ಪ್ರಧಾನ ಮಂತ್ರಿಯವರ ಕಛೇರಿ
ಪ್ರವಾಸಿ ಭಾರತೀಯ ದಿನ ಸಮಾವೇಶ ಉದ್ಘಾಟಿಸಿದ ಪ್ರಧಾನಮಂತ್ರಿ
ಕೊರೊನಾ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಿದ ಪ್ರವಾಸಿ ಭಾರತೀಯರ ಕಾರ್ಯ ಶ್ಲಾಘನೆ
ಜಾಗತಿಕ ಸವಾಲುಗಳನ್ನು ಹತ್ತಿಕ್ಕಲು ಸಹಾಯ ಮಾಡುವಲ್ಲಿ ಭಾರತ ಸದಾ ಮುಂಚೂಣಿಯಲ್ಲಿ - ಪ್ರಧಾನಮಂತ್ರಿ
Posted On:
09 JAN 2021 8:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರವಾಸಿ ಭಾರತೀಯ ದಿನ ಸಮಾವೇಶವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅನಿವಾಸಿ ಭಾರತೀಯರು ತಾವು ನೆಲೆಸಿರುವ ರಾಷ್ಟ್ರಗಳಲ್ಲಿ ಕೊರೊನಾ ಸಾಂಕ್ರಾಮಿಕದ ವೇಳೆ ನೀಡಿರುವ ಕೊಡುಗೆಗಾಗಿ ಅವರನ್ನು ಶ್ಲಾಘಿಸಿದರು. ನಾನಾ ದೇಶಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ವೇಳೆ, ಅನಿವಾಸಿ ಭಾರತೀಯರು ಎಲ್ಲೆಲ್ಲಿ ನೆಲೆಸಿದ್ದಾರೋ ಆ ರಾಷ್ಟ್ರಗಳಲ್ಲಿ ವೈದ್ಯರಾಗಿ, ಅರೆ ವೈದ್ಯಕೀಯ ಸಿಬ್ಬಂದಿಯಾಗಿ ಮತ್ತು ಸಾಮಾನ್ಯ ನಾಗರಿಕರಾಗಿ ನೀಡಿರುವ ಕೊಡುಗೆ ಬಗ್ಗೆ ಅಯಾ ರಾಷ್ಟ್ರಗಳ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮಗೆ ಹೆಮ್ಮೆ ತಂದಿದೆ ಎಂದರು. ಕೋವಿಡ್-19 ವಿರುದ್ಧದ ಭಾರತದ ಸಮರದಲ್ಲಿ ಅನಿವಾಸಿ ಭಾರತೀಯರು ನೀಡಿರುವ ಕೊಡುಗೆಯನ್ನೂ ಸಹ ಪ್ರಧಾನಿ ಅವರು ಉಲ್ಲೇಖಿಸಿದರು.
ವೈ2ಕೆ ಬಿಕ್ಕಟ್ಟು ಮತ್ತು ಆನಂತರದ ನಿರ್ವಹಣೆಯಲ್ಲಿ ಭಾರತೀಯ ಫಾರ್ಮಾ ಉದ್ಯಮದ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತದ ಸಾಮರ್ಥ್ಯಗಳಿಂದ ಸದಾ ಮನುಕುಲಕ್ಕೆ ಲಾಭವಾಗಿದೆ ಎಂದರು. ಜಾಗತಿಕ ಸವಾಲುಗಳನ್ನು ಹತ್ತಿಕ್ಕುವಲ್ಲಿ ಭಾರತ ಸದಾ ಮುಂಚೂಣಿಯಲ್ಲಿರುತ್ತದೆ. ಭಾರತ, ವಸಾಹತುಶಾಹಿ ಮತ್ತು ಭಯೋತ್ಪಾದನೆ ವಿರುದ್ಧ ಮುಂಚೂಣಿಯಲ್ಲಿ ನಿಂತು ನಡೆಸಿದ ಹೋರಾಟ, ಅಂತಹ ಪಿಡುಗುಗಳ ವಿರುದ್ಧ ಹೋರಾಡಲು ವಿಶ್ವಕ್ಕೆ ಬಲವನ್ನು ತಂದುಕೊಟ್ಟಿತು ಎಂದರು.
ಭಾರತದ ಬಗ್ಗೆ, ಅದರ ಆಹಾರ, ಫ್ಯಾಷನ್, ಕೌಟುಂಬಿಕ ಮೌಲ್ಯಗಳು ಮತ್ತು ವ್ಯಾಪಾರ ಮೌಲ್ಯಗಳ ಬಗ್ಗೆ ಇಡೀ ವಿಶ್ವ ಸಾಕಷ್ಟು ವಿಶ್ವಾಸವನ್ನು ಹೊಂದಿದ್ದು, ಅದರ ಬಹುಪಾಲು ಶ್ರೇಯ ಅನಿವಾಸಿ ಭಾರತೀಯರಿಗೆ ಸಲ್ಲಬೇಕು ಎಂದು ಪ್ರಧಾನಿ ಹೇಳಿದರು. ಅನಿವಾಸಿ ಭಾರತೀಯರ ನಡವಳಿಕೆ ಭಾರತೀಯ ವಿಧಾನ ಮತ್ತು ಮೌಲ್ಯಗಳ ಬಗ್ಗೆ ಆಸಕ್ತಿಯನ್ನು ಮೂಡಿಸಿದೆ ಮತ್ತು ಯಾವುದು ಕುತೂಹಲಕರವಾಗಿತ್ತೋ ಅದು ಇಂದು ಸಂಪ್ರದಾಯವಾಗಿದೆ. ಭಾರತ, ಆತ್ಮ ನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಸಾಗಿದೆ ಎಂದ ಪ್ರಧಾನಮಂತ್ರಿಗಳು, ಇದರಲ್ಲಿ ಅನಿವಾಸಿ ಭಾರತೀಯರು ಬಹುಮುಖ್ಯ ಪ್ರಾತ್ರವಹಿಸಬೇಕಿದೆ, ಅವರು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದರಿಂದ, ವಿದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಇನ್ನೂ ಹೆಚ್ಚಿನ ವಿಶ್ವಾಸ ಮೂಡಲಿದೆ ಎಂದರು.
ಅಲ್ಲದೆ, ಪ್ರಧಾನಮಂತ್ರಿಗಳು ಅನಿವಾಸಿಗಳಿಗೆ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತದ ತೋರಿದ ಸಾಮರ್ಥ್ಯವನ್ನು ವಿವರಿಸಿದರು. ಅವರು, ವೈರಾಣು ವಿರುದ್ಧ ಈ ಬಗೆಯ ಪ್ರಜಾತಾಂತ್ರಿಕ ಒಗ್ಗಟ್ಟಿನ ಉದಾಹರಣೆ ಜಗತ್ತಿನಲ್ಲಿ ಬೇರೆಲ್ಲೂ ಸಿಗದು ಎಂದರು. ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಅಥವಾ ಪರೀಕ್ಷಾ ಕಿಟ್ ನಂತಹ ಗಂಭೀರ ವಸ್ತುಗಳ ಮೇಲೆ ಭಾರತ ಅನ್ಯ ರಾಷ್ಟ್ರಗಳನ್ನು ಅವಲಂಬಿಸಿತ್ತು, ಆದರೆ ಭಾರತ ಆ ವಸ್ತುಗಳ ಉತ್ಪಾದನೆಯಲ್ಲಿ ಕೇವಲ ಸ್ವಾವಲಂಬನೆ ಸಾಧಿಸಿದ್ದಷ್ಟೇ ಅಲ್ಲ, ಹಲವು ವಸ್ತುಗಳನ್ನು ಇಂದು ರಫ್ತು ಮಾಡುವ ಮಟ್ಟಕ್ಕೆ ಬೆಳವಣಿಗೆ ಹೊಂದಿದೆ ಎಂದರು. ಇಂದು, ಭಾರತ ಅತಿ ಕಡಿಮೆ ಸೋಂಕಿತರ ಸಾವಿನ ಪ್ರಮಾಣ ಮತ್ತು ಅತ್ಯಧಿಕ ಸಂಖ್ಯೆಯ ರೋಗಿಗಳ ಚೇತರಿಕೆ ಪ್ರಮಾಣವಿರುವ ರಾಷ್ಟ್ರಗಳ ಸಾಲಿನಲ್ಲಿದೆ. ಜಗತ್ತಿನ ಔಷಧ ತಾಣವಾಗಿರುವ ಭಾರತ, ಇಡೀ ವಿಶ್ವಕ್ಕೆ ನೆರವು ನೀಡುತ್ತಿದೆ ಮತ್ತು ಎರಡು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗಳ ಮೂಲಕ ಭಾರತ ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಲಸಿಕೆ ಕಾರ್ಯಕ್ರಮಕ್ಕೆ ಸಜ್ಜಾಗಿದ್ದು, ಇಡೀ ವಿಶ್ವವೇ ಅದನ್ನು ಎದುರು ನೋಡುತ್ತಿದೆ.
ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಭ್ರಷ್ಟಾಚಾರವನ್ನು ನಿಮೂರ್ಲನೆ ಮಾಡುವಲ್ಲಿ ದೇಶ ಸಾಧಿಸಿರುವ ಪ್ರಗತಿಯ ವಿವರ ನೀಡಿದ ಪ್ರಧಾನಮಂತ್ರಿಗಳು, ಸಾಂಕ್ರಾಮಿಕದ ಸಮಯದಲ್ಲಿ ಇಡೀ ವಿಶ್ವವೇ ಈ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು ಎಂದರು., ಅಂತೆಯೇ ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಡವರು ಮತ್ತು ಶೋಷಿತರ ಸಬಲೀಕರಣದಲ್ಲಿ ಕೈಗೊಂಡಿರುವ ಕಾರ್ಯಗಳಿಗೆ ದೇಶಕ್ಕೆ ಗೌರವ ಬರುತ್ತಿದೆ ಎಂದರು.
ಇಂದಿನ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು, ತಂತ್ರಜ್ಞಾನ ನವೋದ್ಯಮ ಪೂರಕ ವ್ಯವಸ್ಥೆ, ಯೂನಿಕಾರ್ನ್ ಗಳು, ಭಾರತಕ್ಕೆ ಶತಮಾನಗಳಿಂದ ಅಂಟಿದ್ದ ಅನಕ್ಷರತೆ ದೂರಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಶಿಕ್ಷಣದಿಂದ ಉದ್ಯಮದವರಿಗೆ ಹಲವು ವಲಯಗಳಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಕೈಗೊಂಡಿರುವ ಸುಧಾರಣೆಗಳ ಲಾಭವನ್ನು ಮಾಡಿಕೊಳ್ಳುವಂತೆ ಅನಿವಾಸಿ ಭಾರತೀಯರಿಗೆ ಆಹ್ವಾನ ನೀಡಿದರು. ಪ್ರಧಾನಿ ಅವರು ವಿಶೇಷವಾಗಿ ಉತ್ಪಾದನೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಆರಂಭಿಸಿರುವ ಉತ್ಪಾದನಾ ಪ್ರೋತ್ಸಾಹಕರ ಯೋಜನೆಯನ್ನು ಉಲ್ಲೇಖಿಸಿದರು.
ಅನಿವಾಸಿ ಭಾರತೀಯರಿಗೆ ತಮ್ಮ ಮಾತೃಭೂಮಿಯಿಂದ ಎಲ್ಲ ರೀತಿಯ ನೆರವು ಸಿಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೊರೊನಾ ಕಾಲದಲ್ಲಿ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಸುಮಾರು 45ಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಅಲ್ಲದೆ, ಸಾಗರೋತ್ತರ ಭಾರತೀಯರ ಉದ್ಯೋಗ ರಕ್ಷಣೆಗೆ ಕೈಗೊಂಡಿರುವ ರಾಜತಾಂತ್ರಿಕ ಪ್ರಯತ್ನಗಳ ಕುರಿತು ಅವರು ಮಾಹಿತಿ ನೀಡಿದರು. ಕೊಲ್ಲಿ ಮತ್ತು ಇತರೆ ರಾಷ್ಟ್ರಗಳಿಂದ ಆಗಮಿಸುವ ವಲಸೆ ಕಾರ್ಮಿಕರಿಗೆ ‘ಉದ್ಯೋಗ ಬೆಂಬಲಕ್ಕಾಗಿ ಕೌಶಲ್ಯಹೊಂದಿದ ಕಾರ್ಮಿಕರ ಆಗಮನ ದತ್ತಾಂಶ’ (ಸ್ವದೇಶ್ ) ಉಪಕ್ರಮವನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಪ್ರವಾಸಿ ಭಾರತೀಯರೊಂದಿಗೆ ಉತ್ತಮ ಸಂಪರ್ಕ ಮತ್ತು ಸಂವಹನ ಕಾಯ್ದುಕೊಳ್ಳಲು ಜಾಗತಿಕ ಪ್ರವಾಸಿ ರಿಸ್ತಾ ಪೋರ್ಟಲ್ ಆರಂಭಿಸಿರುವ ಕುರಿತು ಪ್ರಧಾನಿ ಮಾತನಾಡಿದರು.
ಸೂರಿನಾಮೆ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪೆರ್ಸಾದ್ ಸಂತೋಖಿ ಅವರ ನಾಯಕತ್ವಕ್ಕೆ ಮತ್ತು ಪ್ರಸ್ತಾವಿಕ ಭಾಷಣ ಮಾಡಿದ್ದಕ್ಕಾಗಿ ಪ್ರಧಾನಿ ಧನ್ಯವಾದಗಳನ್ನು ಸಲ್ಲಿಸಿದರು. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇನೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿ ವಿಜೇತರು ಮತ್ತು ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.
ದೇಶದ 75ನೇ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಭಾಗಿಯಾಗುವಂತೆ ಪ್ರಧಾನಮಂತ್ರಿ ಅನಿವಾಸಿಯರಲ್ಲಿ ಮನವಿ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರವಾಸಿ ಭಾರತೀಯರ ಕೊಡುಗೆಯನ್ನು ದಾಖಲು ಮಾಡಲು ಎಲ್ಲ ಅನಿವಾಸಿ ಭಾರತೀಯರು ಮತ್ತು ಭಾರತೀಯ ರಾಯಭಾರ ಕಚೇರಿಗಳು ಸಿಬ್ಬಂದಿ ಪೋರ್ಟಲ್ , ಡಿಜಿಟಲ್ ವೇದಿಕೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
***
(Release ID: 1687589)
Visitor Counter : 244
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam