ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಲಸಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ


ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಲಸಿಕೆ; ರಾಜ್ಯ ಸರ್ಕಾರಗಳು ಯಾವುದೇ ವೆಚ್ಚವನ್ನು ಭರಿಸಬೇಕಾಗಿಲ್ಲ

ಲಸಿಕಾ ಅಭಿಯಾನಕ್ಕೆ ನೆರವಾಗಲು ಮತ್ತು ಡಿಜಿಟಲ್ ಲಸಿಕಾ ಪ್ರಮಾಣಪತ್ರಗಳನ್ನು ನೀಡಲು ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್

ಭಾರತ ಮುಂದಿನ ಕೆಲವು ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆಯ ಗುರಿ

ಹಕ್ಕಿ ಜ್ವರವನ್ನು ನಿಭಾಯಿಸಲು ಯೋಜನೆ ರೂಪಿಸಲಾಗಿದೆ; ನಿರಂತರ ಜಾಗರೂಕತೆ ಪ್ರಮುಖ: ಪ್ರಧಾನಮಂತ್ರಿ

Posted On: 11 JAN 2021 6:19PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜನವರಿ 11 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಆಡಳಿತಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಕೋವಿಡ್-19 ಲಸಿಕೆ ನೀಡುವ ಸಂಬಂಧ ಸಿದ್ಧತೆಯನ್ನು ಪರಿಶೀಲಿಸಿದರು.

ವೈರಾಣು ವಿರುದ್ಧ ಸಮನ್ವಯದ ಸಮರ

ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಪ್ರಧಾನಿಯವರು ಅವರಿಗೆ ಗೌರನ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿರಂತರ ಸಮನ್ವಯ ಮತ್ತು ಸಂವಹನ ಹಾಗೂ ಸಮಯೋಚಿತ ನಿರ್ಧಾರಗಳನ್ನು ಅವರು ಶ್ಲಾಘಿಸಿದರು, ಇದು ವೈರಾಣು ವಿರುದ್ಧದ ಹೋರಾಟದಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. ಇದರ ಪರಿಣಾಮವಾಗಿ, ವೈರಾಣು ಹರಡುವಿಕೆಯು ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿಯಂತ್ರಣದಲ್ಲಿದೆ ಎಂದರು. ಸಾಂಕ್ರಾಮಿಕ ರೋಗದ ಬಗ್ಗೆ ಆರಂಭದಲ್ಲಿ ಜನರಿಗಿದ್ದ ಭಯ ಮತ್ತು ಆತಂಕಗಳು ಈಗ ಕಡಿಮೆಯಾಗಿವೆ ಮತ್ತು ಆತ್ಮವಿಶ್ವಾಸ ವೃದ್ಧಿಯಿಂದ ಆರ್ಥಿಕ ಚಟುವಟಿಕೆಗಳ ಮೇಲೂ ಸಕಾರಾತ್ಮಕವಾಗಿ ಪರಿಣಾಮಗಳಾಗುತ್ತಿವೆ ಎಂದರು. ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರು ರಾಜ್ಯ ಸರ್ಕಾರಗಳನ್ನು ಶ್ಲಾಘಿಸಿದರು.

ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ

ಜನವರಿ 16 ರಿಂದ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ಪ್ರಾರಂಭಿಸುವುದರೊಂದಿಗೆ ದೇಶವು ಹೋರಾಟದ ನಿರ್ಣಾಯಕ ಹಂತ ತಲುಪಿದೆ ಎಂದು ಪ್ರಧಾನಿ ಹೇಳಿದರು. ತುರ್ತು ಬಳಕೆಗೆ ಅನುಮತಿ ನೀಡಲಾಗಿರುವ ಎರಡೂ ಲಸಿಕೆಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಒತ್ತಿಹೇಳಿದರು. ಅನುಮೋದಿತ ಎರಡೂ ಲಸಿಕೆಗಳು ಪ್ರಪಂಚದಾದ್ಯಂತದ ಇತರ ಲಸಿಕೆಗಳಿಗೆ ಹೋಲಿಸಿದರೆ ಹೆಚ್ಚು ವೆಚ್ಚದಾಯಕವಾಗಿವೆ. ವಿದೇಶಿ ಲಸಿಕೆಗಳನ್ನು ಅವಲಂಬಿಸಿದ್ದರೆ ಭಾರತವು ಹೆಚ್ಚು ತೊಂದರೆಗಳನ್ನು ಎದುರಿಸಬೇಕಾಗಿತ್ತು ಎಂದು ಅವರು ಹೇಳಿದರು.

ಲಸಿಕೆ ಹಾಕುವ ಬಗ್ಗೆ ಭಾರತಕ್ಕಿರುವ ಅಪಾರ ಅನುಭವವು ಪ್ರಯತ್ನದಲ್ಲಿ ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು. ರಾಜ್ಯಗಳೊಂದಿಗೆ ಸಮಾಲೋಚಿಸಿದ ನಂತರ ತಜ್ಞರು ಮತ್ತು ವೈಜ್ಞಾನಿಕ ಸಮುದಾಯದ ಸಲಹೆಯಂತೆ ಲಸಿಕೆಯ ಆದ್ಯತೆಯನ್ನು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವವರಲ್ಲಿ ಮೊದಲಿಗರು. ಅವರೊಂದಿಗೆ, ಪೌರ ಕಾರ್ಮಿಕರು, ಇತರ ಮುಂಚೂಣಿ ಕೆಲಸಗಾರರು, ಪೊಲೀಸ್ ಮತ್ತು ಅರೆಸೈನಿಕ ಪಡೆ, ಗೃಹರಕ್ಷಕ ದಳ, ವಿಪತ್ತು ನಿರ್ವಹಣಾ ತಂಡಗಳ ಸ್ವಯಂಸೇವಕರು ಮತ್ತು ನಾಗರಿಕ ರಕ್ಷಣೆಯ ಇತರ ಯೋಧರು ಮತ್ತು ನಿಯಂತ್ರಣ ಮತ್ತು ಕಣ್ಗಾವಲಿಗೆ ಸಂಬಂಧಿಸಿದ ಕಂದಾಯ ಅಧಿಕಾರಿಗಳು ಸಹ ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ. ಅಂತಹ ಸಿಬ್ಬಂದಿಗಳ ಒಟ್ಟು ಸಂಖ್ಯೆ ಸುಮಾರು 3 ಕೋಟಿ. 3 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲು ರಾಜ್ಯ ಸರ್ಕಾರಗಳು ಯಾವುದೇ ವೆಚ್ಚವನ್ನು ಭರಿಸಬೇಕಾಗಿಲ್ಲ. ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಘೋಷಿಸಿದರು.

ಎರಡನೇ ಹಂತದಲ್ಲಿ, 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸಹ ಅಸ್ವಸ್ಥತೆಗಳಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಥವಾ ಸೋಂಕಿನ ಹೆಚ್ಚಿನ ಅಪಾಯವಿರುವವರಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತಗಳೊಂದಿಗೆ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ತಯಾರಿಕೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು, ಲಸಿಕೆ ಹಾಕುವ ಮಾದರಿ  ಅಭ್ಯಾಸವನ್ನು ದೇಶಾದ್ಯಂತ ಮಾಡಲಾಗಿದೆ. ನಮ್ಮ ಹೊಸ ಸಿದ್ಧತೆಗಳು ಮತ್ತು ಕೋವಿಡ್ ಸಾಮಾನ್ಯ ಕಾರ್ಯಾಚರಣಾ ವಿಧಾನಗಳು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳು ಮತ್ತು ದೇಶಾದ್ಯಂತ ಚುನಾವಣೆಗಳನ್ನು ನಡೆಸುವ ನಮ್ಮ ಹಳೆಯ ಅನುಭವಗಳೊಂದಿಗೆ ಸಂಬಂಧ ಹೊಂದಿರಬೇಕು ಎಂದು ಅವರು ಹೇಳಿದರು. ಚುನಾವಣೆಗೆ ಬಳಸುವ ಬೂತ್ ಮಟ್ಟದ ತಂತ್ರವನ್ನು ಇಲ್ಲಿಯೂ ಬಳಸಬೇಕಾಗಿದೆ ಎಂದು ಅವರು ಹೇಳಿದರು.

ಕೋ-ವಿನ್

ಲಸಿಕೆ ಹಾಕಬೇಕಾದವರನ್ನು ಗುರುತಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಲಸಿಕಾ ಅಭಿಯಾನದ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕಾಗಿ, ಕೋ-ವಿನ್ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ರಚಿಸಲಾಗಿದೆ. ಆಧಾರ್ ಸಹಾಯದಿಂದ ಫಲಾನುಭವಿಗಳನ್ನು ಗುರುತಿಸಲಾಗುವುದು ಮತ್ತು ಎರಡನೇ ಡೋಸೇಜ್ ಸಮಯಕ್ಕೆ ಸರಿಯಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಲಸಿಕೆ ನೀಡುವುದಕ್ಕೆ ಸಂಬಂಧಿಸಿದ ನೈಜ ಸಮಯದ ಡೇಟಾವನ್ನು ಕೋ-ವಿನ್ನಲ್ಲಿ ಅಪ್ಲೋಡ್ ಮಾಡುವುದರ ಮಹತ್ವವನ್ನು ಪ್ರಧಾನಿ ಒತ್ತಿಹೇಳಿದರು.

ಒಬ್ಬ ವ್ಯಕ್ತಿಯು ಲಸಿಕೆಯ ಮೊದಲ ಡೋಸ್ ಪಡೆದ ನಂತರ, ಕೋ-ವಿನ್ ತಕ್ಷಣವೇ ಡಿಜಿಟಲ್ ಲಸಿಕಾ ಪ್ರಮಾಣಪತ್ರವನ್ನು ಸೃಷ್ಟಿಸುತ್ತದೆ. ಪ್ರಮಾಣಪತ್ರವು ಎರಡನೇ ಡೋಸ್ಗೆ ಜ್ಞಾಪನೆಯಾಗಿಯೂ ಕಾರ್ಯನಿರ್ವಹಿಸುತ್ತದೆ, ಅದರ ನಂತರ, ಅಂತಿಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದರು.

ಮುಂದಿನ ಕೆಲವು ತಿಂಗಳುಗಳಲ್ಲಿ 30 ಕೋಟಿ ಲಸಿಕೆ ನೀಡುವ ಗುರಿ

ಭಾರತದಲ್ಲಿ ಲಸಿಕಾ ಅಭಿಯಾನವು ಗಮನಾರ್ಹವಾಗಿದೆ ಎಂದು ಪ್ರಧಾನಿ ಹೇಳಿದರು, ಇತರ ಹಲವಾರು ದೇಶಗಳು ನಮ್ಮನ್ನು ಅನುಸರಿಸಲಿವೆ. ಕಳೆದ 3-4 ವಾರಗಳಿಂದ ಸುಮಾರು 50 ದೇಶಗಳಲ್ಲಿ ಕೋವಿಡ್-19ಕ್ಕೆ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 2.5 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ಮುಂದಿನ ಕೆಲವು ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು.

ಲಸಿಕೆಯಿಂದಾಗಿ ಯಾರಿಗಾದರೂ ಅಸ್ವಸ್ಥತೆ ಉಂಟಾದರೆ ಅದನ್ನು ಪರಿಹರಿಸಲು ಸೂಕ್ತ ಕಾರ್ಯವಿಧಾನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕಾಗಿ ಅಂತಹ ಕಾರ್ಯವಿಧಾನವು ಈಗಾಗಲೇ ಜಾರಿಯಲ್ಲಿದೆ ಮತ್ತು ಲಸಿಕಾ ಅಭಿಯಾನಕ್ಕಾಗಿ ಇದನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದರು.

ಅಭಿಯಾನದಲ್ಲಿ ಕೋವಿಡ್ ಸಂಬಂಧಿತ ಶಿಷ್ಟಾಚಾರಗಳನ್ನು ಅನುಸರಿಸುವ ಮಹತ್ವವನ್ನು ಪ್ರಧಾನಿ ಒತ್ತಿಹೇಳಿದರು, ಲಸಿಕೆ ಪಡೆಯುವವರು ಸಹ ವೈರಾಣು ಹರಡದಂತೆ ತಡೆಯಲು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಹೇಳಿದರು. ಲಸಿಕೆಗೆ ಸಂಬಂಧಿಸಿದ ವದಂತಿಗಳನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳು ಸೂಕ್ತ ವ್ಯವಸ್ಥೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಅವರು ಹೇಳಿದರು. ಇದಕ್ಕಾಗಿ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು, ಎನ್ವೈಕೆ, ಎನ್ಎಸ್ಎಸ್, ಸ್ವಸಹಾಯ ಸಂಘಗಳು ಇತ್ಯಾದಿಗಳ ನೆರವು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಹಕ್ಕಿ ಜ್ವರದ ಸವಾಲು ನಿಭಾಯಿಸುವುದು

ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ಹರಡಿರುವ ಬಗ್ಗೆ ಪ್ರಧಾನಿ ಚರ್ಚಿಸಿದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಸಮಸ್ಯೆಯನ್ನು ನಿಭಾಯಿಸುವ ಯೋಜನೆಯನ್ನು ರೂಪಿಸಿದೆ, ಇದರಲ್ಲಿ ಜಿಲ್ಲಾಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು. ಪ್ರಯತ್ನದಲ್ಲಿ ತಮ್ಮ ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಹಕ್ಕಿ ಜ್ವರ ಇನ್ನೂ ಹರಡದ ಇತರ ರಾಜ್ಯಗಳು ನಿರಂತರ ಜಾಗರೂಕತೆ ವಹಿಸಬೇಕು ಎಂದು ಅವರು ಹೇಳಿದರು. ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳ ನಡುವೆ ಸೂಕ್ತ ಸಮನ್ವಯದ ಮೂಲಕ ಶೀಘ್ರದಲ್ಲೇ ಸವಾಲನ್ನು ಜಯಿಸುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಲಸಿಕೆ ಹಾಕಲು ಸಿದ್ಧತೆ ಮತ್ತು ಫೀಡ್ ಬ್ಯಾಕ್

ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ಎದುರಿಸುವಲ್ಲಿ ದೇಶವು ಇತರ ದೇಶಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಯತ್ನದಲ್ಲಿ ರಾಜ್ಯಗಳು ತೋರಿದ ಸಮನ್ವಯವು ಲಸಿಕಾ ಅಭಿಯಾನದಲ್ಲೂ ಮುಂದುವರಿಯಬೇಕು ಎಂದು ಅವರು ಹೇಳಿದರು.

ಲಸಿಕೆ ಆರಂಭದ ಬಗ್ಗೆ ಮುಖ್ಯಮಂತ್ರಿಗಳು ಸಂತೋಷ ವ್ಯಕ್ತಪಡಿಸಿದರು. ಲಸಿಕೆಗಳ ಬಗ್ಗೆ ಅವರು ಕೆಲವು ವಿಷಯಗಳು ಮತ್ತು ಕಳವಳಗಳನ್ನು ಚರ್ಚಿಸಿದರು, ಅದನ್ನು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

ಲಸಿಕಾ ಅಭಿಯಾನದ ಸನ್ನದ್ಧತೆ ಕುರಿತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರಸ್ತುತಿ ನೀಡಿದರು. ಲಸಿಕಾ ಅಬಿಯಾನವು ಜನರ ಭಾಗವಹಿಸುವಿಕೆಯನ್ನು ಆಧರಿಸಿರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಆರೋಗ್ಯ ಸಂರಕ್ಷಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕ್ರಮಬದ್ಧ ಮತ್ತು ಸುಗಮ ಅನುಷ್ಠಾನ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. ಲಸಿಕಾ ಅಭಿಯಾನದ ಲಾಜಿಸ್ಟಿಕ್ಸ್ ಸಿದ್ಧತೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು.

***



(Release ID: 1688146) Visitor Counter : 241