ಪ್ರಧಾನ ಮಂತ್ರಿಯವರ ಕಛೇರಿ

ದೇಶಾದ್ಯಂತದ ಲಸಿಕೆ ಉತ್ಪಾದಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

Posted On: 20 APR 2021 7:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತದ ಲಸಿಕೆ ಉತ್ಪಾದಕರೊಂದಿಗೆ ಸಂವಾದ ನಡೆಸಿದರು. ಅವರು ಲಸಿಕೆ ಉತ್ಪಾದಕರ ಸಾಧನೆಗಳನ್ನು ಮತ್ತು ವೃತ್ತಿಪರತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಲಸಿಕಾ ಉದ್ಯಮದ ಅತಿ ದೊಡ್ಡ ಶಕ್ತಿ ಎಂದರೆ ಅದರ ಸಾಮರ್ಥ್ಯ , ಸಂಶೋಧನೆ ಮತ್ತು ಸೇವಾ ಭಾವವಾಗಿದೆ ಮತ್ತು ಗುಣಗಳಿಂದಾಗಿಯೇ ಅದು ಜಗತ್ತಿನ ಲಸಿಕೆ ನಾಯಕನಾಗಿ ರೂಪುಗೊಂಡಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ನಮ್ಮ ಲಸಿಕೆ ಉತ್ಪಾದಕರ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡು ಸರ್ಕಾರ ಮೇ 1 ರಿಂದ ಪ್ರತಿಯೊಬ್ಬ ವಯಸ್ಕರಿಗೂ ಲಸಿಕೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅತ್ಯಲ್ಪ ಅವಧಿಯಲ್ಲಿಯೇ ನಮ್ಮ ಜನರಿಗೆ ಲಸಿಕೆಯನ್ನು ಹಾಕಲು ಲಸಿಕೆ ಉತ್ಪಾದಕರು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ವೃದ್ಧಿಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಹೊಸ ಲಸಿಕೆ ಅಭಿವೃದ್ಧಿಯಲ್ಲಿ ನಮ್ಮ ವಿಜ್ಞಾನಿಗಳು ನಡೆಸಿದ ಪ್ರಯತ್ನ ಮತ್ತು ಅಧ್ಯಯನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ದಾಖಲೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಮಾಡಿರುವ ಶ್ರೇಯ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಇಲ್ಲಿ ಉತ್ಪಾದಿಸುತ್ತಿರುವ ಲಸಿಕೆಗಳು ಅತ್ಯಂತ ಕಡಿಮೆ ದರದ್ದು ಎಂಬ ಸಂಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಪ್ರಗತಿಯಲ್ಲಿದೆ ಎಂದು ಹೇಳಿದರು.

ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯುದ್ಧಕ್ಕೂ ದೇಶವು ಮಿಷನ್ ಕೋವಿಡ್ ಸುರಕ್ಷಾಅಡಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮನೋಭಾವದೊಂದಿಗೆ ನಿರಂತರವಾಗಿ  ಕಾರ್ಯ ನಿರ್ವಹಿಸಿದೆ ಎಂದ ಪ್ರಧಾನಮಂತ್ರಿ, ಆರಂಭದಿಂದ ಕೊನೆಯವರೆಗಿನ ಲಸಿಕೆ ಅಭಿವೃದ್ಧಿ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ಹೇಳಿದರು. ಎಲ್ಲಾ ಲಸಿಕೆ ಉತ್ಪಾದಕರಿಗೆ ಸಾಧ್ಯವಾದ ಎಲ್ಲಾ ಸಹಾಯ ಮತ್ತು ಸಾರಿಗೆ ನೆರವನ್ನು ಸರ್ಕಾರ ಖಾತ್ರಿಪಡಿಸಿದೆ ಅಲ್ಲದೆ ಲಸಿಕೆಗೆ ಅನುಮೋದನೆ ಪ್ರಕ್ರಿಯೆಯೂ ಸಹ ತ್ವರಿತ ಮತ್ತು ವೈಜ್ಞಾನಿಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಗಳಿಗೆ ಸುಗಮ ಅನುಮೋದನೆ ನೀಡಲು ಮತ್ತು ಸಾಧ್ಯವಾದ ಎಲ್ಲಾ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.

ಕೋವಿಡ್-19 ವಿರುದ್ಧ ದೇಶ ನಡೆಸುತ್ತಿರುವ ಸಮರದಲ್ಲಿ ಖಾಸಗಿ ವಲಯದ ಆರೋಗ್ಯ ಮೂಲಸೌಕರ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನದಲ್ಲಿ ಖಾಸಗಿ ವಲಯ ಇನ್ನೂ ಹೆಚ್ಚಿನ ಸಕ್ರಿಯ ಪಾತ್ರವನ್ನು ನಿರ್ವಹಿಸಲಿದೆ ಎಂದರು. ಇದಕ್ಕೆ ಆಸ್ಪತ್ರೆಗಳು ಮತ್ತು ಉದ್ಯಮದ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ ಎಂದರು.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ನಿರ್ಧಾರ ಮತ್ತು ಲಸಿಕೆ ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹಕ ಮತ್ತು ಸರಳ ಕ್ರಮಗಳನ್ನು ಕೈಗೊಂಡಿರುವುದಕ್ಕಾಗಿ ಲಸಿಕೆ ಉತ್ಪಾದಕರು ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಕ್ರಿಯೆಯುದ್ಧಕ್ಕೂ ಭಾರತ ಸರ್ಕಾರ ನೀಡುತ್ತಿರುವ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಅವರ ನಾಯಕತ್ವದ ಬಗ್ಗೆ ಲಸಿಕೆ ಉತ್ಪಾದಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಲಸಿಕೆ ಉತ್ಪಾದಕರು ತಾವು ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕೈಗೊಂಡಿರುವ ಯೋಜನೆಗಳು, ಮುಂಬರಲಿರುವ ಹೊಸ ಬಗೆಯ ಲಸಿಕೆಗಳು ಮತ್ತು ಹೊಸ ಬಗೆಯ ಸೋಂಕಿನ ಕುರಿತು ನಡೆಯುತ್ತಿರುವ ಸಂಶೋಧನೆಗಳ ವಿವರಗಳ ಕುರಿತು ಸಮಾಲೋಚಿಸಿದರು.

***



(Release ID: 1713227) Visitor Counter : 200