ಪ್ರಧಾನ ಮಂತ್ರಿಯವರ ಕಛೇರಿ

ರಾಜಕೀಯದಲ್ಲಿ ನಿಸ್ವಾರ್ಥ ಮತ್ತು ರಚನಾತ್ಮಕ ಕೊಡುಗೆ ನೀಡುವಂತೆ ಯುವಕರಿಗೆ ಪ್ರಧಾನಿ ಕರೆ


ಸಾಮಾಜಿಕ ಭ್ರಷ್ಟಾಚಾರಕ್ಕೆ ವಂಶಪಾರಂಪರ್ಯ ರಾಜಕಾರಣ ಪ್ರಮುಖ ಕಾರಣ: ಪ್ರಧಾನಿ

Posted On: 12 JAN 2021 3:13PM by PIB Bengaluru

ರಾಜಕೀಯದಲ್ಲಿ ನಿಸ್ವಾರ್ಥ ಮತ್ತು ರಚನಾತ್ಮಕ ಕೊಡುಗೆ ನೀಡುವಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ದೇಶದ ಯುವಕರಿಗೆ ಕರೆ ನೀಡಿದ್ದಾರೆ. ಇಂದು ನಡೆದ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿಯವರು, ಅರ್ಥಪೂರ್ಣ ಬದಲಾವಣೆಯನ್ನು ತರಲು ರಾಜಕೀಯ ಒಂದು ಬಹು ದೊಡ್ಡ ಮಾಧ್ಯಮವಾಗಿದೆ ಮತ್ತು ಇತರ ಎಲ್ಲ ಕ್ಷೇತ್ರಗಳಂತೆ ರಾಜಕೀಯದಲ್ಲೂ ಯುವಕರ ಉಪಸ್ಥಿತಿಯು ನಿರ್ಣಾಯಕವಾಗಿದೆ ಎಂದರು. ರಾಜಕೀಯವೆಂಬುದು ನೀತಿಬಾಹಿರ ಚಟುವಟಿಕೆಗಳ ತಾಣ ಎಂಬ ಹಳೆಯ ಕಲ್ಪನೆಯನ್ನು ಬದಲಾಯಿಸಿ, ಇಂದು ಪ್ರಾಮಾಣಿಕರಿಗೆ ಸೇವೆ ಸಲ್ಲಿಸುವ ಅವಕಾಶ ಸಿಗುತ್ತಿದೆ ಎಂದು ಪ್ರಧಾನಿ ಯುವಕರಿಗೆ ಭರವಸೆ ನೀಡಿದರು. ಪ್ರಾಮಾಣಿಕತೆ ಮತ್ತು ದಕ್ಷತೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಪ್ರಧಾನ ಮಂತ್ರಿಯವರು ಮಾತನಾಡಿದರು. ಭ್ರಷ್ಟಾಚಾರವೇ ಪರಂಪರೆಯಾಗಿರುವವರಿಂದ ಭ್ರಷ್ಟಾಚಾರವು ಜನರ ಮೇಲೆ ಹೊರೆಯಾಗಿದೆ ಎಂದು ಅವರು ಹೇಳಿದರು. ದೇಶವು ಕುಟುಂಬ ಸಂಬಂಧಗಳಿಗಿಂತ ಪ್ರಾಮಾಣಿಕತೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಮತ್ತು ಉತ್ತಮ ಕೆಲಸಗಳು ಮಾತ್ರ ಪ್ರಮುಖವಾದುವು ಎಂಬುದನ್ನು ಅಭ್ಯರ್ಥಿಗಳು ಸಹ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದರು.

ವಂಶಪಾರಂಪರ್ಯ ವ್ಯವಸ್ಥೆಯನ್ನು ಬೇರುಸಮೇತ ಕಿತ್ತು ಬಿಸಾಡುವಂತೆ ಅವರು ಯುವಕರಿಗೆ ಕರೆ ನೀಡಿದರು. ವಂಶಪಾರಂಪರ್ಯ ರಾಜಕಾರಣವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಮರ್ಥತೆ ಮತ್ತು ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ, ಏಕೆಂದರೆ ವಂಶರಾಜಕೀಯವು ತಮ್ಮ ಕುಟುಂಬದ ರಾಜಕೀಯವನ್ನು ಉಳಿಸಿಕೊಳ್ಳಲು ಮತ್ತು ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಉಳಿಸಲು ಮಾತ್ರ ಕೆಲಸ ಮಾಡುತ್ತದೆ. "ಇಂದು, ಕುಟುಂಬಹಳ ಹೆಸರಿನಲ್ಲಿ ಚುನಾವಣೆಯನ್ನು ಗೆಲ್ಲುವ ದಿನಗಳು ಮುಗಿದಿವೆ, ಆದರೂ ವಂಶಪಾರಂಪರ್ಯ ರಾಜಕಾರಣದ ಒಳಬೇಗುದಿ ಇನ್ನೂ ಮುಗಿದಿಲ್ಲ. ವಂಶಪಾರಂಪರ್ಯ ರಾಜಕಾರಣವು ದೇಶದ ಬದಲು ತಮ್ಮ ಕುಟುಂಬವನ್ನು ಉತ್ತೇಜಿಸುತ್ತದೆ. ಇದು ಭಾರತದಲ್ಲಿ ಸಾಮಾಜಿಕ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆಎಂದು ಪ್ರಧಾನಿ ಹೇಳಿದರು.

ವಂಶಪಾರಂಪರ್ಯ ರಾಜಕಾರಣವನ್ನು ಅಂತ್ಯಗೊಳಿಸಲು ಯುವಕರು ರಾಜಕೀಯಕ್ಕೆ ಬರಬೇಕೆಂದು ಪ್ರಧಾನಿ ಕರೆ ಕೊಟ್ಟರು. “ನೀವು ರಾಜಕೀಯ ಪ್ರವೇಶಿಸುವುದು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಮುಖ್ಯವಾಗಿದೆ. ಸ್ವಾಮಿ ವಿವೇಕಾನಂದರು ನಿಮಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರ ಪ್ರೇರಣೆಯಿಂದ ನಮ್ಮ ಯುವಕರು ರಾಜಕೀಯಕ್ಕೆ ಬಂದರೆ ದೇಶ ಬಲಿಷ್ಠವಾಗುತ್ತದೆ.” ಎಂದು ಪ್ರಧಾನಿ ಹೇಳಿದರು.

***



(Release ID: 1687977) Visitor Counter : 200