ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ವಾಯು ಪಡೆಯ ಕೋವಿಡ್ ಸಂಬಂಧಿತ ಕಾರ್ಯಾಚರಣೆಯನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ
Posted On:
28 APR 2021 2:51PM by PIB Bengaluru
ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಕೋವಿಡ್ -19 ಸಂಬಂಧಿತ ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆ ಕೈಗೊಂಡಿರುವ ನೆರವಿನ ಪ್ರಯತ್ನಗಳ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು.
ದೇಶಾದ್ಯಂತ ಮತ್ತು ಸಾಗರೋತ್ತರದಲ್ಲಿ ಕೋವಿಡ್ ಸಂಬಂಧಿತ ಸವಾಲುಗಳನ್ನು ತ್ವರಿತವಾಗಿ ನಿಭಾಯಿಸಲು ಬೃಹತ್ ಸರಕು ಸಾಗಣೆಯ ವಿಮಾನಗಳು ಮತ್ತು ಮಧ್ಯಮ ಗಾತ್ರದ ಸರಕು ಸಾಗಿಸುವ ವಿಮಾನಗಳನ್ನು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲು 24x7 ಸನ್ನದ್ಧವಾಗಿರುವಂತೆ ಐ.ಎ.ಎಫ್. ಆದೇಶಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಈ ಎಲ್ಲ ವಿಮಾನಗಳು ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುವುದನ್ನು ಖಾತ್ರಿಪಡಿಸಲು ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಆಮ್ಲಜನಕ ಟ್ಯಾಂಕರ್ ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವ ಕಾರ್ಯಾಚರಣೆಗಳ ವೇಗ, ಪ್ರಮಾಣ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೋವಿಡ್ ಸಂಬಂಧಿತ ಕಾರ್ಯಾಚರಣೆಗಳಲ್ಲಿ ತೊಡಗಿರುವ ಐಎಎಫ್ ಸಿಬ್ಬಂದಿ ಸೋಂಕಿನಿಂದ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು. ಎಲ್ಲಾ ಕೋವಿಡ್ ಸಂಬಂಧಿತ ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಅವರು ಮಾತನಾಡಿದರು.
ಭೂಪ್ರದೇಶಗಳ ವ್ಯಾಪ್ತಿಯಲ್ಲಿ ಹಾರಾಟ ನಡೆಸಲು ಐ.ಎ.ಎಫ್. ಬೃಹತ್ ಮತ್ತು ಮಧ್ಯಮ ಗಾತ್ರದ ವಿಮಾನಗಳನ್ನು ನಿಯುಕ್ತಿಕೊಳಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರು ತಿಳಿಸಿದರು. ವಿವಿಧ ಸಚಿವಾಲಯಗಳು ಮತ್ತು ಕೋವಿಡ್ ಸಂಬಂಧಿತ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಗಳ ನಡುವೆ ತ್ವರಿತ ಸಹಯೋಗಕ್ಕಾಗಿ ಐ.ಎ.ಎಫ್. ಸ್ಥಾಪಿಸಿರುವ ಕೋವಿಡ್ ಸಮರ್ಪಿತ ವಾಯು ಬೆಂಬಲ ಕೋಶದ ಬಗ್ಗೆಯೂ ಅವರು ಪ್ರಧಾನಮಂತ್ರಿಯವರಿಗೆ ವಿವರ ನೀಡಿದರು.
ಪ್ರಧಾನಮಂತ್ರಿಯವರು ಐ.ಎ.ಎಫ್. ಸಿಬ್ಬಂದಿಯ ಮತ್ತು ಅವರ ಕುಟುಂಬದವರ ಆರೋಗ್ಯದ ಬಗ್ಗೆಯೂ ವಿಚಾರಿಸಿಕೊಂಡರು. ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರು, ಐ.ಎ.ಎಫ್.ನಲ್ಲಿ ಲಸಿಕೆಯು ಬಹುತೇಕ ಗುರಿ ಸಾಧನೆಯ ವ್ಯಾಪ್ತಿಯಲ್ಲಿದೆ ಎಂದು ವಿವರಿಸಿದರು.
ಐ.ಎ.ಎಫ್. ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಕೋವಿಡ್ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಮತ್ತು ಸಾಧ್ಯವಾದ ಕಡೆಗಳಲ್ಲಿ ನಾಗರಿಕರಿಗೂ ಇಲ್ಲಿ ಚಿಕಿತ್ಸೆಗೆ ಅವಕಾಶ ಕೊಡಲಾಗುತ್ತಿದೆ ಎಂದು ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು.
***
(Release ID: 1714740)
Visitor Counter : 240
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam