ರಕ್ಷಣಾ ಸಚಿವಾಲಯ

73ನೇ ಸೇನಾ ದಿನಾಚರಣೆ

Posted On: 15 JAN 2021 2:33PM by PIB Bengaluru

ಭಾರತೀಯ ಸೇನೆ ಇಂದು 73ನೇ ಸೇನಾ ದಿನ ಆಚರಿಸಿತು. ಜನರಲ್ (ನಂತರ ಫೀಲ್ಡ್ ಮಾರ್ಷಲ್) ಕೆ. ಎಂ.  ಕಾರಿಯಪ್ಪ ಅವರು 1949ರಲ್ಲಿ ಕೊನೆಯ ಬ್ರಿಟಿಷ್ ಸೇನಾ ಮುಖ್ಯಸ್ಥ (ಕಮಾಂಡರ್ ಇನ್ ಚೀಫ್),  ಜನರಲ್ ಶ್ರೀ ಎಫ್.ಆರ್.ಆರ್. ಬುಚೆರ್ ಅವರಿಂದ ಅಧಿಕಾರ ಸ್ವೀಕರಿಸಿ ಸ್ವತಂತ್ರ್ಯಾನಂತರ ಭಾರತೀಯ ಸೇನೆಯ ಪ್ರಥಮ ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ದಿನವಾದ ಜನವರಿ 15ನ್ನು ಭಾರತೀಯ ಸೇನೆ ಪ್ರತಿ ವರ್ಷ ‘ಸೇನಾ ದಿನ’ವಾಗಿ ಆಚರಿಸುತ್ತದೆ. 

ಸೇನಾ ದಿನಾಚರಣೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪುಷ್ಪಗುಚ್ಛ ಇಡುವ ಮೂಲಕ ಆರಂಭಗೊಂಡಿತು ಮತ್ತು ಮೂರೂ ಸೇನಾ ಪಡೆಗಳ ಮುಖ್ಯಸ್ಥರು ಹುತಾತ್ಮರಿಗೆ ನಮನ ಸಲ್ಲಿಸಿದರು.

ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರಾವಣೆ ಅವರು ದೆಹಲಿ ದಂಡು ಪ್ರದೇಶದ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಸೇನಾ ದಿನದ ಪರೇಡ್ ವೀಕ್ಷಿಸಿ, ವೈಯಕ್ತಿಕ ಶೌರ್ಯ ಪರಾಕ್ರಮಕ್ಕಾಗಿ 15 ಸೇನಾ ಪದಕಗಳನ್ನು (ಐದು ಮರಣೋತ್ತರ ಸೇರಿದಂತೆ) ಮತ್ತು 23 ಸಿ.ಓ.ಎ.ಎಸ್. ಘಟಕಗಳ ಉಲ್ಲೇಖಗಳನ್ನು ಗಣನೀಯ ಸೇವೆಗಾಗಿ ಆಯಾ ಘಟಕದವರಿಗೆ ಪ್ರದಾನ ಮಾಡಿದರು.  ಸೇನಾ ದಿನಾಚರಣೆ ಪರೇಡ್ ನೇತೃತ್ವವನ್ನು ದೆಹಲಿ ಪ್ರದೇಶದ ಮುಖ್ಯಸ್ಥ ಮೇಜರ್ ಜನರಲ್ ಅಲೋಕ್ ಕಾಕರ್ ವಹಿಸಿದ್ದರು. ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಗೌರವ ಪುರಸ್ಕೃತರಿಂದ ಪರೇಡ್ ನ ಪ್ರಮುಖ ದಳಗಳನ್ನು ರಚಿಸಲಾಗಿತ್ತು. ಇದರ ಹಿಂದೆ ಟಿ -90 ಟ್ಯಾಂಕ್ ಭೀಷ್ಮಾ, ಕಾಲಾಳುಪಡೆ ಯುದ್ಧ ವಾಹನ ಬಿಎಂಪಿ II, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ, ಪಿನಾಕಾ ಬಹು ಉಡಾವಣೆ ರಾಕೆಟ್ ವ್ಯವಸ್ಥೆ, ನವೀಕರಿಸಿದ ಶಿಲ್ಕಾ ಬಂದೂಕು ವ್ಯವಸ್ಥೆ, ಬ್ರಿಡ್ಜ್ ಲೇಯರ್ ಟ್ಯಾಂಕ್, ಅಂತಾರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರು ಮತ್ತು  ಅಶ್ವಾರೋಹಿಗಳ ದಳ ಸೇರಿದಂತೆ ಏಳು ದಳಗಳು ಪರೇಡ್ ನಲ್ಲಿ ಭಾಗಿಯಾಗಿದ್ದವು.

ಭಾರತೀಯ ಸೇನೆ, ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 75 ಡ್ರೋನ್‌ ಗಳನ್ನು ಬಳಸಿಕೊಂಡು ಡ್ರೋನ್ ಸ್ವಾಮಿಂಗ್ ಸಾಮರ್ಥ್ಯದ ನೇರ ಪ್ರದರ್ಶನ ನಡೆಸಿತು, ಇದು ಕೃತಕ ಬುದ್ಧಿಮತ್ತೆ (ಎಐ) ಶಕ್ತ ಆಕ್ರಮಣಕಾರಿ ಕಾರ್ಯಾಚರಣೆ ಮತ್ತು ನಿಕಟ ಬೆಂಬಲ ಕಾರ್ಯಗಳನ್ನು ನಡೆಸಿತು.

***



(Release ID: 1688796) Visitor Counter : 439