ಪ್ರಧಾನ ಮಂತ್ರಿಯವರ ಕಛೇರಿ
“ಪ್ರಬುದ್ಧ ಭಾರತ”ದ 125 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಷಣ
Posted On:
31 JAN 2021 3:39PM by PIB Bengaluru
ನಮಸ್ತೇ!
ಪ್ರಬುದ್ಧ ಭಾರತದ 125 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದು ಬಹಳ ಸಂತೋಷದ ಸಂಗತಿ. ಇದು ಸಾಮಾನ್ಯ ಪತ್ರಿಕೆ ಅಲ್ಲ. ಇದನ್ನು ಆರಂಭ ಮಾಡಿದ್ದು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರು. ಅವರು 1896ರಲ್ಲಿ ಆರಂಭಿಸಿದರು, ಅದೂ ಬಹಳ ಕಿರಿಯ ವಯಸ್ಸಿನಲ್ಲಿ, ಮೂವತ್ತಮೂರರ ಹರೆಯದಲ್ಲಿ. ಇದು ದೇಶದಲ್ಲಿ ಅತ್ಯಂತ ಧೀರ್ಘ ಕಾಲದಿಂದ ನಡೆದುಕೊಂಡು ಬಂದಿರುವ ಇಂಗ್ಲೀಷ್ ದೈನಿಕ.
ಪ್ರಬುದ್ಧ ಭಾರತ, ಈ ಹೆಸರಿನ ಹಿಂದೆ ಬಹಳ ಶಕ್ತಿಶಾಲೀ ಚಿಂತನೆಗಳಿವೆ. ನಮ್ಮ ದೇಶದ ಚೇತನವನ್ನು ಉದ್ದೀಪಿಸಲು ಸ್ವಾಮಿ ವಿವೇಕಾನಂದರು ಈ ಪತ್ರಿಕೆಗೆ “ಪ್ರಬುದ್ಧ ಭಾರತ” ಎಂದು ನಾಮಕರಣ ಮಾಡಿದರು. ಅವರು “ಜಾಗೃತ ಭಾರತ” ನಿರ್ಮಾಣದ ಆಶಯವನ್ನು ಹೊಂದಿದ್ದರು. ಭಾರತವನ್ನು ಅರಿತುಕೊಂಡವರು. ಭಾರತವೆಂದರೆ ಅದು ರಾಜಕೀಯ ಮತ್ತು ಭೌತಿಕ ವ್ಯಾಪ್ತಿಯನ್ನು ದಾಟಿ ಪಸರಿಸಿದೆ ಎಂಬುದನ್ನು ತಿಳಿದುಕೊಂಡವರು. ಸ್ವಾಮಿ ವಿವೇಕಾನಂದರು ಇದನ್ನು ಬಹಳ ಹೆಮ್ಮೆಯಿಂದ ಮತ್ತು ಧೈರ್ಯದಿಂದ ಅಭಿವ್ಯಕ್ತಿಸಿದ್ದಾರೆ. ಅವರು ಭಾರತವನ್ನು ಶತಮಾನಗಳಿಂದ ಜೀವಿಸುತ್ತಿರುವ ಮತ್ತು ಉಸಿರಾಡುತ್ತಿರುವ ಸಾಂಸ್ಕೃತಿಕ ಜಾಗೃತ ಪ್ರಜ್ಞೆ ಎಂದು ಭಾವಿಸಿದ್ದಾರೆ. ಪ್ರತೀ ಸವಾಲುಗಳ ಬಳಿಕ, ಊಹನೆಗಳನ್ನು ಮೀರಿ ಭಾರತವು ಬಲಿಷ್ಟವಾಗಿ ಹೊರಹೊಮ್ಮುತ್ತದೆ ಎಂಬುದವರ ನಿಲುವಾಗಿತ್ತು. ಸ್ವಾಮಿ ವಿವೇಕಾನಂದರು ಭಾರತವನ್ನು ಪ್ರಬುದ್ಧವಾಗಿ ಕಟ್ಟುವ ಜಾಗೃತ ರಾಷ್ಟ್ರವನ್ನಾಗಿ ರೂಪಿಸುವ ಇರಾದೆ ಹೊಂದಿದ್ದರು.ರಾಷ್ಟ್ರವಾಗಿ ಸ್ವ-ನಂಬಿಕೆಯನ್ನು ಉದ್ದೀಪಿಸುವ, ಬೃಹತ್ತಾದುದರತ್ತ ಮುನ್ನಡೆಯುವ ಆಶಯ ಅವರದಾಗಿತ್ತು.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ಬಡವರಲ್ಲಿ ಬಹಳ ಅನುಭೂತಿಯನ್ನು ಹೊಂದಿದವರಾಗಿದ್ದರು. ಅವರು ಪ್ರತೀ ಸಮಸ್ಯೆಗೂ ಬಡತನವೇ ಮೂಲ ಕಾರಣ ಎಂದು ನಂಬಿದ್ದರು. ಆದುದರಿಂದ, ಬಡತನವನ್ನು ದೇಶದಿಂದ ನಿರ್ಮೂಲನ ಮಾಡಬೇಕು ಎಂಬುದವರ ಆಶಯವಾಗಿತ್ತು. ಅವರು “ದರಿದ್ರ ನಾರಾಯಣ” ರಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದರು.
ಅಮೇರಿಕಾದಿಂದ ಸ್ವಾಮಿ ವಿವೇಕಾನಂದರು ಹಲವಾರು ಪತ್ರಗಳನ್ನು ಬರೆದಿದ್ದಾರೆ. ನಾನು ಮೈಸೂರು ಮಹಾರಾಜ ಮತ್ತು ಸ್ವಾಮಿ ರಾಮಕೃಷ್ಣಾನಂದ ಜೀ ಅವರಿಗೆ ಬರೆದ ಪತ್ರಗಳನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಈ ಪತ್ರಗಳಲ್ಲಿ ಸ್ವಾಮೀಜಿ ಅವರ ಎರಡು ಸ್ಪಷ್ಟವಾದ ಚಿಂತನೆಗಳನ್ನು ಕಾಣಬಹುದು, ಅವುಗಳಲ್ಲಿ ಬಡವರ ಬಗೆಗಿನ ಅವರ ಧೋರಣೆ, ಅವರನ್ನು ಸಶಕ್ತೀಕರಣ ಮಾಡಬೇಕಾದ ಕುರಿತ ಚಿಂತನೆ ಇದೆ. ಮೊದಲನೆಯದಾಗಿ ಅವರು ಬಡವರಿಗೆ ಸುಲಭದಲ್ಲಿ ಸಶಕ್ತೀಕರಣದತ್ತ ಹೋಗಲು ಸಾಧ್ಯವಾಗದಿದ್ದರೆ ಸಶಕ್ತೀಕರಣವನ್ನು ಬಡವರವರೆಗೆ ಕೊಂಡೊಯ್ಯಬೇಕು ಎಂದರು. ಎರಡನೆಯದಾಗಿ ಅವರು ಭಾರತದ ಬಡವರ ಬಗ್ಗೆ ಹೇಳಿದರು- ಅವರಿಗೆ ಚಿಂತನೆಗಳನ್ನು ಕೊಡಬೇಕು, ಅವರ ಸುತ್ತಮುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಅವರ ಕಣ್ಣುಗಳನ್ನು ತೆರೆಸಬೇಕು ಮತ್ತು ಆ ಬಳಿಕ ಅವರು ತಮ್ಮ ಒಳಿತಿಗಾಗಿ, ಮುಕ್ತಿಗಾಗಿ ಕೆಲಸ ಮಾಡಲಾರಂಭಿಸುತ್ತಾರೆ” ಎಂದರು.
ಭಾರತವು ಇಂದು ಇಂತಹ ಧೋರಣೆಯ ಮೂಲಕ ಮುನ್ನಡೆಯುತ್ತಿದೆ. “ಬಡವರಿಗೆ ಬ್ಯಾಂಕುಗಳನ್ನು ಸಂಧಿಸಲು ಸಾಧ್ಯವಾಗದಿದ್ದರೆ, ಆಗ ಬ್ಯಾಂಕುಗಳು ಬಡವರನ್ನು ತಲುಪಬೇಕು. ಜನ ಧನ್ ಯೋಜನಾ ಮಾಡಿದ್ದು ಇದನ್ನೇ. ಬಡವರು ವಿಮಾ ಸೌಲಭ್ಯವನ್ನು ಪಡೆಯಲಾರರು ಎಂದಾದರೆ, ಆಗ ವಿಮಾ ಸವಲತ್ತು ಅವರನ್ನು ತಲುಪಬೇಕು. ಜನ ಸುರಕ್ಷಾ ಯೋಜನೆ ಮಾಡಿದ್ದು ಇದನ್ನು. ಬಡವರು ಆರೋಗ್ಯ ರಕ್ಷಣೆ, ಶುಶ್ರೂಷಾ ಸೌಲಭ್ಯವನ್ನು ಪಡೆಯಲು ಅಸಮರ್ಥರಾದರೆ ಆಗ ಆರೋಗ್ಯ ಸೇವೆಯನ್ನು ನಾವೇ ಅವರಲ್ಲಿಗೆ ಕೊಂಡೊಯ್ಯಬೇಕು. ಇದನ್ನು ಆಯುಷ್ಮಾನ ಭಾರತ್ ಯೋಜನೆ ಮಾಡಿತು. ರಸ್ತೆಗಳು, ಶಿಕ್ಷಣ, ವಿದ್ಯುತ್, ಮತ್ತು ಅಂತರ್ಜಾಲ ಸಂಪರ್ಕಗಳನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಾಗುತ್ತಿದೆ. ಇದು ಬಡವರಲ್ಲಿ ಆಶೋತ್ತರಗಳನ್ನು ಉದ್ದೀಪಿಸುತ್ತಿದೆ. ಮತ್ತು ಈ ಆಶೋತ್ತರಗಳೇ ದೇಶದ ಬೆಳವಣಿಗೆಯ ಚಾಲಕ ಶಕ್ತಿಯಾಗಿವೆ.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ಹೇಳಿದ್ದರು “ ದೌರ್ಬಲ್ಯಕ್ಕೆ ಪರಿಹಾರ ಅದರ ಬಗ್ಗೆಯೇ ಚಿಂತಾಮಗ್ನರಾಗಿರುವುದರಿಂದ ಸಾಧ್ಯವಿಲ್ಲ. ಬದಲು ಶಕ್ತಿಯ ಬಗ್ಗೆ ಯೋಚಿಸುವುದು” ಎಂಬುದಾಗಿ. ನಾವು ಅಡ್ಡಿ ಆತಂಕಗಳ ವಿಷಯದಲ್ಲಿಯೇ ಚಿಂತಾಮಗ್ನರಾದರೆ, ನಾವು ಅದರಲ್ಲಿಯೇ ಮುಳುಗಿ ಹೋಗುತ್ತೇವೆ. ಆದರೆ ನಾವು ಅವಕಾಶಗಳ ಬಗ್ಗೆ ಚಿಂತಿಸಿದಾಗ, ನಮಗೆ ಮುಂದೆ ಸಾಗಲು ದಾರಿಗಳು ಲಭ್ಯವಾಗುತ್ತವೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಭಾರತ ಏನು ಮಾಡಿತು?.ಅದು ಸಮಸ್ಯೆಗಳನ್ನು ಮಾತ್ರ ನೋಡಿದ್ದಲ್ಲ ಮತ್ತು ಅಸಹಾಯಕರಂತೆ ಕುಳಿತುಕೊಳ್ಳಲೂ ಇಲ್ಲ. ಭಾರತವು ಪರಿಹಾರಗಳತ್ತ ಗಮನ ಹರಿಸಿತು.ಪಿ.ಪಿ.ಇ. ಕಿಟ್ ಗಳನ್ನು ಉತ್ಪಾದಿಸುವುದರಿಂದ ಹಿಡಿದು ವಿಶ್ವಕ್ಕೇ ಔಷಧಾಲಯ ಆಗುವವರೆಗೆ , ನಮ್ಮ ದೇಶ ಬಲಶಾಲಿಯಾಗುತ್ತಾ ಸಾಗಿತು. ಬಿಕ್ಕಟ್ಟಿನಲ್ಲಿ ಅದು ಜಗತ್ತಿಗೆ ಬೆಂಬಲದ ಮೂಲವಾಯಿತು. ಕೋವಿಡ್ -19 ಲಸಿಕೆ ಅಭಿವೃದ್ಧಿಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕೆಲವು ದಿನಗಳ ಹಿಂದೆ ಭಾರತವು ವಿಶ್ವದ ಅತಿ ದೊಡ್ಡ ಲಸಿಕಾ ಆಂದೋಲನ ಆರಂಭಿಸಿತು. ನಾವು ಈ ಸಾಮರ್ಥ್ಯವನ್ನು ಇತರ ರಾಷ್ಟ್ರಗಳಿಗೆ ನೆರವಾಗಲು ಬಳಸುತ್ತಿದ್ದೇವೆ.
ಸ್ನೇಹಿತರೇ, ಹವಾಮಾನ ಬದಲಾವಣೆ ಇನ್ನೊಂದು ಅಡ್ಡಿ. ಇಡೀ ವಿಶ್ವ ಇದರಿಂದ ಬಾಧಿತವಾಗಿದೆ. ಆದರೆ,ನಾವು ಬರೇ ಸಮಸ್ಯೆಯ ಬಗ್ಗೆ ದೂರುತ್ತಾ ಕುಳಿತುಕೊಳ್ಳಲಿಲ್ಲ. ನಾವು ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ರಚಿಸುವ ಮೂಲಕ ಪರಿಹಾರ ಕಂಡುಕೊಂಡೆವು. ನಾವು ಮರುನವೀಕೃತ ಇಂಧನ ಮೂಲಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಪ್ರತಿಪಾದಿಸುತ್ತಿದ್ದೇವೆ. ಇದು ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಕಟ್ಟಲಾಗುತ್ತಿರುವ ಪ್ರಬುದ್ಧ ಭಾರತ. ವಿಶ್ವದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿರುವ ಭಾರತ ಇದು.
ಸ್ನೇಹಿತರೇ, ಸ್ವಾಮಿ ವಿವೇಕಾನಂದರಿಗೆ ಭಾರತೀಯ ಯುವಶಕ್ತಿಯ ಮೇಲೆ ಭಾರೀ ನಂಬಿಕೆ ಇತ್ತು. ಇದರಿಂದಾಗಿ ಅವರು ಭವ್ಯ ಭಾರತದ ಕನಸು ಕಂಡಿದ್ದರು. ಭಾರತದ ಯುವಜನತೆಯನ್ನು ಅವರು ಕೌಶಲ್ಯಗಳ ಮತ್ತು ಸ್ವಾಭಿಮಾನದ, ಆತ್ಮವಿಶ್ವಾಸದ ಶಕ್ತಿಕೇಂದ್ರಗಳು ಎಂದು ಭಾವಿಸಿದ್ದರು. “ನನಗೆ ನೂರು ಶಕ್ತಿಶಾಲೀ ಯುವಕರನ್ನು ಕೊಡಿ ಮತ್ತು ನಾನು ಭಾರತವನ್ನು ಪರಿವರ್ತಿಸುತ್ತೇನೆ” ಎಂದಿದ್ದರು ಅವರು. ಇಂದು ಭಾರತದ ವ್ಯಾಪಾರೋದ್ಯಮಿಗಳು, ಕ್ರೀಡಾಳುಗಳು, ತಂತ್ರಜ್ಞಾನಿಗಳು, ವೃತ್ತಿಪರರು, ವಿಜ್ಞಾನಿಗಳು, ಅನ್ವೇಷಕರು ಮತ್ತು ಇತರ ಹಲವಾರು ಮಂದಿಗಳಲ್ಲಿ ನಾವು ಈ ಸ್ಪೂರ್ತಿಯನ್ನು ಕಾಣುತ್ತಿದ್ದೇವೆ. ಅವರು ಗಡಿಗಳನ್ನು ಮೀರಿ, ಅಸಾಧ್ಯವಾದುದನ್ನು ಸಾಧ್ಯ ಮಾಡುತ್ತಿದ್ದಾರೆ.
ಆದರೆ ಯುವಜನರಲ್ಲಿ ಇಂತಹ ಸ್ಪೂರ್ತಿಯನ್ನು ಇನ್ನಷ್ಟು ಉದ್ದೀಪಿಸುವುದು ಹೇಗೆ?. ತಮ್ಮ ಪ್ರಾಯೋಗಿಕ ವೇದಾಂತ ಕುರಿತ ಉಪನ್ಯಾಸಗಳಲ್ಲಿ, ಸ್ವಾಮಿ ವಿವೇಕಾನಂದರು ಕೆಲವು ಆಳವಾದ ಒಳನೋಟಗಳನ್ನು ಪ್ರಸ್ತಾಪಿಸುತ್ತಾರೆ. ಹಿನ್ನಡೆಗಳನ್ನು ಮೀರುವ ಬಗೆಯನ್ನು ಹೇಳುತ್ತಾರೆ ಮತ್ತು ಅವುಗಳನ್ನು ಕಲಿಕಾ ವಕ್ರ ರೇಖೆಯ ಭಾಗಗಳು ಎನ್ನುತ್ತಾರೆ. ಎರಡನೆಯದಾಗಿ ಜನರಲ್ಲಿ ಭಯಮುಕ್ತ ಮನಸ್ಥಿತಿಯನ್ನು ಮತ್ತು ಸ್ವಂತ ಬಲದ ಮೇಲೆ ನಂಬಿಕೆಗಳನ್ನು ಮೂಡಿಸಬೇಕು ಎನ್ನುತ್ತಾರೆ. ನಾವು ಭಯಮುಕ್ತದ ಬಗ್ಗೆ ಸ್ವಾಮಿ ವಿವೇಕಾನಂದರ ಬದುಕಿನಿಂದಲೇ ಪಾಠ ಕಲಿಯಬಹುದಾಗಿದೆ.ಅವರು ಏನೇನು ಮಾಡಿದ್ದಾರೆಯೋ, ಅವರದನ್ನು ಸ್ವಂತಿಕೆಯಲ್ಲಿ ನಂಬಿಕೆ ಇಟ್ಟುಕೊಂಡೇ ಮಾಡಿದ್ದಾರೆ. ಅವರಿಗೆ ಅವರಲ್ಲಿಯೇ ವಿಶ್ವಾಸವಿತ್ತು. ಅವರು ಶತಮಾನಗಳ ಸಾಂಸ್ಕೃತಿಕ ಹುರುಪನ್ನು ಪ್ರತಿನಿಧಿಸುವ ಬಗ್ಗೆ ವಿಶ್ವಾಸ ಹೊಂದಿದ್ದರು.
ಸ್ನೇಹಿತರೇ, ಸ್ವಾಮಿ ವಿವೇಕಾನಂದರ ಚಿಂತನೆಗಳು ಶಾಶ್ವತವಾದಂತಹವು. ಮತ್ತು ಅವುಗಳನ್ನು ನಾವು ಸದಾ ನೆನಪಿಡಬೇಕು. ನೈಜ ಅಜರಾಮರತ್ವವನ್ನು ವಿಶ್ವಕ್ಕೆ ಮೌಲ್ಯಯುತವಾದುದನ್ನು ರೂಪಿಸಿಕೊಟ್ಟು ಸಾಧನೆ ಮಾಡುವುದರಲ್ಲಿದೆ. ಅದು ನಮ್ಮನ್ನು ಮೀರಿ ಬಾಳುತ್ತದೆ. ನಮ್ಮ ಪೌರಾಣಿಕ ಕಥೆಗಳು ಮೌಲ್ಯಯುತವಾದುದನ್ನು ಬೋಧಿಸುತ್ತವೆ. ಅಜರಾಮರತ್ವವನ್ನು ಬೆಂಬತ್ತಿದವರಿಗೆ ಅದು ದೊರೆಯದಿರುವುದನ್ನು ಅವು ಹೇಳುತ್ತವೆ. ಆದರೆ ಇತರರಿಗಾಗಿ ಸೇವಾ ಮನೋಭಾವದ ಗುರಿ ಹೊಂದಿದವರು ಸದಾ ಅಜರಾಮರವಾಗಿರುತ್ತಾರೆ. ಸ್ವಾಮೀಜಿ, ತಾವೇ ಒಮ್ಮೆ ಹೇಳಿದ್ದರು- “ಇತರರಿಗಾಗಿ ಬದುಕುವವರು ಮಾತ್ರವೇ ಬದುಕುತ್ತಾರೆ” . ಇದನ್ನು ಸ್ವಾಮಿ ವಿವೇಕಾನಂದರ ಬದುಕಿನಲ್ಲಿಯೂ ಕಾಣಬಹುದು.ಅವರು ತಮಗಾಗಿ ಯಾವುದೇ ಸಾಧನೆಯನ್ನು ಮಾಡಲು ಹೊರಗೆ ಹೋಗಲಿಲ್ಲ. ನಮ್ಮ ದೇಶದ ಬಡವರಿಗಾಗಿ ಅವರ ಹೃದಯ ಸದಾ ಮಿಡಿಯುತ್ತಿತ್ತು. ಬಂಧನದಲ್ಲಿದ್ದ ತಾಯ್ನಾಡಿಗಾಗಿ ಅವರ ಹೃದಯ ಸದಾ ಮಿಡಿಯುತ್ತಿತ್ತು.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ಆಧ್ಯಾತ್ಮ ಮತ್ತು ಆರ್ಥಿಕ ಪ್ರಗತಿಗಳು ಪ್ರತ್ಯೇಕ ಎಂದು ಪರಿಗಣಿಸಿರಲಿಲ್ಲ. ಬಹಳ ಮುಖ್ಯವಾಗಿ ಬಡತನವನ್ನು ರಮ್ಯಗೊಳಿಸುವ ಜನರ ಧೋರಣೆಗೆ ಅವರು ವಿರೋಧಿಯಾಗಿದ್ದರು. ಪ್ರಾಯೋಗಿಕ ವೇದಾಂತ ಕುರಿತಂತೆ ತಮ್ಮ ಉಪನ್ಯಾಸಗಳಲ್ಲಿ ಸ್ವಾಮೀಜಿ ಅವರು “ಜಗತ್ತಿನಲ್ಲಿ ಧರ್ಮ ಮತ್ತು ಜೀವನದ ನಡುವಿನ ಕಾಲ್ಪನಿಕ ವ್ಯತ್ಯಾಸ ತೊಲಗಬೇಕು, ವೇದಾಂತವು ಏಕತೆಯನ್ನು ಬೋಧಿಸುತ್ತದೆ” ಎಂದಿದ್ದರು.
ಸ್ವಾಮೀಜಿ ಅವರೊಬ್ಬ ಆಧ್ಯಾತ್ಮಿಕ ದಿಗ್ಗಜ, ಅತ್ಯಂತ ಶ್ರೇಷ್ಟ ಆತ್ಮ. ಸ್ವಾಮೀಜಿಯವರು ಬಡವರ ಆರ್ಥಿಕ ಪ್ರಗತಿಯ ಚಿಂತನೆಯನ್ನು ನಿರಾಕರಿಸಿರಲಿಲ್ಲ. ಸ್ವಾಮೀಜಿ ಸನ್ಯಾಸಿಯಾಗಿದ್ದರು. ಅವರು ಎಂದೂ ತಮಗಾಗಿ ಒಂದು ಪೈಸೆ ಹಣವನ್ನೂ ಕೇಳಿದವರಲ್ಲ. ಆದರೆ ಅವರು ದೊಡ್ಡ ಸಂಸ್ಥೆಗಳನ್ನು ಕಟ್ಟಲು ನಿಧಿ ಸಂಗ್ರಹಿಸುವುದಕ್ಕಾಗಿ ಧನ ಸಂಗ್ರಹ ಮಾಡಿದರು. ಈ ಸಂಸ್ಥೆಗಳು ಬಡತನದ ವಿರುದ್ಧ ಹೋರಾಡಿ ಅನ್ವೇಷಣೆಯನ್ನು ಉತ್ತೇಜಿಸಿದವು.
ಸ್ನೇಹಿತರೇ, ನಮಗೆ ಮಾರ್ಗದರ್ಶನ ಮಾಡುವಂತಹ ಹಲವಾರು ಸಂಪತ್ತುಗಳು ಸ್ವಾಮಿ ವಿವೇಕಾನಂದರಿಂದ ಲಭ್ಯವಾಗಿವೆ. ಪ್ರಬುದ್ಧ ಭಾರತ 125 ವರ್ಷ ಬಾಳಿದೆ, ಸ್ವಾಮೀಜಿಯವರ ಚಿಂತನೆಗಳನ್ನು ಹರಡಿದೆ. ಅವುಗಳು ಯುವ ಜನಾಂಗವನ್ನು ಸುಶಿಕ್ಷಿತವಾಗಿಸುವ ಅವರ ಚಿಂತನೆಯ ಮೇಲೆ ಮತ್ತು ರಾಷ್ಟ್ರವನ್ನು ಜಾಗೃತಗೊಳಿಸುವ ಮುಂಗಾಣ್ಕೆಯ ಮೇಲೆ ನಿಂತಿವೆ. ಅವುಗಳು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಬಹಳ ದೊಡ್ಡ ಕಾಣಿಕೆ ನೀಡಿವೆ. ನಾನು ಪ್ರಬುದ್ಧ ಭಾರತಕ್ಕೆ ಅದರ ಭವಿಷ್ಯದ ಸಾಹಸಗಳಿಗೆ ಶುಭವನ್ನು ಹಾರೈಸುತ್ತೇನೆ.
ಧನ್ಯವಾದಗಳು.
***
(Release ID: 1694373)
Visitor Counter : 262
Read this release in:
Punjabi
,
Hindi
,
Marathi
,
Bengali
,
Assamese
,
Gujarati
,
Odia
,
Telugu
,
Urdu
,
English
,
Manipuri
,
Tamil
,
Malayalam