆ. ಕಂಪನಿ ಸೋಂಕಿತರ ಚಿಕಿತ್ಸೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ವೈದ್ಯಕೀಯ ಸೇವೆ ಮತ್ತು ಸ್ಕ್ಯಾನ್ ಸೇವೆ ಒದಗಿಸುವವರ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ತೀವ್ರ ಅನಾರೋಗ್ಯಕ್ಕೊಳಗಾದರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ಆಂಬುಲೆನ್ಸ್ ಸೇವೆಯನ್ನೂ ಸಹ ಸನ್ನದ್ಧವಾಗಿ ಇಡಲಾಗಿದೆ. ಈ ಐಸೋಲೇಷನ್ ಕೇಂದ್ರಗಳು ಸುಸಜ್ಜಿತ ರೀತಿಯಲ್ಲಿದ್ದು, ರೋಗಿಗಳಿಗೆ ಉಚಿತ ಆಹಾರವನ್ನು ನೀಡಲಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಪವರ್ ಗ್ರಿಡ್ ಸಂಸ್ಥೆ ಭಾರತದಾದ್ಯಂತ ತನ್ನ ಇತರೆ ಕಚೇರಿಗಳಲ್ಲೂ ಸ್ಥಾಪಿಸಿದೆ. 

        ಪವರ್ ಗ್ರಿಡ್ ಸಂಸ್ಥೆ ತನ್ನ ಸಿಎಸ್ಆರ್ ನಿಧಿ ಅಡಿ ಚಂದ್ರಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಅವರಿಗೆ 1,14,30,000 ರೂ. ಮೌಲ್ಯದ ಸುಮಾರು 9 ಐಸಿಯು ವೆಂಟಿಲೇಟರ್ ಗಳನ್ನು ಹಸ್ತಾಂತರಿಸಿದೆ. ಈ ಐಸಿಯು ವೆಂಟಿಲೇಟರ್ ಗಳನ್ನು ಸದ್ಯದ ಸಾಂಕ್ರಾಮಿಕದ ಸಮಯದಲ್ಲಿ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು. ಅಲ್ಲದೆ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಿಲ್ಲಾಡಳಿತಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಲಾಗಿದೆ. 5,000 ಮಾಸ್ಕ್ ಮತ್ತು 500 ಬಾಟಲ್ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕೋವಿಡ್-19 ನಿಯಂತ್ರಣಕ್ಕಾಗಿ ಅಂಗುಲ್ ನ ಎಡಿಎಂಗೆ ಹಸ್ತಾಂತರಿಸಲಾಗಿದೆ. ಸದ್ಯದ ಸಾಂಕ್ರಾಮಿಕದ ಸ್ಥಿತಿಗತಿಯಲ್ಲಿ ಆಂಬುಲೆನ್ಸ್ ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು ಪವರ್ ಗ್ರಿಡ್ ಸಂಸ್ಥೆ ವಡೋದರ ಮಹಾನಗರ ಪಾಲಿಕೆಗೆ ಕೋವಿಡ್-19 ಬಾಧಿತ ರೋಗಿಗಳ ಆರೈಕೆಗಾಗಿ ಆಂಬುಲೆನ್ಸ್ ಅನ್ನು ಹಸ್ತಾಂತರಿಸಿದೆ. 

        ಸಾಂಕ್ರಾಮಿಕಕ್ಕೆ ತುತ್ತಾದ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ನೆರವು ನೀಡಲು ಎಲ್ಲ ವಲಯಗಳಲ್ಲಿ ವಿಶೇಷ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿ ಸಿಬ್ಬಂದಿ ಮತ್ತು ಅವರ ಕುಟುಂಬ ಆಸ್ಪತ್ರೆ ಸೇರುವುದಕ್ಕೆ, ಆಕ್ಸಿಜನ್ ಹಾಗೂ ಔಷಧ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಡುತ್ತಿದೆ. ಈ ಸೇವೆಗಳ ವಿವರಗಳನ್ನು ಎಲ್ಲಾ ಪ್ರಾದೇಶಿಕ ಕೇಂದ್ರ ಕಚೇರಿಗಳ ಅಂತರ್ಜಾಲ ಮತ್ತು ಇತರ ಎಲ್ಲ ಸಂಸ್ಥೆಗಳ ಅಂತರ್ಜಾಲ ವೆಬ್ ಸೈಟ್ ಗಳಲ್ಲಿ ಹಂಚಿಕೊಂಡಿರುವ ಕೇಂದ್ರೀಕೃತ ಸಹಾಯವಾಣಿ ಸಂಖ್ಯೆಗಳ ಮೂಲಕ ನೌಕರರಿಗೆ ಸೇವೆ ಒದಗಿಸಲಾಗುತ್ತಿದೆ.

          ಕಾರ್ಪೊರೇಟ್ ಸಂವಹನಾ ವಿಭಾಗ ಸಿಬ್ಬಂದಿ ಮತ್ತು ಸಾಮಾನ್ಯ ಜನರಿಗೆ ಕೋವಿಡ್-19 ಶಿಷ್ಟಾಚಾರ ಮತ್ತು ಸೂಕ್ತ ನಡವಳಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಸೃಜನ ಶೀಲ ವಿಡಿಯೋ, ಕರಪತ್ರ ಮತ್ತಿತರ ಉತ್ತೇಜನಕಾರಿ ವಿಧಾನಗಳ ಮೂಲಕ ಭಾರತ ಸರ್ಕಾರದ ಉಪಕ್ರಮಗಳ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ. ಇವೆಲ್ಲಾ ಜಾಗೃತಿ ಹೆಚ್ಚಳಕ್ಕೆ ಸಹಕಾರಿಯಾಗಿವೆ.

****



(Release ID: 1718956) Visitor Counter : 160