ನಾಗರೀಕ ವಿಮಾನಯಾನ ಸಚಿವಾಲಯ

ಪಶ್ಚಿಮ ಕರಾವಳಿಗೆ ಚಂಡಮಾರುತ ತೌಕ್ಟೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಸರ್ವ ಮುಂಜಾಗರೂಕತೆಗೆ ಕ್ರಮ

Posted On: 15 MAY 2021 5:22PM by PIB Bengaluru

ಚಂಡಮಾರುತ ತೌಕ್ಟೆ ಭಾರತದ ಪಶ್ಚಿಮ ಕರಾವಳಿಯನ್ನು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯಕ್ಕೆ ಸಂಬಂಧಿಸಿದ ತಾಂತ್ರಿಕ ಸುತ್ತೋಲೆಯನ್ವಯ  ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಉನ್ನತ ಆಡಳಿತವು ದಿಲ್ಲಿಯ ಸಾಂಸ್ಥಿಕ ಕೇಂದ್ರ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ದಕ್ಷಿಣ ವಲಯ ಮತ್ತು ಪೂರ್ವ ವಲಯದ ಪಶ್ಚಿಮ ಕರಾವಳಿಯ ವಿಮಾನ ನಿಲ್ದಾಣಗಳ ಸಿದ್ಧತಾ ಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿತು. ಎ.ಎ.ಐ.ಯ ಕಾರ್ಯಾಚರಣೆಗಳ ಸದಸ್ಯ ಶ್ರೀ ಐ.ಎನ್. ಮೂರ್ತಿ ಅವರು ಎಲ್ಲಾ ಸಂಬಂಧಿತ ವಿಮಾನ ನಿಲ್ದಾಣಗಳಿಗೆ ಅವಶ್ಯ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರಲ್ಲದೆ ಅವುಗಳ ಸಿದ್ಧತಾ ಸ್ಥಿತಿಯ ಬಗ್ಗೆಯೂ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಿದರು. 
ಲಕ್ಷದ್ವೀಪದಲ್ಲಿಯ ಅಗಟ್ಟಿ ವಿಮಾನ ನಿಲ್ದಾಣದಲ್ಲಿ 2021ರ ಮೇ 16ರವರೆಗೆ (10 ಗಂಟೆ) ಭಾರೀ ಮಳೆಯ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಅಮಾನತು ಮಾಡಲಾಗಿದೆ. ಚಂಡಮಾರುತ ಈ ಪ್ರದೇಶವನ್ನು ಹಾದು ಹೋದ ಬಳಿಕ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ತೆರೆಯಲಾಗುವುದು. ಎ.ಎ.ಐ. ಉನ್ನತ ಆಡಳಿತವು  ಇತರ ವಿಮಾನ ನಿಲ್ದಾಣಗಳ ಪರಿಸ್ಥಿತಿಯ ಮೇಲೆ   ಸತತ ನಿಗಾ ಇರಿಸಿದೆ. ಮತ್ತು ಇದುವರೆಗೆ ಯಾವುದೇ ಪ್ರತಿಕೂಲ ಪರಿಸ್ಥಿತಿಯ ಬಗ್ಗೆ ವರದಿಯಾಗಿಲ್ಲ ಮತ್ತು ಎಲ್ಲಾ ಕಾರ್ಯಾಚರಣೆಗಳು ಸಹಜ ಸ್ಥಿತಿಯಲ್ಲಿವೆ. 
ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯಕ್ಕೆ ಹಾನಿಯಾಗುವ ಸಂಭಾವ್ಯತೆಯನ್ನು ತಡೆಗಟ್ಟಲು ವಿಮಾನ ನಿಲ್ದಾಣಗಳಿಗೆ ಎಸ್.ಒ.ಪಿ. ಮತ್ತು ಮಾರ್ಗದರ್ಶಿಗಳ ಅನ್ವಯ ಯೋಜನೆ ರೂಪಿಸಿಕೊಳ್ಳುವಂತೆ ಸಲಹೆ ಮಾಡಲಾಗಿದೆ. ವಿಮಾನ ನಿಲ್ದಾಣ ಮೂಲಸೌಕರ್ಯವನ್ನು ಸುರಕ್ಷಿತವಾಗಿಡಲು, ತಪಾಸಣಾ ಪಟ್ಟಿಯ ಪ್ರಕಾರ ಚಂಡಮಾರುತ ಪೂರ್ವ ಮತ್ತು ಚಂಡಮಾರುತೋತ್ತರ ಮುಂಜಾಗರೂಕತಾ ಕ್ರಮಗಳನ್ನು ಸಂಬಂಧಿತ ವಿಮಾನ ನಿಲ್ದಾಣಗಳು ಖಾತ್ರಿಪಡಿಸುತ್ತಿವೆ. 
ಐ.ಎಂ.ಡಿ.ಯು ದಕ್ಷಿಣ ಗುಜರಾತ್ ಮತ್ತು ದಿಯು ಕರಾವಳಿಗೆ ಸಂಬಂಧಿಸಿ (ಲಕ್ಷದ್ವೀಪ ಪ್ರದೇಶದಲ್ಲಿ ವಾಯು ಭಾರ ಕುಸಿತ ) ಚಂಡಮಾರುತ ಪೂರ್ವ ನಿಗಾ ಕುರಿತಂತೆ ಹವಾಮಾನ ಮುನ್ಸೂಚನೆಯನ್ನು ನೀಡಿದೆ. ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳಲ್ಲಿ ತೀವ್ರ ತೆರನಾದ ಚಂಡಮಾರುತ ಬೀಸಲಿದೆ ಮತ್ತು ಅದು ಇನ್ನಷ್ಟು ಪ್ರಬಲಗೊಳ್ಳಲಿದೆ. ಅದು ಉತ್ತರ-ವಾಯುವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇದ್ದು, ಮೇ 18 ರ ಮುಂಜಾನೆ ಗುಜರಾತ್ ಕರಾವಳಿಯನ್ನು ತಲುಪಲಿದೆ. ಮತ್ತು ಲಕ್ಷದ್ವೀಪ ದ್ವೀಪಗಳು, ಕೇರಳ, ತಮಿಳುನಾಡು (ಘಾಟ್ ಜಿಲ್ಲೆಗಳು) ಹಾಗು ಕರ್ನಾಟಕ (ಕರಾವಳಿ ಮತ್ತು ನೆರೆಯ ಘಾಟ್ ಜಿಲ್ಲೆಗಳು) ಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. 

****


(Release ID: 1718955) Visitor Counter : 222