ಪ್ರಧಾನ ಮಂತ್ರಿಯವರ ಕಛೇರಿ

‘ಜನೌಷಧಿ ದಿನ’ ಆಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಶಿಲ್ಲಾಂಗ್‌ನ ನೈಗ್ರಿಮ್ಸ್ ನಲ್ಲಿ 7500ನೇ ಜನೌಷಧಿ ಕೇಂದ್ರ ರಾಷ್ಟ್ರಕ್ಕೆ ಸಮರ್ಪಣೆ

ಬಡವರ ಅಧಿಕ ವೈದ್ಯಕೀಯ ವೆಚ್ಚದ ಹೊರೆ ಇಳಿಸಿದ ಜನೌಷಧಿ ಯೋಜನೆ: ಪ್ರಧಾನಮಂತ್ರಿ

ಜನೌಷಧಿ ಕೇಂದ್ರಗಳಿಂದಲೇ ಕೈಗೆಟಕುವ ದರದ ಔಷಧಗಳನ್ನು ಖರೀದಿಸಬೇಕೆಂದು ಕರೆ

ನೀವು ನಮ್ಮ ಕುಟುಂಬದವರು ಮತ್ತು ನಿಮ್ಮ ಕಾಯಿಲೆಗಳು, ನಮ್ಮ ಕುಟುಂಬದ ಸದಸ್ಯರ ಕಾಯಿಲೆಗಳಂತೆ, ಹಾಗಾಗಿ ನಾನು ನನ್ನ ದೇಶವಾಸಿಗಳ ಆರೋಗ್ಯ ಸ್ಥಿರವಾಗಿರಬೇಕೆಂದು ಬಯಸುತ್ತೇನೆ: ಪ್ರಧಾನಮಂತ್ರಿ

Posted On: 07 MAR 2021 12:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕಜನೌಷಧಿ ದಿನಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅವರು ಶಿಲ್ಲಾಂಗ್ ನೈಗ್ರಿಮ್ಸ್ (ಈಶಾನ್ಯ ಇಂದಿರಾಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಯಲ್ಲಿ 7500ನೇ ಜನೌಷಧಿ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಉತ್ತಮ ಕೆಲಸ ಮಾಡಿರುವ ಪಾಲುದಾರರರ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ, ಶ್ರೀ ಮನ್ಸುಖ್ ಮಾಂಡವೀಯ, ಶ್ರೀ ಅನುರಾಗ್ ಠಾಕೂರ್, ಹಿಮಾಚಲಪ್ರದೇಶ, ಮೇಘಾಲಯ ರಾಜ್ಯಗಳ ಮುಖ್ಯಮಂತ್ರಿಗಳು, ಮೇಘಾಲಯ ಮತ್ತು ಗುಜರಾತ್ ರಾಜ್ಯಗಳ ಉಪಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಮಾಚಲ ಪ್ರದೇಶದ ಶಿಮ್ಲಾ, ಮಧ್ಯಪ್ರದೇಶದ ಭೂಪಾಲ್, ಗುಜರಾತ್ ಅಹಮದಾಬಾದ್, ದಿಯುವಿನ ಮಾರುತಿನಗರ ಮತ್ತು ಕರ್ನಾಟಕದ ಮಂಗಳೂರು ಸೇರಿ ಐದು ಆಯ್ದ ಸ್ಥಳಗಳಿಂದ ಜನೌಷಧಿ ಮಿತ್ರರು, ಕೇಂದ್ರಗಳ ಸಂಚಾಲಕರು ಮತ್ತು ಫಲಾನುಭವಿಗಳ ಜೊತೆ ಪ್ರಧಾನಮಂತ್ರಿಗಳು ಸಂವಾದ ನಡೆಸಿದರು. ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು. ಕೈಗೆಟಕುವ ದರದಲ್ಲಿ ಔಷಧ ಲಭ್ಯವಾಗುತ್ತಿರುವುದರಿಂದ ರೋಗಿಗಳು ಅಗತ್ಯ ಔಷಧಿಗಳನ್ನು ಪಡೆಯುತ್ತಿರುವುದರಿಂದ ಅವರ ಆರೋಗ್ಯ ಉತ್ತಮಗೊಳ್ಳುತ್ತಿದೆ ಎಂದು ಹೇಳಿದರುಯುವಕರು ಜನೌಷಧಿ ಅಭಿಯಾನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಸದ್ಯ ನಡೆಯುತ್ತಿರುವ ಕೋವಿಡ್-19 ಲಸಿಕೆ ಅಭಿಯಾನಕ್ಕೂ ಸಹ ಬೆಂಬಲಿಸುವಂತೆ ಕೋರಿದರು.

ಜನೌಷಧಿಯ ಪ್ರಯೋಜನಗಳ ಬಗ್ಗೆ ಎಲ್ಲ ಫಲಾನುಭವಿಗಳು ತಮ್ಮ ಸುತ್ತಮುತ್ತಲಿನ ಜನರಿಗೆ ಜಾಗೃತಿ ಮೂಡಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ಅವರುನೀವು ನನ್ನ ಕುಟುಂಬದವರು ಮತ್ತು ನಿಮ್ಮ ಕಾಯಿಲೆ ನನ್ನ ಕುಟುಂಬದ ಸದಸ್ಯರೊಬ್ಬರ ಕಾಯಿಲೆಯಂತೆ, ಹಾಗಾಗಿಯೇ ನಾನು ಎಲ್ಲ ದೇಶವಾಸಿಗಳ ಆರೋಗ್ಯ ಸ್ಥಿರವಾಗಿರಬೇಕೆಂದು ಬಯಸುತ್ತೇನೆಎಂದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಜನೌಷಧಿ ಯೋಜನೆ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರ ದೊಡ್ಡ ಮಿತ್ರನಾಗಿ ಮಾರ್ಪಟ್ಟಿದೆ ಎಂದು ಉಲ್ಲೇಖಿಸಿದರು. ಇವು ಸೇವೆ ಮತ್ತು ಉದ್ಯೋಗ ಎರಡೂ ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದರು. ಶಿಲ್ಲಾಂಗ್ ನಲ್ಲಿ 7500ನೇ ಜನೌಷಧಿ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಅವರು, ಇದು ಈಶಾನ್ಯ ರಾಜ್ಯಕ್ಕೆ ಜನೌಷಧಿ ಕೇಂದ್ರಗಳ ವಿಸ್ತರಣೆಯ ಸೂಚಕವಾಗಿದೆ. ಯೋಜನೆ ಈಶಾನ್ಯ ಪ್ರದೇಶ ಮತ್ತು ಬುಡಕಟ್ಟು ಜನರು ವಾಸಿಸುತ್ತಿರುವ ಗುಡ್ಡಗಾಡು ಪ್ರದೇಶಗಳ ಜನರಿಗೆ ಕೈಗೆಟಕುವ  ದರದಲ್ಲಿ ಔಷಧಗಳನ್ನು ಒದಗಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆರು ವರ್ಷಗಳ ಹಿಂದೆ ಭಾರತದಲ್ಲಿ ನೂರು ಕೇಂದ್ರಗಳೂ ಸಹ ಇರಲಿಲ್ಲ. ಆದರೆ ಈಗ 7500ನೇ ಕೇಂದ್ರ ಲೋಕಾರ್ಪಣೆ ಮಾಡಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. 10,000 ಕೇಂದ್ರಗಳನ್ನು ಹೊಂದುವ ಗುರಿ ಸಾಧನೆ ಮಾಡಬೇಕು ಎಂದು ಅವರು ಹೇಳಿದರು. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು, ಔಷಧಿಗಳಿಗಾಗಿ ವೆಚ್ಚ ಮಾಡುತ್ತಿದ್ದ ಸುಮಾರು 3600 ಕೋಟಿ ರೂ.ಗಳನ್ನು ಪ್ರತಿ ವರ್ಷ ಉಳಿತಾಯ ಮಾಡುತ್ತಿವೆ. ಯೋಜನೆ ಅಡಿ ಮಹಿಳೆಯರಲ್ಲಿ ಆತ್ಮನಿರ್ಭರ ಭಾರತವನ್ನು ಉತ್ತೇಜಿಸಲಾಗುತ್ತಿದ್ದು, 1000ಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಯೋಜನೆಯನ್ನು ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡೂವರೆ ಲಕ್ಷದಿಂದ ಐದು ಲಕ್ಷ ರೂಪಾಯಿವರೆಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಲಾಗಿದೆ ಮತ್ತು ದಲಿತ, ಆದಿವಾಸಿ ಮಹಿಳೆಯರು ಮತ್ತು ಈಶಾನ್ಯ ಭಾಗದ ಜನರಿಗೆ ಹೆಚ್ಚುವರಿಯಾಗಿ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು

ಭಾರತದಲ್ಲೇ ಸಿದ್ಧಪಡಿಸಲಾದ ಔಷಧಗಳು ಮತ್ತು ಶಸ್ತ್ರ ಚಿಕಿತ್ಸಾ ಉಪಕರಣಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಔಷಧಗಳ ಉತ್ಪಾದನೆಯೂ ಸಹ ಹೆಚ್ಚಾಗುತ್ತಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳೂ ಸಹ ಸೃಷ್ಟಿಯಾಗುತ್ತಿದೆ ಎಂದರು. ಇದೀಗ 75 ಬಗೆಯ ಆಯಷ್ ಔಷಧಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗುತ್ತಿವೆ. ರೋಗಿಗಳು ಕಡಿಮೆ ದರದಲ್ಲಿ ಆಯುಷ್ ಔಷಧಗಳನ್ನು ಪಡೆಯುವ ಪ್ರಯೋಜನ ಹೊಂದಬಹುದು ಮತ್ತು ಇದರಿಂದ ಆಯುರ್ವೇದ ಮತ್ತು ಆಯುಷ್ ವೈದ್ಯಕೀಯ ಕ್ಷೇತ್ರಕ್ಕೂ ಕೂಡ ಪ್ರಯೋಜನವಾಗಲಿದೆ ಎಂದು ಹೇಳಿದರು.

ದೀರ್ಘಕಾಲದವರೆಗೆ, ಸರ್ಕಾರದ ಚಿಂತನೆಯು ಆರೋಗ್ಯವನ್ನು ಕೇವಲ ರೋಗ ಮತ್ತು ಚಿಕಿತ್ಸೆಯ ವಿಷಯವಾಗಿ ಮಾತ್ರ ಪರಿಗಣಿಸುತ್ತದೆ. ಆದರೆ ಆರೋಗ್ಯ ವಿಷಯ ಕೇವಲ ರೋಗ ಮತ್ತು ಚಿಕಿತ್ಸೆಗೆ ಸೀಮಿತವಾದುದಲ್ಲ, ಅದು ದೇಶದ ಸಾಮಾಜಿಕ ಮತ್ತು ಆರ್ಥಿಕ ಆಯಾಮವನ್ನು ಬಾಧಿಸುತ್ತದೆ. ಆರೋಗ್ಯದ ಕುರಿತಂತೆ ಸಮಗ್ರ ಧೋರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಸರ್ಕಾರ ರೋಗದ ಕಾರಣಗಳನ್ನು ತಿಳಿಯಲೂ ಸಹ ಕಾರ್ಯನಿರ್ವಹಿಸುತ್ತಿದೆ ಎಂದರು. ಅವರು ಸ್ವಚ್ಛ ಭಾರತ್ ಅಭಿಯಾನ, ಉಚಿತ ಅಡುಗೆ ಅನಿಲ ಸಂಪರ್ಕ, ಆಯುಷ್ಮಾನ್ ಭಾರತ್, ಮಿಷನ್ ಇಂದ್ರ ಧನುಷ್, ಪೋಷಣ್ ಅಭಿಯಾನ ಮತ್ತು ಯೋಗವನ್ನು ಗುರುತಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಒಂದು ಸಮಗ್ರ ಮನೋಭಾವವನ್ನು ಹೊಂದಿದೆ ಎಂದು ಹೇಳಿದರು. ವಿಶ್ವ ಸಂಸ್ಥೆ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಿರಿ ಧಾನ್ಯಗಳನ್ನು ಉತ್ತೇಜಿಸುವ ಅಗತ್ಯ ಬಗ್ಗೆ ಪ್ರತಿಪಾದಿಸಿದ ಅವರು, ಇದರಿಂದ ಪೌಷ್ಟಿಕಯುತ ಆಹಾರಧಾನ್ಯಗಳು ಲಭ್ಯವಾಗುವುದಲ್ಲದೆ, ಇದು ರೈತರ ಆದಾಯ ವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.

ಬಡ ಕುಟುಂಬಗಳ ಮೇಲೆ ಅಧಿಕ ವೈದ್ಯಕೀಯ ಚಿಕಿತ್ಸಾ ವೆಚ್ಚ ಬೀಳುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇತ್ತೀಚಿನ ವರ್ಷಗಳಲ್ಲಿ ಚಿಕಿತ್ಸೆಯಲ್ಲಿನ ಎಲ್ಲ ಬಗೆಯ ತಾರತಮ್ಯಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆದಿವೆ ಮತ್ತು ದೇಶದ ಪ್ರತಿಯೊಬ್ಬ ಬಡಜನರಿಗೂ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಲಾಗಿದೆ ಎಂದರು. ಇದಕ್ಕಾಗಿ ಅಗತ್ಯ ಔಷಧಗಳು, ಹೃದಯ ಶಸ್ತ್ರ ಚಿಕಿತ್ಸೆಗೆ ಅಳವಡಿಸುತ್ತಿದ್ದ ಸ್ಟಂಟ್ ಗಳು, ಮೊಣಕಾಲು ಚಿಪ್ಪಿನ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಾಧನಗಳ ಬೆಲೆಯನ್ನು ಹಲವು ಪಟ್ಟು ಇಳಿಕೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ದೇಶದ ಶೇ.50 ಕೋಟಿಗೂ ಅಧಿಕ ಬಡಕುಟುಂಬಗಳಿಗೆ ಉಚಿತ ಚಿಕಿತ್ಸೆಯನ್ನು ಖಾತ್ರಿಪಡಿಸಲಾಗಿದೆ. ಈವರೆಗೆ 1.5 ಕೋಟಿಗೂ ಅಧಿಕ ಜನರು ಇದರ ಪ್ರಯೋಜನ ಪಡೆದಿದ್ದಾರೆ ಮತ್ತು ಸುಮಾರು 30,000 ಕೋಟಿ ರೂ. ಉಳಿತಾಯವಾಗಿದೆ.

ಕೊರೊನಾ ಲಸಿಕೆಯನ್ನು ಭಾರತದಲ್ಲೇ ಸಂಶೋಧನೆ ಮಾಡಿದ ವಿಜ್ಞಾನಿಗಳ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಇಂದು ಭಾರತದ ಲಸಿಕೆಗಳು ದೇಶದಲ್ಲಿ ಮಾತ್ರ ಬಳಕೆಯಾಗುತ್ತಿಲ್ಲ, ಇಡೀ ಜಗತ್ತಿಗೆ ಸಹಕಾರಿಯಾಗುತ್ತಿವೆ ಎಂದರು. ಸರ್ಕಾರ ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದವರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಲಸಿಕೀಕರಣ ಕಾರ್ಯಕ್ಕೆ ಒತ್ತು ನೀಡಿದೆ ಎಂದು ಅವರು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 250 ರೂ. ಶುಲ್ಕ ವಿಧಿಸಲಾಗುತ್ತಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಪರಿಣಾಮಕಾರಿ ಚಿಕಿತ್ಸೆ ಮತ್ತು ಗುಣಮಟ್ಟದ ವೈದ್ಯಕೀಯ ಸಿಬ್ಬಂದಿ ಹೊಂದುವ ಹಾಗು ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸುವ ವಶ್ಯಕತೆ ಇದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಆರೋಗ್ಯ ಮೂಲಸೌಕರ್ಯವನ್ನು ಗ್ರಾಮಗಳ ಪ್ರಾಥಮಿಕ ಆಸ್ಪತ್ರೆಗಳಿಂದ ತೃತೀಯ ಹಂತದ ಆಸ್ಪತ್ರೆಗಳವರೆಗೆ ಮತ್ತು ವೈದ್ಯಕೀಯ ಕಾಲೇಜುಗಳಿಂದ ಏಮ್ಸ್ ಗಳ ವರೆಗೆ ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸುತ್ತಾ ಇಡೀ ವಲಯವನ್ನು ಸಮಗ್ರ ರೀತಿಯಲ್ಲಿ ನೋಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಕಳೆದ ಆರು ವರ್ಷಗಳಲ್ಲಿ ವೈದ್ಯಕೀಯ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ವಿವರಿಸಿದರು. ಕಳೆದ ಆರು ವರ್ಷಗಳಲ್ಲಿ 30 ಸಾವಿರಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳನ್ನು ಸೇರ್ಪಡೆ ಮಾಡುವುದರೊಂದಿಗೆ 2014ರಲ್ಲಿದ್ದ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 55 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ 30 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಪೈಕಿ 24 ಸಾವಿರ ಸೀಟುಗಳು ಹೊಸದಾಗಿ ಸೇರ್ಪಡೆಯಾಗಿವೆ. ಕಳೆದ ಆರು ವರ್ಷಗಳಲ್ಲಿ 180 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಗ್ರಾಮಗಳಲ್ಲಿ 1.5 ಲಕ್ಷ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪೈಕಿ 50 ಸಾವಿರ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಕೇಂದ್ರಗಳು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿವೆ ಮತ್ತು ಅತ್ಯಾಧುನಿಕ ಪರೀಕ್ಷೆಗಳನ್ನು ಸ್ಥಳೀಯವಾಗಿಯೇ ನಡೆಸುತ್ತಿವೆ. ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ನೀಡುತ್ತಿದ್ದ ಅನುದಾನವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಆರೋಗ್ಯ ಸಮಸ್ಯೆಗಳಿಗೆ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಯೋಜನೆ ಒಂದು ಸಂಪೂರ್ಣ ಪರಿಹಾರವಾಗಲಿದೆ ಎಂದು ಹೇಳಿದರು. ಪ್ರತಿಯೊಂದು ಜಿಲ್ಲೆಗೂ ಡಯಗ್ನೊಸ್ಟಿಕ್ ಕೇಂದ್ರಗಳನ್ನು ಒದಗಿಸಲಾಗುವುದು ಮತ್ತು 600ಕ್ಕೂ ಅಧಿಕ ಗಂಭೀರ ಆರೈಕೆ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕೇಂದ್ರಗಳ ಸ್ಥಾಪನೆ ನಿಟ್ಟಿನಲ್ಲಿ ಕಾರ್ಯ ನಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರತಿಯೊಬ್ಬರಿಗೂ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಇಂದು ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಲೋಚನೆಯೊಂದಿಗೆ ಇಂದು ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಜಾಲ ಅತ್ಯಂತ ಕ್ಷಿಪ್ರವಾಗಿ ವಿಸ್ತರಣೆಯಾಗುತ್ತಿದೆ ಮತ್ತು ಸಾಧ್ಯವಾದಷ್ಟು ಜನರನ್ನು ತಲುಪುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

***(Release ID: 1703108) Visitor Counter : 191