ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಸೃಜನಶೀಲತೆ ಮತ್ತು ಜ್ಞಾನಕ್ಕೆ ಯಾವುದೇ ಮಿತಿ ಇಲ್ಲ

ಠ್ಯಾಗೂರ್ ಬಂಗಾಳದ ಹೆಮ್ಮೆ ಮತ್ತು ಭಾರತೀಯ ವೈವಿಧ್ಯದ ಬಗ್ಗೆ ಸಮಾನ ಹೆಮ್ಮೆ ಹೊಂದಿದ್ದವರು

ರಾಷ್ಟ್ರ ಮೊದಲು ಎನ್ನುವ ಮನೋಭಾವದಿಂದಾಗಿ ಹಲವು ಪರಿಹಾರಗಳು 

ಏಕ ಭಾರತ್ – ಶ್ರೇಷ್ಠ ಭಾರತ್ ಗೆ ಬಂಗಾಳ ಪ್ರೇರಣೆ 

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಮೈಲಿಗಲ್ಲು:  ಪ್ರಧಾನಮಂತ್ರಿ

Posted On: 19 FEB 2021 1:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದರು. ಪಶ್ಚಿಮ ಬಂಗಾಳದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ರೆಕ್ಟರ್ ಶ್ರೀ ಜಗದೀಪ್ ಧನಕರ್, ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ಅವರು ಘಟಿಕೋತ್ಸವ ಭಾಷಣವನ್ನುದ್ದೇಶಿಸಿ ಮಾತನಾಡುತ್ತಾ, ಸಮಗ್ರ ಭಾರತಕ್ಕೆ ಮತ್ತು ತಮಗೆ ಸ್ಫೂರ್ತಿ ನೀಡಿದ್ದ ವೀರ ಶಿವಾಜಿ ಕುರಿತು ಗುರುದೇವ್ ರವೀಂದ್ರನಾಥ್ ಠ್ಯಾಗೂರ್ ಅವರು ಬರೆದಿದ್ದ ಪದ್ಯವನ್ನು ಉಲ್ಲೇಖಿಸಿದರು. ಇಲ್ಲಿನ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿ ಕೇವಲ ವಿಶ್ವವಿದ್ಯಾಲಯದ ಭಾಗವಲ್ಲ ಅವರು, ಕ್ರಿಯಾಶೀಲ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವವರು ಎಂದು ಪ್ರಧಾನಮಂತ್ರಿ ಹೇಳಿದರು. ಗುರುದೇವ ಅವರು ವಿಶ್ವವಿದ್ಯಾಲಯಕ್ಕೆ ವಿಶ್ವಭಾರತಿ ಎಂದು ಹೆಸರಿಟ್ಟಿರುವುದು ಜಾಗತಿಕ ವಿಶ್ವವಿದ್ಯಾಲಯವಾಗಬೇಕು ಎಂದು ಬಯಸಿ. ಯಾರೇ ವಿಶ್ವಭಾರತಿಗೆ ಕಲಿಯುವುದಕ್ಕೆ ಬಂದರೂ ಭಾರತೀಯ ಮತ್ತು ಭಾರತೀಯತೆಯ ದೃಷ್ಟಿಕೋನದಿಂದ ಇಡೀ ಜಗತ್ತನ್ನು ನೋಡುವಂತಾಗಬೇಕು ಎಂದು ಅವರು ಬಯಸಿದ್ದರು. ಹಾಗಾಗಿ ವಿಶ್ವಭಾರತಿ ಕಲಿಕೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದು, ಅದನ್ನು ಭಾರತದ ಶ್ರೀಮಂತ ಪರಂಪರೆಯಂತೆ ಕಾಣಲಾಗುತ್ತಿದೆ. ಭಾರತೀಯ ಪರಂಪರೆಯ ಕುರಿತ ಸಂಶೋಧನೆಯ ವಿವರಗಳನ್ನು ಮತ್ತು ಬಡವರಲ್ಲಿ ಬಡವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಪ್ರಚುರಪಡಿಸಬೇಕು ಎಂದು ಕರೆ ನೀಡಿದರು. ಗುರುದೇವ ಠ್ಯಾಗೂರ್ ಅವರ ವಿಶ್ವಭಾರತಿ ಕೇವಲ ಜ್ಞಾನಾರ್ಜನೆಗೆ ಸೀಮಿತವಾದ ಕೇಂದ್ರವಾಗಿರಲಿಲ್ಲ. ಅದು ಭಾರತೀಯ ಸಂಸ್ಕೃತಿಯ ಅಗ್ರ ಗುರಿಯಾದ ಸ್ವಾವಲಂಬನೆ ಸಾಧಿಸುವ ಪ್ರಯತ್ನವಾಗಿತ್ತು ಎಂದು ಹೇಳಿದರು.

ಭಿನ್ನ ಆದರ್ಶಗಳು ಮತ್ತು ಭಿನ್ನಾಭಿಪ್ರಾಯಗಳ ನಡುವೆಯೇ ನಮ್ಮನ್ನು ನಾವು ಸಂಶೋಧಿಸಿಕೊಳ್ಳಬೇಕು ಎಂದು ಗುರುದೇವ ಅವರು ನಂಬಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಠ್ಯಾಗೂರ್ ಅವರು ಬಂಗಾಳಕ್ಕೆ ಹೆಮ್ಮೆ ಎಂದ ಅವರು, ಇದೇ ವೇಳೆ ಅವರು ಭಾರತೀಯ ವೈವಿಧ್ಯದ ಬಗ್ಗೆಯೂ ಸಮಾನ ಹೆಮ್ಮೆ ಹೊಂದಿದ್ದರು ಎಂದು ಹೇಳಿದರು. ಗುರುದೇವ್ ಅವರ ದೂರದೃಷ್ಟಿಯಿಂದಾಗಿ ಶಾಂತಿನಿಕೇತನದ ಮುಕ್ತ ಆಕಾಶದಲ್ಲಿ ಮಾನವೀಯತೆ ಜೀವಂತವಾಗಿದೆ ಎಂದು ಅವರು ಹೇಳಿದರು. ವಿಶ್ವಭಾರತಿ ಜ್ಞಾನದ ಸಮುದ್ರದಲ್ಲಿ ಎಂದಿಗೂ ಅಂತ್ಯಕಾಣದ ಸ್ಥಳವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಅನುಭವ ಆಧಾರಿತ ಶಿಕ್ಷಣದ ಪದ್ಧತಿಯ ತಳಹದಿ ಇದೆ ಎಂದ ಅವರು ಸೃಜನಶೀಲತೆ ಮತ್ತು ಜ್ಞಾನಕ್ಕೆ ಯಾವುದೇ ಮಿತಿ ಇಲ್ಲ ಎಂದರು. ಈ ಚಿಂತನೆಯೊಂದಿಗೆ ಗುರುದೇವ ಅವರು ಈ ಶ್ರೇಷ್ಠ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳು ಜ್ಞಾನ, ಚಿಂತನೆ ಮತ್ತು ಕೌಶಲ್ಯ ಅವು ಸ್ಥಿರವಲ್ಲ, ಅವು ಸದಾ ಚಲನಶೀಲ ಮತ್ತು ನಿರಂತರ ಪ್ರಕ್ರಿಯೆಗಳಾಗಿರುತ್ತವೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಹೊಣೆಗಾರಿಕೆ ಜ್ಞಾನ ಮತ್ತು ಶಕ್ತಿಯಿಂದ ಬರುತ್ತದೆ ಎಂದರು. ಅಧಿಕಾರವಿದ್ದಾಗ ಗಂಭೀರವಾಗಿರಬೇಕು ಮತ್ತು ತಮ್ಮಲ್ಲಿ ಸಂಯಮ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬ ವಿದ್ವಾಂಸರು ಜ್ಞಾನ ಇಲ್ಲದವರಿಗೆ ಜ್ಞಾನ ನೀಡುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ನಿಮ್ಮ ಜ್ಞಾನ ಅದು ನಿಮಗೆ ಮಾತ್ರ ಸೇರಿದ್ದಲ್ಲ, ಅದು ಸಮಾಜಕ್ಕೆ ಸೇರಿದ್ದು, ಅದು ನಮ್ಮ ದೇಶದ ಪರಂಪರೆ ಎಂದು ಹೇಳಿದರು. ನಿಮ್ಮ ಜ್ಞಾನ ಮತ್ತು ಕೌಶಲ್ಯ ರಾಷ್ಟ್ರಕ್ಕೆ ಹೆಮ್ಮೆ ತರುವಂತೆ ಮಾಡುತ್ತದೆ ಅಥವಾ ಸಮಾಜವನ್ನು ಅಪಪ್ರಚಾರ ಮತ್ತು ವಿನಾಶದ ಕತ್ತಲೆಯಲ್ಲಿ ತಳ್ಳಬಹುದು. ವಿಶ್ವದಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಬಹುತೇಕರು ಉತ್ತಮ ಶಿಕ್ಷಣ ಪಡೆದವರು ಮತ್ತು ಉತ್ತಮ ಕೌಶಲ್ಯ ಹೊಂದಿದವರಾಗಿದ್ದಾರೆ ಎಂದು ಅವರು ಹೇಳಿದರು. ಮತ್ತೊಂದೆಡೆ ಜನರು ತಮ್ಮ ಜೀವಕ್ಕೆ ಅಪಾಯ ತಂದುಕೊಂಡು ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿ ಕೋವಿಡ್‌ನಂತಹ ಸಾಂಕ್ರಾಮಿಕದಿಂದ ಜನರನ್ನು ಉಳಿಸುತ್ತಿದ್ದಾರೆ ಎಂದರು. ಇದು ಆದರ್ಶವಲ್ಲ ಆದರೆ ಮನೋಭಾವ. ಅದು ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿರಬಹುದು. ಎರಡಕ್ಕೂ ವ್ಯಾಪ್ತಿ ಇದೆ ಮತ್ತು ಎರಡೂ ಮಾರ್ಗಗಳು ಮುಕ್ತವಾಗಿವೆ. ಹಾಗಾಗಿ ವಿದ್ಯಾರ್ಥಿಗಳು ತಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಪರಿಹಾರದ ಭಾಗವಾಗಬೇಕೆ ಎಂಬುದನ್ನು ನಿರ್ಧರಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಅವರು ರಾಷ್ಟ್ರ ಮೊದಲು ಎನ್ನುವ ಚಿಂತನೆಯನ್ನು ಆಯ್ದುಕೊಂಡರೆ ಅವರ ನಿರ್ಧಾರ ಕೆಲವು ಪರಿಹಾರಗಳತ್ತ ಸಾಗುವಂತೆ ಮಾಡುತ್ತದೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಯಾವುದೇ ಹೆದರಿಕೆ ಪಡುವ ಅಗತ್ಯವಿಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಲ್ಲಿಯವರೆಗೆ ದೇಶದ ಯುವಜನತೆಯಲ್ಲಿ ಹೊಸ ಆವಿಷ್ಕಾರಗಳ ಮನಸ್ಥಿತಿ ಇರುತ್ತದೋ, ಅಪಾಯಗಳನ್ನು ಸ್ವೀಕರಿಸಲಾಗುತ್ತದೆಯೋ ಮತ್ತು ಮುನ್ನಡೆಯಲಾಗುತ್ತದೆಯೋ ಅಲ್ಲಿಯವರೆಗೆ ದೇಶದ ಭವಿಷ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ಹೇಳಿದರು. ಆ ನಿಟ್ಟಿನಲ್ಲಿ ದೇಶದ ಯುವಕರಿಗೆ ಸರ್ಕಾರ ಎಲ್ಲ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಸಾಂಪ್ರದಾಯಿಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಐತಿಹಾಸಿಕ ಸಾಮರ್ಥ್ಯವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಗಾಂಧಿವಾದಿ ಶ್ರೀ ಧರ್ಮಪಾಲರ ಕೃತಿ ‘ದಿ ಬ್ಯೂಟಿಫುಲ್ ಟ್ರೀ – ಇಂಡಿಜೀನಸ್ ಇಂಡಿಯನ್ ಎಜುಕೇಷನ್ ಇನ್ ದಿ ಎಯ್ಟೀನ್ತ್ ಸೆಂಚುರಿ’ ಕೃತಿಯನ್ನು ಉಲ್ಲೇಖಿಸಿದರು. 1820ರ ಸಮೀಕ್ಷೆಯಂತೆ ಪ್ರತಿಯೊಂದು ಗ್ರಾಮದಲ್ಲೂ ಒಂದಕ್ಕಿಂತ ಅಧಿಕ ಗುರುಕುಲಗಳಿದ್ದವು. ಅವುಗಳು ಸ್ಥಳೀಯ ದೇವಸ್ಥಾನಗಳೊಂದಿಗೆ ಸಂಯೋಜನೆ ಹೊಂದಿದ್ದವು ಮತ್ತು ಸಾಕ್ಷರತೆಯ ಪ್ರಮಾಣ ತುಂಬಾ ಅಧಿಕವಾಗಿತ್ತು ಎಂದು ಅಂದಾಜಿಸಲಾಗಿದೆ. ಇದನ್ನು ಬ್ರಿಟೀಷ್ ವಿದ್ವಾಂಸರು ಸಹ ಗುರುತಿಸಿದ್ದರು. ಗುರುದೇವ ರವೀಂದ್ರನಾಥ ಅವರು, ಭಾರತೀಯ ಶಿಕ್ಷಣದ ಆಧುನೀಕರಣ ಮಾಧ್ಯಮವನ್ನು ಮತ್ತು ಜೀತಪದ್ಧತಿಯ ಸಂಕೋಲೆಯಿಂದ ಅದನ್ನು ಮುಕ್ತಗೊಳಿಸುವ ವ್ಯವಸ್ಥೆಯನ್ನು ವಿಶ್ವಭಾರತಿಯಲ್ಲಿ ಅಭಿವೃದ್ಧಿಪಡಿಸಿದ್ದರು.

ಅಂತೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಳೆಯ ನಿರ್ಬಂಧಗಳನ್ನು ಮುರಿದುಹಾಕುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿವು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ವಿಷಯಗಳ ಆಯ್ಕೆ ಮತ್ತು ಬೋಧನಾ ಮಾಧ್ಯಮಗಳ ಆಯ್ಕೆಯಲ್ಲಿ ಸರಳೀಕರಣಕ್ಕೆ ಅವಕಾಶವಿದೆ. ಈ ನೀತಿ ಉದ್ಯಮಶೀಲತೆಯನ್ನು ಮತ್ತು ಸ್ವ-ಉದ್ಯೋಗವನ್ನು ಸಂಶೋಧನಾ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ನೀತಿಯಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿದ್ವಾಂಸರಿಗೆ ಲಕ್ಷಾಂತರ ಜರ್ನಲ್ ಗಳು ಉಚಿತವಾಗಿ ಲಭ್ಯವಾಗುವಂತೆ ಸರ್ಕಾರ ಇತ್ತೀಚೆಗೆ ಕ್ರಮ ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವರ್ಷದ ಬಜೆಟ್ ನಲ್ಲಿ ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಮೂಲಕ ಐದು ವರ್ಷಗಳ ಕಾಲ ಸಂಶೋಧನೆಗೆ 50 ಸಾವಿರ ಕೋಟಿ ರೂ. ವ್ಯಯ ಮಾಡಲು ಉದ್ದೇಶಿಸಲಾಗಿದೆ. ಈ ಶಿಕ್ಷಣ ನೀತಿಯಲ್ಲಿ ಲಿಂಗ ಸೇರ್ಪಡೆ ನಿಧಿಗೆ ಅವಕಾಶ ಕಲ್ಪಿಸಲಾಗಿದ್ದು, ಅದು ಬಾಲಕಿಯರಿಗೆ ಹೊಸ ವಿಶ್ವಾಸವನ್ನು ತುಂಬಲಿದೆ. ಶಾಲೆಯಿಂದ ಹೊರಗುಳಿಯುತ್ತಿರುವ ಬಾಲಕಿಯರ ಪ್ರಮಾಣ ಹೆಚ್ಚಿರುವ ಬಗ್ಗೆ ಗಂಭೀರ ಅಧ್ಯಯನ ನಡೆಸಲಾಗಿದೆ ಮತ್ತು ಅವರಿಗೆ ಪ್ರವೇಶ – ನಿರ್ಗಮನ ಆಯ್ಕೆಯ ವ್ಯವಸ್ಥೆಗಳನ್ನು ಮತ್ತು ಪದವಿ ಕೋರ್ಸ್ ಗಳಲ್ಲಿ ವರ್ಷವಾರು ಅಂಕಗಳು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.  

ಏಕ ಭಾರತ್ – ಶ್ರೇಷ್ಠ ಭಾರತ್ ನಿರ್ಮಾಣಕ್ಕೆ ಬಂಗಾಳ ಸ್ಫೂರ್ತಿಯಾಗಿದೆ ಎಂದು ಕರೆ ನೀಡಿದ ಪ್ರಧಾನಮಂತ್ರಿ ಅವರು, 21ನೇ ಶತಮಾನದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಭಾರತೀಯ ಜ್ಞಾನ ಮತ್ತು ಅಸ್ಮಿತೆಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವಲ್ಲಿ ವಿಶ್ವಭಾರತಿ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ಈ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ವಿಶ್ವಭಾರತಿ 2047ರ ವೇಳೆಗೆ ಸಾಧಿಸಬೇಕಾದ 25 ದೊಡ್ಡ ಗುರಿಗಳನ್ನು ಹೊಂದಿರುವ ಮುಂದಿನ 25 ವರ್ಷಗಳ ದೂರದೃಷ್ಟಿಯ ಯೋಜನೆಯನ್ನು ರೂಪಿಸಬೇಕು ಎಂದು ಶ್ರೀ ನರೇಂದ್ರ ಮೋದಿ ಕರೆ ನೀಡಿದರು. ವಿದ್ಯಾರ್ಥಿಗಳು ಭಾರತದ ಬಗ್ಗೆ ಜಾಗೃತಿ ಮೂಡಿಸುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ವಿಶ್ವಭಾರತಿ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಲು ಮತ್ತು ಭಾರತದ ಸಂದೇಶವನ್ನು ತಲುಪಿಸಲು ಎಲ್ಲ ಶಿಕ್ಷಣ ಸಂಸ್ಥೆಗಳ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಆತ್ಮನಿರ್ಭರ ಭಾರತ ಸಾಧನೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕು ಮತ್ತು ಅಲ್ಲಿನ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ಹೇಳಿ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***(Release ID: 1699404) Visitor Counter : 18