ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಯ ಲಭ್ಯತೆಯನ್ನು ಹೆಚ್ಚಿಸುವ ಪ್ರಮುಖ ನಿರ್ಧಾರಗಳಿಗೆ ಪ್ರಧಾನಿ ಸಮ್ಮತಿ


ನೀಟ್-ಸ್ನಾತಕೋತ್ತರ ಪರೀಕ್ಷೆ ಕನಿಷ್ಠ 4 ತಿಂಗಳವರೆಗೆ ಮುಂದೂಡಿಕೆ

100 ದಿನಗಳ ಕೋವಿಡ್ ಕರ್ತವ್ಯ ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಮುಂದಿನ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ

ವೈದ್ಯಕೀಯ ಇಂಟರ್ನ್‌ಗಳು ಅವರ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕೋವಿಡ್ ಮ್ಯಾನೇಜ್‌ಮೆಂಟ್ ಕರ್ತವ್ಯಕ್ಕೆ ನಿಯೋಜನೆ

ಟೆಲಿ-ಸಮಾಲೋಚನೆ ಮತ್ತು ಸೌಮ್ಯ ರೋಗಲಕ್ಷಣಗಳ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಗೆ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು

ಪೂರ್ಣಾವಧಿಯ ಕೋವಿಡ್ ನರ್ಸಿಂಗ್ ಕರ್ತವ್ಯಕ್ಕೆ ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಅರ್ಹ ಬಿಎಸ್ಸಿ / ಜಿಎನ್ಎಂ ದಾದಿಯರು

100 ದಿನಗಳ ಕೋವಿಡ್ ಕರ್ತವ್ಯಗಳನ್ನು ಪೂರೈಸುವ ವೈದ್ಯಕೀಯ ಸಿಬ್ಬಂದಿಗೆ ಪ್ರಧಾನ ಮಂತ್ರಿಯವರ ಪ್ರತಿಷ್ಠಿತ ಕೋವಿಡ್ ರಾಷ್ಟ್ರೀಯ ಸೇವಾ ಸಮ್ಮಾನ್

Posted On: 03 MAY 2021 2:59PM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡಲು ದೇಶದಲ್ಲಿರುವ ಮಾನವ ಸಂಪನ್ಮೂಲಗಳ ಅಗತ್ಯವನ್ನು ಪ್ರಧಾನಿಯವರು ಇಂದು ಪರಿಶೀಲಿಸಿದ್ದು, ಕುರಿತು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ತೀರ್ಮಾನಗಳು ಕೋವಿಡ್ ಕರ್ತವ್ಯಕ್ಕೆ ವೈದ್ಯಕೀಯ ಸಿಬ್ಬಂದಿಯ ಲಭ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ.

ನೀಟ್-ಸ್ನಾತಕೋತ್ತರ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಪರೀಕ್ಷೆಯನ್ನು 2021 ಆಗಸ್ಟ್ 31 ಕ್ಕೂ ಮೊದಲು ನಡೆಸುವುದಿಲ್ಲ. ಪರೀಕ್ಷೆಯನ್ನು ಘೋಷಿಸಿದ ನಂತರ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಸಮಯವನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಕೋವಿಡ್ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯ ಅರ್ಹ ವೈದ್ಯರು ಲಭ್ಯವಾಗುತ್ತಾರೆ.

ಇಂಟರ್ನ್ಶಿಪ್ ಪಾಳಿಯ ಭಾಗವಾಗಿ ವೈದ್ಯಕೀಯ ಇಂಟರ್ನ್ ಗಳನ್ನು ಅವರ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕೋವಿಡ್ ನಿರ್ವಹಣಾ ಕರ್ತವ್ಯಗಳಲ್ಲಿ ನಿಯೋಜಿಸಿಕೊಳ್ಳಲು ಅನುಮತಿ ನೀಡಲು ನಿರ್ಧರಿಸಲಾಯಿತು. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಸೇವೆಗಳನ್ನು ಟೆಲಿ-ಸಮಾಲೋಚನೆ ಮತ್ತು ಸೌಮ್ಯ ರೋಗ ಲಕ್ಷಣಗಳ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಯಂತಹ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು. ಇದು ಈಗಾಗಲೇ ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಆದ್ಯತೆಯ ಚಿಕಿತ್ಸೆಗಳಿಗೆ ಉತ್ತೇಜನ ನೀಡುತ್ತದೆ.

ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಗಳ (ಎಲ್ಲ ಮತ್ತು ಸೂಪರ್-ಸ್ಪೆಷಾಲಿಟಿ) ಬಳಕೆಯನ್ನು ಸ್ನಾತಕೋತ್ತರ ವಿದ್ಯಾರ್ಥಿಗಳ ಹೊಸ ಬ್ಯಾಚ್ಗಳು ಬರುವವರೆಗೂ ಮುಂದುವರಿಸಬಹುದು.

ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಅರ್ಹ ಬಿ.ಎಸ್ಸಿ / ಜಿಎನ್ಎಂ ದಾದಿಯರನ್ನು ಪೂರ್ಣಾವಧಿಯ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ಬಳಸಿಕೊಳ್ಳಬಹುದು.

ಕೋವಿಡ್ ನಿರ್ವಹಣೆಯ ಸೇವೆಗಳಲ್ಲಿ ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯವನ್ನು ಪೂರ್ಣಗೊಳಿಸಿದವರಿಗೆ  ನಂತರ ಮುಂದಿನ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ.

ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುವ ವೈದ್ಯಕೀಯ ವಿದ್ಯಾರ್ಥಿಗಳು / ವೃತ್ತಿಪರರಿಗೆ ಸೂಕ್ತ ಲಸಿಕೆ ನೀಡಲಾಗುವುದು. ಹೀಗೆ ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಆರೋಗ್ಯ ವೃತ್ತಿಪರರು ಕೋವಿಡ್ 19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರು ಸರ್ಕಾರದ ವಿಮಾ ಯೋಜನೆಗೆ ಒಳಪಡುತ್ತಾರೆ.

ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ವೃತ್ತಿಪರರಿಗೆ ಭಾರತ ಸರ್ಕಾರದಿಂದ ಪ್ರಧಾನ ಮಂತ್ರಿಯವರ ಪ್ರತಿಷ್ಠಿತ ಕೋವಿಡ್ ರಾಷ್ಟ್ರೀಯ ಸೇವಾ ಸಮ್ಮಾನ್ ಸಹ ನೀಡಲಾಗುವುದು.

ವೈದ್ಯರು, ದಾದಿಯರು ಮತ್ತು ಸಂಬಂಧಿತ ವೃತ್ತಿಪರರು ಕೋವಿಡ್ ನಿರ್ವಹಣೆಯಲ್ಲಿ ಬೆನ್ನೆಲುಬಾಗಿರುತ್ತಾರೆ ಮತ್ತು ಅವರು ಮುಂಚೂಣಿ ಸಿಬ್ಬಂದಿಯೂ ಹೌದು. ರೋಗಿಗಳ ಅಗತ್ಯಗಳನ್ನು ಉತ್ತಮವಾಗಿ ಪರಿಹರಿಸಲು ಸಾಕಷ್ಟು ಪ್ರಮಾಣದ ಅವರ ಸಂಖ್ಯೆಯು ನಿರ್ಣಾಯಕವಾಗಿದೆ. ವೈದ್ಯಕೀಯ ಸಮುದಾಯದ ಅದ್ಭುತವಾದ ಕೆಲಸ ಮತ್ತು ಬದ್ಧತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.

ಕೋವಿಡ್ ಕರ್ತವ್ಯಕ್ಕಾಗಿ ವೈದ್ಯರು / ದಾದಿಯರನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಜೂನ್ 16, 2020 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕೋವಿಡ್ ನಿರ್ವಹಣೆಗೆ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು 15,000 ಕೋಟಿ ರೂ.ಗಳ ವಿಶೇಷ ಸಾರ್ವಜನಿಕ ಆರೋಗ್ಯ ತುರ್ತು ನೆರವವನ್ನು ಒದಗಿಸಿತು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ತೊಡಗಿಸಿಕೊಳ್ಳುವ ಸಿಬ್ಬಂದಿ, 2206 ಹೆಚ್ಚುವರಿ ತಜ್ಞರು, 4685 ವೈದ್ಯರು ಮತ್ತು 25,593 ದಾದಿಯರನ್ನು ಪ್ರಕ್ರಿಯೆಯ ಮೂಲಕ ನೇಮಕ ಮಾಡಿಕೊಳ್ಳಲಾಯಿತು.

ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರಗಳ ಪೂರ್ಣ ವಿವರಗಳು ಹೀಗಿವೆ

. ವಿನಾಯ್ತಿ / ಸೌಲಭ್ಯ / ವಿಸ್ತರಣೆ

ನೀಟ್-ಸ್ನಾತಕೋತ್ರ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಿಕೆ: ಕೋವಿಡ್ - 19 ಮರು ಅಲೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ನೀಟ್ (ಸ್ನಾತಕೋತ್ತರ) – ಪರೀಕ್ಷೆ 2021ನ್ನು ಮುಂದೂಡಲಾಗಿದೆ. ಪರೀಕ್ಷೆಯು 2021 ಆಗಸ್ಟ್ 31 ಕ್ಕೂ ಮೊದಲು ನಡೆಯುವುದಿಲ್ಲ. ಪರೀಕ್ಷೆಗೆ ಅದನ್ನು ಪ್ರಕಟಿಸಿದ ನಂತರ ಕನಿಷ್ಠ ಒಂದು ತಿಂಗಳ ಸಮಯವನ್ನು ನೀಡಲಾಗುತ್ತದೆ.

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಅಂತಹ ಪ್ರತಿಯೊಬ್ಬ ನೀಟ್ ಪರೀಕ್ಷೆಯ ಅಭ್ಯರ್ಥಿಯನ್ನು ತಲುಪಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಮತ್ತು ಅಗತ್ಯದ ಸಂದರ್ಭದಲ್ಲಿ ಕೋವಿಡ್ - 19 ಕಾರ್ಯಪಡೆಗೆ ಸೇರಲು ವಿನಂತಿಸಿಕೊಳ್ಳಬೇಕು. ಎಂಬಿಬಿಎಸ್ ವೈದ್ಯರ ಸೇವೆಗಳನ್ನು ಕೋವಿಡ್-19 ನಿರ್ವಹಣೆಯಲ್ಲಿ ಬಳಸಿಕೊಳ್ಳಬಹುದು. ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಇಂಟರ್ನ್ಶಿಪ್ ಪಾಳಿಯ ಭಾಗವಾಗಿ ಅವರ ಬೋಧಕವರ್ಗದ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ ಇಂಟರ್ನ್ಗಳನ್ನು ಕೋವಿಡ್ ನಿರ್ವಹಣಾ ಕರ್ತವ್ಯಗಳಲ್ಲಿ ನಿಯೋಜಿಸಬಹುದು. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಟೆಲಿ-ಸಮಾಲೋಚನೆ ಮತ್ತು ಸೌಮ್ಯ ರೋಗ ಲಕ್ಷಣಗಳ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಯಂತಹ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು.

ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಗಳ ಮುಂದುವರಿಕೆ: ಸ್ನಾತಕೋತ್ತರ ವಿದ್ಯಾರ್ಥಿಗಳ ಹೊಸ ಬ್ಯಾಚ್ಗಳು ಬರುವವರೆಗೂ ಅಂತಿಮ ವರ್ಷದ ಪಿಜಿ ವಿದ್ಯಾರ್ಥಿಗಳ (ಎಲ್ಲ ಮತ್ತು ಸೂಪರ್-ಸ್ಪೆಷಾಲಿಟಿ) ಸೇವೆಗಳನ್ನು ಮುಂದುವರಿಸಬಹುದು. ಹಾಗೆಯೇ, ಹೊಸ ನೇಮಕಾತಿಗಳನ್ನು ಮಾಡುವವರೆಗೆ ಹಿರಿಯ ರೆಸಿಡೆಂಟ್ಸ್ / ರಿಜಿಸ್ಟ್ರಾರ್ಗಳ ಸೇವೆಗಳನ್ನು ಬಳಸಿಕೊಳ್ಳಬಹುದು.

ನರ್ಸಿಂಗ್ ಸಿಬ್ಬಂದಿ: ಅರ್ಹ ಬಿ.ಎಸ್ಸಿ / ಜಿಎನ್ಎಂ ದಾದಿಯರನ್ನು ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಐಸಿಯು ಮತ್ತಿತರ ಕಡೆಗಳಲ್ಲಿ ಪೂರ್ಣಾವಧಿಯ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ಬಳಸಿಕೊಳ್ಳಬಹುದು. ಎಂ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳು, ಪೋಸ್ಟ್ ಬೇಸಿಕ್ ಬಿ.ಎಸ್ಸಿ. (ಎನ್) ಮತ್ತು ಪೋಸ್ಟ್ ಬೇಸಿಕ್ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳು ನೋಂದಾಯಿತ ನರ್ಸಿಂಗ್ ಅಧಿಕಾರಿಗಳಾಗಿದ್ದು, ಆಸ್ಪತ್ರೆಯ ಪ್ರೋಟೋಕಾಲ್ / ನೀತಿಗಳ ಪ್ರಕಾರ ಕೋವಿಡ್-19 ರೋಗಿಗಳ ಆರೈಕೆಗೆ ಅವರ ಸೇವೆಗಳನ್ನು ಬಳಸಿಕೊಳ್ಳಬಹುದು. ಅಂತಿಮ ವರ್ಷದ ಜಿಎನ್ಎಂ ಅಥವಾ ಬಿ.ಎಸ್ಸಿ. (ನರ್ಸಿಂಗ್) ಪರೀಕ್ಷೆಗೆ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಹಿರಿಯ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ವಿವಿಧ ಸರ್ಕಾರಿ / ಖಾಸಗಿ ಸೌಲಭ್ಯಗಳಲ್ಲಿ ಪೂರ್ವಾವಧಿಯ ಕೋವಿಡ್ ನರ್ಸಿಂಗ್ ಕರ್ತವ್ಯಗಳಿಗೆ ನಿಯೋಜಿಸಬಹುದು.

ಹೆಲ್ತ್ ಕೇರ್ ಸಂಬಂಧಿತ ವೃತ್ತಿಪರರ ಸೇವೆಗಳನ್ನು ಅವರ ತರಬೇತಿ ಮತ್ತು ಪ್ರಮಾಣೀಕರಣದ ಆಧಾರದ ಮೇಲೆ ಕೋವಿಡ್ ನಿರ್ವಹಣೆಯಲ್ಲಿ ಸಹಾಯಕ್ಕಾಗಿ ಬಳಸಿಕೊಳ್ಳಬಹುದು.

ಹೀಗೆ ಸಜ್ಜುಗೊಳಿಸಿದ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಕೋವಿಡ್ ನಿರ್ವಹಣೆಯ ಸೌಲಭ್ಯಗಳಲ್ಲಿ ಮಾತ್ರ ಬಳಸಬೇಕು.

ಬಿ. ಪ್ರೋತ್ಸಾಹಕಗಳು/ ಸೇವೆಗೆ ಮನ್ನಣೆ

ಕೋವಿಡ್ ನಿರ್ವಹಣೆಯಲ್ಲಿ ಸೇವೆಗಳನ್ನು ಒದಗಿಸುವ ವ್ಯಕ್ತಿಗಳಿಗೆ ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಮುಂದಿನ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ.

ಹೆಚ್ಚುವರಿ ಮಾನವಸಂಪನ್ಮೂಲವನ್ನು ತೊಡಗಿಸಿಕೊಳ್ಳಲು ಮೇಲಿನ ಉದ್ದೇಶಿತ ಉಪಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಒಪ್ಪಂದದ ಮಾನವ ಸಂಪನ್ಮೂಲ ಕುರಿತ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ಎಚ್ಎಂ) ನಿಯಮಗಳನ್ನು ಪರಿಗಣಿಸಬಹುದು. ಎನ್ಎಚ್ಎಂ ಮಾನದಂಡಗಳಂತೆ ಸಂಭಾವನೆಯನ್ನು ನಿರ್ಧರಿಸಲು ರಾಜ್ಯಗಳಿಗೆ ಅವಕಾಶವಿರುತ್ತದೆ. ವಿಶೇಷ ಕೋವಿಡ್ ಸೇವೆಗೆ ಸೂಕ್ತವಾದ ಗೌರವಧನವನ್ನು ನೀಡುವ ಬಗ್ಗೆಯೂ ಪರಿಗಣಿಸಬಹುದು.

ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುವ ವೈದ್ಯಕೀಯ ವಿದ್ಯಾರ್ಥಿಗಳು / ವೃತ್ತಿಪರರಿಗೆ ಸೂಕ್ತ ಲಸಿಕೆ ನೀಡಲಾಗುವುದು. ಹೀಗೆ ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಆರೋಗ್ಯ ವೃತ್ತಿಪರರು ಕೋವಿಡ್ 19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರ ಸರ್ಕಾರದ ವಿಮಾ ಯೋಜನೆಯಡಿ ಬರುತ್ತಾರೆ.

ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ವೃತ್ತಿಪರರಿಗೆ ಭಾರತ ಸರ್ಕಾರದಿಂದ ಪ್ರಧಾನ ಮಂತ್ರಿಯವರ ಪ್ರತಿಷ್ಠಿತ ಕೋವಿಡ್ ರಾಷ್ಟ್ರೀಯ ಸೇವಾ ಸಮ್ಮಾನ್ ಸಹ ನೀಡಲಾಗುವುದು.

ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆರೋಗ್ಯ ವೃತ್ತಿಪರರನ್ನು ರಾಜ್ಯ ಸರ್ಕಾರಗಳು ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಮತ್ತು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡಬಹುದು.

ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳಲ್ಲಿ ಖಾಲಿ ಇರುವ ವೈದ್ಯರು, ದಾದಿಯರು, ಸಂಬಂಧಿತ ವೃತ್ತಿಪರರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳ ಹುದ್ದೆಗಳನ್ನು ಎನ್ಎಚ್ಎಂ ಮಾನದಂಡಗಳ ಆಧಾರದ ಮೇಲೆ 45 ದಿನಗಳೊಳಗೆ ಗುತ್ತಿಗೆ ನೇಮಕಾತಿಯಡಿ ತ್ವರಿತ ಪ್ರಕ್ರಿಯೆಗಳ ಮೂಲಕ ಭರ್ತಿ ಮಾಡಲಾಗುವುದು.

ಮಾನವ ಸಂಪನ್ಮೂಲದ ಲಭ್ಯತೆಯನ್ನು ಹೆಚ್ಚಿಸಲು ಮೇಲಿನ ಪ್ರೋತ್ಸಾಹಕಗಳನ್ನು ಪರಿಗಣಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ.

***


(Release ID: 1715729) Visitor Counter : 371