ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕ್ರಮ: ಕೇಂದ್ರ ಸಚಿವ ಶ್ರೀ ಸದಾನಂದಗೌಡ
ನಾಮರೂಪ್ ನಲ್ಲಿ ಮುಂಬರುವ ಯೂರಿಯಾ ಘಟಕ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು
ಹೆಚ್ಚುವರಿ ಯೂರಿಯಾ ರಫ್ತು:ಶ್ರೀ ಡಿ.ವಿ.ಎಸ್
Posted On:
21 JAN 2021 3:38PM by PIB Bengaluru
ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ನಾಮರೂಪ್ ನಲ್ಲಿ ಹೊಸ ಅತ್ಯಾಧುನಿಕ ಯೂರಿಯಾ ಘಟಕವನ್ನು ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ನಾಮರೂಪ್ ನಲ್ಲಿ ಮುಂಬರುವ 12.7 ಲಕ್ಷ ಎಂ.ಎಂ.ಟಿ.ಪಿ.ಎ.ಸಾಮರ್ಥ್ಯದ ಯೂರಿಯಾ ಘಟಕ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈಶಾನ್ಯ ವಲಯ ಅಭಿವೃದ್ಧಿ ಪ್ರಸಕ್ತ ಸರ್ಕಾರದ ಆದ್ಯತೆಯಾಗಿದೆ ಎಂದರು.
ಈ ಯೂರಿಯಾ ಘಟಕವು ಸ್ಥಳೀಯ ರೈತರ ರಸಗೊಬ್ಬರದ ಬೇಡಿಕೆಯನ್ನಷ್ಟೇ ಪೂರೈಸುವುದಿಲ್ಲ ಜೊತೆಗೆ, ಹೆಚ್ಚುವರಿ ರಸಗೊಬ್ಬರವನ್ನು ನೆರೆಯ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು ಎಂದರು. ಈ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಆಂತರಿಕ ಪ್ರಕ್ರಿಯೆಗಳನ್ನು ಶೀಘ್ರ ನಿರ್ಣಯಿಸಲು ಅವರು ಬಾಧ್ಯಸ್ಥ ಸಾರ್ವಜನಿಕ ವಲಯದ ಉದ್ದಿಮೆಗಳ ಸಿಎಂಡಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಸಂಸ್ಕರಣೆ ಕೈಗಾರಿಕೆಗಳ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ ತೆಲಿ, ಅಸ್ಸಾಂ ಹಣಕಾಸು ಸಚಿವ ಶ್ರೀ ಹಿಮಂತ್ ಬಿಶ್ವಾಸ್, ಅಸ್ಸಾಂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಚಂದ್ರ ಮೋಹನ್ ಪತೋವಾರೆ, ಕಾರ್ಯದರ್ಶಿ (ರಸಗೊಬ್ಬರ) ಶ್ರೀ ಆರ್.ಕೆ. ಚತುರ್ವೇದಿ, ಹೆಚ್ಚುವರಿ ಕಾರ್ಯದರ್ಶಿ (ರಸಗೊಬ್ಬರ) ಶ್ರೀ ಧರಂಪಾಲ್, ಸಿಎಂಡಿ (ತೈಲ) ಶ್ರೀ ಸುಶೀಲ್ ಚಂದ್ರ ಮಿಶ್ರಾ, ಸಿಎಂಡಿ (ಆರ್.ಸಿ.ಎಫ್.) ಶ್ರೀ ಎಸ್. ಮುದ್ಗೇರಿಕರ್, ಸಿಎಂಡಿ (ಬಿವಿಎಫ್.ಸಿ.ಎಲ್.) ಶ್ರೀ ಅಸೀಮ್ ಕುಮಾರ್ ಘೋಷ್, ನಿರ್ದೇಶಕ (ಎನ್.ಎಫ್.ಎಲ್) ಶ್ರೀ ನಿರ್ಲೀಪ್ ಸಿಂಗ್ ರಾಯ್ ಮತ್ತಿತರರು ಭಾಗಿಯಾಗಿದ್ದರು.
ಶ್ರೀ ಬಿಶ್ವಾಸ್ ಅಸ್ಸಾಂ ಸರ್ಕಾರ ನಾಮರೂಪ್ ಯೋಜನೆಗೆ ಸಾಧ್ಯವಾದ ಮಟ್ಟಿಗೆ ಆರ್ಥಿಕ ನೆರವೂ ಸೇರಿದಂತೆ ಎಲ್ಲ ರೀತಿಯ ಬೆಂಬಲ ನೀಡಲೂ ಸಿದ್ಧ ಎಂದು ತಿಳಿಸಿದರು.
ಶ್ರೀ ತೇಲಿ ಮಾತನಾಡಿ, ನಾಮರೂಪ್ –IV ಘಟಕ ಸ್ಥಳೀಯ ಅಭಿವೃದ್ಧಿಗೆ ಮಹತ್ವದ್ದಾಗಿದ್ದು, ಉದ್ಯೋಗಾವಕಾಶ ಸೃಷ್ಟಿಸಲಿದೆ ಹೀಗಾಗಿ ಯೋಜನೆಯನ್ನು ತ್ವರಿತವಾಗಿ ಮಾಡುವ ಅಗತ್ಯವಿದೆ ಎಂದರು.
ಶ್ರೀ ಪೋಟೋವರಿ ಅಸ್ಸಾಂ ಸರ್ಕಾರ ಹೊಸ ಕೈಗಾರಿಕೆಗಳಿಗೆ ಪ್ರೋತ್ಸಾಹಕ ನೀಡುತ್ತಿದ್ದು, ಮುಂಬರುವ ಯೋಜನೆಗಳ ಸುಧಾರಣೆಗೆ ಪಡೆಯಬಹುದು ಎಂದರು.
ಬಾಧ್ಯಸ್ಥ ಸಾರ್ವಜನಿಕ ವಲಯದ ಉದ್ದಿಮೆಯ ಸಿಎಂಡಿ, ನಾಮರೂಪ್ ಯೋಜನೆಯ ಆಂತರಿಕ ಪ್ರಕ್ರಿಯೆ ತ್ವರಿತಗೊಳಿಸಲು ಸಮ್ಮತಿಸಿದರು.
ಕೇಂದ್ರ ಸಚಿವ ಶ್ರೀ ಸದಾನಂದ ಗೌಡ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ/ಬಾಧ್ಯಸ್ಥರಿಗೆ ಅವರು ಯೋಜನೆಗೆ ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಸಾಧ್ಯವಾದಷ್ಟೂ ಬೇಗ ಯೋಜನೆ ಆರಂಭವಾಗಬೇಕು ಎಂಬುದು ತಮ್ಮ ಸಚಿವಾಲಯದ ಉದ್ದಶವಾಗಿದೆ ಎಂದು ತಿಳಿಸಿದರು.
*****
(Release ID: 1691035)