ಪ್ರಧಾನ ಮಂತ್ರಿಯವರ ಕಛೇರಿ
‘ಲಸಿಕಾ ಉತ್ಸವ’ ವು ಕೊರೊನಾ ವಿರುದ್ಧ ಎರಡನೇ ಸಮರದ ಆರಂಭ: ಪ್ರಧಾನಿ
ಸಮಾಜ ಮತ್ತು ಜನರು ‘ಸೂಕ್ಷ್ಮ ನಿಯಂತ್ರಕ ವಲಯಗಳನ್ನು’ ರಚಿಸಲು ಮುಂದಾಗಬೇಕು: ಪ್ರಧಾನಿ
ಲಸಿಕೆಯ ಪೋಲಾಗುವಿಕೆ ಶೂನ್ಯವಾಗಿರುವಂತೆ ನಾವು ಎಚ್ಚರ ವಹಿಸಬೇಕು: ಪ್ರಧಾನಿ
‘ಲಸಿಕಾ ಉತ್ಸವ’ ಕ್ಕಾಗಿ ವೈಯಕ್ತಿಕ, ಸಾಮಾಜಿಕ ಮತ್ತು ಆಡಳಿತ ಮಟ್ಟದಲ್ಲಿ ಗುರಿಗಳನ್ನು ನಿಗದಿಪಡಿಸಿ ಮತ್ತು ಅವುಗಳನ್ನು ಸಾಧಿಸಲು ಪ್ರಯತ್ನಿಸಿ: ಪ್ರಧಾನಿ ಕರೆ
Posted On:
11 APR 2021 10:44AM by PIB Bengaluru
‘ಲಸಿಕಾ ಉತ್ಸವ’ ವು ಕೊರೊನಾ ವಿರುದ್ಧದ ಎರಡನೇ ದೊಡ್ಡ ಸಮರದ ಆರಂಭ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ವೈಯಕ್ತಿಕ ನೈರ್ಮಲ್ಯದ ಜೊತೆಗೆ ಸಾಮಾಜಿಕ ನೈರ್ಮಲ್ಯದ ಬಗ್ಗೆಯೂ ವಿಶೇಷ ಗಮನ ಹರಿಸುವಂತೆ ಅವರು ಕರೆಕೊಟ್ಟಿದ್ದಾರೆ. ಉತ್ಸವವು ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯಾದ ಇಂದು ಪ್ರಾರಂಭವಾಗಿದೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಯಾದ ಏಪ್ರಿಲ್ 14 ರವರೆಗೆ ಮುಂದುವರಿಯುತ್ತದೆ.
ಈ ಸಂದರ್ಭದಲ್ಲಿ ಸಂದೇಶ ನೀಡಿರುವ ಪ್ರಧಾನಿಯವರು, ಅಭಿಯಾನಕ್ಕೆ ಸಂಬಂಧಿಸಿದಂತೆ ನಾಲ್ಕು ಅಂಶಗಳ ಬಗ್ಗೆ ಒತ್ತಿ ಹೇಳಿದ್ದಾರೆ.
ಮೊದಲನೆಯದಾಗಿ, ಪ್ರತಿಯೊಬ್ಬರೂ ಒಬ್ಬರಿಗೆ ಲಸಿಕೆ ಹಾಕಲು ನೆರವಾಗುವುದು. ಅಂದರೆ ಲಸಿಕೆ ಪಡೆಯಲು ತಾವೇ ಹೋಗಲು ಸಾಧ್ಯವಾಗದ ಅನಕ್ಷರಸ್ಥರು ಮತ್ತು ವೃದ್ಧರಿಗೆ ಸಹಾಯ ಮಾಡುವುದು.
ಎರಡನೆಯದಾಗಿ, ಪ್ರತಿಯೊಬ್ಬರೂ ಒಬ್ಬರಿಗೆ ಚಿಕಿತ್ಸೆ ಒದಗಿಸುವುದು. ಕೊರೊನಾ ಚಿಕಿತ್ಸೆಯನ್ನು ಪಡೆಯಲು ಸಂಪನ್ಮೂಲಗಳು ಅಥವಾ ತಿಳುವಳಿಕೆ ಇಲ್ಲದ ಜನರಿಗೆ ಚಿಕಿತ್ಸೆ ಪಡೆಯಲು ಸಹಾಯ ಮಾಡುವುದು.
ಮೂರನೆಯದಾಗಿ, ಪ್ರತಿಯೊಬ್ಬರೂ ಒಬ್ಬರ ಜೀವವನ್ನು ಉಳಿಸುವುದು. ಅಂದರೆ ನಾನು ಮುಖಗವಸು ಧರಿಸುವ ಮೂಲಕ ನನ್ನನ್ನು ರಕ್ಷಿಸಿಕೊಂಡು ಇತರರನ್ನೂ ರಕ್ಷಿಸುತ್ತೇನೆ. ಇದರ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದ್ದಾರೆ.
ಅಂತಿಮವಾಗಿ, ಸಮಾಜ ಮತ್ತು ಜನರು ‘ಸೂಕ್ಷ್ಮ ನಿಯಂತ್ರಕ ವಲಯಗಳನ್ನು’ರಚಿಸುವಲ್ಲಿ ಮುಂದಾಗಬೇಕು. ಒಂದೇ ಒಂದು ಪಾಸಿಟಿವ್ ಪ್ರಕರಣದ ಸಂದರ್ಭದಲ್ಲಿಯೂ ಕುಟುಂಬ ಸದಸ್ಯರು ಮತ್ತು ಸಮುದಾಯದ ಸದಸ್ಯರು ‘ಸೂಕ್ಷ್ಮ ನಿಯಂತ್ರಕ ವಲಯ’ (ಮೈಕ್ರೋ ಕಂಟೈನ್‌ಮೆಂಟ್ ವಲಯ) ರಚಿಸಬೇಕು. ಭಾರತದಂತಹ ಜನನಿಬಿಡ ದೇಶದಲ್ಲಿ ಕೊರೊನಾ ವಿರುದ್ಧ ಹೋರಾಟದ ಪ್ರಮುಖ ಅಂಶವೆಂದರೆ ‘ಮೈಕ್ರೋ ಕಂಟೈನ್‌ಮೆಂಟ್ ವಲಯಗಳು’ ಎಂದು ಪ್ರಧಾನಿ ಹೇಳಿದ್ದಾರೆ.
ಪರೀಕ್ಷೆ ಮತ್ತು ಜಾಗೃತಿಯ ಅಗತ್ಯದ ಬಗ್ಗೆ ಪ್ರಧಾನಿ ಒತ್ತಿ ಹೇಳಿದ್ದಾರೆ. ಅರ್ಹ ಪ್ರತಿಯೊಬ್ಬ ವ್ಯಕ್ತಿಯೂ ಲಸಿಕೆ ಪಡೆಯಬೇಕು ಎಂದು ಕರೆಕೊಟ್ಟ ಅವರು, ಇದು ಸಮಾಜ ಮತ್ತು ಆಡಳಿತದ ಪ್ರಾಥಮಿಕ ಪ್ರಯತ್ನವಾಗಿರಬೇಕು ಎಂದು ತಿಳಿಸಿದ್ದಾರೆ.
ಲಸಿಕೆಯ ಪೋಲಾಗುವಿಕೆಯು ಶೂನ್ಯವಾಗಿರುವಂತೆ ನಾವು ಎಚ್ಚರ ವಹಿಸಬೇಕು ಎಂದು ಪ್ರಧಾನಿ ಆಗ್ರಹಿಸಿದ್ದಾರೆ. ಲಸಿಕೆ ವಿತರಣೆಯ ಸಾಮರ್ಥ್ಯದ ಅತ್ಯುತ್ತಮ ಬಳಕೆಯು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಅನಗತ್ಯವಾಗಿ ಮನೆಗಳಿಂದ ಹೊರಹೋಗದಿರುವುದು, ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕುವುದು, ಮುಖಗವಸುಗಳನ್ನು ಧರಿಸುವುದು ಮತ್ತು ಇತರ ಕೋವಿಡ್ ಶಿಷ್ಟಾಚಾರಗಳನ್ನು ನಾವು ಹೇಗೆ ಪಾಲಿಸುತ್ತೇವೆ ಎಂಬುದರ ಮೂಲಕ ‘ಮೈಕ್ರೋ ಕಂಟೈನ್‌ಮೆಂಟ್ ವಲಯಗಳ’ಬಗ್ಗೆ ಅರಿವು ಮೂಡಿಸುವುದರ ಮೇಲೆ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ ಎಂದು ಪ್ರಧಾನಿ ಹೇಳಿದರು.
‘ಲಸಿಕಾ ಉತ್ಸವ’ ದ ಈ ನಾಲ್ಕು ದಿನಗಳಲ್ಲಿ ವೈಯಕ್ತಿಕ, ಸಾಮಾಜಿಕ ಮತ್ತು ಆಡಳಿತ ಮಟ್ಟದಲ್ಲಿ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಸಾಧಿಸಲು ಶ್ರದ್ಧೆಯಿಂದ ಪ್ರಯತ್ನಿಸುವಂತೆ ಪ್ರಧಾನಿ ಕರೆ ಕೊಟ್ಟಿದ್ದಾರೆ. ಜನರ ಭಾಗವಹಿಸುವಿಕೆಯ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದರು. ಜಾಗೃತಿ ಮತ್ತು ಜವಾಬ್ದಾರಿಯುತ ನಡವಳಿಕೆಯಿಂದ ಕೊರೊನಾವನ್ನು ಮತ್ತೊಮ್ಮೆ ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ಹೇಳಿದ್ದಾರೆ.
ಔಷಧ ಮತ್ತು ಎಚ್ಚರಿಕೆ -ದವಾಯಿ ಭಿ, ಕಡಾಯಿ ಭಿ.- ಎರಡೂ ಇರಬೇಕು ಎಂದು ನೆನಪಿಸುವ ಮೂಲಕ ಅವರು ತಮ್ಮ ಸಂದೇಶವನ್ನು ಮುಗಿಸಿದರು.
***
(Release ID: 1711024)
Visitor Counter : 300
Read this release in:
Odia
,
English
,
Hindi
,
Marathi
,
Gujarati
,
Tamil
,
Urdu
,
Bengali
,
Manipuri
,
Assamese
,
Punjabi
,
Telugu
,
Malayalam