ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಪರಿಸ್ಥಿತಿ ಮತ್ತು ಅದರ ನಿಗ್ರಹ ಹಾಗೂ ನಿರ್ವಹಣೆಗೆ ಉತ್ತರ ಪ್ರದೇಶ ಮತ್ತು ಛತ್ತೀಸಗಢ ಕೈಗೊಂಡಿರುವ ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ಪರಾಮರ್ಶಿಸಿದ ಕೇಂದ್ರ ಗೃಹ ಕಾರ್ಯದರ್ಶಿ


“ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ, ಕೋವಿಡ್ ಸೂಕ್ತ ನಡೆವಳಿಕೆ, ಲಸಿಕೆ” 5-ಹಂತದ ಕಾರ್ಯತಂತ್ರದ ಪುನರ್ ಪ್ರತಿಪಾದನೆ

ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ನೆರವಿನ ಮುಂದುವರಿಕೆಯ ಭರವಸೆ

Posted On: 16 APR 2021 4:14PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರೊಂದಿಗೆ ಇಂದು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ಛತ್ತೀಸಗಢ ಮತ್ತು ಉತ್ತರ ಪ್ರದೇಶದ ಕೋವಿಡ್ ಪರಿಸ್ಥಿತಿ ಮತ್ತು ರಾಜ್ಯ ಆರೋಗ್ಯ ಪ್ರಾಧಿಕಾರಗಳು ಅದರ ನಿಗ್ರಹ ಮತ್ತು ನಿರ್ವಹಣೆಗೆ ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ಪರಾಮರ್ಶಿಸಿದರು. ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್, ಐಸಿಎಂಆರ್ ನ ಡಿಜಿ ಡಾ. ಬಲರಾಮ್ ಭಾರ್ಗವ, ಡಿಜಿಎಚ್.ಎಸ್. ಡಾ. (ಪ್ರೊ.) ಸುನೀಲ್ ಕುಮಾರ್ ಅವರು ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಡಿಜಿ (ಪೊಲೀಸ್) ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದರು.

ಮಹಾರಾಷ್ಟ್ರದೊಂದಿಗೆ ಛತ್ತೀಸಗಢ ಮತ್ತು ಉತ್ತರ ಪ್ರದೇಶ ಸೇರಿ ದೇಶದ ಮೂರು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಛತ್ತೀಸಗಢ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿ ನಿತ್ಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ -19 ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಕೋವಿಡ್ -19ರ ಕಾರಣದಿಂದ ಹೆಚ್ಚಿನ ಮರಣವೂ ಸಂಭವಿಸುತ್ತಿದೆ. 7 ದಿನಗಳ ಸರಾಸರಿ ಆಧಾರದಲ್ಲಿ ಛತ್ತೀಸಗಢದಲ್ಲಿ ವಾರದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ.6.2ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವಾರಗಳಲ್ಲಿ, ರಾಜ್ಯದಲ್ಲಿ ಬಹುತೇಕ ವಾರದ ಹೊಸ ಪ್ರಕರಣಗಳಲ್ಲಿ ಶೇ.131ರಷ್ಟು ಹೆಚ್ಚಳವಾಗಿದೆ. ಛತ್ತೀಸಗಢದ 22 ಜಿಲ್ಲೆಗಳು ಕಳೆದ 30 ದಿನಗಳಲ್ಲಿ ತಮ್ಮ ಅತಿ ಹೆಚ್ಚಿನ ಪ್ರಕರಣ ದಾಖಲೆಯನ್ನು ಮೀರಿವೆ. ರಾಯಪುರ, ದುರ್ಗ್, ರಾಜಾನಂದ್ ಗಾವ್ ಮತ್ತು ಬಿಲಾಸ್ಪುರ ಅತಿ ಹೆಚ್ಚು ಬಾಧಿತವಾದ ಜಿಲ್ಲೆಗಳಾಗಿವೆ. 2021ರ ಮಾರ್ಚ್ 17ರಿಂದ 23ರವರೆಗಿನ ವಾರಕ್ಕೆ ಪ್ರತಿಯಾಗಿ, 2021ರ ಏಪ್ರಿಲ್ 7ರಿಂದ 13ರವರೆಗಿನ ವಾರದಲ್ಲಿ ಆರ್.ಟಿ. ಪಿಸಿಆರ್ ಪರೀಕ್ಷೆ ಶೇ.28ಕ್ಕೆ (ಶೇ.34ರಿಂದ) ಇಳಿಕೆಯಾಗಿದೆ, ಆದರೆ ಆಂಟಿಜೆನ್ ಪರೀಕ್ಷೆ (ಶೇ.53ರಿಂದ) ಶೇ.62ಕ್ಕೆ ಹೆಚ್ಚಳವಾಗಿದೆ.

ಉತ್ತರ ಪ್ರದೇಶದಲ್ಲಿ ದಾಖಲಾಗುವ ದೈನಿಕ ಪ್ರಕರಣಗಳಲ್ಲಿ ಶೇ.19.25ರ ದರದ ವೃದ್ಧಿಯಾಗಿದೆ. ಉತ್ತರ ಪ್ರದೇಶದ 46 ಜಿಲ್ಲೆಗಳಲ್ಲಿ ಕಳೆದ 30 ದಿನಗಳಲ್ಲಿ ತಮ್ಮಲ್ಲಿ ದಾಖಲಾಗುತ್ತಿದ್ದ ದೈನಂದಿನ ಪ್ರಕರಣಗಳ ಅತಿ ಹೆಚ್ಚಿನ ಪ್ರಕರಣ ದಾಟಿವೆ; ಲಖನೌ, ಕಾನ್ಪುರ, ವಾರಾಣಸಿ ಮತ್ತು ಪ್ರಯಾಗ್ರಾಜ್ ಹೆಚ್ಚು ಬಾಧಿತ ಜಿಲ್ಲೆಗಳಾಗಿವೆ. 2021ರ ಮಾರ್ಚ್ 17ರಿಂದ 23ರವರೆಗಿನ ವಾರಕ್ಕೆ ಪ್ರತಿಯಾಗಿ, 2021ರ ಏಪ್ರಿಲ್ 7ರಿಂದ 13ರವರೆಗಿನ ವಾರದಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಶೇ.46ಕ್ಕೆ (ಶೇ.48ರಿಂದ) ಇಳಿಕೆಯಾಗಿದೆ. ಈ ಮಧ್ಯೆ ಆಂಟಿಜೆನ್ ಪರೀಕ್ಷೆ ಶೇ.53ಕ್ಕೆ (ಶೇ.51ರಿಂದ) ಹೆಚ್ಚಳವಾಗಿದೆ.

ಆಸ್ಪತ್ರೆಯ ಮೂಲಸೌಕರ್ಯಗಳು ಅಂದರೆ ಐಸಿಯು ಮತ್ತು ಆಕ್ಸಿಜನ್ ಬೆಂಬಲಿತ ಆಸ್ಪತ್ರೆ ಹಾಸಿಗೆಗಳ ಕೊರತೆ ವರದಿಯಾಗಿದ್ದು, ಇದರ ಪರಿಣಾಮವಾಗಿ ನಿರ್ಣಾಯಕ ಆರೋಗ್ಯ ಸೇವೆಗಳು ಸುಲಭವಾಗಿ ಸಾರ್ವಜನಿಕರಿಗೆ ಲಭಿಸುವಲ್ಲಿ ತೊಂದರೆ ಉಂಟಾಗುತ್ತಿದ್ದು, ಸಮಗ್ರ ಹಾಗೂ ವಿವರವಾಗಿ ಚರ್ಚಿಸಲಾಯಿತು, ಆಸ್ಪತ್ರೆಯ ಮೂಲಸೌಕರ್ಯಗಳನ್ನು ತುರ್ತಾಗಿ ಹೆಚ್ಚಿಸುವ ಅಗತ್ಯವಾಗಿದೆ. ರಾಜ್ಯಗಳಿಗೆ ಐಸೋಲೇಷನ್ ಹಾಸಿಗೆಗಳು, ಆಕ್ಸಿಜನ್ ಹಾಸಿಗೆಗಳು, ವೆಂಟಿಲೇಟರ್ ಐಸಿಯು ಹಾಸಿಗೆಗಳು, ಅಗತ್ಯಕ್ಕೆ ಅನುಗುಣವಾಗಿ ಆಂಬುಲೆನ್ಸ್ ಸೌಲಭ್ಯದ ಸಂಖ್ಯೆಯನ್ನು ಹೆಚ್ಚಿಸಲು,. ಸಾಕಷ್ಟು ಆಮ್ಲಜನಕ ಪೂರೈಕೆಗಾಗಿ ಯೋಜನೆ; ಮತ್ತು ಸಕ್ರಿಯ ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರದ ಅನುಸರಣೆ ಮೂಲಕ ಮರಣಪ್ರಮಾಣ ತಗ್ಗಿಸುವುದರ ಮೇಲೆ ಕೇಂದ್ರೀಕರಿಸುವಂತೆ ಸಲಹೆ ಮಾಡಲಾಯಿತು..

ಕಟ್ಟುನಿಟ್ಟಾದ ಮತ್ತು ಪರಿಣಾಮಕಾರಿ ನಿಯಮ ಜಾರಿಗೊಳಿಸುವ ಮೂಲಕ ಅನಗತ್ಯ ಪ್ರಯಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದನ್ನು ನಿಷೇಧಿಸುವುದಕ್ಕೆ ಒತ್ತು ನೀಡಲಾಯಿತು.

ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು, ಆಮ್ಲಜನಕ ಸಿಲಿಂಡರ್‌ ಗಳಿಗೆ (10 ಲೀಟರ್ ಸಿಲಿಂಡರ್‌ ಗಳು ಮತ್ತು 45 ಲೀಟರ್ ಜಂಬೊ ಸಿಲಿಂಡರ್‌ ಗಳನ್ನು ಒಳಗೊಂಡಂತೆ) ರಾಜ್ಯಗಳ ಬೇಡಿಕೆ ಮತ್ತು ಹೆಚ್ಚುವರಿ ವೆಂಟಿಲೇಟರ್‌ ಗಳ ಬೇಡಿಕೆ (ಹೆಚ್ಚು ಹರಿವಿನ ಮೂಗಿನ ಕ್ಯಾನುಲಾ ಹೊಂದಿರುವ) ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ದೈನಂದಿನ ಹೊಸ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ 12 ರಾಜ್ಯಗಳೊಂದಿಗೆ ಆಮ್ಲಜನಕದ ಉತ್ಪಾದನಾ ಮೂಲಗಳನ್ನು ಜೋಡಣೆ ಮಾಡಿದೆ. ರಾಜ್ಯಗಳಿಗೆ ಕೋವಿಡ್ 19 ಸಮರ್ಪಿತ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಮತ್ತು (ಏಮ್ಸ್ ಸೇರಿದಂತೆ) ಆಸ್ಪತ್ರೆ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳನ್ನು ಹೆಚ್ಚುವರಿ ಕೋವಿಡ್ ಸಮರ್ಪಿತ ವಾರ್ಡ್ ಆಗಿ ಪರಿವರ್ತಿಸಲು ಸಲಹೆ ಮಾಡಲಾಗಿದೆ. ರಾಜ್ಯಗಳಿಗೆ ಕೇಂದ್ರ ಸಚಿವಾಲಯಗಳು ಮತ್ತು ಪಿ.ಎಸ್.ಯು.ಗಳ ಆಸ್ಪತ್ರೆಗಳನ್ನೂ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಲಸಿಕೆಗಳ ಗರಿಷ್ಠ ಬಳಕೆಗೆ ಉತ್ತಮ ಯೋಜನೆಯನ್ನು ಸಕ್ರಿಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿದಿನ ರಾಜ್ಯಗಳಿಗೆ ಕೋವಿಡ್ 19 ಲಸಿಕೆಗಳನ್ನು ಪೂರೈಸುವ ಕುರಿತಂತೆ ಬೆಳಗ್ಗೆ ರಾಜ್ಯಗಳಿಗೆ ತಿಳಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಮಾಹಿತಿ ನೀಡಿದ್ದಾರೆ. ರೋಗಲಕ್ಷಣವಿರುವ ರೋಗಿಗಳಿಗೆ ಸಂಪರ್ಕ ಪತ್ತೆ ಹಚ್ಚುವಿಕೆ ಮತ್ತು ಮನೆ-ಮನೆ ಸಮೀಕ್ಷೆಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆರೋಗ್ಯ ಕಾರ್ಯಪಡೆಯ ಅಗತ್ಯವಿರುತ್ತದೆ. ಎನ್‌.ಎಸ್‌.ಎಂ, ಎನ್‌.ವೈ,ಕೆ, ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌.ಎಚ್‌.ಜಿ.) ಸ್ವಯಂಸೇವಕರನ್ನು ನಿಯೋಜಿಸಲು ಮತ್ತು ನಿವೃತ್ತ ವೈದ್ಯರು / ಅರೆವೈದ್ಯರನ್ನು ನೇಮಿಸಿಕೊಳ್ಳಲು ಎನ್‌.ಎಚ್‌.ಎಂ ನಿಧಿಯಡಿ ಕರಾರು ಮಾಡಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಯಿತು.

ಡಿಜಿ ಐಸಿಎಂ.ಆರ್. ಅವರು, ಸಂಚಾರಿ ಪರೀಕ್ಷಾ ಪ್ರಯೋಗಾಲಯ ಸೇರಿದಂತೆ ಹೆಚ್ಚು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದರು. ಶೇ. 5ಕ್ಕಿಂತ ಹೆಚ್ಚು ಸಕಾರಾತ್ಮಕ ದರವನ್ನು ತೋರಿಸುವ ಜಿಲ್ಲೆಗಳಲ್ಲಿ ನಿರಂತರ ಜಾಗರೂಕತೆ ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ಅವರು ಸಲಹೆ ನೀಡಿದರು.

ಸಮಗ್ರ ಮತ್ತು ವಿವರವಾದ ಪರಾಮರ್ಶೆಯ ಬಳಿಕ, ಇತ್ತೀಚೆಗೆ ಆಗುತ್ತಿರುವ ಹೆಚ್ಚಳ ನಿಯಂತ್ರಣ ನಿರ್ವಹಣೆಗೆ ಈ ಕೆಳಕಂಡ 5 ಹಂತದ ಕಾರ್ಯತಂತ್ರಕ್ಕೆ ಪುನರ್ ಪ್ರತಿಪಾದಿಸಲಾಯಿತು:

1. ಕನಿಷ್ಠ ಶೇ.70 ಆರ್‌.ಟಿ-ಪಿ.ಸಿ.ಆರ್ ಪರೀಕ್ಷೆಗಳೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಮತ್ತು ಹೊಸದಾಗಿ ಸಮೂಹಗಳು ಹೊರಹೊಮ್ಮುತ್ತಿರುವ ಪ್ರದೇಶಗಳಲ್ಲಿ ತಪಾಸಣೆ ಪರೀಕ್ಷೆಗಳಾಗಿ ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಮಾಡುವುದು. ರಾಪಿಡ್ ಆಂಟಿಜೆನ್ ಟೆಸ್ಟ್ (ರಾಟ್) ನಲ್ಲಿ ನಕಾರಾತ್ಮಕ ವರದಿ ಬಂದವರನ್ನು ಆರ್‌.ಟಿ-ಪಿ.ಸಿ.ಆರ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವುದು.

2. ಪ್ರಸರಣದ ಸರಪಳಿಯನ್ನು ತುಂಡರಿಸಲು ಸಕಾಲದಲ್ಲಿ ಪತ್ತೆ, ಕಂಟೈನ್ಮೆಂಟ್ ಮತ್ತು ನಿಗಾ ಚಟುವಟಿಕೆ ಸಮರ್ಥವಾಗಿ ಹೆಚ್ಚಿಸುವುದು ಮತ್ತು ಕಂಟೈನ್ಮೆಂಟ್ ಕ್ರಮಗಳ ಕಟ್ಟುನಿಟ್ಟಿನ ಜಾರಿ.

3. ಚಿಕಿತ್ಸಾಲಯ ಆರೈಕೆ, ಚಿಕಿತ್ಸೆ ಮತ್ತು ಬೆಂಬಲಿತ ಗೃಹ/ಸೌಲಭ್ಯ ಆರೈಕೆಯಲ್ಲಿ ಸಮರ್ಥವಾಗಿ ಶಿಷ್ಟಾಚಾರದ ಅನುಸರಣೆ.

4. ಜನರ ಅನಗತ್ಯ ಸಂಚಾರ ಮತ್ತು ಒಗ್ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ಸೀಮಿತಗೊಳಿಸುವುದು, ಮತ್ತು ಕೋವಿಡ್ ಸುರಕ್ಷಿತ ನಡೆವಳಿಕೆಗಳ ಕಟ್ಟುನಿಟ್ಟಿನ ಮತ್ತು ಸಮರ್ಥ ಜಾರಿ.

5. ಅರ್ಹ ಜನರ ಗುಂಪುಗಳಿಗೆ ಅದರಲ್ಲೂ ಹೆಚ್ಚಿನ ಗಮನ ಹರಿಸಲಾದ ಜಿಲ್ಲೆಗಳಲ್ಲಿ ಸಕಾಲದಲ್ಲಿ ಶೇ.100ರಷ್ಟು ಲಸಿಕೆ ನೀಡಿಕೆಗೆ ಯೋಜನೆ

***


(Release ID: 1712309) Visitor Counter : 198