ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ- ಪರಿಷ್ಕೃತ ಮಾಹಿತಿ


ಕೋ-ವಿನ್ ಡಿಜಿಟಲ್ ವೇದಿಕೆಯಲ್ಲಿ ಯಾವುದೇ ತಾಂತ್ರಿಕ ತೊಂದರೆ ಇಲ್ಲದೆ ಮೊದಲ ದಿನ ವಿಸ್ತರಿತ ಅರ್ಹ ವಯೋಮಿತಿ ಗುಂಪಿನ ನೋಂದಣಿ ಮುಂದುವರಿದಿದೆ

80 ಲಕ್ಷಕ್ಕೂ ಅಧಿಕ ಜನರು ಲಸಿಕೆಗಾಗಿ ನೋಂದಾಯಿಸಿ ಕೊಂಡಿದ್ದಾರೆ

ಮೊದಲ 3 ಗಂಟೆಗಳಲ್ಲಿ (ಸಂಜೆ 7:00 ರವರೆಗೆ) 383 ದಶಲಕ್ಷ ಎಪಿಐ ಹಿಟ್ ಗಳು ದಾಖಲಾಗಿವೆ

Posted On: 28 APR 2021 9:15PM by PIB Bengaluru

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಲಸಿಕೆಯು ಭಾರತ ಸರಕಾರದ ನಿಯಂತ್ರಣ  ಮತ್ತು ನಿರ್ವಹಣಾ  ಕಾರ್ಯತಂತ್ರದ ನಿರ್ಣಾಯಕ ಅಂಶವಾಗಿದೆ. ಕೋವಿಡ್-19 ಲಸಿಕೆಯ ಉದಾರೀಕೃತ ಮತ್ತು ವೇಗವರ್ಧಿತ ಹಂತ-3ರ ಕಾರ್ಯತಂತ್ರವನ್ನು 2021ರ ಮೇ 1 ರಿಂದ ಜಾರಿಗೆ ತರಲಾಗುವುದು.  ಹೊಸ ಅರ್ಹ ಜನಸಂಖ್ಯಾ ಗುಂಪುಗಳಿಗೆ ನೋಂದಣಿ  ಬುಧವಾರ ಸಂಜೆ  4ರಿಂದ  ಪ್ರಾರಂಭವಾಗಿದೆ. ಸಂಭಾವ್ಯ  ಫಲಾನುಭವಿಗಳು ಕೋವಿನ್ ಪೋರ್ಟಲ್ (cowin.gov.in) ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೇರವಾಗಿ ನೋಂದಾಯಿಸಿ‌ ಕೊಳ್ಳಬಹುದು.

ಕೋ-ವಿನ್ ತಂತ್ರಾಂಶವು ದೃಢವಾದ, ವಿಶ್ವಾಸಾರ್ಹ ಮತ್ತು ಚುರುಕಾದ ತಂತ್ರಜ್ಞಾನವನ್ನು ಹೊಂದಿದೆ. ಇದರ  ಮೂಲಕ ಕೋವಿಡ್-19 ಲಸಿಕೆಗಾಗಿ ಯಾವುದೇ ಸಮಯದಲ್ಲಿ ನೋಂದಣಿಯಾಗಬಹುದು. ಅಭೂತಪೂರ್ವ ಪ್ರಮಾಣದ ಲಸಿಕೀಕರಣದ ಅಗತ್ಯಕ್ಕೆ ಸರಿಹೊಂದುವಂತೆ ಸರ್ವರ್ ಮತ್ತು ಇತರ ನಿಯತಾಂಕಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ, ಇದರಿಂದ ʻಕೋವಿನ್ʼ ವ್ಯವಸ್ಥೆಯು ನಾಗರಿಕ-ಕೇಂದ್ರಿತ ಸೇವೆಗಳನ್ನು ಒದಗಿಸುತ್ತದೆ. ವಿಶಿಷ್ಟ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸುವಾಗ ಸಮಗ್ರತೆ, ವೇಗ ಮತ್ತು ಪ್ರಮಾಣವನ್ನು ಗಮನದಲ್ಲಿಟ್ಟುಕೊಳ್ಳಲಾಗಿದ್ದು, ಅನಗತ್ಯ ಮತ್ತು ಅತಿಯಾದ ಅವಲಂಬನೆಯನ್ನು ತಪ್ಪಿಸಲು ಇದರ ಎಲ್ಲಾ ಘಟಕಗಳು ಸುವಾಹ್ಯ ಮತ್ತು ಸಮಕಾಲಿಕವಾಗಿರುವಂತೆ ನೋಡಿಕೊಳ್ಳಲಾಗಿದೆ.

ಕೆಲವು ಮಾಧ್ಯಮ ವರದಿಗಳು ಕೋ-ವಿನ್  ವೇದಿಕೆಯ ಸರ್ವರ್ ಪ್ರತಿಕ್ರಿಯಿಸುತ್ತಿಲ್ಲ/ ಸರ್ವರ್‌ ನ ಸಾಮರ್ಥ್ಯ ಸಾಕಾಗುತ್ತಿಲ್ಲ, ಇದರಿಂದ ನೋಂದಣಿಗಳಿಗೆ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿವೆ. ಸರ್ವರ್ ತಾಂತ್ರಿಕ ಸಮಸ್ಯೆಗಳ ಕುರಿತಾದ ವರದಿಗಳು ಅಸತ್ಯ ಮತ್ತು   ಆಧಾರರಹಿತ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ʻಕೋ-ವಿನ್ʼ ಡಿಜಿಟಲ್ ಪೋರ್ಟಲ್ ಅನ್ನು ಬೆಂಬಲಿಸುವ ಸರ್ವರ್ ತನ್ನ ಅತ್ಯುನ್ನತ ದಕ್ಷತೆಯೊಂದಿಗೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಜನರು, ಹೆಚ್ಚಾಗಿ 18-44 ವಯಸ್ಸಿನವರು ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಈ ಪೋರ್ಟಲ್ನಲ್ಲಿ ಸಂಜೆ 4:00 ರಿಂದ 7:00 ಗಂಟೆಯ ವರೆಗೆ 80 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿ ಕೊಂಡಿದ್ದಾರೆ.

ಮೊದಲ ಮೂರು ಗಂಟೆಗಳಿಗೆ (ಸಂಜೆ 4-7) ಸಂಬಂಧಿಸಿದ ಕೆಲವು ಅಂಕಿ-ಅಂಶಗಳು ಈ ಕೆಳಗಿನಂತಿವೆ:

- 383 ದಶಲಕ್ಷ ಎಪಿಐ ಹಿಟ್ ಗಳು, ಆರಂಭದಲ್ಲಿ ಗರಿಷ್ಠ ನಿಮಿಷಕ್ಕೆ ಬರೋಬ್ಬರಿ 2.7 ದಶಲಕ್ಷ ಹಿಟ್ ದಾಖಲಾಗಿತ್ತು.

- 1.45 ಕೋಟಿ ಎಸ್ಎಂಎಸ್ ಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ.

ಕೋವಿನ್ ವೇದಿಕೆಯಲ್ಲಿ ತಾಂತ್ರಿಕ ದೋಷ, ನಿಧಾನಗತಿ ಕಾರ್ಯನರ್ವಹಣೆ ಮುಂತಾದ ವರದಿಗಳು ಸುಳ್ಳು, ಅದು ಸುಲಲಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಈ ಅಂಕಿ-ಅಂಶಗಳು ಸೂಚಿಸುತ್ತವೆ. ಈ ವೇದಿಕೆಯಲ್ಲಿ ಪ್ರತಿ ಸೆಕೆಂಡಿಗೆ 55,000 ಹಿಟ್ ಗಳು ದಾಖಲಾಗುತ್ತಿದ್ದು, ಸಂಪೂರ್ಣ ಸ್ಥಿರ ಮತ್ತು ಸದೃಢವಾಗಿದೆ. ನೋಂದಣಿ, ಲಸಿಕೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ವಿವರವಾದ ಅಂಕಿಅಂಶಗಳನ್ನು dashboard.cowin.gov.in ಮೂಲಕ ತಿಳಿಯಬಹುದು.

***



(Release ID: 1714894) Visitor Counter : 184