ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೋವಿಡ್ ಚಿಕಿತ್ಸೆಯ ಔಷಧಗಳು ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಪರಿಶೀಲಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು
ರೆಮ್‌ಡೆಸಿವಿರ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳವು ದೇಶೀಯವಾಗಿ ಚುಚ್ಚುಮದ್ದಿನ ಲಭ್ಯತೆಯನ್ನು ವೃದ್ಧಿಸುತ್ತದೆ - ಶ್ರೀ ಸದಾನಂದ ಗೌಡ
ಮೇ 3ರಿಂದ ಮೇ 9ರವರೆಗೆ 16.5 ಲಕ್ಷ ರೆಮ್‌ಡೆಸಿವಿರ್ ಸೀಸೆಗಳನ್ನು ಹಂಚಿಕೆ ಮಾಡಲಾಗಿದೆ
Posted On:
05 MAY 2021 2:52PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧ ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಪರಿಶೀಲಿಸಲು ಸಭೆ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ (ಔಷಧ) ಶ್ರೀಮತಿ ಎಸ್. ಅಪರ್ಣಾ, ಡಿಸಿಜಿಐ ಡಾ. ವಿ.ಜಿ. ಸೋಮನಿ, ʻಎನ್ಪಿಪಿಎʼ ಅಧ್ಯಕ್ಷೆ ಶ್ರೀಮತಿ ಶುಭ್ರಾ ಸಿಂಗ್, ಜಂಟಿ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ) ಡಾ. ಮನ್ದೀಪ್ ಕುಮಾರ್ ಭಂಡಾರಿ, ಜಂಟಿ ಕಾರ್ಯದರ್ಶಿ (ಔಷಧ) ಶ್ರೀಮತಿ ವಿನೋದ್ ಕೊತ್ವಾಲ್, ಎನ್ಪಿಪಿಎ ಸದಸ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಒಂದು ತಿಂಗಳ ಹಿಂದೆ ಮಾಸಿಕ 38 ಲಕ್ಷ ಸೀಸೆಗಳಷ್ಟಿದ್ದ ರೆಮ್ಡೆಸಿವಿರ್ ಉತ್ಪಾದನೆಯನ್ನು ಮಾಸಿಕ 1.03 ಕೋಟಿ ಸೀಸೆಗಳಿಗೆ ಹೆಚ್ಚಿಸಿರುವ ಎಲ್ಲಾ ಏಳು ಔಷಧ ಉತ್ಪಾದನಾ ಸಂಸ್ಥೆಗಳ ಪ್ರಯತ್ನಗಳ ಬಗ್ಗೆ ಸಭೆಯಲ್ಲಿ ಸದಾನಂದ ಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಾಮರ್ಥ್ಯ ಹೆಚ್ಚಳದಿಂದಾಗಿ ಚುಚ್ಚುಮದ್ದಿನ ದೇಶೀಯ ಲಭ್ಯತೆ ಹೆಚ್ಚುತ್ತದೆ. ಮೇ 3ರಿಂದ ಮೇ 9ರ ನಡುವಿನ ಅವಧಿಯಲ್ಲಿ ರೆಮ್ಡೆಸಿವಿರ್ನ 16.5 ಲಕ್ಷ ಸೀಸೆಗಳನ್ನು ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಏಪ್ರಿಲ್ 21ರಿಂದ ಇಲ್ಲಿಯವರೆಗೆ ಒಟ್ಟು 34.5 ಲಕ್ಷ ಸೀಸೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯಗಳಿಗೆ ಹಂಚಿಕೆಯು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು, ಮುಂಬರುವ ವಾರಗಳಲ್ಲಿ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.
ಇತರ ಅಗತ್ಯ ಔಷಧಗಳ ಲಭ್ಯತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಕಾಳಸಂತೆ ಮಾರಾಟ ಮತ್ತು ಅಕ್ರಮ ದಾಸ್ತಾನು ಪ್ರಕರಣಗಳನ್ನು ಅಗತ್ಯವನ್ನು ಶ್ರೀ ಗೌಡ ಅವರು ಒತ್ತಿ ಹೇಳಿದರು. ಮಾರುಕಟ್ಟೆಯಲ್ಲಿ ವಿವಿಧ ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ʻಡಿಸಿಜಿಐʼನ ಡಾ. ಸೋಮನಿ ಮಾಹಿತಿ ನೀಡಿದರು. ಪ್ರಸ್ತುತ, ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಗಳ ಲಭ್ಯತೆ ಇದೆ. ಔಷಧ ಇಲಾಖೆ, ಎನ್ಪಿಪಿಎ ಮತ್ತು ಸಿಡಿಎಸ್ಸಿಒ ಇಂತಹ ಔಷಧಗಳ ಲಭ್ಯತೆಯ ಬಗ್ಗೆ ನಿಕಟ ಮೇಲ್ವಿಚಾರಣೆ ಮುಂದುವರಿಸಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಳಸಂತೆಯಲ್ಲಿ ಮಾರಾಟ ಮತ್ತು ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ, ಕ್ಷೇತ್ರ ತಪಾಸಣೆಗಾಗಿ ರಾಜ್ಯ ಮಟ್ಟದಲ್ಲಿ ತಂಡಗಳನ್ನು ಮಾಡಲು ರಾಜ್ಯ ಔಷಧ ನಿಯಂತ್ರಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಕಾಳ ಸಂತೆಯಲ್ಲಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ರೆಮ್ಡೆಸಿವಿರ್, ಟೋಸಿಲಿಜುಮ್ಯಾಬ್, ಫೇವಿಪಿರಾವಿರ್ ಮುಂತಾದ ಕೋವಿಡ್ ನಿರ್ವಹಣಾ ಔಷಧಗಳ ದಾಸ್ತಾನು/ ಕಾಳ ಸಂತೆಯಲ್ಲಿ ಮಾರಾಟ/ ಅಧಿಕ ದರದಲ್ಲಿ ಮಾರಾಟವನ್ನು ತಡೆಯಲು ʻಡಿಸಿಜಿಐʼ/ʻಎಸ್ಡಿಸಿʼಗಳು ಹಲವಾರು ನಿಯಂತ್ರಣ ಕೈಗೊಂಡಿವೆ. 1.5.2021ರ ವೇಳೆಗೆ, ಭಾರತದಾದ್ಯಂತ 78 ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ʻಎಸ್ಡಿಸಿಗಳು, ಸ್ಥಳೀಯ ಪೊಲೀಸರು, ಎಫ್ಡಿಎ ಇತ್ಯಾದಿಗಳೊಂದಿಗೆ ಸಹಯೋಗದೊಂದಿಗೆ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ, ಕಾಳಸಂತೆಯಲ್ಲಿ ಮಾರಾಟ ಮುಂತಾದ ದಂಧೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ಈ ಸಂಬಂಧ ಹಲವರನ್ನು ಬಂಧಿಸಿ, ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಧಿತರಿಂದ ಔಷಧಗಳು, ವಾಹನಗಳು, ಖಾಲಿ ಸೀಸೆಗಳು (ಬಹುಶಃ ನಕಲಿ ಔಷಧಿಗಳನ್ನು ತಯಾರಿಸಲು) ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಚಂಡೀಗಢದಲ್ಲಿ ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ, ಸುಮಾರು 3000 ರೆಮ್ಡೆಸಿವಿರ್ ಸೀಸೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಗಳು ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಅಲ್ಪಾವಧಿಯಲ್ಲಿ ಹೆಚ್ಚಿಸಲು ಔಷಧ ಕಂಪನಿಗಳು ಮತ್ತು ಔಷಧ ಇಲಾಖೆ, ಎನ್ಪಿಪಿಎ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ʻಸಿಡಿಎಸ್ಸಿಒʼದ ಅಧಿಕಾರಿಗಳ ನಡುವಿನ ನಿಕಟ ಸಹಕಾರ ಮತ್ತು ಅವರ ಸಂಘಟಿತ ಪ್ರಯತ್ನಗಳನ್ನು ಶ್ರೀ ಗೌಡ ಅವರು ಶ್ಲಾಘಿಸಿದರು. ಸರಕಾರ ಮತ್ತು ಖಾಸಗಿ ವಲಯದ ನಡುವಿನ ಇಂತಹ ನಿಕಟ ಸಹಯೋಗದ ಈಗಿನ ತುರ್ತು ಅಗತ್ಯ ಎಂದು ಅವರು ಹೇಳಿದರು.
***
(Release ID: 1716274)
Visitor Counter : 247