ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ ಪ್ರಧಾನ ಮಂತ್ರಿ ಅವರ ಉದ್ಘಾಟನಾ ಭಾಷಣ

Posted On: 22 DEC 2020 6:25PM by PIB Bengaluru

ನಮಸ್ಕಾರ,
ನನ್ನ ಸಂಪುಟ ಸಹೋದ್ಯೋಗಿ ಡಾ. ಹರ್ಷವರ್ಧನ್ ಜೀ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಅಧ್ಯಕ್ಷ ಡಾ. ವಿಜಯ್ ಭಟ್ಕರ್ ಜೀ ಹಾಗೂ ಗೌರವಯುತ ವಿಜ್ಞಾನಿಗಳೇ ಮತ್ತು ಎಲ್ಲಾ ಗಣ್ಯರೇ!
ಉತ್ಸವಗಳು ಅಥವಾ ಹಬ್ಬಗಳು ಭಾರತದ ಸಂಪ್ರದಾಯ, ಮನೋಧರ್ಮ ಮತ್ತು ಚಾರಿತ್ರ್ಯ(ಪಾತ್ರ)ವಾಗಿದೆ. ಇಂದಿನ ಉತ್ಸವದಲ್ಲಿ ನಾವು ವಿಜ್ಞಾನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸದ ಕಾಲ ಹೊಸತನ್ನು ಅನ್ವೇಷಿಸಲು ನಮಗೆ ಪ್ರೋತ್ಸಾಹ ನೀಡುವ ಮಾನವ ಸ್ಫೂರ್ತಿಯನ್ನು ನಾವಿಂದು ಆಚರಿಸುತ್ತಿದ್ದೇವೆ.
ಸ್ನೇಹಿತರೆ,
ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ (ಅನುಶೋಧನೆ) ಕ್ಷೇತ್ರದಲ್ಲಿ ಭಾರತ ಶ್ರೀಮಂತ ಪರಂಪರೆ ಮತ್ತು ಇತಿಹಾಸ ಹೊಂದಿದೆ. ನಮ್ಮ ವಿಜ್ಞಾನಿಗಳು ಪ್ರವರ್ತಮಾನದಿಂದಲೂ ಸಂಶೋಧನೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ನಮ್ಮ ತಂತ್ರಜ್ಞಾನ ಉದ್ಯಮವು ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಮುಂಚೂಣಿಯಲ್ಲಿ ನಿಂತಿದೆ. ಆದರೆ, ವಿಜ್ಙಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಭಾರತ ಬಯಸುತ್ತಿದೆ. ನಾವು ಭೂತ ಕಾಲವನ್ನು ಹೆಮ್ಮೆಯಿಂದ ನೋಡುತ್ತೇವೆ. ಆದರೆ ಇನ್ನೂ ಹೆಚ್ಚಿನ ಉಜ್ವಲ ಭವಿಷ್ಯವನ್ನು ಕಾಣಲು ಬಯಸುತ್ತೇವೆ.
ಸ್ನೇಹಿತರೆ,
ಭಾರತವು ವಿಜ್ಞಾನದ ಮೂಲ ವಿಷಯಗಳಲ್ಲಿ ಸಾಧನೆ ಮಾಡಲು, ಮತ್ತಷ್ಟು ಕೆಲಸ ಮಾಡಲು ಒತ್ತು ನೀಡುತ್ತಿದೆ. ವೈಜ್ಞಾನಿಕ ಮನೋಭಾವ ಮತ್ತು ಅಭಿರುಚಿ ಬೆಳೆಸಲು ಭಾಲ್ಯಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ ಎಂಬುದನ್ನು  ನಿಮ್ಮೆಲ್ಲರಿಗಿಂತ ಚೆನ್ನಾಗಿ ಯಾರು ತಿಳಿದಿದ್ದಾರೆ? ಭಾರತದ ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಲಾಗಿದೆ. ಪುಸ್ತಕದ ಜ್ಞಾನ ದಾಟಿ, ವಿಷಯವನ್ನು ಕೆದಕುವ ಅಥವಾ ವಿಚಾರಿಸುವ ಮನೋಭಾವ ಮತ್ತು ಸ್ಥೂರ್ತಿಯನ್ನು ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತೇಜಿಸಲಾಗಿದೆ. ಸುದೀರ್ಘ ಮೂರು ದಶಕಗಳ ನಂತರ ದೇಶಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ, ಅಳವಡಿಸಲಾಗಿದೆ. ಈ ಸಮಗ್ರ ನೀತಿಯೋಂದಿಗೆ, ಶಿಕ್ಷಣ ವಲಯದ ಗಮನ ಸಂಪೂರ್ಣ ಬದಲಾಗಿದೆ. ಮೊದಲಿನ ಗಮನವು ಶಿಕ್ಷಣದ ಮೇಲಿನ ವೆಚ್ಚ ವಿನಿಯೋಗಗಳ ಮೇಲಿತ್ತು. ಆದರೆ, ಈಗಿನ ಗಮನವು ಶೈಕ್ಷಣಿಕ ಫಲಿತಾಂಶಗಳ ಮೇಲಿದೆ. ಈ ಹಿಂದೆ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಗಮನ ಕೊಡಲಾಗಿತ್ತು, ಆದರೆ, ಇದೀಗ ಸಂಶೋಧನೆ, ಅನುಶೋಧನೆ ಮತ್ತು ಅನ್ವಯಕಗಳಿಗೆ ಆದ್ಯತೆಯ ಗಮನ ಕೊಡಲಾಗುತ್ತಿದೆ. ಹೊಸ ರಾಷ್ಟ್ರೀತ ಶಿಕ್ಷಣ ನೀತಿಯು ದೇಶದಲ್ಲಿ ಪೂರಕ ಪರಿಸರ ಸೃಷ್ಟಿಗೆ ಗಮನ ನೀಡಿದ್ದು, ದೇಶದಲ್ಲಿ ಉನ್ನತ ಗುಣಮಟ್ಟದ ಶಿಕ್ಷಕರು ಮತ್ತು ಬೋಧಕನ್ನು ಸೃಷ್ಟಿಸಸುವುದು ಇದರ ಉದ್ದೇಶವಾಗಿದೆ. ಈ ವಿಧಾನವು ನಮ್ಮ ಹೊಸ ಮತ್ತು ಉದಯೋನ್ಮುಖ ವಿಜ್ಞಾನಿಗಳನ್ನು ಉತ್ತೇಜಿಸಲು ನೆರವಾಗಲಿದೆ.
ಸ್ನೇಹಿತರೆ,
ದೇಶದ ಶಿಕ್ಷಣ ವ್ಯವಸ್ಥೆಗೆ ತರಲಾಗಿರುವ ಆಮೂಲಾಗ್ರ ಬದಲಾವಣೆಗಳಿಗೆ ಪೂರಕವಾಗಿ ಅಟಲ್ ಇನ್ನೊವೇಷನ್ ಮಿಷನ್ ಅನ್ನು ಈಗಾಗಲೇ ಆರಂಭಿಸಲಾಗಿದೆ. ಇದು ವಿಷಯಗಳ ವಿಚಾರಣೆ, ಉದ್ಯಮ, ಆವಿಷ್ಕಾರ ವಿಷಯಗಳ ಮೇಲೆ ಕೆಲಸ ಮಾಡಲಿದೆ. ಇದರಡಿ, ದೇಶಾದ್ಯಂತ ಹಲವು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ (ಕಾಲ್ಪನಿಕ) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇವು ವಿಜ್ಞಾನ ಆವಿಷ್ಕಾರದ ಹೊಸ ವೇದಿಕೆಗಳಾಗಲಿವೆ. ಈ ಪ್ರಯೋಗಾಲಯಗಳಿಂದ ನಮ್ಮ ಶಾಲೆಗಳಲ್ಲಿ ಉತ್ತಮ ವಿಜ್ಞಾನ ಮೂಲಸೌಕರ್ಯ ಲಭ್ಯವಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಟಲ್ ಇನ್’ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ದೇಶದಲ್ಲಿ ಉನ್ನತ ಸಂಶೋಧನಾ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ರೂಪುಗೊಳ್ಳಲಿದೆ. ಅಂತೆಯೇ, ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಉತ್ತಮ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಐಐಟಿ ಕೇಂದ್ರಗಳನ್ನು ಆರಂಭಿಸಲು ಒತ್ತು ನೀಡಲಾಗಿದೆ.
ಸ್ನೇಹಿತರೆ,
ಗುಣಮಟ್ಟದ ಸಂಶೋಧನೆ ಉ್ತತೇಜಿಸಲು ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಸಂಶೋಧನಾ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತಂದಿದೆ. ದೇಶದ ಪ್ರತಿಭಾವಂತ ವಿದ್ಯಾರ್ಥಿ ಸಮುದಾಯ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದಕ್ಕೆ ಹೆಚ್ಚಿನ ಸೌಲಭ್ಯ ಒದಗಿಸುವುದನ್ನು ಖಾತ್ರಿ ಪಡಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯು ದೇಶದ ಎಲ್ಲಾ ಐಐಟಿ ವಿದ್ಯಾರ್ಥಿಗಳಿಗೆ ಸಾಕಷ್ಟು ಹಣಕಾಸಿನ ನೆರವು ಒದಗಿಸುತ್ತಿದೆ. ಭಾರತೀಯ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಸಂಸ್ಥೆಗಳು, ಬೆಂಗಳೂರಿನ ವಿಜ್ಞಾನ ಸಂಸ್ಥೆ ಮತ್ತು ಕೆಲವು ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಈ ನೆರವು ಸಿಗುತ್ತದೆ. ಈ ಯೋಜನೆಗೆ ಆರೇಳು ತಿಂಗಳ ಹಿಂದೆ ಕೆಲವೊಂದು ಬದಲಾವಣೆಗಳನ್ನು ತರಲಾಗಿದ್ದು, ದೇಶದ ಮಾನ್ಯತೆ ಪಡೆದ ಇತರೆ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಈ ಯೋಜನೆಯ ಪ್ರಯೋಜನ ಪಡೆಯಬಹುದು. 
ಸ್ನೇಹಿತರೆ, 
ಕಳೆದ ಕೆಲವು ತಿಂಗಳಲ್ಲಿ ನಾನು ಹಲವಾರು ವಿಜ್ಞಾನಿಗಳು ಮತ್ತು ತಂತ್ರಜ್ಞರ ಜತೆ ಸಮಾಲೋಚನೆ ನಡೆಸಿದ್ದೇನೆ. ಭಾರತ ಇತ್ತೀಚೆಗೆ ವೈಭವ್ ಸಮಾವೇಶ ಆಯೋಜಿಸಿತ್ತು. ತಿಂಗಳು ಪೂರ್ತಿ ನಡೆದ ಈ ಸಮಾವೇಶದಲ್ಲಿ ವಿಶ್ಯಾದ್ಯಂತ ಇರುವ ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರು ಒಂದೇ ವೇದಿಕೆಯಲ್ಲಿ ಸೇರಿದ್ದರು. ಸುಮಾರು 23 ಸಾವಿರ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 700 ತಾಸಿಗಿಂತ ಹೆಚ್ಚಿನ ಕಾಲ ಸಮಾವೇಶದಲ್ಲಿ ಚರ್ಚೆ ನಡೆಸಿದರು. ನಾನು ಸಹ ಹಲವು ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದೆ. ಈ ಸಮೋಲಚನೆಯಲ್ಲಿ ಬಹುತೇಕ ವಿಜ್ಞಾನಿಗಳು 2 ಪ್ರಮುಖ ವಿಷಯಗಳಿಗೆ ಒತ್ತು ನೀಡಿದರು. ಅವೆಂದರೆ, ನಂಬಿಕೆ (ವಿಶ್ವಾಸಾರ್ಹತೆ) ಮತ್ತು ಸಹಭಾಗಿತ್ವ. ದೇಶ ಇದೀಗ ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿದೆ.
ಭಾರತವನ್ನು ವೈಜ್ಞಾನಿಕ ಕಲಿಕೆಯ ವಿಶ್ವಾಸಾರ್ಹ ತಾಣವಾಗಿಸುವ ಗುರಿಯೊಂದಿಗೆ ನಮ್ಮೆಲ್ಲಾ ಪ್ರಯತ್ನಗಳು ಸಾಗಿವೆ. ಅದೇ ವೇಳೆ, ನಮ್ಮೆಲ್ಲಾ ವಿಜ್ಞಾನಿಗಳು ವಿಶ್ವದ ಅತ್ಯುತ್ತಮ ಪ್ರತಿಭೆಗಳ ಜತೆ ವೈಜ್ಞಾನಿಕ ವಿಷಯಗಳನ್ನು  ವಿನಿಮಯ ಮಾಡಿಕೊಂಡು ಬೆಳವಣಿಗೆ ಕಾಣಬೇಕು ಎಂಬುದು ನಮ್ಮ ಬಯಕೆಯಾಗಿದೆ. ಹ್ಯಾಕಥಾನ್ಸ್’ ಅನ್ನು ಭಾರತ ಆಯೋಜಿಸಲಿದೆ ಮತ್ತು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ ಎಂಬ ವಿಷಯದಲ್ಲಿ  ಯಾವುದೇ ಆಶ್ಚರ್ಯವಿಲ್ಲ. ಈ ಕಾರ್ಯಕ್ರಮ ಭಾರತ ಮತ್ತು ಹೊರರಾಷ್ಟ್ರಗಳಲ್ಲಿ ಜರುಗಲಿದೆ. ನಮ್ಮ ವಿಜ್ಞಾನಿಗಳು ತೆರೆದುಕೊಳ್ಳಲು ಇದು ಉತ್ತಮ ಅವಕಾಶ ಕಲ್ಪಿಸಲಿದೆ.
ಸ್ನೇಹಿತರೆ,
ಕಳೆದ 6 ವರ್ಷಗಳಲ್ಲಿ ದೇಶದ ಪ್ರತಿ ಪ್ರಜೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನಗಳು ಲಭಿಸದಿದ್ದಲ್ಲಿ ಮತ್ತು ತಲುಪದಿದ್ದಲ್ಲಿ ಅವು ಅಪೂರ್ಣ ಎಂದೇ ಅರ್ಥ. ದೇಶದ ಯುವ ಸಮುದಾಯಕ್ಕೆ ಅವಕಾಶಗಳೊಂದಿಗೆ ಸಂಪರ್ಕ ಸಾಧಿಸುವಂತಾಗಲು, ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸಲಾಗಿದೆ. ಭಾರತದಲ್ಲಿ ಕೊರತೆ ಮತ್ತು ಪ್ರಾಬಲ್ಯದ ಕಂದಕ ಮುಚ್ಚಿಹಾಕಲು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮುಖ ಸೇತುವಾಗಿದೆ. ಇದರ ನೆರವಿನಿಂದ, ಇದೇ ಮೊದಲ ಬಾರಿಗೆ ದೇಶದ ಕಡು ಬಡವನನ್ನು ಈ ವ್ಯವಸ್ಥೆಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ ಬಲ ನೀಡಲಾಗಿದ್ದು, ಸಾಮಾನ್ಯ ಭಾರತೀಯರಿಗೆ ಸರ್ಕಾರದ ಆರ್ಥಿಕ ನೆರವನ್ನು ನೇರವಾಗಿ ಮತ್ತು ತ್ವರಿತವಾಗಿ ವಿತರಿಸಲಾಗುತ್ತಿದೆ. ಇದೀಗ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಬಡ ರೈತರು ಸಹ ಡಿಜಿಟಲ್ ಪಾವತಿ ಮಾಡುವ ಮಟ್ಟಕ್ಕೆ ತಂತ್ರಜ್ಞಾನ ರೂಢಿಸಿಕೊಂಡಿದ್ದಾರೆ. ಇದೀಗ ಭಾರತದ ಬಹಸಂಖ್ಯಾತ ಜನರು ಸ್ಮಾರ್ಟ್’ಫೋನ್ ಆಧರಿತ ಆ್ಯಪ್ ಬಳಸುತ್ತಿದ್ದಾರೆ. ಇದೀಗ ಭಾರತವು ‘ಜಾಗತಿಕ ಉನ್ನತ ತಂತ್ರಜ್ಞಾನ ಶಕ್ತಿ’ಯ ವಿಕಸನ ಮತ್ತು ಕ್ರಾಂತಿಕಾರಕ ಗಮ್ಯತಾಣವಾಗುತ್ತಿದೆ.
ಸ್ನೇಹಿತರೆ,
ವಿಶ್ವ ದರ್ಜೆಯ ಶಿಕ್ಷಣ, ಆರೋಗ್ಯ, ಪ್ರತಿ ಬಡವನಿಗೆ ಮತ್ತು ಗ್ರಾಮಕ್ಕೆ ಸಂಪರ್ಕ ಒದಗಿಸಲು ಭಾರತ ಇದೀಗ ಉನ್ನತ ತಂತ್ರಜ್ಞಾನ ಪರಿಹಾರಗಳನ್ನು ರೂಪಿಸಿ, ಅಳವಡಿಸಿಕೊಂಡಿದೆ. ಭಾರತವು ದತ್ತಾಂಶ, ಜನಸಂಖ್ಯೆ, ಹೈಟೆಕ್ ಹೆದ್ದಾರಿಗಳಿಗೆ ಬೇಡಿಕೆ ಮತ್ತು ಪ್ರಜಾಪ್ರಭುತ್ವ ಇತ್ಯಾದಿಗಳನ್ನು ಸಮತೋಲಿತವಾಗಿ ಕಾಪಾಡುತ್ತಾ, ಸಂರಕ್ಷಿಸುತ್ತಾ ಬಂದಿದೆ. ಹಾಗಾಗಿ, ಇಡೀ ವಿಶ್ವವೇ ಭಾರತವನ್ನು ನಂಬುತ್ತಿದೆ.
ಸ್ನೇಹಿತರೆ, 
ಇತ್ತೀಚೆಗೆ, ಪಿಎಂ-ವಾಣಿ ಯೋಜನೆಯನ್ನು ಅನಾವರಣಗೊಳಿಸಲಾಗಿದೆ. ಡಿಜಿಟಲ್ ಇಂಡಿಯಾ ಆಂದೋಲನವನ್ನು ಮತ್ತಷ್ಟು ವಿಸ್ತರಿಸುವುದು ಇದರ ಉದ್ದೇಶವಾಗಿದೆ. ಇದು ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಗುಣಮಟ್ಟದ ವೈ-ಫೈ ಸಂಪರ್ಕ ಸಾಧ್ಯವಾಗಿಸಲಿದೆ.
ಸ್ನೇಹಿತರೆ,
ನೀರಿನ ಅಭಾವ, ಪರಿಸರ ಮಾಲಿನ್ಯ, ಮಣ್ಣಿನ ಗುಣಮಟ್ಟ, ಆಹಾರ ಭದ್ರತೆ ಸೇರಿದಂತೆ ದೇಶದಲ್ಲಿ ಹಲವಾರು ಸವಾಲುಗಳಿವೆ. ಇದಕ್ಕೆ ಆಧುನಿಕ ವಿಜ್ಞಾನದಲ್ಲಿ ಪರಿಹಾರಗಳೂ ಇವೆ. ನಮ್ಮ ಸಾಗರಗಳಲ್ಲಿ ನೀರು, ಆಹಾರ ಮತ್ತು ಇಂಧನ ಅನ್ವೇಷಿಸಲು ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ನಾವು ಬಾಹ್ಯಾಕಾಶ ವಿಜ್ಞಾನದಲ್ಲಿ ಯಶಸ್ಸು ಕಂಡಂತೆ, ಸಾಗರದಾಳದಲ್ಲೂ ಯಶಸ್ಸು ಕಾಣುತ್ತೇವೆ. ಇದಕ್ಕಾಗಿ ಭಾರತ ‘ಡೀಪ್ ಓಶಿಯನ್ ಮಿಷನ್’ ನಡೆಸುತ್ತಿದೆ.

ಸ್ನೇಹಿತರೆ, 
ನಾವು ವಿಜ್ಞಾನ ಕ್ಷೇತ್ರದಲ್ಲಿ ಏನೆಲ್ಲಾ ಸಾಧಿಸಿದ್ದೇವೋ, ಅದರ ಪ್ರಯೋಜನ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಕ್ಕೆ ಲಭಿಸುತ್ತಿದೆ. ಉದಾಹರಣೆಗೆ, ಬಾಹ್ಯಾಕಾಶ ವಲದಲ್ಲಿ ತಂದಿರುವ ಸುಧಾರಣೆಗಳು. ಆಗಸ ಮತ್ತು ಆಗಸದ ತುತ್ತ ತುದಿ ಮುಟ್ಟಲು ನಾವು ನಮ್ಮ ಯುವ ಸಮುದಾಯ ಮತ್ತು ಖಾಸಗಿ ರಂಗಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಕ್ಷೇತ್ರಗಳಿಗೆ ಹೊಸ ಉತ್ಪಾದನೆ ಉತ್ತೇಜಕ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಿದ್ದೇವೆ. ಇಂತಹ ಕ್ರಮಗಳು ವಿಜ್ಞಾನಿಗಳ ಸಮುದಾಯವನ್ನು ಬಲಪಡಿಸಲಿದೆ. ಜತೆಗೆ ದೇಶದ ವಿಜ್ಞಾನ ಪರಿಸರವನ್ನು ಸದೃಢಗೊಳಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ತಂತ್ರಜ್ಞಾನ ಸುಧಾರಣೆ ಕಾಣಲಿದೆ. ಇದು ಅನುಶೋಧನೆಗೆ ಹೆಚ್ಚಿನ ಸಂಪನ್ಮೂಲಗಳನ್ನು ಸೃಷ್ಟಿಸಲಿದೆ. ವಿಜ್ಞಾನ ಮತ್ತು ಕೈಗಾರಿಕೆ ನಡುವೆ ಪಾಲುದಾರಿಕೆಗೆ ಹೊಸ ಸಂಸ್ಕೃತಿ ಹುಟ್ಟುಹಾಕಲಿದೆ. ಈ ವಿಜ್ಞಾನ ಉತ್ಸವವು ವಿಜ್ಞಾನ ಮತ್ತು ಕೈಗಾರಿಕೆಗಳ ನಡುವೆ ಸಮನ್ವಯ ಸ್ಫೂರ್ತಿ ಮತ್ತು ಸಹಭಾಗಿತ್ವಕ್ಕೆ ಹೊಸ ಆಯಾಮ ನೀಡುತ್ತದೆ ಎಂದು ನಾನು ನಂಬಿದ್ದೇನೆ.
ಪ್ರಸ್ತುತ, ವೈಜ್ಞಾನಿಕ ಸಮುದಾಯ ಎದುರಿಸುತ್ತಿರುವ ಅತಿದೊಡ್ಡ ಸವಾಲು ಎಂದರೆ, ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿ. ಇದು ಈಗ ನಿಜವಾದ ಸವಾಲಾಗಿದೆ. ಮತ್ತೊಂದು ದೀರ್ಘಕಾಲೀನ ಸವಾಲೆಂದರೆ, ಯುವ ಸಮುದಾಯವನ್ನು ವಿಜ್ಞಾನ ರಂಗಕ್ಕೆ ಆಕರ್ಷಿಸಿ, ಅವರನ್ನು ಅಲ್ಲೇ ಹಿಡಿದಿಡುವುದಾಗಿದೆ. ಯುವ ಸಮುದಾಯವನ್ನು ಮೂಲ ವಿಜ್ಞಾನಕ್ಕಿಂತ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರ ಹೆಚ್ಚು ಆಕರ್ಷಿಸುತ್ತಿವೆ. ವಾಸ್ತವವಾಗಿ, ಯಾವುದೇ ದೇಶ ಉನ್ನತ ಪ್ರಗತಿ ಸಾಧಿಸಬೇಕಾದರೆ, ಮೂಲ ವಿಜ್ಞಾನ ತ್ವರಿತ ಬೆಳವಣಿಗೆ ಕಾಣಬೇಕು. ನಾವೇನು ಇಂದು ವಿಜ್ಞಾನ ಎದು ಕರೆಯುತ್ತೇವೊ ಅದು ನಾಳೆ ತಂತ್ರಜ್ಞಾವವಾಗುತ್ತದೆ. ಮುಂದಿನ ದಿನಗಳಲ್ಲಿ ಅದು ಎಂಜಿನಿಯರಿಂಗ್ ಪರಿಹಾರ ನೀಡುತ್ತದೆ.
ಹಾಗಾಗಿ, ದೇಶದ ಪ್ರತಿಭಾವಂತ ಯುವ ಸಮುದಾಯವನ್ನು ಮೂಲ ವಿಜ್ಞಾನ ರಂಗಕ್ಕೆ ಸೆಳೆಯಬೇಕಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಹಲವು ಹಂತಗಳಲ್ಲಿ ವಿದ್ಯಾರ್ಥಿವೇತನ ಮತ್ತು ಶಿಷ್ಯವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಚಂದ್ರಯಾನ ಕಾರ್ಯಕ್ರಮದ ಸಂಭ್ರಮವು ಮಹತ್ವದ ಆರಂಭವಾಗಿದೆ. ನಾವು ಯುವ ಸಮುದಾಯದ ಅಪಾರ ಆಸಕ್ತಿಗಳನ್ನು ನೋಡುತ್ತಿದ್ದೇವೆ. ಹಾಗಾಗಿ. ನಾವುಗಳೆಲ್ಲಾ ಅವರಿಗೆ ಸ್ಫೂರ್ತಿ ತುಬುವ ಕೆಲಸ ಮಾಡಬೇಕಿದೆ.
ಸ್ನೇಹಿತರೆ, 
ಭಾರತ ನೈಜ ಪ್ರತಿಭೆಗಳು ಮತ್ತು ಆವಿಷ್ಕಾರಗಳ ಮೇಲೆ ವಿಫುಲ ಹೂಡಿಕೆ ಮಾಡುವಂತೆ ಈ ಸಮಾವೇಶದ ಮೂಲಕ ನಾನು ಜಾಗತಿಕ ಸಮುದಾಯಕ್ಕೆ ಮುಕ್ತಾಹ್ವಾನ ನೀಡುತ್ತಿದ್ದೇನೆ. ಭಾರತದಲ್ಲಿ ಅತಿ ಬುದ್ಧಿವಂತ ಮನಸ್ಸುಗಳಿವೆ. ಭಾರತವು ಮುಕ್ತತೆ ಮತ್ತು ಪಾರದರ್ಶಕತೆಯ ಸಂಸ್ಕೃತಿಯನ್ನು ಹೊಂದಿದೆ. ಸಂಶೋಧನಾ ವಲಯದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಪರಿಹರಿಸಲು ಮತ್ತು ಸುಧಾರಣೆ ತರಲು ಭಾರತ ಸರ್ಕಾರ ಸದಾ ಸಿದ್ಧವಿದೆ.
ಸ್ನೇಹಿತರೆ,
ವ್ಯಕ್ತಿಯೊಳಗಿನ ಸುಪ್ತ ಪ್ರತಿಭೆ ಮತ್ತು ಉತ್ತಮ ಸಾಮರ್ಥ್ಯ ಹೊರತೆಗೆಯುವ ತಾಕತ್ತು ವಿಜ್ಞಾನಕ್ಕೆ ಇದೆ. ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿ ಪಡಿಸುವಾಗ ಆ ಸ್ಫೂರ್ತಿ ನಮ್ಮ ವಿಜ್ಞಾನಿಗಳಲ್ಲಿ ಕಂಡುಬಂದಿದೆ.

ಸ್ನೇಹಿತರೆ, 
2 ಸಾವಿರ ವರ್ಷಗಳ ಹಿಂದೆಯೇ ನಮ್ಮ ತಮಿಳು ಕವಿ ಮತ್ತು ಸಮಾಜ ಸುಧಾರಕ ತಿರುವಳ್ಳುವರ್ ನೀಡಿರುವ ಸೂತ್ರಕಾವ್ಯ ಅಥವಾ ಮಂತ್ರ ಇಂದಿಗೂ ನಿಖರ ಮತ್ತು ಪ್ರಸ್ತುತವೆನಿಸಿದೆ. ಅವರು ಹೇಳಿರುವಂತೆ, ‘ನೀವು ಎಷ್ಟು ಹೆಚ್ಚು ಕಲಿಯುತ್ತೀರೊ, ನಿಮ್ಮ ಬುದ್ಧಿವಂತಿಕೆಯ ಮುಕ್ತ ಹೊಳೆಗಳು ಅಷ್ಟೇ ಹರಿಯುತ್ತವೆ’. ನಿಜಕ್ಕೂ ಅರ್ಥಪೂರ್ಣ ಸಂದೇಶ. 
ಈ ಅರ್ಥಪೂರ್ಣ ವೇದಿಕೆಯಲ್ಲಿ ನಾನಿಂದು ಎಲ್ಲರನ್ನೂ ಒತ್ತಾಯಿಸುವುದೇನೆಂದರೆ, ಕಲಿಕೆಯನ್ನು, ಜ್ಞಾನ ಸಂಪಾದನೆಯನ್ನು ಎಂದಿಗೂ ಬಿಡಬೇಡಿ, ನಿಲ್ಲಿಸಬೇಡಿ. ನೀವು ಹೆಚ್ಚು ಕಲಿತಷ್ಟೂ, ನೀವು ಹೆಚ್ಚಿನ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳುತ್ತೀರಿ, ನಿಮ್ಮಷ್ಟಕ್ಕೆ ನೀವು ಅಭಿವೃದ್ಧಿ ಹೊಂದುತ್ತೀರಿ. ಈ ಸ್ಫೂರ್ತಿ ಮುಂದುವರಿಯುತ್ತಾ ಸಾಗಲಿ. ನವ ಭಾರತ ಮತ್ತಿ ಇಡೀ ವಿಶ್ವವನ್ನು ಕಟ್ಟಲು ವಿಜ್ಞಾನ ನಿಮ್ಮೆಲ್ಲರಿಗೆ ಶಕ್ತಿ ನೀಡಲಿ. ಈ ನಂಬಿಕೆಯೋಂದಿಗೆ ನಿಮ್ಮೆಲ್ಲರಿಗೂ ಶುಭವಾಗಲಿ. ಶುಭ ಕಾಮನೆಗಳು.
ನಿಮ್ಮೆಲ್ಲರಿಗೂ ಧನ್ಯವಾದಗಳು.

****



(Release ID: 1683969) Visitor Counter : 393