ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕೋವಿಡ್ ಕರ್ಫ್ಯೂ/ ಲಾಕ್ ಡೌನ್ ವೇಳೆ ಅಕ್ರಮ ದಾಸ್ತಾನುಗಾರರ ವಿರುದ್ಧ ಶೂನ್ಯ ಸಹಿಷ್ಣುತೆ


ಆಹಾರ ಉತ್ಪನ್ನ/ ಔಷಧ/ ಶುಚಿತ್ವ ಕಾಯ್ದುಕೊಳ್ಳುವ ಉತ್ಪನ್ನಗಳು ಸೇರಿ ಅಗತ್ಯ ವಸ್ತುಗಳ ಪೂರೈಕೆ ಖಾತ್ರಿಗೆ ಮತ್ತು ನ್ಯಾಯಯುತ ಬೆಲೆಯಲ್ಲಿ ಇತರೆ ಅತ್ಯವಶ್ಯಕ ಸೇವೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಭಾರತ ಸರ್ಕಾರ ಸೂಚನೆ

ಅಗತ್ಯ ವಸ್ತುಗಳ ಖರೀದಿ ಬಗ್ಗೆ ಭಯ ನಿವಾರಣೆಗೆ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳು ಪ್ರಚಾರ ಮತ್ತು ಜಾಗೃತಿ ಚಟುವಟಿಕೆ ಕೈಗೊಳ್ಳಬೇಕು

ಅದರ ಖಾತ್ರಿಗೆ ರಾಜ್ಯ ಸರ್ಕಾರಗಳ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ರಾಷ್ಟ್ರ ಮಟ್ಟದ ಸಭೆ

Posted On: 19 APR 2021 5:48PM by PIB Bengaluru

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕರ್ಫ್ಯೂ/ಲಾಕ್ ಡೌನ್ ವಿಧಿಸಿದ ವೇಳೆ ಅವಶ್ಯಕ ವಸ್ತುಗಳ ಪೂರೈಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳು ಅಕ್ರಮ ದಾಸ್ತಾನುಗಾರರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಒತ್ತಿ ಹೇಳಿದೆ

ಎಲ್ಲಾ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಇಂದು ರಾಷ್ಟ್ರ ಮಟ್ಟದ ಸಭೆ ನಡೆಸಲಾಯಿತು. ಗ್ರಾಹಕ ವ್ಯವಹಾರಗಳ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು ದೇಶಾದ್ಯಂತ ಅವಶ್ಯಕ ವಸ್ತುಗಳ ಲಭ್ಯತೆ ಮತ್ತು ಬೆಲೆಯ ಸ್ಥಿತಿಗತಿ ಪರಾಮರ್ಶೆ ನಡೆಸಿದರು. ನಾನಾ ರಾಜ್ಯಗಳ ನಾನಾ ಮಂಡಿಗಳಲ್ಲಿ ಅವಶ್ಯಕ ವಸ್ತುಗಳ ಬೆಲೆಗಳು ಹಾಗೂ  ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಪದಾರ್ಥಗಳ ಮಾಹಿತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಯಿತು.

ಅಲ್ಲದೆ ಆಹಾರ ಉತ್ಪನ್ನಗಳು/ಔಷಧಗಳು, ಶುಚಿತ್ವ ಕಾಪಾಡುವ ಉತ್ಪನ್ನಗಳು ಸೇರಿದಂತೆ ಅವಶ್ಯಕ ಸಾಮಗ್ರಿಗಳ ಬೆಲೆ ಕುರಿತು ಚರ್ಚೆ ನಡೆಸಲಾಯಿತು ಹಾಗು ಅವಶ್ಯಕ ಸೇವೆಗಳ ಬೆಲೆ ಹೆಚ್ಚಳವಾಗಿಲ್ಲ ಮತ್ತು ಅವು ನ್ಯಾಯಯುತ ಬೆಲೆಗೆ ಲಭ್ಯವಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಆಹಾರ ಮತ್ತು ನಾಗರಿಕ ಪೂರೈಕೆ, ಕಾನೂನು ಮಾಪನ ಶಾಸ್ತ್ರ ನಿಯಂತ್ರಕರು, ಆಹಾರ ಸುರಕ್ಷತೆ, ಆರೋಗ್ಯ ಮತ್ತು ಪೊಲೀಸರನ್ನೊಳಗೊಂಡ ಜಂಟಿ ತಂಡಗಳನ್ನು ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚಿಸಲಾಗುವುದು ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿ ಕಣ್ಗಾವಲು ಕೈಗೊಳ್ಳಲಾಗುವುದು ಹಾಗೂ ಬೇಡಿಕೆ/ಪೂರೈಕೆ ನಡುವೆ ಹೊಂದಿಕೆಯಾಗದ ಸ್ಥಿತಿಯನ್ನು ತಪ್ಪಿಸಲು ಜಾರಿ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಅಗತ್ಯ ವಸ್ತುಗಳ ಖರೀದಿ ಬಗ್ಗೆ ಜನರಲ್ಲಿ ಭಯ ನಿವಾರಣೆ ಮಾಡಲು ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳು  ಪ್ರಚಾರ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಯಿತು.

ಸಭೆಯ ವೇಳೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕಾಯ್ದುಕೊಳ್ಳಲು ಅಕ್ರಮ ವರ್ತಕರು ಮತ್ತು ದಾಸ್ತಾನುಗಾರರ ವಿರುದ್ಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಬಲವಾಗಿ ಪ್ರತಿಪಾದಿಸಲಾಯಿತು.

1955 ಅವಶ್ಯಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಪ್ರಕಾರ ಅವಶ್ಯಕ ವಸ್ತುಗಳ ಉತ್ಪಾದನೆ ನಿಯಂತ್ರಣ, ಪೂರೈಕೆ, ವಿತರಣೆ ಅಧಿಕಾರವಿದೆ ಮತ್ತು ಅದನ್ನು ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ.  1980 ಅತ್ಯವಶ್ಯಕ ಸಾಮಗ್ರಿಗಳ ಪೂರೈಕೆ ನಿರ್ವಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟ ನಿಯಂತ್ರಣ ಕಾಯಿದೆಯ ಸೆಕ್ಷನ್ 3 ಪ್ರಕಾರ ಸಮುದಾಯಕ್ಕೆ ಅಗತ್ಯವಾದ ಸರಕುಗಳ ಸರಬರಾಜಿನ ನಿರ್ವಹಣೆಗೆ ಯಾವುದೇ ರೀತಿಯ ಪೂರ್ವಾಗ್ರಹವಿಲ್ಲದೆ ವರ್ತಿಸುವುದನ್ನು ತಡೆಯುವ ಉದ್ದೇಶದಿಂದ ಯಾವುದೇ ವ್ಯಕ್ತಿಯನ್ನು ಗರಿಷ್ಠ ಆರು ತಿಂಗಳವರೆಗೆ ಬಂಧಿಸಬಹುದು.

1955 ಅವಶ್ಯಕ ವಸ್ತುಗಳ ಕಾಯ್ದೆ ಮತ್ತು 1980 ಅವಶ್ಯಕ ವಸ್ತುಗಳ ಪೂರೈಕೆ ನಿರ್ವಹಣೆ ಮತ್ತು ಕಾಳಸಂತೆ ಮಾರಾಟ ನಿಯಂತ್ರಣ ಕಾಯ್ದೆಯನ್ನು ಜಾರಿಯ ನಿರ್ವಹಣೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಹೊತ್ತಿದೆ. ಗ್ರಾಹಕರಿಗೆ ಸೂಕ್ತ ಬೆಲೆಗೆ ಅವಶ್ಯಕ ವಸ್ತುಗಳು ಲಭ್ಯವಾಗುವಂತೆ ಮಾಡಬೇಕು ಮತ್ತು ಗ್ರಾಹಕರನ್ನು ಅಕ್ರಮ ವರ್ತಕರು ಮತ್ತು ದಾಸ್ತಾನುಗಾರರಿಂದ ದೌರ್ಜನ್ಯಕ್ಕೊಳಗಾಗುವುದರಿಂದ ರಕ್ಷಿಸುವ ಎರಡೂ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ

***(Release ID: 1712777) Visitor Counter : 187