ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನ ಕಚ್ ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 15 DEC 2020 7:05PM by PIB Bengaluru

ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ವಿಜಯ ರೂಪಾನಿ ಜೀ, ಉಪ ಮುಖ್ಯಮಂತ್ರಿ ಶ್ರೀ ನಿತಿನ್ ಪಟೇಲ್ ಜೀ, ಗುಜರಾತ್ ಸರಕಾರದ ಸಚಿವರೇ, ಸಂಸತ್ ಸದಸ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ. ಕಚ್ ನ ನೀವು ಹೇಗಿದ್ದೀರಿ?. ಚಳಿಗಾಲವಾದ ಮೇಲೂ ಕೊರೋನಾ ಇದೆ. ಆದುದರಿಂದ ನಿಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸಿರಿ. ಕಚ್ ನನ್ನ ಹೃದಯಕ್ಕೆ ಸದಾ ನಿಕಟವಾಗಿರುವುದರಿಂದ ಮತ್ತು ಎರಡನೆಯದಾಗಿ ಇಂದು ಕಚ್ ಗುಜರಾತ್ ಮಾತ್ರವಲ್ಲ ಇಡೀ ದೇಶದಲ್ಲಿಯೇ ಇನ್ನೊಂದು ಗರಿಯನ್ನು ಮೂಡಿಸಿಕೊಂಡು ತನ್ನದೇ ಆದ ಹೆಸರನ್ನು ಸ್ಥಾಪಿಸಿಕೊಂಡಿರುವುದರಿಂದಾಗಿ ನಾನು ಇಲ್ಲಿಗೆ ಬಂದು ದುಪ್ಪಟ್ಟು ಸಂತೋಷ ಅನುಭವಿಸುತಿದ್ದೇನೆ.

ಸ್ನೇಹಿತರೇ,

ಇಂದು, ಸರ್ದಾರ್ ವಲ್ಲಭಭಾಯಿ ಪಟೇಲ್ ಜೀ ಅವರ ಪುಣ್ಯತಿಥಿ, ಅವರು ಗುಜರಾತಿನ ಮತ್ತು ದೇಶದ ಹೆಮ್ಮೆಯ ಪುತ್ರರು. ಸರ್ದಾರ್ ಸಾಹೀಬ್ ಅವರ ನರ್ಮದಾ ಮಾತೆಯ ನೀರಿನಿಂದ ಗುಜರಾತನ್ನು ಪುನಶ್ಚೇತನಗೊಳಿಸಬೇಕು ಎಂಬ ಕನಸನ್ನು ತ್ವರಿತವಾಗಿ ಅನುಷ್ಟಾನ ಮಾಡಲಾಗುತ್ತಿದೆ. ಕೇವಾಡಿಯಾದಲ್ಲಿ ಅವರ ಪ್ರತಿಮೆ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದುದಾಗಿದೆ. ಅದು ನಮಗೆ ದೇಶಕ್ಕಾಗಿ ಹಗಲು ರಾತ್ರಿ ಒಗ್ಗಟ್ಟಾಗಿ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತಿದೆ. ಸರ್ದಾರ್ ಸಾಹೇಬ್ ಅವರನ್ನು ನೆನಪಿಸಿಕೊಳ್ಳುವಾಗ, ನಾವು ದೇಶದ ಮತ್ತು ಗುಜರಾತಿನ ಹೆಮ್ಮೆಯನ್ನು ಎತ್ತರಿಸಬೇಕಾದ ಅಗತ್ಯವಿದೆ.

ಸ್ನೇಹಿತರೇ,

ಇಂದು ಕಚ್ ನಲ್ಲ್ಲಿ ಹೊಸ ಶಕ್ತಿ ಪ್ರವಹಿಸುತ್ತಿದೆ. ಕಚ್ ನಲ್ಲಿಯ ವಿಶ್ವದ ಅತಿ ದೊಡ್ಡ ಮರುನವೀಕೃತ ಇಂಧನ ಪಾರ್ಕ್ ನ ಬಗೆಗೆ ಯೋಚಿಸಿ. ಮತ್ತು ಅದು ಎಷ್ಟು ದೊಡ್ಡದಾಗಿದೆ?. ಅದು ಸಿಂಗಾಪುರದಷ್ಟು ಅಥವಾ ಬೆಹರಿನ್ ನಷ್ಟು ದೊಡ್ಡದಾಗಿದೆ. ಕಚ್ ನಲ್ಲಿಯ ಮರುನವೀಕೃತ ಇಂಧನ ಪಾರ್ಕ್ ಅಷ್ಟು ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿದೆ. ಈಗ ನೀವು ಕಲ್ಪಿಸಿಕೊಳ್ಳಬಹುದು, ಅದು ಎಷ್ಟು ದೊಡ್ಡದಾಗಿದೆ ಎಂದು. ಕಚ್ ನಲ್ಲಿಯ ಮರುನವೀಕೃತ ಇಂಧನ ಪಾರ್ಕ್ 70,000 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುತ್ತದೆ. ಅಂದರೆ ಅದು ಭಾರತದ ಹಲವಾರು ನಗರಗಳಿಗಿಂತ ದೊಡ್ಡದಾಗಿರುತ್ತದೆ. ಇದು ಬಹಳ ಉತ್ತಮ ಎಂದು ಹೇಳಬಹುದಲ್ಲವೇ. ಕಚ್ ನ ಜನತೆ ಕೂಡಾ ಇದೇ ಭಾವನೆಯನ್ನು ಹೊಂದುವುದಿಲ್ಲವೇ?. ಯಾರೇ ಆದರೂ ಇದಕ್ಕಾಗಿ ಹೆಮ್ಮೆಪಡುತ್ತಾರೆ,

ಸ್ನೇಹಿತರೇ,

ಹೊಸ ಕಾಲದ ತಂತ್ರಜ್ಞಾನ ಮತ್ತು ಹೊಸ ಕಾಲದ ಆರ್ಥಿಕತೆಯ ಅವಳಿ ದಿಕ್ಕುಗಳಲ್ಲಿ ಇಂದು ಕಚ್ ಬಹಳ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಖಾವಡಾದಲ್ಲಿ ಮರುನವೀಕೃತ ಇಂಧನ ಪಾರ್ಕಿಗೆ ಶಿಲಾನ್ಯಾಸ, ಮಾಂಡವಿಯಲ್ಲಿ ಉಪ್ಪು ನೀರು ಶುದ್ದೀಕರಣ ಘಟಕ, ಮತ್ತು ಅಂಜಾರಿನಲ್ಲಿ ಸರ್ಹಾದ್ ಡೈರಿಗೆ ಹೊಸ ಸ್ವಯಂಚಾಲಿತ ಘಟಕಗಳು ಕಚ್ ನ ಅಭಿವೃದ್ಧಿಯ ಪಥದಲಿ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಲಿವೆ. ಈ ಯೋಜನೆಗಳ ಪ್ರಯೋಜನ ನನ್ನ ರೈತರಿಗೆ, ಪಶುಪಾಲಕರಿಗೆ ಮತ್ತು ಸಾಮಾನ್ಯ ಜನತೆಗೆ, ಅದರಲ್ಲೂ ವಿಶೇಷವಾಗಿ ಈ ವಲಯದ ನಮ್ಮ ತಾಯಂದಿರಿಗೆ ಮತ್ತು ಸಹೋದರಿಯರಿಗೆ ಲಭಿಸಲಿದೆ.

ಸ್ನೇಹಿತರೇ,

ಕಚ್ ನ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ನನಗೆ ಹಳೆಯ ನೆನಪುಗಳು ನನ್ನ ಮನಸ್ಸಿಗೆ ಬರುತ್ತವೆ. ಒಂದು ಕಾಲದಲ್ಲಿ ಕಚ್ ಬಹಳ ದೂರದಲ್ಲಿದೆ, ಅಲ್ಲಿ ಅಭಿವೃದ್ಧಿಯ ಲವಲೇಶವೂ ಇಲ್ಲ ಮತ್ತು ಅಲ್ಲಿ ಸಂಪರ್ಕವೂ ಇಲ್ಲ ಎಂದೂ ಹೇಳಲಾಗುತ್ತಿತ್ತು. ವಿದ್ಯುತ್-ನೀರು- ರಸ್ತೆಗಳು ಸವಾಲುಗಳಿಗೆ ಅನ್ವರ್ಥದಂತಿದ್ದವು. ಸರಕಾರದಲ್ಲಿಯೂ ಅದೇ ರೀತಿಯ ಭಾವನೆ ಇತ್ತು, ಅದು ಶಿಕ್ಷಾರ್ಹ ವರ್ಗಾವಣೆಗೆ ಹೇಳಿದಂತಹ ಸ್ಥಳವಾಗಿತ್ತು ಮತ್ತು ಜನತೆ ಕೂಡಾ ಅದನ್ನು “ಕಾಲಾ ಪಾನಿ” ಶಿಕ್ಷೆ ಎಂದು ಪರಿಗಣಿಸುತ್ತಿದ್ದರು. ಇಂಥ ಸ್ಥಿತಿ ಇತ್ತು, ಇಂದು ಜನರು ಇಲ್ಲಿ ಕೆಲಸ ಮಾಡಲು ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಕೆಲವರು ಹೇಳುತ್ತಿದ್ದರು, ಇಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು. ಮತ್ತು ಆಗ ಕಚ್ ನಲ್ಲಿ ಭೂಕಂಪದ ದುರಂತ ಘಟಿಸಿತು. ಅಲ್ಲಿ ಏನು ಉಳಿದಿತ್ತೋ ಅದನ್ನು ಭೂಕಂಪ ನಾಶ ಮಾಡಿ ಹಾಕಿತು. ಆದರೆ ಒಂದೆಡೆ ಮಾತಾ ಆಶಾಪುರ ದೇವಿ ಮತ್ತು ಕೋಟೇಶ್ವರ ಮಹಾದೇವ್ ಅವರ ಆಶೀರ್ವಾದದೊಂದಿಗೆ ಮತ್ತು ಇನ್ನೊಂದೆಡೆ ಜನತೆಯ ಧೈರ್ಯ, ಪ್ರಯತ್ನಗಳು ಮತ್ತು ಇಚ್ಛಾಶಕ್ತಿಯ ಫಲವಾಗಿ ಕೆಲವೇ ವರ್ಷಗಳಲ್ಲಿ ಈ ವಲಯದ ಜನರು ಯಾರೊಬ್ಬರೂ ಕಲ್ಪಿಸಿಕೊಳ್ಳಲಾರದ ರೀತಿಯಲ್ಲಿ ಇಲ್ಲಿಯ ಪರಿಸ್ಥಿತಿಯನ್ನು ಬದಲಿಸಿದರು. ಕಚ್ ನ ಜನರು ಹತಾಶೆಯನ್ನು ಭರವಸೆಯಾಗಿ ಪರಿವರ್ತಿಸಿದರು. ಇದು ಅಶಾಪುರ ದೇವಿಯ ಆಶೀರ್ವಾದವೆಂದು ನಾನು ಭಾವಿಸುತ್ತೇನೆ. ಅಲ್ಲಿ ಹತಾಶೆ ಇಲ್ಲ. ಅದಕ್ಕೆ ಬದಲು ಸುತ್ತಲೂ ಭರವಸೆ, ಆಶಾವಾದವಿದೆ. ಭೂಕಂಪ ಅವರ ಮನೆಗಳನ್ನು ಸಮತಟ್ಟು ಮಾಡಿರಬಹುದು, ಆದರೆ ಇಂತಹ ಭೀಕರ ಭೂಕಂಪ ಕಚ್ ನ ಜನರ ನೈತಿಕ ಸ್ಥೈರ್ಯವನ್ನು ಹದಗೆಡಿಸಲಿಲ್ಲ. ಕಚ್ ನ ನನ್ನ ಸಹೋದರರೇ  ಮತ್ತು ಸಹೋದರಿಯರೇ ಮತ್ತೊಮ್ಮೆ ಎದ್ದು ನಿಲ್ಲಿ. ಮತ್ತು ನೋಡಿ, ಈ ವಲಯವನ್ನು ಎಲ್ಲಿಗೆ ಕೊಂಡೊಯ್ದಿದ್ದೀರಿ ಎಂಬುದನ್ನು ನೋಡಿ.

ಸ್ನೇಹಿತರೇ,

ಇಂದು ಕಚ್ ನ ಗುರುತಿಸುವಿಕೆಯೇ ಬದಲಾಗಿದೆ. ಇಂದು, ಕಚ್ ನ ವೈಭವ ತ್ವರಿತವಾಗಿ ಬೆಳೆಯುತ್ತಿದೆ. ಕಚ್ ಇಂದು ದೇಶದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ವಲಯವಾಗಿದೆ. ದಿನದಿಂದ ದಿನಕ್ಕೆ ಇಲ್ಲಿ ಸಂಪರ್ಕ ವ್ಯವಸ್ಥೆ ಉತ್ತಮಗೊಳ್ಳುತ್ತಿದೆ. ಈ ಮೊದಲು ಈ ಗಡಿ ಭಾಗದಿಂದ ನಿರಂತರ ವಲಸೆ ಹೋಗುತ್ತಿದ್ದರು. ಮತ್ತು ಜನಸಂಖ್ಯೆ ಕೂಡಾ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುತ್ತಿತ್ತು. ಇತರೆಡೆಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೆ, ಇಲ್ಲಿ ಅದು ಕಡಿಮೆಯಾಗುತ್ತಿತ್ತು. ಯಾಕೆಂದರೆ ಗಡಿ ಭಾಗದಲ್ಲಿಯ ಬಹುತೇಕ ಜನರು ಇಲ್ಲಿಂದ ವಲಸೆ ಹೋಗುತ್ತಿದ್ದರು. ಇದರಿಂದ ಅಲ್ಲಿ ಸಹಜವಾಗಿಯೇ ಭದ್ರತೆಯ ಸಮಸ್ಯೆ ಇತ್ತು. ಈಗ ವಲಸೆ ಕಡಿಮೆಯಾಗಿದೆ. ಈ ಮೊದಲು ತೊರೆದು ಹೋದ ಹಳ್ಳಿಗಳಿಗೆ ಜನರು ಮರಳುತ್ತಿದ್ದಾರೆ. ಇದರಿಂದ ರಾಷ್ಟ್ರೀಯ ಭದ್ರತೆಯ ಮೇಲೂ ಬೃಹತ್ ಪ್ರಮಾಣದಲ್ಲಿ ಧನಾತ್ಮಕ ಪರಿಣಾಮವುಂಟಾಗಿದೆ.

ಸ್ನೇಹಿತರೇ,

ಕಚ್, ಒಂದೊಮ್ಮೆ ಮರುಭೂಮಿಯಂತೆ, ಎಲ್ಲರೂ ಇಲ್ಲಿಂದ ಹೊರಹೋಗಿ ಜನರಹಿತ ಪ್ರದೇಶದಂತೆ ಕಾಣುತ್ತಿದ್ದರೂ, ಈಗ ಅದು ದೇಶೀಯ ಮತ್ತು ವಿದೇಶೀಯ ಪ್ರವಾಸಿಗರ ಪ್ರಮುಖ ತಾಣವಾಗುತ್ತಿದೆ. ಕೊರೊನಾ, ಖಂಡಿತವಾಗಿಯೂ ಸಮಸ್ಯೆಗಳನ್ನು ಉಂಟು ಮಾಡಿದೆ, ಆದರೆ ಕಚ್ ನ ಬಿಳಿ ಬಯಲು ಮತ್ತು ರಣ್ ನ ಉತ್ಸವ ಇಡೀ ವಿಶ್ವವನ್ನು ಆಕರ್ಷಿಸುತ್ತಿದೆ. ರಣ್ ಉತ್ಸವದಲ್ಲಿ ಸರಾಸರಿ 4-5 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮತ್ತು ಬಿಳಿ ಮರುಭೂಮಿಯನ್ನು ಹಾಗು ನೀಲ ಆಕಾಶವನ್ನು ನೋಡಿ ಆನಂದಿಸುತ್ತಿದ್ದಾರೆ. ಇಂತಹ ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಕಚ್ ನ ಸ್ಥಳೀಯ ಸರಕುಗಳ ಮಾರಾಟ ಮತ್ತು ಇಲ್ಲಿಯ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಜನಪ್ರಿಯತೆಯನ್ನು ಗಳಿಸುವಂತೆ ಮಾಡುವುದು ಸುಲಭದ ಸಂಗತಿಯಲ್ಲ ಮತ್ತು ಇದು ಕಲ್ಪಿಸಿಕೊಳ್ಳಲೂ ಕಷ್ಟವೆನಿಸುವಂತಹ ಸಂಗತಿ. ಇಂದು ನಾನು ನನ್ನ ಹಲವಾರು ಹಳೆಯ ಪರಿವಯಸ್ತರೊಂದಿಗೆ ಮಾತನಾಡುವ ಅವಕಾಶವನ್ನು ಪಡೆದಿದ್ದೇನೆ. ಅವರು ಹೇಳುತ್ತಿದ್ದಾರೆ, ನಮ್ಮ ಮಕ್ಕಳು ಇಂಗ್ಲೀಷ್ ಮಾತನಾಡಲು ಕಲಿತಿದ್ದಾರೆ. ನಾನು ಅದು ಹೇಗೆ ಎಂದು ಕೇಳಿದೆ. ಅವರು ಹೇಳಿದರುಅವರು ಹೋಂ ಸ್ಟೇ ಸೌಲಭ್ಯ ಒದಗಿಸುತ್ತಿದ್ದಾರೆ ಎಂಬುದಾಗಿ. ಇಲ್ಲಿ ತಂಗಲು ಬಂದ ಜನರೊಂದಿಗೆ ಮಾತನಾಡಿ ಅವರ ಮಕ್ಕಳು ಇಂಗ್ಲೀಷ್ ಅರಿತುಕೊಂಡಿದ್ದಾರೆ. ಇಡೀ ದೇಶಕ್ಕೆ ಸ್ವಾವಲಂಬನೆಯತ್ತ  ಹೇಗೆ ಸಾಗಬೇಕು  ಎಂಬುದನ್ನು ಕಚ್ ತನ್ನ ಸಂಪನ್ಮೂಲಗಳನ್ನು ಮತ್ತು ಸಾಮರ್ಥ್ಯವನ್ನು ಬಳಸಿ  ತೋರಿಸಿಕೊಟ್ಟಿದೆ. ನಾನಿದನ್ನು ಜಗತ್ತಿನ ಅಭಿವೃದ್ಧಿ ತಜ್ಞರಿಗೆ ಹೇಳುತ್ತೇನೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವವರೆಗೆ ಹೇಳುತ್ತೇನೆ-ಇದನ್ನು ಒಂದು ಕೇಸ್ ಸ್ಟಡಿಯಾಗಿ ತೆಗೆದುಕೊಂಡುಕಚ್ ಭೂಕಂಪದ ಬಳಿಕ ಹೇಗೆ ಸರ್ವಾಂಗೀಣ ಪ್ರಗತಿ ಸಾಧಿಸಿತು ಮತ್ತು ಈ ಮಾದರಿ ಹೇಗೆ ಕಾರ್ಯಾಚರಿಸುತ್ತಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕು ಎಂದು.  ಇಂತಹ  ಬಹು ದೊಡ್ಡ ದುರಂತದ ಬಳಿಕದ ಎರಡು ದಶಕಗಳಲ್ಲಿ ಇಷ್ಟೊಂದು ಸರ್ವಾಂಗೀಣ ಅಭಿವೃದ್ಧಿ ಮತ್ತು ಅದೂ ಬಹುತೇಕ ಭೂಮಿ ಬರೇ ಮರುಭೂಮಿಯಾಗಿರುವಾಗ, ಇದು ಅಧ್ಯಯನ ಮಾಡುವ ವಿಷಯ.

ಸ್ನೇಹಿತರೇ,

ದೇವರು ನನ್ನ ಬಗ್ಗೆ ಸದಾ ಕರುಣಾಮಯಿಯಾಗಿದ್ದಾನೆ ಎಂದು ನಾನು ನಂಬುತ್ತೇನೆ ಮತ್ತು ಆ ಕಾರಣದಿಂದಾಗಿ ದೇವರು ನನಗೆ ಕಚ್ ನ ಜನತೆಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಅದೂ ಭೂಕಂಪದ ಸಮಯದಲ್ಲಿ. ಭೂಕಂಪ ನಡೆದ ಒಂದು ವರ್ಷ ಬಳಿಕ ರಾಜ್ಯದಲ್ಲಿ ಚುನಾವಣೆಗಳು ನಡೆದವು ಮತ್ತು ಡಿಸೆಂಬರ್ 15 ರಂದು ಫಲಿತಾಂಶಗಳು ಘೋಷಣೆಯಾದವು ಮತ್ತು ಇಂದು ಡಿಸೆಂಬರ್ 15 ಆಗಿರುವುದು ಒಂದು ಯೋಗಾಯೋಗ. ಇಂತಹ ದೊಡ್ಡ ಭೂಕಂಪದ ಹಿನ್ನೆಲೆಯಲ್ಲಿ ಜನರು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಯಾರೂ ಕಲ್ಪಿಸಿಕೊಂಡಿರಲಾರರು. ಜನರು ನಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಆದರೆ ಡಿಸೆಂಬರ್ 15 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ ಕಚ್ ಮಾಡಿದ ಆಶೀರ್ವಾದ ಮತ್ತು ತೋರಿದ ಪ್ರೀತಿಯ ಪರಂಪರೆ ಈಗಲೂ ಮುಂದುವರೆದಿದೆ. ಇಂದು ಕೂಡಾ  ಇದೆಲ್ಲಾ ನಿಮ್ಮ ಆಶೀರ್ವಾದದಿಂದ ಸಾಧ್ಯವಾಗಿದೆ. ಸ್ನೇಹಿತರೇ, ಅಲ್ಲಿ ಡಿಸೆಂಬರ್ 15 ಕ್ಕೆ ಸಂಬಂಧಿಸಿದ ಇನ್ನೊಂದು ಯೋಗಾಯೋಗದ ಸಂಗತಿ ಇದೆ. ಬಹುಷ ಈ ಮಾಹಿತಿ ಬಹಳ ಮಂದಿಗೆ ಸಂತೋಷ, ಆಹ್ಲಾದವನ್ನು ತರಬಹುದು. ನಮ್ಮ ಪೂರ್ವಿಕರ ದೂರದೃಷ್ಟಿಯನ್ನು ನೋಡಿ. ಇಂದು ಕೆಲವೊಮ್ಮೆ ಹೊಸ ತಲೆಮಾರು ಹಳೆಯ ತಲೆಮಾರನ್ನು ಜರೆಯುತ್ತಿರುವಾಗ...ನಾನು ನಿಮಗೆ ಆ ಘಟನೆಯನ್ನು ಹೇಳುತ್ತೇನೆ. 118 ವರ್ಷಗಳ ಹಿಂದೆ ಡಿಸೆಂಬರ್ 15 ರಂದು, ಅಹ್ಮದಾಬಾದಿನಲ್ಲಿ ಕೈಗಾರಿಕಾ ವಸ್ತುಪ್ರದರ್ಶನ ಆಯೋಜನೆಯಾಗಿತ್ತು. ಮುಖ್ಯ ಆಕರ್ಷಣೆಯಾಗಿದ್ದುದು ಭಾನುತಾಪ್ ಯಂತ್ರ. 118 ವರ್ಷಗಳ ಹಿಂದಿನ ನಮ್ಮ ಉದ್ಯಮಿಗಳ ಧ್ಯೆಯೋದ್ದೇಶ, ದೂರದೃಷ್ಟಿಯನ್ನು ಗಮನಿಸಿ. ಇದು ಬಹಳ ದೊಡ್ಡ ಆಕರ್ಷಣೆಯಾಗಿತ್ತು. ಈ ಸಲಕರಣೆಯು ಸೂರ್ಯನ ತಾಪದಿಂದ ಕಾರ್ಯಾಚರಿಸುತ್ತಿತ್ತು. ಇದೇ ರೀತಿ ಅವರು ಸೋಲಾರ್ ಕುಕ್ಕರಿನಂತಹದನ್ನು ಅಭಿವೃದ್ಧಿ ಮಾಡಿದರು. ಇಂದು 118 ವರ್ಷಗಳ ಬಳಿಕ ಅದೂ ಡಿಸೆಂಬರ್ 15 ರಂದು, ಇಂತಹ ಬೃಹತ್ ಹೈಬ್ರಿಡ್ ಮರುನವೀಕೃತ ಇಂಧನ ಪಾರ್ಕ್ ಇಂದು ಉದ್ಘಾಟನೆಯಾಗಿದೆ. ಈ ಪಾರ್ಕ್ ಸುಮಾರು 30,000 ಮೆ.ವಾ. ವಿದ್ಯುತ್ ನ್ನು ಸೌರ ಮತ್ತು ಪವನ ಶಕ್ತಿಯಿಂದ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮರುನವೀಕೃತ ಇಂಧನ ಪಾರ್ಕ್ ಸುಮಾರು 1.5 ಲಕ್ಷ ಕೋ.ರೂ. ಹೂಡಿಕೆಯದ್ದು. ಮರುಭೂಮಿಯ ಬೃಹತ್ ಪಥದ ಬಳಕೆಯನ್ನು ಕಲ್ಪಿಸಿಕೊಳ್ಳಿ. ಗಡಿ ಭದ್ರತೆಯೂ ಗಡಿಯಲ್ಲಿ ಪವನ ಯಂತ್ರಗಳಿಂದಾಗಿ ಸುಧಾರಿಸುತ್ತದೆ. ಜನ ಸಾಮಾನ್ಯನ ವಿದ್ಯುತ್ ಬಿಲ್ ಇಳಿಕೆ ಮಾಡಬೇಕು ಎಂಬ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ರೈತರಿಗೆ ಮತ್ತು ಕೈಗಾರಿಕೆಗಳಿಗೆ ಬಹಳ ಉಪಯುಕ್ತ. ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಅದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಪರಿಸರಕ್ಕೂ ಉಪಯೋಗಕಾರಿಯಾಗುತ್ತದೆ. ಈ ಮರುನವೀಕೃತ ಇಂಧನ ಪಾರ್ಕಿನಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರತೀ ವರ್ಷ 5 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುತ್ತದೆ. ಮತ್ತು ಪರಿಸರದ  ನಿಟ್ಟಿನಲ್ಲಿ ನೋಡಿದರೆ ಇದು 9 ಕೋಟಿ ಮರಗಳನ್ನು ನೆಡುವುದಕ್ಕೆ  ಸಮನಾದುದಾಗಿದೆ. ಈ ಇಂಧನ ಪಾರ್ಕ್ ಭಾರತದಲ್ಲಿ ಪರ್ ಕ್ಯಾಪಿಟಾ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ದೊಡ್ಡ ಕೊಡುಗೆ ನೀಡಬಲ್ಲುದು. ಇದು ಸುಮಾರು 1 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು. ಇದು ಕಚ್ ನ ನನ್ನ ಯುಅವಜನತೆಗೆ ಬಹಳ ದೊಡ್ಡ ಲಾಭಗಳನ್ನು ತರಬಲ್ಲದು.

ಸ್ನೇಹಿತರೇ,

ಗುಜರಾತಿನ ಜನರು ಕನಿಷ್ಟ ರಾತ್ರಿ ಭೋಜನ ವೇಳೆಯಲ್ಲಾದರೂ ವಿದ್ಯುತ್ ಕೊಡಿ ಎಂದು ಬೇಡಿಕೆ ಮಂಡಿಸುತ್ತಿದ್ದ ಕಾಲವೊಂದಿತ್ತು. ಇಂದು, ಗುಜರಾತ್ ರಾಜ್ಯವು ಗ್ರಾಮಗಳಲ್ಲಿ ಮತ್ತು ಹಳ್ಳಿಗಳಲ್ಲಿ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಖಾತ್ರಿಪಡಿಸಿದ ರಾಜ್ಯಗಳಲ್ಲಿ ಒಂದಾಗಿದೆ. ಇಂದಿನ 20 ವರ್ಷದ ಯುವಜನತೆ ಆಗ ಎಂತಹ ಸ್ಥಿತಿ ಇತ್ತು ಎಂಬುದನ್ನು ಅರಿತಿರಲಾರರು. ಅವರು ಇಂತಹ ದೊಡ್ಡ ಬದಲಾವಣೆಯೊಂದು ಆಗಿ ಹೋಗಿದೆ ಎಂಬುದನ್ನೂ ಕಲ್ಪಿಸಿಕೊಳ್ಳಲಾರರು. ಈ ಬದಲಾವಣೆ ಸಾಧ್ಯವಾಗಿರುವುದು ಗುಜರಾತಿನ ಜನರ ಅವಿಶ್ರಾಂತ ದುಡಿಮೆಯಿಂದಾಗಿ. ಈಗ ಕಿಸಾನ್ ಸೂರ್ಯೋದಯ ಯೋಜನೆಯಡಿ ರೈತರಿಗೆ ಪ್ರತ್ಯೇಕ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ರೈತರು ರಾತ್ರಿ ವೇಳೆ ನೀರಾವರಿ ಕೆಲಸಕ್ಕೆ ಓಡಬೇಕಾದ ಸ್ಥಿತಿಯನ್ನು ನಿವಾರಿಸಲು ವಿಶೇಷ ವಿದ್ಯುತ್ ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸೌರ ವಿದ್ಯುತ್ತಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಿದ ಮತ್ತು ನಿರ್ಧಾರಗಳನ್ನು ಕೈಗೊಂಡ ರಾಜ್ಯಗಳಲ್ಲಿ ಗುಜರಾತ್ ದೇಶದಲ್ಲಿಯೇ ಮೊದಲ ರಾಜ್ಯ. ನಾವು ಕಾಲುವೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿದೆವು, ಅವುಗಳ ಬಗ್ಗೆ ವಿದೇಶಗಳಲ್ಲಿಯೂ ಚರ್ಚೆಯಾಯಿತು. ನನಗೆ ನೆನಪಿದೆ ಗುಜರಾತ್ ಸೌರ ವಿದ್ಯುತ್ತಿನ ಬಗ್ಗೆ ಪ್ರಚಾರಾಂದೋಲನ ಕೈಗೊಂಡು ಅದನ್ನು ಉತ್ತೇಜಿಸಲು ಹೊರಟಾಗ, ಹೆಚ್ಚು ವೆಚ್ಚ ತಗಲುವ ವಿದ್ಯುತ್ತಿನ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಗುಜರಾತ್ ಇಂತಹ ದೊಡ್ಡ ಹೆಜ್ಜೆಯನ್ನು ಇಟ್ಟಾಗ, ಸೌರ ಶಕ್ತಿಯಿಂದ ಉತ್ಪಾದನೆಯಾಗುವ ವಿದ್ಯುತ್ತಿನ ಯೂನಿಟೊಂದಕ್ಕೆ ಸುಮಾರು 16-17 ರೂಪಾಯಿ ಖರ್ಚು ಬರುತ್ತಿತ್ತು. ಆದರೆ, ಗುಜರಾತ್ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಈ ನಿಟ್ಟಿನಲ್ಲಿ ಕೆಲಸ ಮುಂದುವರೆಸಿತು. ಇಂದು ಅದೇ ವಿದ್ಯುತ್ ಯೂನಿಟೊಂದಕ್ಕೆ 2-3 ರೂಪಾಯಿ ವೆಚ್ಚದಲ್ಲಿಗುಜರಾತಿನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಲಭ್ಯವಾಗುತ್ತಿದೆ. ಆಗ ಗುಜರಾತ್ ಏನು ಮಾಡಿತೋ, ಅದರ ಅನುಭವಗಳು ದೇಶಕ್ಕೆ ಮಾರ್ಗದರ್ಶನ ಮಾಡುತ್ತಿವೆ. ಇಂದು ಭಾರತವು ಮರುನವೀಕೃತ ಇಂಧನ ತಯಾರಿಸುವ ವಿಶ್ವದ ನಾಲ್ಕನೇ ದೊಡ್ಡ ಶಕ್ತಿಯಾಗಿದೆ. ಸ್ನೇಹಿತರೇ, ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕಾಗಿದೆ, ಯಾಕೆಂದರೆ ಕಳೆದ ಆರು ವರ್ಷಗಳಲ್ಲಿ ನಮ್ಮ ಸೌರ ಶಕ್ತಿ ಸಾಮರ್ಥ್ಯ 16 ಪಟ್ಟು ಹೆಚ್ಚಿದೆ. ಇತ್ತೀಚೆಗೆ ಸ್ವಚ್ಛ ಇಂಧನ ಹೂಡಿಕೆ ಶ್ರೇಯಾಂಕ ಪ್ರಕಟವಾಗಿದೆ. ಈ ಸ್ವಚ್ಛ ಇಂಧನ ಹೂಡಿಕೆ ಪಟ್ಟಿಯಲ್ಲಿ, 104 ದೇಶಗಳನ್ನು ಮೌಲ್ಯಮಾಪನ ಮಾಡಲಾಗಿದೆ ಮತ್ತು ಭಾರತದ ಸ್ಥಾನ  ಈ 104 ದೇಶಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿದೆ. ಇಂದು ಭಾರತವು ವಾತಾವರಣ ಬದಲಾವಣೆ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತಿದೆ ಮತ್ತು ನಾಯಕತ್ವವನ್ನು ವಹಿಸುತ್ತಿದೆ.

ಸ್ನೇಹಿತರೇ,

21 ನೇ ಶತಮಾನದಲ್ಲಿ ಇಂಧನ ಭದ್ರತೆಯಷ್ಟೇ ಜಲ ಭದ್ರತೆಯೂ ಅಷ್ಟೇ ಮುಖ್ಯ. ಜನತೆಯ ಅಭಿವೃದ್ಧಿ ಮತ್ತು ವಲಯದ ಅಭಿವೃದ್ಧಿ ನೀರಿನ ಕೊರತೆಯಿಂದ ಕುಂಟಿತವಾಗಬಾರದು ಎಂಬುದು ನನ್ನ ದೃಢವಾದ ನಿಲುವು. ನೀರಿನ ವಿಷಯದಲ್ಲಿ ಗುಜರಾತ್ ಮಾಡಿರುವ ಕೆಲಸ ಇಂದು ಇಡೀ ದೇಶಕ್ಕೇ ಆದರ್ಶಪ್ರಾಯವಾದುದಾಗಿದೆ. ಕಚ್ ಗೆ ನರ್ಮದಾ ಮಾತೆಯ ನೀರು ತರುವ ಬಗ್ಗೆ ಚರ್ಚೆಗಳು ನಡೆಯುವಾಗ ಜನರು  ತಮಾಶೆ ಮಾಡುತ್ತಿದ್ದ ಕಾಲವೊಂದಿತ್ತು. ಅವರು ಆಗ ಇದೆಲ್ಲ ರಾಜಕೀಯ ಗಿಮಿಕ್ ಗಳು ಮತ್ತು ಅವು ಎಂದೆಂದೂ ಕಾರ್ಯರೂಪಕ್ಕೆ ಬರುವುದಿಲ್ಲ ಎನ್ನುತ್ತಿದ್ದರು. ಕೆಲವೊಮ್ಮೆ ಜನರು, ನರ್ಮದಾ ಮಾತೆಯ ನೀರನ್ನು 600-700 ಕಿಲೋ ಮೀಟರ್ ದೂರದಿಂದ ತರುವುದು ಹೇಗೆ ಸಾಧ್ಯ ಎಂದು ಹೇಳುತ್ತಿದ್ದರು. ಇದು ಅಸಾಧ್ಯ ಕೆಲಸ ಎನ್ನುತ್ತಿದ್ದರು. ಇಂದು ಕಚ್ ಗೆ ನರ್ಮದಾ ನೀರು ಬರುತ್ತಿದೆ ಮತ್ತು ನರ್ಮದಾ ಮಾತೆ ಅದನ್ನು ಆಶೀರ್ವದಿಸುತ್ತಿದ್ದಾರೆ. ಕಚ್ ನ ರೈತರ ಮತ್ತು ಗಡಿ ಭಾಗದ ಸೈನಿಕರ ನೀರಿನ ಸಮಸ್ಯೆ ಬಗೆಹರಿದಿದೆ. ನೀರಿನ ಸಂರಕ್ಷಣೆಯನ್ನು ಜನತಾ ಆಂದೋಲನವನ್ನಾಗಿ ಮಾಡಿರುವುದಕ್ಕೆ ನಾನು ಇಲ್ಲಿಯ ಜನರನ್ನು ವಿಶೇಷವಾಗಿ ಶ್ಲಾಘಿಸುತ್ತೇನೆ. ಹಳ್ಳಿಗಳಲ್ಲಿರುವ ಜನರು ಮುಂದೆ ಬಂದು ಸಹಾಯ ಹಸ್ತ ಚಾಚಿದ್ದಾರೆ. ಜಲ ಸಮಿತಿಗಳು ರಚನೆಯಾಗಿವೆ, ಮಹಿಳೆಯರೂ ಕೊಡುಗೆ ನೀಡುತ್ತಿದ್ದಾರೆ, ಚೆಕ್ ಡ್ಯಾಮ್ ಗಳನ್ನು ನಿರ್ಮಿಸಲಾಗಿದೆ, ನೀರಿನ ಸಂಗ್ರಹಾಗಾರಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು  ಕಾಲುವೆಗಳನ್ನು ನಿರ್ಮಿಸಲಾಗಿದೆ. ನರ್ಮದಾ ನೀರು ಇಲ್ಲಿಗೆ ತಲುಪಿದ ದಿನವನ್ನು ನಾನು ಮರೆಯಲಾರೆ. ನಾನು ಅದನ್ನು ನೆನಪಿಸಿಕೊಳ್ಳುತ್ತೇನೆ. ಜನರ ಕಣ್ಣುಗಳಲ್ಲಿ ಆನಂದಾಶ್ರುಗಳಿದ್ದವು. ನಾನದನ್ನು ನೋಡಿದ್ದೆ. ಕಚ್ ನ ಜನರು ನೀರಿನ ಮಹತ್ವವನ್ನು ಮನಗಂಡಷ್ಟು ಬೇರೆ ಯಾರೂ ಅದರ ಪ್ರಾಮುಖ್ಯತೆಯನ್ನು ಅರಿತುಕೊಂಡಿರಲಾರರು. ವಿಶೇಷ ಜಾಲದಿಂದಾಗಿ ಮತ್ತು ನೀರಿನ ಕಾಲುವೆಗಳ ಜಾಲದಿಂದಾಗಿ ಗುಜರಾತಿನ ಮಿಲಿಯಾಂತರ ಜನರು ಪ್ರಯೋಜನ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಜಲ ಜೀವನ ಆಂದೋಲನದಲ್ಲಿ ಇಲ್ಲಿಯ ಸ್ಥಳೀಯ ಜನರ ಪಾಲೂ ಇದೆ. ದೇಶದಲ್ಲಿ ಪ್ರತಿಯೊಂದು ಮನೆಗೂ ಕೊಳವೆ ಮೂಲಕ ನೀರು ಪೂರೈಕೆ ಮಾಡುವ ಆಂದೋಲನ ಜಾರಿಯಲ್ಲಿದೆ. ಬರೇ 15 ತಿಂಗಳಲ್ಲಿ ಈ ಆಂದೋಲನದಡಿಯಲ್ಲಿ 3 ಕೋಟಿ ಮನೆಗಳಿಗೆ ಕೊಳವೆ ಮೂಲಕ ನೀರು ಲಭ್ಯವಾಗುವಂತೆ ಮಾಡಲಾಗಿದೆ. ಗುಜರಾತಿನಲ್ಲಿ ಕೂಡಾ 80 % ಮನೆಗಳಿಗೆ ನಳ್ಳಿ ನೀರು ಸೌಲಭ್ಯ ಒದಗಿಸಲಾಗಿದೆ. ಸದ್ಯದಲ್ಲಿಯೇ ಗುಜರಾತಿನ ಪ್ರತೀ ಜಿಲ್ಲೆಗಳಿಗೂ ನಳ್ಳಿ ನೀರು ಲಭ್ಯವಾಗುವಂತೆ ಮಾಡಲಾಗುವುದು ಎಂದು ನನಗೆ ತಿಳಿಸಲಾಗಿದೆ. 

ಸಹೋದರರೇ ಮತ್ತು ಸಹೋದರಿಯರೇ,

ಮನೆಗಳಿಗೆ ನೀರನ್ನು ತರುವುದರ ಜೊತೆಗೆ ಹೊಸ ಜಲಮೂಲಗಳನ್ನು ಅಭಿವೃದ್ಧಿಪಡಿಸುವುದೂ ಬಹಳ ಮುಖ್ಯ. ಈ ಗುರಿಯೊಂದಿಗೆ, ಸಮುದ್ರದ  ಉಪ್ಪು ನೀರನ್ನು ಶುದ್ದೀಕರಿಸುವ ಸಮಗ್ರ ಯೋಜನೆಯೂ ಸಿದ್ದಗೊಳ್ಳುತ್ತಿದೆ. ಮಾಂಡವಿಯಲ್ಲಿ ಬರಲಿರುವ ಉಪ್ಪು ನೀರು ಶುದ್ದೀಕರಣ ಘಟಕ ನರ್ಮದಾ, ಸವುನಿ ಜಾಲಗಳಿಗೆ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಗೆ  ಪೂರಕವಾಗಿರಲಿದೆ. ಈ ಉಪ್ಪು ನೀರು ಶುದ್ದೀಕರಣಾ ಘಟಕ ಸಿದ್ದಗೊಂಡಾಗ, ಅದು ಮುಂದ್ರಾ, ನಖತ್ರಾಣ, ಲಾಕ್ ಪತ್, ಮತ್ತು ಅಬ್ದಾಸ ಹಾಗು ಮಾಂಡವಿಯ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನಕಾರಿಯಾಗಲಿದೆ. ಈ ಸ್ಥಾವರದ ಮೂಲಕ ದೈನಿಕ ಎಂಟು ಲಕ್ಷ ಜನರಿಗೆ 10 ಕೋಟಿ ಲೀಟರ್ ಶುದ್ಧ ನೀರನ್ನು ಪೂರೈಸಲಾಗುತ್ತದೆ. ಇನ್ನೊಂದು ಪ್ರಯೋಜನ ಎಂದರೆ ನೂರಾರು ಕಿಲೋ ಮೀಟರ್ ದೂರದಿಂದ ಇಲ್ಲಿಗೆ ಬರುತ್ತಿರುವ ನರ್ಮದಾ ನೀರನ್ನು ನಾವು ಇನ್ನಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಈ ನೀರು ರಾಪಾರ್, ಭಾಚೌ, ಗಾಂಧೀಧಾಮ ಮತ್ತು ಅಂಜಾರ್ ತಾಲೂಕುಗಳಿಗೂ ಲಭ್ಯವಾಗಲಿದೆ.

ಸ್ನೇಹಿತರೇ,

ದಹೇಜ್, ದ್ವಾರಕಾ, ಘೋಘಾ ಭಾವನಗರ ಮತ್ತು ಗಿರ್ ಸೋಮನಾಥಗಳಲ್ಲಿಯೂ ಶೀಘ್ರವಾಗಿ ಇಂತಹದೇ ಯೋಜನೆಗಳನ್ನು ಅನುಷ್ಟಾನಿಸಲಾಗುತ್ತದೆ. ಈ ಮಾಂಡವಿ ಸ್ಥಾವರ ಸಮುದ್ರ ದಡದಲ್ಲಿಯ ರಾಜ್ಯಗಳಿಗೆ ಪ್ರೇರಣೆ ನೀಡಲಿದೆ ಎಂಬುದು ನನಗೆ ಖಾತ್ರಿ ಇದೆ.

ಸಹೋದರರೇ ಮತ್ತು ಸಹೋದರಿಯರೇ,

ಕಚ್ ಮತ್ತು ಗುಜರಾತಿನ ಶಕ್ತಿಯು ಕಾಲ ಮತ್ತು ಆವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಇಂದು ರೈತರು, ಪಶುಪಾಲಕರು, ಮತ್ತು ನಮ್ಮ ಗುಜರಾತಿನಲ್ಲಿರುವ ಮೀನುಗಾರ ಸ್ನೇಹಿತರು ಬಹಳ ಉತ್ತಮ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಒಂದು ಕಾರಣ ಸಾಂಪ್ರದಾಯಿಕ ಕೃಷಿಯಲ್ಲಿ ಆಧುನಿಕತೆಯನ್ನು ತಂದಿರುವುದು ಮತ್ತು ಬೆಳೆ ವೈವಿಧ್ಯಕ್ಕೆ ಆದ್ಯತೆ ನೀಡಿರುವುದು. ಕಚ್ ಸಹಿತ ಗುಜರಾತಿನ ರೈತರು ಅತಿ ಹೆಚ್ಚು ಬೇಡಿಕೆ ಇರುವ ಬೆಳೆಗಳತ್ತ ಆಕರ್ಶಿತರಾಗಿದ್ದಾರೆ ಮತ್ತು ಅದರಿಂದ ಅವರಿಗೆ ಹೆಚ್ಚಿನ ಬೆಲೆ ಲಭಿಸುತ್ತಿದೆ. ಮತ್ತು ಅದರಿಂದಾಗಿ ಅವರು ಪ್ರಗತಿ ಸಾಧಿಸುತ್ತಿದ್ದಾರೆ. ಕಚ್ ನ ಕೃಷಿ ಉತ್ಪನ್ನಗಳು ರಫ್ತಾಗುತ್ತವೆ ಎಂದು ಯಾರಾದರೂ ಕಲ್ಪಿಸಿಕೊಂಡಿದ್ದರೇ?. ಇದು ಈಗ ಆಗುತ್ತಿದೆ. ಅಲ್ಲಿ ಖರ್ಜೂರ ಬೆಳೆ ಹೆಚ್ಚುತ್ತಿದೆ, ಕಮಲಾಂ ಮತ್ತು ಡ್ರ್ಯಾಗನ್ ಹಣ್ಣುಗಳ ಕೃಷಿಯೂ ಹೆಚ್ಚಿದೆ. ಬರೇ 1.5 ದಶಕದ ಅವಧಿಯಲ್ಲಿ ಗುಜರಾತಿನಲ್ಲಿ ಕೃಷ್ಯುತ್ಪಾದನೆ ಒಂದೂವರೆ ಪಟ್ಟಿಗೂ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತಿನಲ್ಲಿ ಕೃಷಿ ವಲಯದ ಬೆಳವಣಿಗೆಯ ಹಿಂದಿನ ಒಂದು ಪ್ರಮುಖ ಕಾರಣವೆಂದರೆ ಸರಕಾರ ಕೃಷಿ ಸಂಬಂಧಿತ ವ್ಯಾಪಾರೋದ್ಯಮದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡದೇ ಇರುವುದು. ಸರಕಾರ ಇಲ್ಲಿ ಅತ್ಯಂತ ಕನಿಷ್ಟ ಮಧ್ಯಪ್ರವೇಶವನ್ನು ಹೊಂದಿದೆ ಮತ್ತು ಅದು ಈ ಕ್ಷೇತ್ರವನ್ನು ಮುಕ್ತ ಮಾಡಿದೆ. ಇಂದು ದೇಶದಲ್ಲಿ ಡೈರಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಎರಡು ವಲಯಗಳು ಭಾರೀ ಪ್ರಗತಿ ಸಾಧಿಸುತ್ತಿರುವುದನ್ನು ನಾವು ಕಾಣಬಹುದು. ಬಹಳ ಮಂದಿ ಈ ಬಗ್ಗೆ ಅಧ್ಯಯನ ನಡೆಸಿಲ್ಲ ಮತ್ತು ಆ ಬಗ್ಗೆ ಬರೆದಿಲ್ಲ. ಈಗ ಗುಜರಾತಿನಲ್ಲಿ ಹೈನು ಸಂಬಂಧಿ ಉದ್ಯಮಗಳ ಸಮಗ್ರ ಬೆಳವಣಿಗೆ ಸಾಧ್ಯವಾಗಿದೆ ಯಾಕೆಂದರೆ ಅಲ್ಲಿ ಸರಕಾರದಿಂದ ಇರುವ ನಿರ್ಬಂಧಗಳ ಪ್ರಮಾಣ ಬಹಳ ಕನಿಷ್ಟ ರೂಪದಲ್ಲಿದೆ. ಸರಕಾರ ಇಲ್ಲಿ ಅವಶ್ಯ ಸೌಲಭ್ಯಗಳನ್ನು ಒದಗಿಸುತ್ತದೆ, ಆದರೆ ಉಳಿದ ಕೆಲಸವನ್ನು ಒಂದೋ ಸಹಕಾರಿ ಸಂಸ್ಥೆಗಳು ಮಾಡುತ್ತವೆ ಇಲ್ಲವೇ ನಮ್ಮ ರೈತ ಸಹೋದರರು ಮತ್ತು ಸಹೋದರಿಯರು ಮಾಡುತ್ತಾರೆ. ಅಂಜಾರ್ ನಲ್ಲಿರುವ ಸರ್ಹಾದ್ ಡೈರಿ ಇದಕ್ಕೆ ಉದಾಹರಣೆ. ಕಚ್ ನಲ್ಲಿ ಡೈರಿಯನ್ನು ಹೊಂದುವ ನನ್ನ ಆಶಯವನ್ನು ವ್ಯಕ್ತಪಡಿಸಿದಾಗ ಜನರು ನಕಾರಾತ್ಮಕವಾಗಿ ಮಾತನಾಡಿದ್ದನ್ನು ನಾನು ಇನ್ನೂ ನೆನಪಿನಲ್ಲಿಟ್ಟಿದ್ದೇನೆ. ಎಲ್ಲರೂ ಇದರಿಂದ ರೋಮಾಂಚಿತರಾಗುವುದಿಲ್ಲ. ನಾನು ಹೇಳಿದೆ, ಸಣ್ಣ ಮಟ್ಟದಲ್ಲಿ ಆರಂಭಿಸೋಣ ಮತ್ತು ಆ ಬಳಿಕ ನೋಡೋಣ ಎಂಬುದಾಗಿ. ಮತ್ತು ಈಗ ನೋಡಿ ಆ ಸಣ್ಣ ಉಪಕ್ರಮದ ವಿಸ್ತರಣೆಯನ್ನು. ಈ ಡೈರಿಯು ಪಶುಪಾಲಕರ ಜೀವನವನ್ನು ಬದಲಾಯಿಸುವಲ್ಲಿ ಪ್ರಮುಖ ದೊಡ್ಡ ಪಾತ್ರವನ್ನು ವಹಿಸಿದೆ. ಕೆಲವು ವರ್ಷಗಳ ಹಿಂದಿನವರೆಗೂ ಗಾಂಧೀನಗರದ ಡೈರಿಗಳಿಗೆ ಬಹಳ ಸಣ್ಣ ಪ್ರಮಾಣದ ಹಾಲನ್ನು ಸಂಸ್ಕರಣೆಗೆ ತರಲಾಗುತ್ತಿತ್ತು. ಆದರೆ ಈಗ ಅದೇ ಹಾಲನ್ನು ಅಂಜಾರ್ ಡೈರಿಯ ಸ್ಥಾವರದಲ್ಲಿ ಈಗ ಸಂಸ್ಕರಣೆ ಮಾಡಲಾಗುತ್ತಿದೆ. ರೈತರು ದಿನನಿತ್ಯ ಸಾಗಾಣಿಕೆಗಾಗಿ ಖರ್ಚು ಮಾಡುತಿದ್ದ ಲಕ್ಷಾಂತರ ರೂಪಾಯಿಗಳನ್ನು ಉಳಿತಾಯ ಮಾಡುತ್ತಿದ್ದಾರೆ. ಸರ್ಹಾದ್ ಡೈರಿಯ ಸ್ವಯಂಚಾಲಿತ ಸ್ಥಾವರದ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಬರಲಿರುವ ದಿನಗಳಲ್ಲಿ ಈ ಡೈರಿ ಪ್ರತೀ ದಿನ ಎರಡು ಲಕ್ಷ ಲೀಟರಿಗೂ ಅಧಿಕ ಹಾಲನ್ನು ಸಂಸ್ಕರಿಸಲಿದೆ. ಹತ್ತಿರದ ಜಿಲ್ಲೆಗಳಲ್ಲಿರುವ ಪಶುಪಾಲಕರಿಗೂ ಇದರಿಂದ ಬಹಳ ಲಾಭವಾಗಲಿದೆ. ಅಷ್ಟು ಮಾತ್ರವಲ್ಲ, ಮೊಸರು, ಮಜ್ಜಿಗೆ ಮತ್ತು ಸಂಸ್ಕರಿತ ಹಾಲಿನಂತಹ ಹಲವಾರು ಮೌಲ್ಯವರ್ಧಿತ ಹೈನು ಉತ್ಪನ್ನಗಳೂ ತಯಾರಾಗಲಿವೆ.

ಸ್ನೇಹಿತರೇ,

ಡೈರಿ ವಲಯದ ಹೈನುಗಾರರಲ್ಲಿ ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಿರುವವರಲ್ಲಿ ಸಣ್ಣ ರೈತರ ಸಂಖ್ಯೆ ಹೆಚ್ಚು. ಕೆಲವರಲ್ಲಿ 3-4 ಅಥವಾ 5-7 ದನಗಳಿರಬಹುದು. ಮತ್ತು ಇಡೀ ದೇಶದಲ್ಲೂ ಇಂತಹದೇ ಸ್ಥಿತಿ ಇದೆ. ಕಚ್ ನ ಬನ್ನಿ ಎಮ್ಮೆಗಳು ವಿಶ್ವದಲ್ಲಿಯೇ ಹೆಸರುವಾಸಿಯಾಗಿವೆ. ಕಚ್ ನಲ್ಲಿ ಉಷ್ಣಾಂಶ 45 ಡಿಗ್ರಿಗೂ ಅಧಿಕವಿದ್ದಾಗ್ಯೂ ಅಥವಾ ಶೂನ್ಯ ಡಿಗ್ರಿಗೂ ಕಡಿಮೆ ಆದಾಗ್ಯೂ ಅವುಗಳು ಆರಾಮವಾಗಿರುತ್ತವೆ. ಅದಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಮತ್ತು ಮೇಯುತ್ತ ಬಹಳ ದೂರ ಹೋಗುವುದರಲ್ಲಿ ಅವುಗಳಿಗೆ ಸಮಸ್ಯೆ ಇಲ್ಲ. ಸರಾಸರಿ ಒಂದು ಎಮ್ಮೆ ಪ್ರತೀ ದಿನ 15 ಲೀಟರ್ ಹಾಲು ನೀಡುತ್ತದೆ. ಮತ್ತು ಇದರಿಂದಾಗಿ ವಾರ್ಷಿಕ ಆದಾಯ ಸುಮಾರು 2-3 ಲಕ್ಷ ರೂಪಾಯಿಯಾಗುತ್ತದೆ. ಒಂದು ಬನ್ನಿ ಎಮ್ಮೆಯನ್ನು ಇತ್ತೀಚೆಗೆ 5 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯಕ್ಕೆ ಮಾರಾಟ ಮಾಡಲಾಯಿತು ಎಂದು ನನಗೆ ತಿಳಿಸಲಾಗಿದೆ. ದೇಶದ ಇತರ ಭಾಗಗಳಿಂದಲೂ ಜನರು ಬನ್ನಿ ಎಮ್ಮೆಯ ದರವನ್ನು ಕೇಳಿ ಅಚ್ಚರಿಪಡುತ್ತಾರೆ, ಯಾಕೆಂದರೆ ಆ ಬೆಲೆಯಲ್ಲಿ ಎರಡು ಸಣ್ಣ ಕಾರುಗಳನ್ನು ಖರೀದಿಸಬಹುದು.

ಸ್ನೇಹಿತರೇ,

ಬನ್ನಿ ಎಮ್ಮೆಗೆ ರಾಷ್ಟ್ರೀಯ ಮಹತ್ವವನ್ನು 2010ರಲ್ಲಿ ನೀಡಲಾಗಿದೆ. ಸ್ವಾತಂತ್ರ್ಯದ ಬಳಿಕ ರಾಷ್ಟ್ರ ಮಟ್ಟದಲ್ಲಿ ಇಂತಹ ಮಾನ್ಯತೆ ಪಡೆದ ಮೊದಲ ತಳಿ ಇದಾಗಿದೆ.

ಸ್ನೇಹಿತರೇ,

ಬನ್ನಿ ಎಮ್ಮೆಗಳ ಹೈನು ವ್ಯಾಪಾರ ಮತ್ತು ಇಲ್ಲಿರುವ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ದೇಶದ ಉಳಿದ ಭಾಗಗಳಲ್ಲಿಯೂ ಖಾಸಗಿ ಮತ್ತು ಸಹಕಾರಿ ವಲಯಗಳಲ್ಲಿ ಹಾಲು ಉತ್ಪಾದನೆ ಮತ್ತು ವ್ಯವಹಾರ ಅತ್ಯುತ್ತಮ ಪೂರೈಕೆ ಸರಪಳಿಯನ್ನು ಒಗ್ಗೂಡಿ ನಿರ್ಮಾಣ ಮಾಡಿವೆ. ಅದೇ ರೀತಿಯಲ್ಲಿ ಸರಕಾರ ಹಣ್ಣುಗಳು ಮತ್ತು ತರಕಾರಿಗಳ ವ್ಯಾಪಾರದಲ್ಲಿ ನೇರ ಮಧ್ಯಪ್ರವೇಶವನ್ನು ಹೊಂದಿರುವುದಿಲ್ಲ.

ಸ್ನೇಹಿತರೇ,

ದಿಲ್ಲಿಯಲ್ಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ರೈತರನ್ನು ದಾರಿ ತಪ್ಪಿಸಲು ವ್ಯಾಪಕವಾದ ಒಳಸಂಚು ನಡೆಯುತ್ತಿರುವುದರಿಂದ ಈ ಉದಾಹರಣೆಗಳನ್ನು ನಾನು ವಿವರವಾಗಿ ಹಂಚಿಕೊಳ್ಳುತ್ತಿದ್ದೇನೆ. ಹೊಸ ಕೃಷಿ ಸುಧಾರಣೆಗಳ ಬಳಿಕ ಇತರರು ಕೃಷಿಕರ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಾರೆ ಎಂದವರಿಗೆ ಹೇಳಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಾನು ನಿಮ್ಮಿಂದ ತಿಳಿಯಚ್ಛಿಸುತ್ತೇನೆ, ಯಾವುದಾದರೂ ಡೈರಿ ಮಾಲಿಕ ನಿಮ್ಮೊಂದಿಗೆ ಹಾಲಿಗಾಗಿ ಒಪ್ಪಂದ ಮಾಡಿಕೊಂಡಿದ್ದರೆ, ಆತ ನಿಮ್ಮ ದನವನ್ನು ಎಳೆದೊಯ್ಯುತ್ತಾನೆಯೇ. ಹಣ್ಣುಗಳು ಮತ್ತು ತರಕಾರಿಗಳ ವ್ಯಾಪಾರ ಮಾಡುವವರ ಭೂಮಿಯನ್ನು ಕಸಿಯಲಾಗುತ್ತದೆಯೇ?.

ಸ್ನೇಹಿತರೇ,

ನಮ್ಮ ದೇಶದಲ್ಲಿ ಹೈನು ಉದ್ಯಮದ ಕೊಡುಗೆ ಕೃಷಿ ವಲಯದ ಆರ್ಥಿಕತೆಯಲ್ಲಿ ಶೇಖಡಾ 25 ಕ್ಕಿಂತ ಅಧಿಕ.

ಈ ಕೊಡುಗೆಯ ಮೌಲ್ಯ ಸುಮಾರು ಎಂಟು ಲಕ್ಷ ಕೋ.ರೂಪಾಯಿಗಳಷ್ಟು. ಹಾಲು ಉತ್ಪಾದನೆಯ ಒಟ್ಟು ಮೌಲ್ಯ ಬೇಳೆ –ಕಾಳುಗಳ ಒಟ್ಟು ಮೌಲ್ಯಕ್ಕಿಂತ ಅಧಿಕ. ಈ ವ್ಯವಸ್ಥೆಯಲ್ಲಿ, ಹೈನುಗಾರರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಇಂದು, ಇಂತಹ ಸ್ವಾತಂತ್ರ್ಯವನ್ನು ಬೇಳೆ ಕಾಳುಗಳನ್ನು ಉತ್ಪಾದಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೃಷಿಕರಿಗೆ ಯಾಕೆ ಕೊಡಬಾರದು ಎಂದು ದೇಶ ಕೇಳುತ್ತಿದೆ.

ಸ್ನೇಹಿತರೇ,

ಇತ್ತೀಚಿನ ಕೃಷಿ ಸುಧಾರಣೆಗಳ ಬೇಡಿಕೆ ಬಹಳ ವರ್ಷಗಳ ಹಿಂದಿನಿಂದಲೇ ಇತ್ತು. ಹಲವಾರು ರೈತ ಸಂಘಟನೆಗಳು ತಮ್ಮ ಉತ್ಪನ್ನಗಳನ್ನು ತಮಗೆ ಬೇಕಾದಲ್ಲಿ ಮಾರಾಟ ಮಾಡಲು ಅವಕಾಶ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದವು. ವಿಪಕ್ಷದಲ್ಲಿರುವವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ, ಅವರು ಅಧಿಕಾರದಲ್ಲಿದ್ದಾಗ ಈ ಕೃಷಿ ಸುಧಾರಣೆಗಳ ಪರವಾಗಿದ್ದರು. ಆದರೆ ಅವರು ಅಧಿಕಾರದಲ್ಲಿದ್ದಾಗ ನಿರ್ಧಾರಗಳನ್ನು ಕೈಗೊಳ್ಳಲಾರದೇ ಹೋದರು. ಮತ್ತು ರೈತರಿಗೆ ಸುಳ್ಳು ಭರವಸೆಗಳನ್ನು ನೀಡಿದರು. ಇಂದು ದೇಶವು ಈ ಚಾರಿತ್ರಿಕ ಕ್ರಮವನ್ನು ಕೈಗೊಳ್ಳುತ್ತಿರುವಾಗ, ಈ ಜನರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ನನ್ನ ರೈತ ಸಹೋದರರಿಗೆ ಮತ್ತು ಸಹೋದರಿಯರಿಗೆ ನಾನಿದನ್ನು ಪುನರುಚ್ಚರಿಸುತ್ತೇನೆ ಏನೆಂದರೆ ಸರಕಾರವು ನಿಮ್ಮ ಕಳವಳಗಳನ್ನು ಪರಿಹರಿಸಲು ಸದಾ ಸಿದ್ಧವಿದೆ. ರೈತರ ಕಲ್ಯಾಣ ನಮ್ಮ ಸರಕಾರದ ಅತ್ಯಂತ ಆದ್ಯತೆಯ ವಿಷಯವಾಗಿದೆ. ಕೃಷಿ ವೆಚ್ಚ ಕಡಿಮೆಯಾಗಬೇಕು, ರೈತರಿಗೆ ಹೊಸ ಆಯ್ಕೆಗಳು ಲಭ್ಯವಾಗಬೇಕು, ಅವರ ಆದಾಯ ಹೆಚ್ಚಬೇಕು, ಮತ್ತು ಅವರ ಸಮಸ್ಯೆಗಳು ಕಡಿಮೆಯಾಗಬೇಕು ಎಂಬುದು ನಮ್ಮ ಇರಾದೆಯಾಗಿದೆ. ವದಂತಿಗಳನ್ನು, ಗಾಳಿ ಸುದ್ದಿಗಳನ್ನು ಹರಡುತ್ತಿರುವ ಶಕ್ತಿಗಳನ್ನು ಮತ್ತು ನಮ್ಮ ಸರಕಾರದ ಪ್ರಾಮಾಣಿಕ ಉದ್ದೇಶಗಳಿಗೆ ಮತ್ತು ಪ್ರಯತ್ನಗಳಿಗೆ ದೇಶಾದ್ಯಂತ ರೈತರು ಆಶೀರ್ವಾದ ಮಾಡುತ್ತಿರುವಾಗಲೂ ಅದರಲ್ಲಿ ರಾಜಕೀಯ ಮಾಡುತ್ತಿರುವ ಶಕ್ತಿಗಳನ್ನು ನಮ್ಮ ರೈತರು ವಿಫಲಗೊಳಿಸುತ್ತಾರೆ ಎಂಬ ವಿಶ್ವಾಸ ನನ್ನದು.

ಸಹೋದರರೇ ಮತ್ತು ಸಹೋದರಿಯರೇ,

ಇದರೊಂದಿಗೆ, ನಾನು ಮತ್ತೊಮ್ಮೆ ಕಚ್ ನ್ನು ಅಭಿನಂದಿಸುತ್ತೇನೆ. ನಾನು ಹಬ್ಬಗಳ ಬಗ್ಗೆ ವಿಶೇಷ ಆಕರ್ಷಣೆ ಹೊಂದಿದ್ದೇನೆ. ಕಚ್ ನ ಪರಂಪರೆ ಮತ್ತು ಸಂಸ್ಕೃತಿಗೆ ನಮಿಸುವ ಹಬ್ಬದಲ್ಲಿ ನಾನು ಭಾಗಿಯಾಗುತ್ತೇನೆ. ನಾನು ಆ ಸಂದರ್ಭವನ್ನು ಮತ್ತೆ ಅನುಭವಿಸಲು ಇಚ್ಛಿಸುತ್ತೇನೆ. ವಿಶ್ವ ಖ್ಯಾತಿಯ ಬಿಳಿ ಮರುಭೂಮಿಯ ನೆನಪುಗಳನ್ನು ನಾನು ನನ್ನೊಂದಿಗೆ ದಿಲ್ಲಿಗೆ ಕೊಂಡೊಯ್ಯುತ್ತೇನೆ. ಕಚ್ ಪ್ರಗತಿಯ ಹೊಸ ಎತ್ತರಗಳನ್ನು ಏರಲಿ. ಇದು ನನ್ನ ಸದಾಶಯ. ಮತ್ತೊಮ್ಮೆ, ನಾನು ನಿಮಗೆಲ್ಲಾ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಬಹಳ ಬಹಳ ಧನ್ಯವಾದಗಳು!!

***


(Release ID: 1681443) Visitor Counter : 304