ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸೇರಿದ ಆಸ್ಪತ್ರೆಗಳಲ್ಲಿನ ಹಾಸಿಗೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಅಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಮರ್ಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ
ಸಮರ್ಪಿಸಿದ ಆಸ್ಪತ್ರೆ/ ಬ್ಲಾಕ್ ಗಳ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಲು ಆದೇಶ
Posted On:
16 APR 2021 11:53AM by PIB Bengaluru
ಕಳೆದ ಕೆಲವು ವಾರಗಳಿಂದೀಚೆಗೆ ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಕ್ಷೇತ್ರಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತು ಅದರಿಂದಾಗುತ್ತಿರುವ ಸಾವುಗಳ ಪ್ರಮಾಣ ಏರಿಕೆಯಾಗುತ್ತಿರುವುದು ವರದಿಯಾಗಿದೆ. ಕೇಂದ್ರ ಸರ್ಕಾರ ಕೋವಿಡ್-19 ವಿರುದ್ಧದ ಸಮರವನ್ನು ‘ಇಡೀ ಸರ್ಕಾರ’ ಮನೋಭಾವದೊಂದಿಗೆ ಎದುರಿಸುತ್ತಿದ್ದು, ಕೋವಿಡ್ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಸ್ಪಂದನಾ ಕ್ರಮಗಳಲ್ಲಿ ರಾಜ್ಯಗಳಿಗೆ ಸಕ್ರಿಯವಾಗಿ ನೆರವು ನೀಡುವ ಕಾರ್ಯತಂತ್ರ ಪಾಲುದಾರಿಕೆಯನ್ನು ಅನುಸರಿಸುತ್ತಿದೆ. ಆ ಪ್ರತಿಸ್ಪಂದನೆಯ ಭಾಗವಾಗಿ ಭಾರತ ಸರ್ಕಾರದ ಹಲವು ಸಚಿವಾಲಯಗಳು, ಉನ್ನತಾಧಿಕಾರ ಸಮಿತಿಗಳು ಮತ್ತು ಕೇಂದ್ರ ಕಾರ್ಯದರ್ಶಿಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಾರ್ಯದಲ್ಲಿ ತೊಡಗಿವೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಅಗತ್ಯ ನೆರವಿನ ಬೆಂಬಲವನ್ನು ನೀಡಲಾಗುತ್ತಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್-19 ರೋಗಿಗಳ ಪರಿಣಾಮಕಾರಿ ಚಿಕಿತ್ಸಾ ನಿರ್ವಹಣೆಗೆ ಆಸ್ಪತ್ರೆಗಳ ಮೂಲಸೌಕರ್ಯವನ್ನು ಗಣನೀಯವಾಗಿ ವೃದ್ಧಿಸುವ ಮಹತ್ವದ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವಾಲಯ ತನ್ನೆಲ್ಲಾ ಸಚಿವಾಲಯಗಳಿಗೆ ತಮಗೆ ಸೇರಿದ ಅಥವಾ ಅಧೀನದಲ್ಲಿರುವ ಆಸ್ಪತ್ರೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಆಸ್ಪತ್ರೆಗಳಲ್ಲಿ ಕಳೆದ ವರ್ಷ ಮಾಡಿದ್ದಂತೆ ಈಗಲೂ ಕೋವಿಡ್ ಆರೈಕೆಗೆ ಪ್ರತ್ಯೇಕ ನಿರ್ದಿಷ್ಟ ಆಸ್ಪತ್ರೆ ವಾರ್ಡ್ ಗಳನ್ನು ಅಥವಾ ಪ್ರತ್ಯೇಕ ಬ್ಲಾಕ್ ಗಳನ್ನು ಸಜ್ಜಾಗಿಡುವಂತೆ ಸೂಚಿಸಿದೆ. ಈ ಆಸ್ಪತ್ರೆಗಳು/ಬ್ಲಾಕ್ ಗಳು ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರಬೇಕು ಮತ್ತು ಅಲ್ಲಿ ವಿಶೇಷ ಆರೈಕೆ ಸೇರಿದಂತೆ ಅಗತ್ಯ ಚಿಕಿತ್ಸಾ ಸೇವೆಯನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಈ ನಿರ್ದಿಷ್ಟ ಆಸ್ಪತ್ರೆಗಳ ವಾರ್ಡ್ ಗಳು ಮತ್ತು ಬ್ಲಾಕ್ ಗಳನ್ನು ಎಲ್ಲ ಬಗೆಯ ಬೆಂಬಲ ಮತ್ತು ಆಕ್ಸಿಜನ್ ಸೌಲಭ್ಯದ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಮತ್ತು ವಿಶೇಷ ಗಂಭೀರ ಆರೈಕೆ ಘಟಕಗಳು(ಎಲ್ಲಿ ಲಭ್ಯವಿದೆಯೋ ಅಲ್ಲಿ), ಪ್ರಯೋಗಾಲಯ ಸೇವೆಗಳು, ಇಮೇಜಿಂಗ್ ಸರ್ವೀಸಸ್ (ಸ್ಕ್ಯಾನಿಂಗ್ ಸೇವೆಗಳು), ಅಡುಗೆ ಕೋಣೆ ಹಾಗೂ ಲಾಂಡ್ರಿ (ಬಟ್ಟೆಗಳನ್ನು ಶುಚಿಗೊಳಿಸುವ ಸೇವೆ) ಇತ್ಯಾದಿ ಎಲ್ಲ ಪೂರಕ ಸೇವೆಗಳನ್ನು ಆರೋಗ್ಯ ರಕ್ಷಣಾ ಕಾರ್ಯಪಡೆಯ ನೆರವಿನೊಂದಿಗೆ ನೀಡಬೇಕು.
ಕೇಂದ್ರ ಸಚಿವಾಲಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು, ಸದ್ಯ ದೇಶಾದ್ಯಂತ ಕೋವಿಡ್-19 ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಪರಿಸ್ಥಿತಿ ಇದೆ. ಹಾಗಾಗಿ ಕಳೆದ ವರ್ಷ ನೀಡಿದ್ದಂತೆ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ಅವುಗಳಡಿ ಬರುವ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಅವುಗಳ ನಿಯಂತ್ರಣದಲ್ಲಿರುವ ಆಸ್ಪತ್ರೆಗಳು ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿದ್ದಾರೆ.
ಈ ಆಸ್ಪತ್ರೆ ವಾರ್ಡ್ ಗಳು ಮತ್ತು ಬ್ಲಾಕ್ ಗಳಲ್ಲಿ ಅಗತ್ಯ ಚಿಕಿತ್ಸೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸಚಿವಾಲಯಗಳು ಈ ಆಸ್ಪತ್ರೆ ವಾರ್ಡ್ ಮತ್ತು ಬ್ಲಾಕ್ ಗಳ ನಿರ್ದಿಷ್ಟ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಈ ಆಸ್ಪತ್ರೆಗಳು ಎಲ್ಲೆಲ್ಲಿ ಇವೆಯೋ ಅಂತಹ ಕಡೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಈ ಉದ್ದೇಶಕ್ಕಾಗಿ ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಅಗತ್ಯ ಸಮನ್ವಯಕ್ಕಾಗಿ ಆಯಾ ಸಚಿವಾಲಯಗಳು/ಇಲಾಖೆಗಳು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಸಲಹೆ ಮಾಡಲಾಗಿದೆ ಮತ್ತು ಅವರುಗಳ ಸಂಪರ್ಕ ವಿವರವನ್ನು ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
***
(Release ID: 1712211)
Visitor Counter : 282
Read this release in:
Urdu
,
English
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam