ಪ್ರಧಾನ ಮಂತ್ರಿಯವರ ಕಛೇರಿ

“ಆಜಾದಿ ಕಾ ಅಮೃತ ಮಹೋತ್ಸವ” ಆಚರಣೆಯ ರಾಷ್ಟ್ರೀಯ ಸಮಿತಿಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ


ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಕ್ಕೆ 5 ಸ್ತಂಭಗಳನ್ನು ಪಟ್ಟಿ ಮಾಡಿದ ಪ್ರಧಾನಿ

ಸನಾತನ ಭಾರತದ ವೈಭವ ಮತ್ತು ಆಧುನಿಕ ಭಾರತದ ಪ್ರಕಾಶ ಈ ಸಂಭ್ರಮಾಚರಣೆಯಲ್ಲಿರಬೇಕು: ಪ್ರಧಾನಿ

130 ಕೋಟಿ ಭಾರತೀಯರ ಭಾಗವಹಿಸುವಿಕೆಯು ಭಾರತದ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮದ ಕೇಂದ್ರಬಿಂದು: ಪ್ರಧಾನಿ

Posted On: 08 MAR 2021 4:42PM by PIB Bengaluru

ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವ ರಾಷ್ಟ್ರೀಯ ಸಮಿತಿಯ ಮೊದಲ ಸಭೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತೃತ್ವದಲ್ಲಿ ನಡೆಯಿತು. ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ರಾಜ್ಯಪಾಲರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು, ವಿಜ್ಞಾನಿಗಳು, ಅಧಿಕಾರಿಗಳು, ಮಾಧ್ಯಮಗಳ ವ್ಯಕ್ತಿಗಳು, ಆಧ್ಯಾತ್ಮಿಕ ನಾಯಕರು, ಕಲಾವಿದರು ಮತ್ತು ಚಲನಚಿತ್ರ ರಂಗದ ವ್ಯಕ್ತಿಗಳು, ಕ್ರೀಡಾ ಪಟುಗಳು ಮತ್ತಿತರ ಹೆಸರಾಂತ ವ್ಯಕ್ತಿಗಳು ಸೇರಿದಂತೆ ರಾಷ್ಟ್ರೀಯ ಸಮಿತಿಯ ವಿವಿಧ ಸದಸ್ಯರು ಭಾಗವಹಿಸಿದ್ದರು.

ಮಾಜಿ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್, ಮಾಜಿ ಪ್ರಧಾನಿ ಶ್ರೀ ಹೆಚ್. ಡಿ. ದೇವೇಗೌಡ, ಶ್ರೀ ನವೀನ್ ಪಟ್ನಾಯಕ್, ಶ್ರೀ ಮಲ್ಲಿಕಾರ್ಜುನ ಖರ್ಗೆ ಶ್ರೀಮತಿ ಮೀರಾ ಕುಮಾರ್, ಶ್ರೀಮತಿ ಸುಮಿತ್ರಾ ಮಹಾಜನ್, ಶ್ರೀ ಜೆ.ಪಿ.ನಡ್ಡಾ ಮತ್ತು ಮೌಲಾನಾ ವಹಿದುದ್ದೀನ್ ಖಾನ್ ಮುಂತಾದ ರಾಷ್ಟ್ರೀಯ ಸಮಿತಿಯ ಸದಸ್ಯರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು. “ಆಜಾದಿ ಕಾ ಅಮೃತ ಮಹೋತ್ಸವ ಆಯೋಜನೆ ಮತ್ತು ಸಂಘಟನೆಗಾಗಿ ಪ್ರಧಾನ ಮಂತ್ರಿಯವರಿಗೆ ಸಮಿತಿಯ ಸದಸ್ಯರು ಧನ್ಯವಾದ ತಿಳಿಸಿದರು. ಮಹೋತ್ಸವದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಅವರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡಿದರು. ಮುಂದೆ ಇಂತಹ ಹೆಚ್ಚಿನ ಸಭೆಗಳು ನಡೆಯಲಿವೆ ಮತ್ತು ಇಂದು ಸ್ವೀಕರಿಸಿದ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮವನ್ನು ದೇಶವು ಐತಿಹಾಸಿಕ ಸ್ವರೂಪ, ವೈಭವ ಮತ್ತು ಮಹತ್ವಕ್ಕೆ ತಕ್ಕಂತೆ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸಲಿದೆ ಎಂದು ಹೇಳಿದರು. ಸಮಿತಿಯ ಸದಸ್ಯರು ನೀಡಿದ ಹೊಸ ಆಲೋಚನೆಗಳು ಮತ್ತು ವೈವಿಧ್ಯಮಯ ಚಿಂತನೆಗಳನ್ನು ಅವರು ಶ್ಲಾಘಿಸಿದರು. ಪ್ರಧಾನಿಯವರು ಸ್ವಾತಂತ್ರ್ಯದ 75 ವರ್ಷಗಳ ಮಹೋತ್ಸವವನ್ನು ಭಾರತದ ಜನರಿಗೆ ಅರ್ಪಿಸಿದರು.

ಸ್ವಾತಂತ್ರ್ಯದ 75 ವರ್ಷಗಳ ಮಹೋತ್ಸವವು ಸ್ವಾತಂತ್ರ್ಯ ಹೋರಾಟದ ಉತ್ಸಾಹ, ಹುತಾತ್ಮರಿಗೆ ಗೌರವ ಮತ್ತು ಭಾರತ ನಿರ್ಮಾಣದ ಅವರ ಪ್ರತಿಜ್ಞೆಯನ್ನು ಅನುಭವಿಸುವಂತಹ ಮಹೋತ್ಸವವಾಗಿರಬೇಕು ಎಂದು ಪ್ರಧಾನಿ ಹೇಳಿದರು. ಉತ್ಸವವು ಸನಾತನ ಭಾರತದ ವೈಭವ ಮತ್ತು ಆಧುನಿಕ ಭಾರತದ ಪ್ರಕಾಶವನ್ನು ಸಾಕಾರಗೊಳಿಸಬೇಕು ಎಂದು ಅವರು ಹೇಳಿದರು. ಉತ್ಸವವು ಋಷಿಮುನಿಗಳ ಆಧ್ಯಾತ್ಮದ ಬೆಳಕು ಮತ್ತು ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಶಕ್ತಿಯನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು. ಮಹೋತ್ಸವವು 75 ವರ್ಷಗಳ ನಮ್ಮ ಸಾಧನೆಗಳನ್ನು ಜಗತ್ತಿಗೆ ತೋರಿಸುತ್ತದೆ ಮತ್ತು ಮುಂದಿನ 25 ವರ್ಷಗಳವರೆಗೆ ನಮಗೆ ಸಂಕಲ್ಪಕ್ಕೆ ಚೌಕಟ್ಟನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಸಂಭ್ರಮಾಚರಣೆಯಿಲ್ಲದೆ ಯಾವುದೇ ಸಂಕಲ್ಪ ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ಸಂಕಲ್ಪವು ಸಂಭ್ರಮ ರೂಪವನ್ನು ಪಡೆದಾಗ, ಕೋಟ್ಯಂತರ ಜನರ ಪ್ರತಿಜ್ಞೆ ಮತ್ತು ಶಕ್ತಿ ಸೇರ್ಪಡೆಯಾಗುತ್ತದೆ ಎಂದು ಅವರು ಹೇಳಿದರು. 75 ವರ್ಷಗಳ ಸಂಭ್ರಮಾಚರಣೆಯನ್ನು 130 ಕೋಟಿ ಭಾರತೀಯರ ಭಾಗವಹಿಸುವಿಕೆಯ ಮೂಲಕ ಮಾಡಬೇಕಾಗಿದೆ ಮತ್ತು ಜನರ ಭಾಗವಹಿಸುವಿಕೆಯು ಆಚರಣೆಯ ಕೇಂದ್ರ ಬಿಂದುವಾಗಿರುತ್ತದೆ. ಭಾಗವಹಿಸುವಿಕೆಯು 130 ಕೋಟಿ ದೇಶವಾಸಿಗಳ ಭಾವನೆಗಳು, ಸಲಹೆಗಳು ಮತ್ತು ಕನಸುಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

75 ವರ್ಷಗಳ ಆಚರಣೆಗೆ 5 ಸ್ತಂಭಗಳನ್ನು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಅವುಗಳೆಂದರೆ ಸ್ವಾತಂತ್ರ್ಯ ಹೋರಾಟ, 75 ವಿಚಾರಗಳು, 75 ಸಾಧನೆಗಳು, 75 ಕ್ರಿಯೆಗಳು ಮತ್ತು 75 ಸಂಕಲ್ಪಗಳು. ಇವೆಲ್ಲವೂ 130 ಕೋಟಿ ಭಾರತೀಯರ ಆಲೋಚನೆ ಮತ್ತು ಭಾವನೆಗಳನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದರು.

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಗೌರವಿಸುವ ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ದೇಶದ ಮೂಲೆ ಮೂಲೆಗಳೂ ದೇಶದ ಸುಪುತ್ರ ಮತ್ತು ಸುಪುತ್ರಿಯರ ತ್ಯಾಗದಿಂದ ತುಂಬಿವೆ. ಅವರ ಕಥೆಗಳು ರಾಷ್ಟ್ರಕ್ಕೆ ಶಾಶ್ವತವಾದ ಸ್ಫೂರ್ತಿಯ ಸೆಲೆಯಾಗಿವೆ ಎಂದು ಅವರು ಹೇಳಿದರು. ಪ್ರತಿಯೊಂದು ವರ್ಗದ ಕೊಡುಗೆಯನ್ನು ನಾವು ಮುನ್ನೆಲೆಗೆ ತರಬೇಕಾಗಿದೆ. ತಲೆಮಾರುಗಳಿಂದಲೂ ದೇಶಕ್ಕಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ಜನರಿದ್ದಾರೆ. ಅವರ ಕೊಡುಗೆ, ಆಲೋಚನೆ ಮತ್ತು ಚಿಂತನೆಗಳನ್ನು ರಾಷ್ಟ್ರೀಯ ಪ್ರಯತ್ನಗಳೊಂದಿಗೆ ಸಂಯೋಜಿಸಬೇಕಾಗಿದೆ ಎಂದು ಅವರು ಹೇಳಿದರು.

ಐತಿಹಾಸಿಕ ಮಹೋತ್ಸವವು ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸುವ, ಭಾರತವನ್ನು ಅವರು ಬಯಸಿದ ಎತ್ತರಕ್ಕೆ ಏರಿಸುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು. ಕೆಲವು ವರ್ಷಗಳ ಹಿಂದೆ ಯೋಚಿಸಲಾಗದ ವಿಷಯಗಳನ್ನು ದೇಶ ಇಂದು ಸಾಧಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಸಂಭ್ರಮಾಚರಣೆಯು ಭಾರತದ ಐತಿಹಾಸಿಕ ವೈಭವಕ್ಕೆ ತಕ್ಕಂತೆ ನಡೆಯಲಿದೆ ಎಂದು ಅವರು ಹೇಳಿದರು.

***


(Release ID: 1703395) Visitor Counter : 444