ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರೆಮ್ ಡೆಸಿವರ್ ಉತ್ಪಾದನೆ ಹೆಚ್ಚಳಕ್ಕೆ ಅನುಮೋದನೆ
प्रविष्टि तिथि:
14 APR 2021 4:54PM by PIB Bengaluru
ಭಾರತ ಸರ್ಕಾರದ ಕೇಂದ್ರ ರಾಸಾಯನಿಕ ಮತ್ತು ಬಂದರು ಹಾಗೂ ಜಲಮಾರ್ಗಗಳ(ಸ್ವತಂತ್ರ ಹೊಣೆಗಾರಿಕೆ) ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು ರೆಮ್ ಡೆಸಿವರ್ ಲಭ್ಯತೆ ಕುರಿತಂತೆ 2021ರ ಮಾರ್ಚ್ 12 ಮತ್ತು 13ರಂದು ಎಲ್ಲಾ ರೆಮ್ ಡೆಸಿವರ್ ಔಷಧ ಉತ್ಪಾದನೆಯಲ್ಲಿ ತೊಡಗಿರುವವರು ಮತ್ತು ಸಂಬಂಧಿಸಿದವರ ಪರಿಶೀಲನಾ ಸಭೆ ನಡೆಸಿದರು ಮತ್ತು ರೆಮ್ ಡೆಸಿವರ್ ಉತ್ಪಾದನೆ/ಪೂರೈಕೆ ಹೆಚ್ಚಳಕ್ಕೆ ಮತ್ತು ಅದರ ಬೆಲೆಯನ್ನು ತಗ್ಗಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಸದ್ಯ ರೆಮ್ ಡೆಸಿವರ್ ಉತ್ಪಾದನೆಯಲ್ಲಿ ಏಳು ಉತ್ಪಾದಕರು ತೊಡಗಿದ್ದು, ಅವರ ಒಟ್ಟು ಸ್ಥಾಪಿತ ಸಾಮರ್ಥ್ಯ ತಿಂಗಳಿಗೆ 38.80 ಲಕ್ಷ ವೈಲ್ಸ್ ಗಳು(ಬಾಟಲು). ಇದೀಗ ಹೆಚ್ಚುವರಿಯಾಗಿ ಏಳು ಕಡೆ ಔಷಧ ಉತ್ಪಾದನೆಗೆ ತ್ವರಿತ ಅನುಮೋದನೆ ನೀಡಲಾಗಿದ್ದು, ಆರು ಉತ್ಪಾದಕರು ಪ್ರತಿ ತಿಂಗಳು ಸುಮಾರು 10 ಲಕ್ಷ ಬಾಟಲ್ ಸಾಮರ್ಥ್ಯದ ಔಷಧವನ್ನು ಉತ್ಪಾದಿಸಲಿದ್ದಾರೆ. ಹೆಚ್ಚುವರಿಯಾಗಿ ಮತ್ತೆ ತಿಂಗಳಿಗೆ 30 ಲಕ್ಷ ಬಾಟಲ್ ಉತ್ಪಾದನಾ ಸಾಮರ್ಥ್ಯ ವೃದ್ಧಿ ಕಾರ್ಯ ಚಾಲ್ತಿಯಲ್ಲಿದೆ. ಇದರಿಂದಾಗಿ ಒಟ್ಟಾರೆ ಔಷಧ ಉತ್ಪಾದನೆ ಸಾಮರ್ಥ್ಯ ತಿಂಗಳಿಗೆ ಸುಮಾರು 78 ಲಕ್ಷ ಬಾಟಲ್ ಗಳಾಗಲಿವೆ.
ಹೆಚ್ಚುವರಿ ಕ್ರಮವಾಗಿ ರೆಮ್ ಡೆಸಿವರ್ ಎಪಿಐ ಮತ್ತು ಅದರ ಫಾರ್ಮುಲೇಷನ್ ಅನ್ನು 11.04.2021ರಿಂದ ರಫ್ತು ನಿಷೇಧಿಸಿ ಡಿಜಿಎಫ್ ಟಿ ಆದೇಶಿಸಿದೆ. ಆ ಮೂಲಕ ದೇಶೀ ಮಾರುಕಟ್ಟೆಯಲ್ಲಿ ರೆಮ್ ಡೆಸಿವರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಮಧ್ಯ ಪ್ರವೇಶದಿಂದಾಗಿ ರಫ್ತು ಮಾಡಲು ಸಿದ್ಧವಾಗಿದ್ದ ಸುಮಾರು 4 ಲಕ್ಷ ಬಾಟಲ್ ರೆಮ್ ಡೆಸಿವರ್ ಔಷಧವನ್ನು ಸ್ಥಳೀಯ ಅಗತ್ಯತೆ ಮತ್ತು ಉತ್ಪಾದಕರಿಗೆ ನೀಡಲಾಗಿದೆ. ಅಲ್ಲದೆ ದೇಶೀಯ ಮಾರುಕಟ್ಟೆಗಾಗಿ ಇಒಯು/ಎಸ್ಇಝೆಡ್ ಘಟಕಗಳ ಪೂರೈಕೆಯನ್ನು ಖಾತ್ರಿಪಡಿಸಲಾಗಿದೆ.
ರೆಮ್ ಡೆಸಿವರ್ ಉತ್ಪಾದಕರು ಕೂಡ ಸ್ವಯಂ ಪ್ರೇರಿತರಾಗಿ ಬೆಲೆಯನ್ನು ಈ ವಾರಾಂತ್ಯದ ವೇಳೆಗೆ 3500 ರೂ.ಗಳಿಗಿಂತಲೂ ಕಡಿಮೆಗೊಳಿಸಲು ಮುಂದಾಗಿದ್ದು, ಆ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳನ್ನು ಬೆಂಬಲಿಸಲಿದ್ದಾರೆ.
ರೆಮ್ ಡೆಸಿವರ್ ಉತ್ಪಾದಕರಿಗೆ ಆಸ್ಪತ್ರೆ/ಸಾಂಸ್ಥಿಕ ಮಟ್ಟದ ಬೇಡಿಕೆಯ ಪೂರೈಕೆಯನ್ನು ಈಡೇರಿಸಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ರೆಮ್ ಡೆಸಿವರ್ ಅಕ್ರಮ ಮಾರುಕಟ್ಟೆ, ದಾಸ್ತಾನು ಮತ್ತು ಅಧಿಕ ಬೆಲೆಗೆ ಮಾರಾಟ ಮಾಡುವಂತಹ ಪ್ರಕರಣಗಳು ಕಂಡುಬಂದರೆ ತಕ್ಷಣಕ್ಕೆ ಕ್ರಮ ಜರುಗಿಸುವಂತೆ ಡಿಸಿಜಿಐ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಾರಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಬೆಲೆ ಪ್ರಾಧಿಕಾರ(ಎನ್ ಪಿಪಿಎ) ನಿರಂತರವಾಗಿ ರೆಮ್ ಡೆಸಿವರ್ ಲಭ್ಯತೆ ಬಗ್ಗೆ ನಿಗಾವಹಿಸಲಿದೆ.
***
(रिलीज़ आईडी: 1712028)
आगंतुक पटल : 298