ಪ್ರಧಾನ ಮಂತ್ರಿಯವರ ಕಛೇರಿ

2ನೇ ಖೇಲೋ ಇಂಡಿಯಾ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟದಲ್ಲಿ ಪ್ರಧಾನಿ ಆರಂಭಿಕ ಭಾಷಣ


ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಮ್ಮೆಯ ಸ್ಥಾನಮಾನ : ಪ್ರಧಾನಿ

ಯುವ ಕ್ರೀಡಾಪಟುಗಳಿಗೆ ʻಅತ್ಮನಿರ್ಭರ್ ಭಾರತ್‌ʼನ ಪ್ರಚಾರ ರಾಯಭಾರಿಗಳು ಎಂಬುದನ್ನು ನೆನಪಿಟ್ಟುಕೊಳ್ಳುವಂತೆ ಪ್ರಧಾನಿ ಪ್ರೇರೇಪಿಸಿದರು

Posted On: 26 FEB 2021 12:36PM by PIB Bengaluru

2ನೇ ಖೇಲೋ ಇಂಡಿಯಾ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಆರಂಭಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಎರಡನೆ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಮಾಡಿ, ಆ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ಪರಿವರ್ತಿಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಆಟಗಾರರಿಗೆ ಹಾಗೂ ದೇಶದ ಎಲ್ಲಾ ಆಟಗಾರರಿಗೆ ಅವರು ಶುಭ ಹಾರೈಸಿದರು. ವಿವಿಧ ರಾಜ್ಯಗಳಿಂದ ಈ ಚಳಿಗಾಲದ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರ ಸಂಖ್ಯೆ ದ್ವಿಗುಣಗೊಂಡಿದೆ, ಇದು ಚಳಿಗಾಲದ ಕ್ರೀಡಾಕೂಟದ ಬಗ್ಗೆ ಹೆಚ್ಚುತ್ತಿರುವ ಉತ್ಸಾಹವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಈ ಚಳಿಗಾಲದ ಕ್ರೀಡೆಗಳಲ್ಲಿ ಪಡೆದ ಅನುಭವವು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಸಹಾಯ ವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದ ಕ್ರೀಡಾಕೂಟವು ಹೊಸ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹ ನೆರವಾಗಲಿದೆ. ಈ ಕಾರ್ಯಕ್ರಮವು ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ವಲಯದಲ್ಲಿ ಹೊಸ ಉತ್ಸಾಹ ಮತ್ತು ಹುಮ್ಮಸ್ಸನ್ನು ತುಂಬಲಿದೆ ಎಂದು ಅವರು ಹೇಳಿದರು. ಜಗತ್ತಿನ ದೇಶಗಳು ತಮ್ಮ ಸೌಮ್ಯ ಶಕ್ತಿಯನ್ನು ಪ್ರದರ್ಶಿಸುವ ಕ್ಷೇತ್ರವಾಗಿ ಕ್ರೀಡೆ ಮಾರ್ಪಟ್ಟಿದೆ ಎಂದರು.

ಕ್ರೀಡೆಯು ಜಾಗತಿಕ ಆಯಾಮವನ್ನು ಹೊಂದಿದ್ದು, ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಇತ್ತೀಚೆಗಿನ ಸುಧಾರಣೆಗಳಿಗೆ ಈ ದೂರದೃಷ್ಟಿಯೇ ಮಾರ್ಗದರ್ಶಕವಾಗಿದೆ. ಖೇಲೋ ಇಂಡಿಯಾ ಅಭಿಯಾನದಿಂದ ಹಿಡಿದು ಒಲಿಂಪಿಕ್ ಪೋಡಿಯಂ ಕ್ರೀಡಾಂಗಣದವರೆಗೆ ಎಲ್ಲೆಡೆ ಒಂದು ಸಮಗ್ರವಾದ ವಿಧಾನವನ್ನು ಅನುಸರಿಸಲಾಗುತ್ತಿದೆ. ತಳಮಟ್ಟದ ಪ್ರತಿಭೆಗಳನ್ನು ಗುರುತಿಸುವ ಮೂಲಕ ಕ್ರೀಡಾ ವೃತ್ತಿಪರರಿಗೆ ನೆರವಿನ ಹಸ್ತ ಚಾಚಿ, ಅವರನ್ನು ಉನ್ನತ ಮಟ್ಟದ ಜಾಗತಿಕ ವೇದಿಕೆಗೆ ಕರೆತರಲಾಗುತ್ತಿದೆ. ಪ್ರತಿಭೆಯನ್ನು ಗುರುತಿಸುವುದರಿಂದ ಹಿಡಿದು ತಂಡದ ಆಯ್ಕೆವರೆಗೆ ಪಾರದರ್ಶಕತೆಯೇ ಸರಕಾರದ ಪ್ರಥಮ ಆದ್ಯತೆಯಾಗಿದೆ. ಕ್ರೀಡಾಪಟುಗಳ ಘನತೆ, ಅವರ ಕೊಡುಗೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಮ್ಮೆಯ ಸ್ಥಾನಮಾನ ನೀಡಲಾಗಿದೆ. ಈ ಹಿಂದೆ ಕ್ರೀಡೆಯನ್ನು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗತ್ತು. ಆದರೆ ಈಗ ಕ್ರೀಡೆಯನ್ನು ಪಠ್ಯಕ್ರಮದ ಭಾಗವಾಗಿ ಪರಿಗಣಿಸಲಾಗುತ್ತಿದೆ. ಜೊತೆಗೆ, ಮಕ್ಕಳ ಶಿಕ್ಷಣದಲ್ಲಿ ಕ್ರೀಡೆಯ ಶ್ರೇಯಾಂಕವನ್ನೂ ಪರಿಗಣಿಸಲಾಗುತ್ತದೆ. ಕ್ರೀಡೆಯ ಉತ್ತೇಜನಕ್ಕಾಗಿ ಉನ್ನತ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ನಿರ್ವಹಣೆಯನ್ನು ಶಾಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇದರಿಂದ ಯುವಜನರ ವೃತ್ತಿ ಭವಿಷ್ಯ ಸುಧಾರಿಸುತ್ತದೆ. ಜೊತೆಗೆ, ಕ್ರೀಡಾ ಆರ್ಥಿಕತೆಯಲ್ಲಿ ಭಾರತದ ಉಪಸ್ಥಿತಿ ಹೆಚ್ಚಾಗುತ್ತದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ತಾವು 'ಅತ್ಮನಿರ್ಭರ್ ಭಾರತ್' ಪ್ರಚಾರ ರಾಯಭಾರಿಗಳು ಎಂಬುದನ್ನು ಯುವ ಕ್ರೀಡಾಪಟುಗಳು ನೆನಪಿಡಬೇಕು ಎಂದು ಹೇಳುವ ಮೂಲಕ ಅವರನ್ನು ಶ್ರೀ ಮೋದಿ ಪ್ರೇರೇಪಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಯುವಜನತೆಯ ಸಾಧನೆಯ ಮಾನದಂಡದ ವಿಶ್ವವು ಭಾರತವನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

****


(Release ID: 1701098) Visitor Counter : 321