ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಸಾಗರ ಶೃಂಗಸಭೆ 2021 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 02 MAR 2021 1:10PM by PIB Bengaluru

ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಭಾಯ್ ಮಾಂಡವೀಯ, ಶ್ರೀ ಧರ್ಮೇಂದ್ರ ಪ್ರಧಾನ್, ನಾನಾ ರಾಜ್ಯಗಳ ಮುಖ್ಯಮಂತ್ರಿಗಳೇ, ಗೌರವಾನ್ವಿತರೇ, ಆದರಣೀಯ ಅತಿಥಿಗಳೇ,

ನನ್ನ ನೆಚ್ಚಿನ ಮಿತ್ರರೇ,

ಭಾರತೀಯ ಸಾಗರ ಶೃಂಗಸಭೆಗೆ ನಾನು ಎಲ್ಲರನ್ನೂ ಸ್ವಾಗತಿಸುತ್ತೇನೆ ಶೃಂಗಸಭೆ ವಲಯಕ್ಕೆ ಸಂಬಂಧಿಸಿದ ಹಲವು ಭಾಗೀದಾರರನ್ನು ಒಗ್ಗೂಡಿಸಿದೆ. ಎಲ್ಲರೂ ಒಗ್ಗೂಡಿ ಸಾಗರ ಆರ್ಥಿಕತೆ ಉತ್ತೇಜಿಸುವಲ್ಲಿ ಭಾರೀ ಯಶಸ್ಸು ಗಳಿಸಲಿದ್ದೇವೆ ಎಂಬ ವಿಶ್ವಾಸ ನನಗಿದೆ.

ಮಿತ್ರರೇ,

ಭಾರತ ವಲಯದ ಸ್ವಾಭಾವಿಕ ನಾಯಕನಾಗಿದ್ದು, ನಮ್ಮ ರಾಷ್ಟ್ರ ಶ್ರೀಮಂತ ಸಾಗರ ಇತಿಹಾಸವನ್ನು ಹೊಂದಿದೆ. ನಮ್ಮ ಕರಾವಳಿಗಳಲ್ಲಿ ನಾಗರಿಕತೆಗಳು ಉದಯಿಸಿವೆ. ಸಹಸ್ರಾರು ವರ್ಷಗಳ ಹಿಂದೆ ನಮ್ಮ ಬಂದರುಗಳು ಅತ್ಯಂತ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ನಮ್ಮ ಕರಾವಳಿ ತೀರಗಳು ವಿಶ್ವಕ್ಕೆ ಸಂಪರ್ಕ ಕಲ್ಪಿಸಿದ್ದವು.

ಮಿತ್ರರೇ,

ಭಾರತೀಯ ಸಾಗರ ಶೃಂಗಸಭೆಯ ಮೂಲಕ ಇಡೀ ವಿಶ್ವವನ್ನು ಭಾರತ ಆಹ್ವಾನಿಸುತ್ತಿದೆ ಮತ್ತು ನಮ್ಮ ಪ್ರಗತಿಗಾಥೆಯಲ್ಲಿ ಭಾಗಿಯಾಗಬೇಕೆಂದು ಬಯಸುತ್ತಿದೆ. ಸಾಗರ ವಲಯದ ಬೆಳವಣಿಗೆಯ ಬಗ್ಗೆ ಭಾರತ ಅತ್ಯಂತ ಗಂಭೀರವಾಗಿದೆ ಮತ್ತು ಇದನ್ನು ವಿಶ್ವದ ನೀಲಿ ಆರ್ಥಿಕತೆಯ ಮುಂಚೂಣಿಯಲ್ಲಿ ಕೊಂಡೊಯ್ಯಲಿದೆ. ಸದ್ಯದ ಮೂಲಸೌಕರ್ಯ ಉನ್ನತೀಕರಣ ಮುಂದಿನ ಪೀಳಿಗೆಯ ಅಗತ್ಯ ಮೂಲಸೌಕರ್ಯ ಸೃಷ್ಟಿ, ಸುಧಾರಣಾ ಪಯಣಕ್ಕೆ ಉತ್ತೇಜನ ಇವು ನಮ್ಮ ಆದ್ಯತಾ ವಲಯಗಳಲ್ಲಿ ಸೇರಿವೆ. ಕ್ರಮಗಳ ಮೂಲಕ ನಾವು ನಮ್ಮ ಆತ್ಮನಿರ್ಭರ ಭಾರತ ಕನಸಿನ ಬಲವರ್ಧನೆಯ ಗುರಿ ಹೊಂದಿದ್ದೇವೆ.

ಮಿತ್ರರೇ,

ನಾನು ಸದ್ಯದ ಮೂಲಸೌಕರ್ಯ ಉನ್ನತೀಕರಣದ ಬಗ್ಗೆ ಮಾತನಾಡಬೇಕಾದರೆ ನಾನು ದಕ್ಷತೆಯನ್ನು ಸುಧಾರಿಸುವ ಪ್ರಾಮುಖ್ಯ ಬಗ್ಗೆಯೂ ಗಮನಹರಿಸುತ್ತೇನೆ. ಪ್ರತಿಯೊಂದನ್ನೂ ಪ್ರತ್ಯೇಕವಾಗಿ ನೋಡುವ ಮನೋಭಾವದ ಬದಲಿಗೆ ನಾವು ಇಡೀ ವಲಯವನ್ನು ಒಂದು ಎಂದು ಪರಿಗಣಿಸಿ, ಆದ್ಯತೆ ನೀಡುತ್ತಿದ್ದೇವೆ. ಮತ್ತು ಅದರ ಫಲಿತಾಂಶಗಳು ನಮಗೆ ಇದೀಗ ಗೋಚರಿಸುತ್ತಿವೆ. 2014ರಲ್ಲಿ ನಮ್ಮ ಪ್ರಮುಖ ಬಂದರುಗಳ ಸಾಮರ್ಥ್ಯ ಸುಮಾರು ವಾರ್ಷಿಕ 870 ಮಿಲಿಯನ್ ಟನ್ ಇತ್ತು. ಇದೀಗ ಸಾಮರ್ಥ್ಯವನ್ನು ಸುಮಾರು 1550 ಮಿಲಿಯನ್ ಟನ್ ಗೆ ಹೆಚ್ಚಿಸಲಾಗಿದೆ. ಉತ್ಪಾದನಾ ಸಾಮರ್ಥ್ಯ ವೃದ್ಧಿಯಿಂದ ನಮ್ಮ ಬಂದರುಗಳಿಗೆ ಮಾತ್ರ ಅನುಕೂಲವಾಗಿಲ್ಲ. ಒಟ್ಟಾರೆ ಆರ್ಥಿಕತೆಗೆ ಉತ್ತೇಜನ ದೊರಕಿದೆ ಮತ್ತು ನಮ್ಮ ಉತ್ಪನ್ನಗಳು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡಲು ಸಹಕಾರಿಯಾಗಿದೆ. ಭಾರತೀಯ ಬಂದರುಗಳನ್ನು ಇದೀಗ ನೇರ ಬಂದರು ವಿತರಣೆ, ನೇರ ಬಂದರು ಪ್ರವೇಶ ಮತ್ತು ಸುಗಮ ದತ್ತಾಂಶ ಹರಿವಿಗೆ ಉನ್ನತೀಕರಿಸಿದ ಬಂದರು ಸಂವಹನಾ ವ್ಯವಸ್ಥೆ ಮಾನದಂಡಗಳಲ್ಲಿ ಪರಿಗಣಿಸಲ್ಪಡುತ್ತಿದೆ. ನಮ್ಮ ಬಂದರುಗಳಲ್ಲಿ ಸರಕುಗಳ ಆಗಮನ ಮತ್ತು ನಿರ್ಗಮನ ಸಮಯ ಇಳಿಕೆಯಾಗಿದೆ. ಅಲ್ಲದೆ ನಾವು ಬಂದರುಗಳಲ್ಲಿ ದಾಸ್ತಾನು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇವೆ ಹಾಗೂ ಬಂದರು ಜಾಗಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದ್ದೇವೆ. ಬಂದರುಗಳನ್ನುತ್ಯಾಜ್ಯದಿಂದ ಸಂಪತ್ತುಸೃಷ್ಟಿಸುವ ತಾಣಗಳನ್ನಾಗಿ ಮಾರ್ಪಡಿಸಲು ಸುಸ್ಥಿರ ರೀತಿಯಲ್ಲಿ ದೇಶೀಯ ಹಡಗುಗಳ ಮರು ಸಂಸ್ಕರಣೆ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ ಒತ್ತು ನೀಡಲಾಗಿದೆ. ಬಂದರು ವಲಯದಲ್ಲಿ ನಾವು ಖಾಸಗಿ ಹೂಡಿಕೆಯನ್ನು ಉತ್ತೇಜಿಸುತ್ತಿದ್ದೇವೆ.

ಮಿತ್ರರೇ,

ದಕ್ಷತೆಯ ಜೊತೆಗೆ ನಾವು ಸಂಪರ್ಕವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ನಮ್ಮ ಬಂದರುಗಳನ್ನು ಕರಾವಳಿ ಆರ್ಥಿಕ ವಲಯ, ಬಂದರು ಆಧರಿತ ಸ್ಮಾರ್ಟ್ ಸಿಟಿಗಳು ಮತ್ತು ಕೈಗಾರಿಕಾ ಪಾರ್ಕ್ ಗಳೊಂದಿಗೆ ಸಂಯೋಜಿಸುತ್ತಿದ್ದೇವೆ. ಇದರಿಂದ ನಮ್ಮ ಕೈಗಾರಿಕಾ ಹೂಡಿಕೆಗಳು ಹೆಚ್ಚುವುದಲ್ಲದೆ, ಬಂದರುಗಳ ಸಮೀಪ ಜಾಗತಿಕ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ದೊರಕಲಿದೆ.

ಮಿತ್ರರೇ,

ಮೂಲಸೌಕರ್ಯ ಅಭಿವೃದ್ಧಿ ಸೃಷ್ಟಿಗೆ ಸಂಬಂಧಿಸಿದಂತೆ ನಾನು ಕಾಂಡ್ಲಾದಲ್ಲಿನ ವಧಾವನ್, ಪಾರಾದೀಪ್ ಮತ್ತು ದೀನ್ ದಯಾಳ್ ಬಂದರುಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ನಿಯೋಜಿಸುತ್ತಿರುವ ದೊಡ್ಡ ಯೋಜನೆಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆನಮ್ಮ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಜಲಮಾರ್ಗಗಳಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ದೇಶೀಯ ಜಲಮಾರ್ಗಗಳು ಅತ್ಯಂತ ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿಯಾಗಿದ್ದು, ಅವು ಸರಕು ಸಾಗಾಣೆಗೂ ಅನುಕೂಲಕಾರಿಯಾಗಿವೆ. ನಾವು 2030 ವೇಳೆಗೆ 23 ಜಲಮಾರ್ಗಗಳ ಕಾರ್ಯಾಚರಣೆ ಮಾಡಲು ಉದ್ದೇಶಿಸಿದ್ದೇವೆ. ನಾವು ಇದನ್ನು ಮೂಲಸೌಕರ್ಯವೃದ್ಧಿ ಅಭಿವೃದ್ಧಿ, ದಿಕ್ಸೂಚಿ ಸಾಧಕಗಳು ಮತ್ತು ನದಿಗಳ ಮಾಹಿತಿ ವ್ಯವಸ್ಥೆಗಳ ಮೂಲಕ ಕ್ರಮ ಕೈಗೊಳ್ಳುತ್ತಿದ್ದೇವೆ. ಪೂರ್ವ ಜಲಮಾರ್ಗಗಳನ್ನು ಸಾರಿಗೆ ಗ್ರಿಡ್ ಮೂಲಕ ಸಂಪರ್ಕಿಸುತ್ತಿದ್ದು, ಅವುಗಳನ್ನು ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ನೊಂದಿಗೆ ಪ್ರಾದೇಶಿಕ ಸಂಪರ್ಕ ಸಾಧಿಸಲಾಗುವುದು. ಇದರಿಂದಾಗಿ ಪರಿಣಾಮಕಾರಿ ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರ ಬಲವರ್ಧನೆಗೊಳ್ಳಲಿದೆ.

ಮಿತ್ರರೇ,

ಹೊಸ ಸಾಗರ ಮೂಲಸೌಕರ್ಯ, ಜೀವನ ಸುಗಮಗೊಳಿಸಲು ಉತ್ತೇಜನ ನೀಡುವ ಪ್ರಮುಖ ಮಾರ್ಗವಾಗಿದೆ. ರೊ-ರೊ ಮತ್ತು ರೊ-ಪಾಕ್ಸ್ ಯೋಜನೆಗಳಿಗೆ ನಮ್ಮ ನದಿಗಳ ಸಾಮರ್ಥ್ಯ ಬಳಕೆ ನಿಟ್ಟಿನಲ್ಲಿ ನಮ್ಮ ಮುನ್ನೋಟದ ಅಂಶಗಳಲ್ಲಿ ಮಹತ್ವ ನೀಡಲಾಗಿದೆ. ಸೀ-ಪ್ಲೇನ್ ಕಾರ್ಯಾಚರಣೆ ಅಭಿವೃದ್ಧಿಗೆ 16 ಕಡೆ ವಾಟರ್ ಡ್ರೋಮ್ ಗಳನ್ನು ನಿರ್ಮಿಸಲಾಗುವುದು. ಐದು ರಾಷ್ಟ್ರೀಯ ಜಲಮಾರ್ಗಗಳಲ್ಲಿ ರಿವರ್ ಕ್ರೂಸ್ ಟರ್ಮಿನಲ್ ಮೂಲಸೌಕರ್ಯ ಮತ್ತು ಜಟ್ಟಿಗಳನ್ನು ನಿರ್ಮಾಣ ಮಾಡಲಾಗುವುದು.

ಮಿತ್ರರೇ,

ನಾವು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಆಯ್ದ ಬಂದರುಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು 2023 ವರೆಗೆ ಅವುಗಳನ್ನು ಉನ್ನತೀಕರಿಸಲಾಗುವುದು. ಭಾರತದಲ್ಲಿ ಉದ್ದನೆಯ ಕರಾವಳಿ ತೀರದಾದ್ಯಂತ 189 ಲೈಟ್ ಹೌಸ್ ಗಳು ಇವೆ. 78 ಲೈಟ್ ಹೌಸ್ ಗಳ ಪಕ್ಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಇದರ ಪ್ರಮುಖ ಉದ್ದೇಶವೆಂದರೆ ಹಾಲಿ ಇರುವ ಲೈಟ್ ಹೌಸ್ ಗಳ ಅಭಿವೃದ್ಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ವಿಶಿಷ್ಟ ಸಾಗರ ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸುವುದು. ಕೊಚ್ಚಿ, ಮುಂಬೈ, ಗುಜರಾತ್ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳು ಮತ್ತು ನಗರಗಳಲ್ಲಿ ನಗರ ಜಲಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ

ಮಿತ್ರರೇ,

ಇತರೆ ವಲಯಗಳಂತೆ ಸಾಗರ ವಲಯಕ್ಕೆ ಸಂಬಂಧಿಸಿದ ಕಾಮಗಾರಿಗಳಲ್ಲಿ ವಿಳಂವಾಗದಂತೆ ನೋಡಿಕೊಳ್ಳುತ್ತೇವೆ. ಇತ್ತೀಚೆಗೆ ನಾವು ಬಂದರು ಸಚಿವಾಲಯವನ್ನು ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರು ನಾಮಕರಣ ಮಾಡಿ ಅದರ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಸಚಿವಾಲಯ ಸಾಗರ ಶಿಪ್ಪಿಂಗ್ ಮತ್ತು ನೌಕೆ, ಶಿಕ್ಷಣ ಮತ್ತು ಸಾಗರ ವಾಣಿಜ್ಯ ತರಬೇತಿ, ಹಡಗು ಅಭಿವೃದ್ಧಿ ಮತ್ತು ಹಡಗು ದುರಸ್ಥಿ ಕೈಗಾರಿಕೆ, ಹಡಗು ಒಡೆಯುವುದು ಮತ್ತು ಮೀನುಗಾರಿಕೆ ಹಡಗುಗಳ ಉದ್ಯಮ ಮತ್ತು ತೇಲುವ ಕುಶಲಕಲೆ ಉದ್ಯಮಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಕ್ರಮ ಕೈಗೊಳ್ಳಲಿದ್ದೇವೆ.

ಮಿತ್ರರೇ,

ಬಂದರು ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯ ಹೂಡಿಕೆ ಮಾಡಬಹುದಾದ   400 ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯೋಜನೆಗಳಲ್ಲಿ ಸುಮಾರು 31 ಬಿಲಿಯನ್ ಡಾಲರ್ ಅಥವಾ 2.25 ಲಕ್ಷ ಕೋಟಿ ರೂ. ಸಂಭವನೀಯ ಹೂಡಿಕೆ ಸಾಮರ್ಥ್ಯವಿದೆ. ಇದು ನಮ್ಮ ಸಾಗರ ವಲಯದ ಸಮಗ್ರ ಅಭಿವೃದ್ಧಿಯ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ

ಮಿತ್ರರೇ,

ಭಾರತೀಯ ಸಾಗರ ವಿಷನ್ 2030ಗೆ ಚಾಲನೆ ನೀಡಲಾಗಿದೆ. ಅದರಲ್ಲಿ ಸರ್ಕಾರದ ಆದ್ಯತೆಗಳನ್ನು ಸೂಚಿಸಲಾಗಿದೆ. ಸಾಗರ-ಮಂಥನ: ಮರ್ಕನ್ ಟೈಲ್ ಮೆರೈನ್ ವಿಭಾಗದ ಬಗ್ಗೆ ಜಾಗೃತಿ ಕೇಂದ್ರಕ್ಕೂ ಕೂಡ ಇಂದು ಚಾಲನೆ ನೀಡಲಾಗಿದೆ. ಇದು ಸಾಗರ ಭದ್ರತೆ, ಶೋಧ ಮತ್ತು ರಕ್ಷಣಾ ಸಾಮರ್ಥ್ಯ, ಸುರಕ್ಷತೆ ಮತ್ತು ಸಾಗರ ಪರಿಸರ ಸಂರಕ್ಷಣೆಗೆ ಮಾಹಿತಿ ವ್ಯವಸ್ಥೆಯಾಗಿದೆ. ಬಂದರು ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸಲು 2016ರಲ್ಲಿ ಸರ್ಕಾರ ಸಾಗರಮಾಲಾ ಯೋಜನೆಯನ್ನು ಪ್ರಕಟಿಸಿದೆ. ಕಾರ್ಯಕ್ರಮದ ಭಾಗವಾಗಿ 2015ರಿಂದ 2035 ಅವಧಿಯಲ್ಲಿ ಗುರುತಿಸಿ ಮತ್ತು ಅನುಷ್ಠಾನಗೊಳಿಸಬಹುದಾದ 82 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ 6 ಲಕ್ಷ ಕೋಟಿ ರೂ. ಮೊತ್ತದ 674ಕ್ಕೂ ಅಧಿಕ ಯೋಜನೆಗಳನ್ನು ಗುರುತಿಸಲಾಗಿದೆ

ಮಿತ್ರರೇ,

ಭಾರತ ಸರ್ಕಾರ ದೇಶೀಯ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಮಾರುಕಟ್ಟೆಗೂ ಆದ್ಯತೆ ನೀಡುತ್ತಿದೆ. ದೇಶೀಯ ಹಡಗು ನಿರ್ಮಾಣವನ್ನು ಉತ್ತೇಜಿಸಲು ಭಾರತೀಯ ಶಿಪ್ ಯಾರ್ಡ್ ಗಳಿಗಾಗಿ ಹಡಗು ನಿರ್ಮಾಣ ಹಣಕಾಸು ನೆರವಿನ ನೀತಿಯನ್ನು ಅನುಮೋದಿಸಲಾಗಿದೆ. ಭಾರತೀಯ ಶಿಪ್ ಯಾರ್ಡ್ ಗಳಿಗೆ ಆರ್ಥಿಕ ನೆರವಿನ ನೀತಿಯನ್ನು ಪ್ರಕಟಿಸಲಾಗಿದೆ. 2022 ವೇಳೆಗೆ ಎರಡೂ ತೀರಗಳಲ್ಲೂ ಹಡಗು ದುರಸ್ತಿ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು. ‘ತ್ಯಾಜ್ಯದಿಂದ ಸಂಪತ್ತು ಸೃಷ್ಟಿಉತ್ತೇಜನಕ್ಕೆ ದೇಶೀಯ ಹಡಗು ಸಂಸ್ಕರಣೆ ಉದ್ಯಮವನ್ನು ಉತ್ತೇಜಿಸಲಾಗುತ್ತಿದೆ. ಭಾರತ ಅದಕ್ಕಾಗಿ ಹಡಗುಗಳ ಮರುಸಂಸ್ಕರಣಾ ಕಾಯ್ದೆ 2019 ಜಾರಿಗೊಳಿಸಿದೆ ಮತ್ತು ಅದಕ್ಕಾಗಿ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಒಪ್ಪಿಗೆ ನೀಡಿದೆ.

ಮಿತ್ರರೇ,

ನಾವು ನಮ್ಮಲ್ಲಿನ ಅತ್ಯುತ್ತಮ ಪದ್ಧತಿಗಳ ಜ್ಞಾನವನ್ನು ಹಂಚಿಕೊಳ್ಳಲು ಬಯಸಿದ್ದೇವೆ. ಅಲ್ಲದೆ ನಾವು ಜಾಗತಿಕ ಉತ್ತಮ ಪದ್ಧತಿಗಳಲ್ಲೂ ಸಹ ಕಲಿಯುವ ಮುಕ್ತ ಮನಸ್ಸು ಹೊಂದಿದ್ದೇವೆ. ನಾವು ಬಿಮ್ ಸ್ಟೆಕ್ ಮತ್ತು ಐಒಆರ್ ರಾಷ್ಟ್ರಗಳೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಯೋಜನೆಗೆ ಆದ್ಯತೆಗಳನ್ನು ಮುಂದುವರಿಸಿದ್ದೇವೆ. ಭಾರತ 2026 ವೇಳೆಗೆ ಪರಸ್ಪರ ಒಪ್ಪಂದಗಳ ಮೂಲಕ ಮೂಲಸೌಕರ್ಯ ಮತ್ತು ನೆರವು ನೀಡುವುದರಲ್ಲಿ ಹೂಡಿಕೆ ವೃದ್ಧಿಸಲು ಯೋಜನೆ ರೂಪಿಸಿದೆ. ಭಾರತ ಸರ್ಕಾರ ಒಳನಾಡು ಮೂಲಸೌಕರ್ಯ ಮತ್ತು ಪೂರಕ ವ್ಯವಸ್ಥೆ ಅಭಿವೃದ್ಧಿಗೆ ಸಮಗ್ರ ಕ್ರಮಗಳನ್ನು ಕೈಗೊಂಡಿದೆ. ಸಾಗರ ವಲಯದಲ್ಲಿ ನಾವು ವಿದ್ಯುತ್ ಗಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಉತ್ತೇಜಿಸುತ್ತಿದ್ದೇವೆ. ದೇಶಾದ್ಯಂತ ಪ್ರಮುಖ ಬಂದರುಗಳಲ್ಲಿ ಸೌರ ಮತ್ತು ಗಾಳಿಯಾಧಾರಿತ ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ನಾವು ಕೈಗೊಂಡಿದ್ದೇವೆ. 2030 ವೇಳೆಗೆ ಭಾರತೀಯ ಬಂದರುಗಳಲ್ಲಿ ಮೂರು ಹಂತಗಳಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಸಾಮರ್ಥ್ಯವನ್ನು ಒಟ್ಟು ಸಾಮರ್ಥ್ಯದಲ್ಲಿ ಶೇ.60ಕ್ಕೂ ಅಧಿಕಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ.  

ಮಿತ್ರರೇ,

ಭಾರತದ ಉದ್ದನೆಯ ಕರಾವಳಿ ತೀರ ನಿಮಗಾಗಿ ಕಾಯುತ್ತಿದೆ. ಭಾರತದ ಶ್ರಮ ಜೀವಿಗಳು ಸಹ ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಬಂದರುಗಳಲ್ಲಿ ಹೂಡಿಕೆ ಮಾಡಿ, ನಮ್ಮ ಜನರಲ್ಲಿ ಹೂಡಿಕೆ ಮಾಡಿ. ಭಾರತವನ್ನು ನಿಮ್ಮ ಅಪೇಕ್ಷಿತ ಆಯ್ಕೆ ತಾಣವನ್ನಾಗಿ ಮಾಡಿ. ನಮ್ಮ ಭಾರತೀಯ ಬಂದರುಗಳನ್ನು ನಿಮ್ಮ ವ್ಯಾಪಾರ ಮತ್ತು ವಾಣಿಜ್ಯ ಬಂದರುಗಳನ್ನಾಗಿ ರೂಪಿಸಿ. ಶೃಂಗಸಭೆಗಾಗಿ ಎಲ್ಲರಿಗೂ ನನ್ನ ಶುಭಾಶಯಗಳು. ಇಲ್ಲಿ ವಿಸ್ತೃತ ಸಮಾಲೋಚನೆಗಳು ನಡೆಯಲಿ ಮತ್ತು ಅವುಗಳು ಫಲಪ್ರದವಾಗಲಿ.

ಧನ್ಯವಾದಗಳು.

ಅನಂತ ಧನ್ಯವಾದಗಳು.

***



(Release ID: 1701935) Visitor Counter : 236