ರೈಲ್ವೇ ಸಚಿವಾಲಯ

ಭಾರತದ ವಿವಿಧ ಭಾಗಗಳಲ್ಲಿ ಪ್ರಸ್ತುತ 169 ಕೋವಿಡ್ ಕೇರ್ ಬೋಗಿಗಳು ಬಳಕೆಯಲ್ಲಿವೆ


ರಾಜ್ಯಗಳ ಬಳಕೆಗಾಗಿ ಸುಮಾರು 64000 ಹಾಸಿಗೆಗಳನ್ನು ರೈಲ್ವೆ ಸಿದ್ಧಪಡಿಸಿದೆ

ರಾಜ್ಯಗಳ ಬೇಡಿಕೆ ಮೇರೆಗೆ ನಾಗ್ಪುರ, ಭೋಪಾಲ್, ಅಜ್ನಿ ಐಸಿಡಿ, ತಿಹಿ(ಇಂದೋರ್ ಬಳಿಯ)ಗಾಗಿ ಕೋವಿಡ್ ಕೇರ್ ಬೋಗಿಗಳನ್ನು ಸಹ ರೈಲ್ವೆ ಸಜ್ಜುಗೊಳಿಸುತ್ತದೆ

11 ಕೋವಿಡ್ ಕೇರ್ ಬೋಗಿಗಳಿಗಾಗಿ ನಾಗ್ಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್ ಆಯುಕ್ತರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

Posted On: 27 APR 2021 4:36PM by PIB Bengaluru

ಕೋವಿಡ್ ವಿರುದ್ಧದ ಒಗ್ಗಟ್ಟಿನ ಹೋರಾಟದ ಭಾಗವಾಗಿ, ರಾಜ್ಯಗಳ ಬಳಕೆಗಾಗಿ ರೈಲ್ವೆ ಸಚಿವಾಲಯವು ಬಹುತೇಕ 64000 ಹಾಸಿಗೆಗಳನ್ನು ಹೊಂದಿರುವ ಸುಮಾರು 4000 ಕೋವಿಡ್ ಕೇರ್ ಬೋಗಿಗಳನ್ನು ಸಿದ್ಧಪಡಿಸಿದೆ. 

ಪ್ರಸ್ತುತ 169 ಬೋಗಿಗಳನ್ನು ಕೋವಿಡ್ ಆರೈಕೆಗಾಗಿ ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ.

ಕೋವಿಡ್ ಬೋಗಿಗಳಿಗಾಗಿ ನಾಗ್ಪುರ ಜಿಲ್ಲೆಯಿಂದ ಹೊಸದಾಗಿ ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ, ನಾಗ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ನಾಗ್ಪುರ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಅದರಂತೆ, ರೈಲ್ವೆ A ಸಚಿವಾಲಯವು 11 ಬೋಗಿಗಳನ್ನು ಹೊಂದಿರುವ ರೇಕ್ (ಬೋಗಿಗಳ ಜೋಡಣೆ) ಅನ್ನು ಅಭಿವೃದ್ಧಿಪಡಿಸಲಿದೆ. ಸ್ಲೀಪರ್ ಕೋಚ್‌ಗಳನ್ನು ಮಾರ್ಪಾಡು ಮಾಡಿ ತಯಾರಿಸಲಾಗುವ ಇಂತಹ ಪ್ರತಿಯೊಂದು ಬೋಗಿಯೂ 16 ರೋಗಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರಲಿದೆ. ರಾಜ್ಯ ವೈದ್ಯಕೀಯ ಪ್ರಾಧಿಕಾರಗಳು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ಬೋಗಿಗಳಲ್ಲಿ ಸಜ್ಜುಗೊಳಿಸಲಿದೆ. ರೈಲ್ವೆ ಜತೆ ಒಪ್ಪಂದಕ್ಕೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿಯ ಬಳಕೆಗಾಗಿ ಸ್ಥಳಾವಕಾಶ ವಿಂಗಡಿಸಲಾಗಿದೆ. ಜೊತೆಗೆ ನೈರ್ಮಲ್ಯ ಮತ್ತು ಅಡುಗೆ-ತಿಂಡಿ ವ್ಯವಸ್ಥೆಗಳಿಗೂ ಸೂಕ್ತ ಸೌಲಭ್ಯ ಕಲ್ಪಿಸಲಾಗಿದೆ. 

ರಾಜ್ಯದ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರದ ಅಜ್ನಿ ಐಸಿಡಿ ಪ್ರದೇಶದಲ್ಲಿ ಐಸೊಲೇಷನ್ ಬೋಗಿಯನ್ನೂ ರೈಲ್ವೆ ಸಜ್ಜುಗೊಳಿಸುತ್ತಿದೆ.

ಮಹಾರಾಷ್ಟ್ರದ ಈ ಹೊಸ ಪ್ರದೇಶಗಳಲ್ಲಿ ಮಾತ್ರವಲ್ಲದೆ, ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮಹಾರಾಷ್ಟ್ರ ರಾಜ್ಯಗಳಲ್ಲಿ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ಇಂತಹ ಬೋಗಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಅವುಗಳ ವಿವರ ಹೀಗಿದೆ:

ನಂದ್ರುಬಾರ್ದಲ್ಲಿ(ಮಹಾರಾಷ್ಟ್ರ), ಪ್ರಸ್ತುತ 57 ರೋಗಿಗಳು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ, ಅದರಲ್ಲಿ ಒಬ್ಬ ರೋಗಿಯನ್ನು ಸ್ಥಳಾಂತರಿಸಲಾಗಿದೆ. 322 ಹಾಸಿಗೆಗಳು ಇನ್ನೂ ಲಭ್ಯವಿದೆ.

ದೆಹಲಿಯಲ್ಲಿ, 1200 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ 75 ಕೋವಿಡ್ ಕೇರ್ ಬೋಗಿಗಳಿಗಾಗಿ ರಾಜ್ಯ ಸರಕಾರದ ಸಂಪೂರ್ಣ ಬೇಡಿಕೆಯನ್ನು ರೈಲ್ವೆ ಪೂರೈಸಿದೆ. ಶಕುರ್ಬಸ್ತಿ ನಿಲ್ದಾಣದಲ್ಲಿ 50 ಬೋಗಿಗಳು ಮತ್ತು ಆನಂದ್ ವಿಹಾರ್ ನಿಲ್ದಾಣದಲ್ಲಿ 25 ಬೋಗಿಗಳನ್ನು ಇರಿಸಲಾಗಿದೆ.

ಪ್ರಸ್ತುತ, 2 ಬೋಗಿಗಳಿಗಾಗಿ ಮಧ್ಯ ಪ್ರದೇಶ ಸರಕಾರದ ಬೇಡಿಕೆ ಮೇರೆಗೆ, ಪಶ್ಚಿಮ ರೈಲ್ವೆಯ ರತ್ಲಂ ವಿಭಾಗವು ಇಂದೋರ್ ಬಳಿಯ ತಿಹಿ ನಿಲ್ದಾಣದಲ್ಲಿ 320 ಹಾಸಿಗೆಗಳ ಸಾಮರ್ಥ್ಯದೊಂದಿಗೆ 20 ಬೋಗಿಗಳನ್ನು ನಿಯೋಜಿಸಿದೆ.

ಮೇಲೆ ತಿಳಿಸಿದ ರಾಜ್ಯಗಳಲ್ಲಿ ಈ ಸೌಲಭ್ಯಗಳ ಬಳಕೆಯ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಾಖಲೆಗಳ ಪ್ರಕಾರ ಇದುವರೆಗೂ ಒಟ್ಟು 98 ರೋಗಿಗಳು ಕೋವಿಡ್ ಕೇರ್ ಬೋಗಿಗಳಿಗೆ ದಾಖಲಾಗಿದ್ದು, 28 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, 17 ರೋಗಿಗಳು ದಾಖಲಾಗಿದ್ದು, 6 ಮಂಡಿ ಡಿಸ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ 70 ಕೋವಿಡ್ ರೋಗಿಗಳು ಐಸೊಲೇಷನ್ ಬೋಗಿಗಳನ್ನು ಬಳಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಜ್ಯ ಸರಕಾರವು ಇಂತಹ ಬೋಗಿಗಳಿಗಾಗಿ ಇನ್ನೂ ಬೇಡಿಕೆ ಮುಂದಿಟ್ಟಿಲ್ಲವಾದರೂ ರಾಜ್ಯದ ಫೈಜಾಬಾದ್, ಭಾದೋಹಿ, ವಾರಾಣಸಿ, ಬರೇಲಿ ಮತ್ತು ನಾಜಿಬಾಬಾದ್‌ ನಿಲ್ದಾಣಗಳಲ್ಲಿ ತಲಾ 10 ಬೋಗಿಗಳಂತೆ ಒಟ್ಟು 50 ಬೋಗಿಗಳನ್ನು ಇರಿಸಲಾಗಿದ್ದು, 800 ಹಾಸಿಗೆಗಳ ಸಾಮರ್ಥ್ಯವನ್ನು ಇವು ಹೊಂದಿವೆ.

***



(Release ID: 1714441) Visitor Counter : 295