ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯ ಸಭೆಯಲ್ಲಿ ನಾಲ್ವರು ಸದಸ್ಯರ ವಿದಾಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 09 FEB 2021 1:09PM by PIB Bengaluru

ನಮ್ಮ ಸಹೋದ್ಯೋಗಿಗಳಲ್ಲಿ ನಾಲ್ಕು ಮಂದಿ, ಸದನಕ್ಕೆ ಖ್ಯಾತಿ ಮತ್ತು ರೋಮಾಂಚಕತೆಯನ್ನು ತಂದವರು ಮತ್ತು ಸದನದ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರು, ಅವರ ಅವಧಿ ಪೂರ್ಣಗೊಂಡುದರಿಂದಾಗಿ ಹೊಸ ಕಾರ್ಯಕ್ಷೇತ್ರಗಳಿಗೆ ಸಾಗುತ್ತಿದ್ದಾರೆ.

ಶ್ರೀ ಗುಲಾಂ ನಬಿ ಆಜಾದ್ ಜೀ, ಶ್ರೀ ಶಾಂಶೀರ್ ಸಿಂಗ್ ಜೀ, ಶ್ರೀ ಮಿರ್ ಮೊಹಮ್ಮದ್ ಫಯಾಜ್ ಜೀ ಮತ್ತು ಶ್ರೀ ನಾದಿರ್ ಅಹ್ಮದ್ ಜೀ: ಎಲ್ಲಕ್ಕಿಂತ ಮೊದಲು ನಾನು ನಿಮಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಮತ್ತು ನೀವು ನಾಲ್ಕು ಮಂದಿಯೂ ನಿಮ್ಮ ಅನುಭವ ಮತ್ತು ಜ್ಞಾನದ ಮೂಲಕ ಸದನವನ್ನು ಹಾಗು ದೇಶವನ್ನು  ಶ್ರೀಮಂತಗೊಳಿಸಿದ್ದೀರಿ ಮತ್ತು ನಿಮ್ಮ ವಲಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮ್ಮ ಕೊಡುಗೆಯನ್ನು ನೀಡಿದ್ದೀರಿ, ಅದಕ್ಕಾಗಿ ನಾನು ಕೃತಜ್ಞತೆಗಳನು ಸಲ್ಲಿಸುತ್ತೇನೆ.

ನನ್ನ ಸಹಚರರಾದ ಮಿರ್ ಮೊಹಮ್ಮದ್ ಜೀ ಮತ್ತು ನಾಜೀರ್ ಅಹ್ಮದ್ ಜೀ ಅವರು ಸದನದಲ್ಲಿ ಮಾತನಾಡಿದ್ದರ ಬಗ್ಗೆ ಕೆಲವೇ ಮಂದಿ ಗಮನಿಸಿರಬಹುದು, ಆದರೆ ಅವರು ಅಧಿವೇಶನ ಅವಧಿಯಲ್ಲಿ ವಿವಿಧ ವಿಷಯಗಳ ಬಗ್ಗೆ ನನ್ನ ಕೊಠಡಿಯಲ್ಲಿ ಹಂಚಿಕೊಂಡ ಮಾಹಿತಿಯನ್ನು ಕೇಳಿಸಿಕೊಳ್ಳದ ಮತ್ತು ತಿಳುವಳಿಕೆಯನ್ನು  ಮೂಡಿಸಿಕೊಳ್ಳದ ಒಂದೇ ಒಂದು ಅಧಿವೇಶನವೂ ಇಲ್ಲ. ಅವರು ಕಾಶ್ಮೀರಕ್ಕೆ ಸಂಬಂಧಿಸಿದ ಸೂಕ್ಷ್ಮ ಅಂಶಗಳನ್ನು ಹಂಚಿಕೊಳ್ಳುತ್ತಿದ್ದರು. ನಾವು ಕುಳಿತುಕೊಂಡು ಮಾತನಾಡುತ್ತಿದ್ದಾಗೆಲ್ಲಾ, ಅವರು ಭಿನ್ನವಾದ ಆಯಾಮಗಳನ್ನು ಮತ್ತು ವಿಷಯಗಳನ್ನು ನನ್ನೆದುರು ಮಂಡಿಸುತ್ತಿದ್ದರು. ಅದು ನನಗೆ ಬಹಳ ಚೈತನ್ಯವನ್ನು ನೀಡುತ್ತಿತ್ತು. ಅದುದರಿಂದ ಈ ಇಬ್ಬರು ಸಹಚರರ ಬಗ್ಗೆ ನನ್ನೊಂದಿಗೆ ವೈಯಕ್ತಿಕವಾಗಿ ತೊಡಗಿಕೊಂಡುದಕ್ಕಾಗಿ ಮತ್ತು ನನಗೆ ಲಭಿಸಿದ ಮಾಹಿತಿಗಾಗಿ ನಾನು ಹೃದಯಸ್ಪರ್ಶೀ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ದೇಶಕ್ಕಾಗಿ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಕೆಲಸ ಮಾಡಲು ಅವರು ಬದ್ಧತೆ ಹೊಂದಿದ್ದಾರೆ  ಮತ್ತು ಸಾಮರ್ಥ್ಯವೂ ಅವರಿಗೆ ಇದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇದೆ. ಇದರಿಂದ ದೇಶದ ಏಕತೆಗೆ, ಸಂತೋಷಕ್ಕೆ, ಶಾಂತಿಗೆ ಮತ್ತು  ಸಮೃದ್ಧಿಗೆ ಪ್ರಯೋಜನವಾಗುತ್ತದೆ ಎಂಬ ಬಗ್ಗೆಯೂ ನನಗೆ ಖಾತ್ರಿ ಇದೆ.

ನಮ್ಮ ಸಹಚರರಾದ ಶಾಂಶೀರ್ ಸಿಂಗ್ ಜೀ ಅವರ ವಿಷಯಕ್ಕೆ ಬಂದರೆ, ನಾನು ಅವರೊಂದಿಗೆ ಯಾವಾಗಿನಿಂದ ಕೆಲಸ ಮಾಡಲು ಆರಂಭಿಸಿದೆ ಮತ್ತು ಎಷ್ಟು ವರ್ಷ ಅವರೊಂದಿಗಿದ್ದೇನೆ ಎಂಬುದನ್ನು ಲೆಕ್ಕ ಮಾಡಲು ವಿಫಲನಾಗುತ್ತೇನೆ, ಯಾಕೆಂದರೆ ನಾನು ನನ್ನ ಸಂಘಟನೆಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ವರ್ಷ ಕಾಲ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಕೆಲವೊಮ್ಮೆ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದೆ. ಶಾಂಶೀರ್ ಸಿಂಗ್ ಜೀ ಅವರು ತುರ್ತುಪರಿಸ್ಥಿತಿಯಲ್ಲಿ ಬಹಳ ಸಣ್ಣ ವಯಸ್ಸಿನಲ್ಲಿ ಜೈಲಿಗೆ ಹೋದವರಲ್ಲಿ ಸೇರಿದ್ದಾರೆ. ಮತ್ತು ಶಾಂಶೀರ್ ಜೀ ಅವರ ಈ ಸದನದ ಹಾಜರಾತಿ 96% ಇದೆ. ಜನರು ತಮಗೆ ನೀಡಿರುವ ಜವಾಬ್ದಾರಿಯನ್ನು ಈಡೇರಿಸಲು ಅವರು ಎಷ್ಟೊಂದು ಗಂಭೀರ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅವರು ತಮ್ಮ ನೂರು ಶೇಖಡಾವನ್ನು ಕೊಟ್ಟಿದ್ದಾರೆ. ಅವರು ಮೃದು ಭಾಷಿ ಮತ್ತು ಸರಳರು. ಚರಿತ್ರೆ ಹೊಸ ತಿರುವು ಪಡೆದುಕೊಂಡಿರುವುದರಿಂದ ಮತ್ತು ಅದಕ್ಕೆ ಇವರು ಸಾಕ್ಷಿಗಳೂ ಆಗಿರುವುದರಿಂದ ಜಮ್ಮು ಮತ್ತು ಕಾಶ್ಮೀರದ,  ನಿವೃತ್ತರಾಗುತ್ತಿರುವ ಈ ನಾಲ್ಕು ಮಂದಿ ಗೌರವಾನ್ವಿತ ಸದಸ್ಯರ  ಈ ಅಧಿಕಾರಾವಧಿ ಬಹಳ ಉತ್ತಮ ಹಂತದ್ದಾಗಿದೆ ಎಂದು ನಾನು ಭಾವಿಸುತ್ತೇನೆ. ಅವರ ಬದುಕಿನಲ್ಲಿ ಇದು ಪ್ರಮುಖ ಘಟನೆ.

ಗುಲಾಂ ನಬೀ ಜೀ...ಈ ಹುದ್ದೆಯನ್ನು ಗುಲಾಂ ನಬೀ ಜೀ ಅವರ ಬಳಿಕ ಯಾರೇ ವಹಿಸಿಕೊಂಡರೂ ನಬೀ ಜೀ ಅವರನ್ನು  ಸರಿಗಟ್ಟಲು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ನನಗೆ ಕಳವಳ ಇದೆ, ಯಾಕೆಂದರೆ, ಗುಲಾಂ ನಬೀ ಜೀ ಅವರು ತಮ್ಮ ಪಕ್ಷದ ಬಗ್ಗೆ ಕಾಳಜಿ ವಹಿಸುತ್ತಿದ್ದುದು ಮಾತ್ರವಲ್ಲ ಅವರು ದೇಶ ಮತ್ತು ಸದನದ ಬಗ್ಗೆಯೂ  ಅಷ್ಟೇ ಕಾಳಜಿಯನ್ನು ಹೊಂದಿದ್ದರು. ಇದು ಸಣ್ಣ ಸಂಗತಿಯಲ್ಲ. ಇದು ಬಹಳ ಮುಖ್ಯವಾದ ವಿಷಯ. ಸಾಮಾನ್ಯವಾಗಿ  ಜನರು ವಿಪಕ್ಷ ನಾಯಕರಂತೆ ವರ್ತಿಸಲು ಆರಂಭಿಸುತ್ತಾರೆ. ಶರದ್ ಪವಾರ್ ಜೀ ಮತ್ತು ಅವರಂತಹ ನಾಯಕರು ಸದನಕ್ಕೆ ಮತ್ತು ದೇಶಕ್ಕೆ ಸದಾ ಆದ್ಯತೆಯನ್ನು ಕೊಟ್ಟವರು. ಗುಲಾಂ ನಬೀ ಜೀ ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ!.

ನನಗೆ ನೆನಪಿದೆ, ಕೊರೊನಾ ಅವಧಿಯಲ್ಲಿ ನಾನು ಸದನ ನಾಯಕರ ಸಭೆ ಕರೆದಿದ್ದಾಗ, ಅದೇ ದಿನ ನನಗೆ ಗುಲಾಂ ನಬಿ ಜೀ ಅವರಿಂದ ಕರೆ ಬಂದಿತ್ತು. “ಮೋದೀಜಿ ಇದೆಲ್ಲ ಒಳ್ಳೆಯದು, ಆದರೆ ದಯವಿಟ್ಟು ಒಂದು ಕೆಲಸ ಮಾಡಿ, ಸರ್ವ ಪಕ್ಷ ನಾಯಕರ ಸಭೆ ಕರೆಯಿರಿ” ಎಂದವರು ಹೇಳಿದ್ದರು. ಪಕ್ಷದ ನಾಯಕರು, ಸರ್ವ ಪಕ್ಷಗಳ ಅಧ್ಯಕ್ಷರುಗಳ ಜೊತೆ ಕುಳಿತು ಮಾತನಾಡಬೇಕು ಎಂದು ಅವರು ನನಗೆ ನೀಡಿದ  ಸಲಹೆಯನ್ನು ನಾನು ನಿಜವಾಗಿಯೂ ಮೆಚ್ಚಿಕೊಂಡೆ ಹಾಗು ನಾನು ಆ ಸಭೆಯನ್ನು ನಡೆಸಿದೆ. ನಾನದನ್ನು ಗುಲಾಂ ನಬೀ ಜೀ ಅವರ ಸಲಹೆಯ ಮೇರೆಗೆ ಮಾಡಿದೆ .. ಮತ್ತು ನಾನು ಹೇಳುತ್ತೇನೆ..ಇಂತಹ ಮಾಹಿತಿಗೆ, ಸಂಪರ್ಕಕ್ಕೆ  ಮೂಲ ಕಾರಣ ಅವರು ಆಡಳಿತ ಪಕ್ಷ ಮತ್ತು ವಿಪಕ್ಷಗಳಲ್ಲಿ ಕುಳಿತು ಉಭಯ ರೀತಿಯಲ್ಲಿ ಅವರು ಹೊಂದಿದ್ದ ಅನುಭವ. 28 ವರ್ಷದ ಅಧಿಕಾರಾವಧಿ ಎಂದರೆ ಅದರೊಳಗೇ ಬಹಳ ದೊಡ್ಡ ಸಂಗತಿಗಳಿವೆ.

ಬಹಳ ಸಮಯದ ಹಿಂದೆ, ಬಹುಷಃ ಅಟಲ್ ಜೀ ಅವರ ಆಳ್ವಿಕೆಯಲ್ಲಿರಬೇಕು, ನನಗೆ ಖಚಿತವಾಗಿ ನೆನಪಿಲ್ಲ. ನಾನು ಈ ಸದನಕ್ಕೆ ಕೆಲವು ಕೆಲಸಗಳಿಗಾಗಿ ಬಂದಿದ್ದೆ. ಆಗ ನಾನು ರಾಜಕೀಯದಲ್ಲಿರಲಿಲ್ಲ. ಅಂದರೆ ಚುನಾವಣಾ ರಾಜಕೀಯದಲ್ಲಿ ಇರಲಿಲ್ಲ. ನಾನು ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ನಾನು ಮತ್ತು ಗುಲಾಂ ನಬೀ ಜೀ ಅವರು ಒಂದೇ ಲಾಬಿಯಲ್ಲಿ ಗಾಸಿಪ್ ನಡೆಸುತ್ತಿದ್ದೆವು. ಪತ್ರಕರ್ತರಿಗೆ ಪ್ರತಿಯೊಬ್ಬರ ಮೇಲೂ ಕಣ್ಣಿಡುವ ಅಭ್ಯಾಸ ಇತ್ತು. ಇವರಿಬ್ಬರು ಹೇಗೆ ಸ್ನೇಹಿತರಂತೆ ಮಾತನಾಡಲು  ಸಾಧ್ಯ? ಎಂಬುದು ಅವರ ಯೋಚನೆಯಾಗಿತ್ತು. ನಾವು ಮಾತನಾಡುತ್ತಿರುವಾಗ ಮತ್ತು ನಗುವಾಗ ನಮ್ಮನ್ನು ವರದಿಗಾರರು ಸುತ್ತುವರಿಯುತ್ತಿದ್ದಂತೆ ನಾವು ಅದರಿಂದ ಹೊರಬರುತ್ತಿದ್ದೆವು. ಒಮ್ಮೆ ಗುಲಾಂ ನಬೀ ಜೀ ಅವರು ಬಹಳ ಅತ್ಯುತ್ತಮವಾದ ಉತ್ತರ ಕೊಟ್ಟಿದ್ದರು. ಈ ಉತ್ತರ ನಮಗೆ ಬಹಳ ಉಪಯುಕ್ತವಾಗಬಲ್ಲದು. ಅವರು ಹೇಳಿದ್ದರು, ಸಹೋದರ, ನೀವು ನಮ್ಮ ಜಗಳಗಳ ಬಗ್ಗೆ ವಾರ್ತಾ ಪತ್ರಿಕೆಗಳಲ್ಲಿ ಓದುತ್ತೀರಿ, ನೀವು ನಾವು ಜಗಳ ಮಾಡುವುದನ್ನು ಟಿ.ವಿ. ಗಳಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ನೋಡಿರುತ್ತೀರಿ, ಆದರೆ ವಾಸ್ತವವಾಗಿ ಈ ಮಾಡಿನಡಿಯಲ್ಲಿ ನಾವು ಕುಟುಂಬದವರಂತೆ ಸಂಬಂಧವನ್ನು ಹೊಂದಿದ್ದೇವೆ. ನಾವು ಬಹಳ ಬಲಿಷ್ಟ ಬಾಂದವ್ಯವನ್ನು ಹೊಂದಿದ್ದೇವೆ. ಸಂತೋಷವನ್ನು, ದುಃಖವನ್ನು ಹಂಚಿಕೊಳ್ಳುತ್ತೇವೆ. ಈ ಸ್ಪೂರ್ತಿ ಅದರೊಳಗೇ ಬಹಳ ನಿರ್ಣಾಯಕವಾದುದು.

ಗುಲಾಂ ನಬಿ ಜೀ ಅವರ ಈ ಹವ್ಯಾಸದ ಬಗ್ಗೆ ಬಹಳ ಕಡಿಮೆ ಮಂದಿಗೆ ಮಾತ್ರವೇ ಗೊತ್ತಿದ್ದೀತು. ಮತ್ತು ನೀವು ಯಾವತ್ತಾದರೂ ಅವರ ಜೊತೆ ಕುಳಿತಿದ್ದರೆ, ಅವರದನ್ನು ನಿಮಗೆ ಹೇಳುತ್ತಾರೆ. ನಾವು ಸರಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದರೆ, ನಮ್ಮ ಆದ್ಯತೆ, ಗಮನ  ಬಂಗಲೆಯ ಗೋಡೆಗಳ ಮೇಲೆ ಅಥವಾ ಸೋಫಾ ಸೆಟ್ ಗಳ ಮೇಲೆ ಇರುತ್ತದೆ. ಆದರೆ ಗುಲಾಂ ನಬೀ ಜೀ ಅವರು ಆ ಬಂಗಲೆಯಲ್ಲಿ ತೋಟವನ್ನು ಬೆಳೆಸಿದ್ದರು, ಅದು ನಮಗೆ ಕಾಶ್ಮೀರ ಕಣಿವೆಯನ್ನು ನೆನಪಿಸುತ್ತದೆ. ಮತ್ತು ಅವರು ಅದರ ಬಗ್ಗೆ ಬಹಳ ಹೆಮ್ಮೆಯನ್ನು ಹೊಂದಿದ್ದರು. ಅವರದಕ್ಕೆ ಸಮಯ ನೀಡುತ್ತಿದ್ದರು.ಹೊಸ ಸಂಗತಿಗಳನ್ನು ಸೇರಿಸುತ್ತಿದ್ದರು ಮತ್ತು ಸ್ಪರ್ಧೆಗಳು ನಡೆದಾಗ ಪ್ರತೀ ಬಾರಿಯೂ ಅವರ ಬಂಗಲೆ ನಂಬರ್ ವನ್ ಸ್ಥಾನ ಪಡೆಯುತ್ತಿತ್ತು. ಅಂದರೆ ಅವರು ತಮ್ಮ ಅಧಿಕೃತ ಸ್ಥಳವನ್ನು ಅಷ್ಟೊಂದು ಪ್ರೀತಿಯಿಂದ ನಿರ್ವಹಿಸಿಕೊಂಡು ಬಂದಿದ್ದರು. ಅವರದನ್ನು ತಮ್ಮ ಹೃದಯದಿಂದ ನೋಡಿಕೊಳ್ಳುತ್ತಿದ್ದರು.

ನೀವು ಮುಖ್ಯಮಂತ್ರಿಯಾಗಿದ್ದಾಗ, ನಾನು ಕೂಡಾ ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದೆ. ಆ ಅವಧಿಯಲ್ಲಿ ನಾವು ಬಹಳ ನಿಕಟವರ್ತಿಯಾಗಿದ್ದೆವು. ನಮ್ಮ ನಡುವೆ ಸಂಪರ್ಕದ ಸೇತುವೆ ಕಡಿದು ಹೋದಂತಹ ಯಾವುದೇ ಸಂದರ್ಭ ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತಿರುವ ಒಟ್ಟು ಪ್ರವಾಸಿಗರಲ್ಲಿ ಗುಜರಾತಿನ ಪ್ರವಾಸಿಗರ ಪಾಲು ದೊಡ್ಡದು. ಒಮ್ಮೆ, ಅಂತಹ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು. ಬಹುಷಃ ಎಂಟು ಮಂದಿ ಹತ್ಯೆಯಾಗಿದ್ದರು. ತಕ್ಷಣವೇ ಗುಲಾಂ ನಬೀ ಜೀ ಅವರಿಂದ ನನಗೆ ಕರೆ ಬಂದಿತು. ಮತ್ತು ಆ ದೂರವಾಣಿ ಕರೆ ಬರೇ ಮಾಹಿತಿ ನೀಡುವುದಕ್ಕಾಗಿ ಮಾಡಿದುದಾಗಿರಲಿಲ್ಲ. ದೂರವಾಣಿಯಲ್ಲಿ ಅವರ ಕಣ್ಣೀರು ತಡೆಯಲಾರದಷ್ಟಿತ್ತು. ಪ್ರಣವ್ ಮುಖರ್ಜಿ  ಅವರು ಆ ಕಾಲದಲ್ಲಿ ರಕ್ಷಣಾ ಸಚಿವರಾಗಿದ್ದರು. ನಾನು ಅವರಿಗೆ ಕರೆ ಮಾಡಿದೆ. “ ಸರ್, ಮೃತ ದೇಹಗಳನ್ನು ತರಲು ಪಡೆಯ ವಿಮಾನ ಸಿಗಬಹುದೇ “ ಎಂದು ಕೇಳಿದೆ. ಆಗ ತಡರಾತ್ರಿಯಾಗಿತ್ತು. ಮುಖರ್ಜಿ ಹೇಳಿದರು “ಚಿಂತಿಸಬೇಡಿ, ನಾನು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇನೆ”. ಆದರೆ ರಾತ್ರಿ ಮತ್ತೆ ಗುಲಾಂ ನಬೀ ಜೀ ನನಗೆ ಕರೆ ಮಾಡಿದರು. ಅವರು ವಿಮಾನ ನಿಲ್ದಾಣದಲ್ಲಿದ್ದರು. ಆ ರಾತ್ರಿ ಅವರು ವಿಮಾನ ನಿಲ್ದಾಣದಿಂದ ಕರೆ ಮಾಡಿದರು ಮತ್ತು ಅವರೂ ಕುಟುಂಬದ ಸದಸ್ಯರಂತೆ ದುಃಖ ತಪ್ತರಾಗಿದ್ದರು.

ಜೀವನದಲ್ಲಿ ಸ್ಥಾನ ಮಾನ ಅಥವಾ ಅಧಿಕಾರ ಬರುತ್ತದೆ, ಆದರೆ ಅದನ್ನು ನಿಭಾಯಿಸುವುದು ಹೇಗೆ..ಇದು ನನಗೆ ಬಹಳ ಭಾವನಾತ್ಮಕ ಕ್ಷಣ. ಮರು ದಿನ ನನಗೆ ಮತ್ತೆ ಕರೆ ಬಂತು, ಪ್ರತಿಯೊಬ್ಬರೂ ತಲುಪಿದ್ದಾರಾ ಎಂದು ಕೇಳಿದರು. ಆದುದರಿಂದ, ನಾನು ಗೆಳೆಯನಾಗಿ, ಗುಲಾಂ ನಬಿ ಆಜಾದ್ ಜೀ ಅವರನ್ನು ಗೌರವಿಸುತ್ತೇನೆ. ಅವರ ಎಲ್ಲಾ ಅನುಭವಗಳನ್ನು ಮತ್ತು ಕಾರ್ಯಕ್ರಮಗಳನ್ನು ಗೌರವಿಸುತ್ತೇನೆ. ಅವರ ಪ್ರೀತಿ, ನಮ್ಯತೆ, ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಆಶಯ ಅವರನ್ನು  ಎಂದೂ ಶಾಂತಿಯಿಂದ ಒಂದೇ ಕಡೆ ಕುಳಿತುಕೊಳ್ಳಲು ಬಿಡಲಿಲ್ಲ. ಅವರು ಯಾವುದೇ ಜವಾಬ್ದಾರಿ ನಿಭಾಯಿಸಲಿ, ನನಗೆ ಖಚಿತವಿದೆ -ಅವರು ಅದಕ್ಕೆ ಮೌಲ್ಯವನ್ನು ಸೇರಿಸುತ್ತಾರೆ ಮತ್ತು ತಮ್ಮ ಕೊಡುಗೆಯನ್ನು ನೀಡುತ್ತಾರೆ. ಮತ್ತು ದೇಶಕ್ಕೂ ಅವರಿಂದ ಲಾಭವಾಗುತ್ತದೆ. ನಾನಿದರಲ್ಲಿ ದೃಢವಾದ ನಂಬಿಕೆಯನ್ನು ಇಟ್ಟವನಾಗಿದ್ದೇನೆ. ನಾನು ಅವರ ಸೇವೆಗಳಿಗಾಗಿ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮತ್ತು ನಾನು ಅವರಲ್ಲಿ ವೈಯಕ್ತಿಕವಾಗಿ ಕೋರುವುದೇನೆಂದರೆ, ಈ ಸದನದಲ್ಲಿ ಇನ್ನು ಸದಸ್ಯನಾಗಿಲ್ಲ ಎಂಬ ಭಾವನೆಯನ್ನು ತಾಳಬೇಡಿ. ನನ್ನ ಬಾಗಿಲುಗಳು ತಮಗಾಗಿ,  ಸದನದ ನಾಲ್ಕು ಮಂದಿ ಗೌರವಾನ್ವಿತ ಸದಸ್ಯರಿಗೂ ಸದಾ ತೆರೆದಿರುತ್ತವೆ. ನಿಮ್ಮ ಚಿಂತನೆಗಳು, ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ, ಯಾಕೆಂದರೆ ನಿಮ್ಮ ಅನುಭವ  ಬಹಳ ಮುಖ್ಯ ಮತ್ತು ಅದು ದೇಶಕ್ಕೆ ಬಹಳ ಉಪಕಾರಿ. ಹಾಗಾಗಿ ನಾನದರ ನಿರೀಕ್ಷೆಯನ್ನು ಇಟ್ಟಿದ್ದೇನೆ. ಮತ್ತು ನಾನು ನೀವು ನಿವೃತ್ತರಾಗಲು ಬಿಡುವುದಿಲ್ಲ. ಮತ್ತೊಮ್ಮೆ ಶುಭಾಶಯಗಳು.

ನಿಮಗೆ ಧನ್ಯವಾದಗಳು

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ, ಮೂಲ ಭಾಷಣ ಹಿಂದಿಯಲ್ಲಿದೆ.

***



(Release ID: 1697271) Visitor Counter : 178