ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ಭಾರತೀ ಉತ್ಸವ 2020 ರಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
11 DEC 2020 5:32PM by PIB Bengaluru
ಮುಖ್ಯಮಂತ್ರಿ ಶ್ರೀ ಪಳನಿಸಾಮಿ ಜೀ,
ಸಚಿವರಾದ ಶ್ರೀ ಕೆ. ಪಾಂಡಿರಾಜನ್ ಜೀ,
ವನವಿಲ್ ಸಾಂಸ್ಕೃತಿಕ ಕೇಂದ್ರದ ಸ್ಥಾಪಕರಾದ ಶ್ರೀ ಕೆ. ರವಿ, ಗೌರವಾನ್ವಿತ ಗಣ್ಯರೇ,
ಸ್ನೇಹಿತರೇ!
ವಣಕ್ಕಂ!
ನಮಸ್ತೇ!
ಶ್ರೇಷ್ಟ ವ್ಯಕ್ತಿತ್ವದ ಭಾರತೀಯಾರ್ ಅವರಿಗೆ ಅವರ ಜಯಂತಿಯಂದು ಗೌರವಾರ್ಪಣೆ ಮಾಡಿ ನಾನು ಆರಂಭಿಸುತ್ತೇನೆ. ಇಂತಹ ವಿಶೇಷ ದಿನದಂದು, ಅಂತಾರಾಷ್ಟ್ರೀಯ ಭಾರತೀ ಉತ್ಸವದಲ್ಲಿ ಪಾಲ್ಗೊಳ್ಳಲು ನಾನು ಬಹಳ ಸಂತೋಷಪಡುತ್ತೇನೆ. ಶ್ರೇಷ್ಟ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜೀ ಅವರಿಗೆ ಈ ವರ್ಷದ ಭಾರತೀ ಪ್ರಶಸ್ತಿಯನ್ನು ಪ್ರದಾನ ಮಾಡುವುದೂ ನನಗೆ ಸಂತೋಷದ ಸಂಗತಿಯಾಗಿದೆ. ವಿಶ್ವನಾಥನ್ ಜೀ ಅವರು ತಮ್ಮ ಇಡೀ ಬದುಕನ್ನು ಭಾರತೀ ಅವರ ಕೃತಿಗಳ ಬಗ್ಗೆ ಸಂಶೋಧನೆ ಮಾಡಲು ಅರ್ಪಿಸಿಕೊಂಡವರು. 86ನೇ ವಯಸ್ಸಿನಲ್ಲಿಯೂ ಸಂಶೋಧನೆಯನ್ನು ಸಕ್ರಿಯವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಸುಬ್ರಮಣ್ಯ ಭಾರತಿ ಅವರನ್ನು ಹೇಗೆ ವರ್ಣಿಸಬೇಕು, ವಿವರಿಸಬೇಕು ಎಂಬುದು ಬಹಳ ಕಠಿಣವಾದ ಪ್ರಶ್ನೆ. ಭಾರತೀಯಾರ್ ಅವರನ್ನು ಯಾವುದೇ ಏಕ ವೃತ್ತಿಯೊಂದಿಗೆ ಗುರುತಿಸಲಾಗದು. ಅಥವಾ ಏಕ ಆಯಾಮದಲ್ಲಿ ನಿರ್ವಚಿಸಲಾಗದು. ಅವರು ಕವಿಯಾಗಿದ್ದರು, ಬರಹಗಾರರು, ಸಂಪಾದಕರು, ಪತ್ರಕರ್ತರು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಮಾನವತಾವಾದಿಗಳಾಗಿದ್ದರು ಮತ್ತು ಅವುಗಳನ್ನು ಮೀರಿದ ವ್ಯಕ್ತಿತ್ವವುಳ್ಳವರು.
ಅವರ ಕೆಲಸಗಳನ್ನು, ಕವನಗಳನ್ನು, ಅವರ ತತ್ವಜ್ಞಾನವನ್ನು ಮತ್ತು ಅವರ ಬದುಕನ್ನು ನೋಡಿದ ಯಾರೇ ಆದರೂ ಬೆರಗಾಗುತ್ತಾರೆ. ಅವರು ವಾರಾಣಾಸಿ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಈ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಗೌರವ ನನ್ನದು. ಅವರ ಸಂಗ್ರಹಿತ ಕೃತಿಗಳನ್ನು 16 ಸಂಪುಟಗಳಲ್ಲಿ ಪ್ರಕಟಿಸಿರುವುದನ್ನು ನಾನು ಇತ್ತೀಚೆಗೆ ನೋಡಿದೆ. 39 ವರ್ಷಗಳ ಸಣ್ಣ ಬದುಕಿನಲ್ಲಿ ಅವರು ಬಹಳಷ್ಟನ್ನು ಬರೆದರು, ಬಹಳಷ್ಟು ಕೆಲಸಗಳನ್ನು ಮಾಡಿದರು ಮತ್ತು ಬಹಳಷ್ಟನ್ನು ಸಾಧಿಸಿದರು. ಅವರ ಬರಹಗಳು ಭವ್ಯ ಭವಿಷ್ಯದತ್ತ ನಮ್ಮನ್ನು ಮಾರ್ಗದರ್ಶನ ಮಾಡಿ ಕೊಂಡೊಯ್ಯಬಲ್ಲ ದಾರಿ ದೀಪಗಳು.
ಸ್ನೇಹಿತರೇ,
ಸುಬ್ರಮಣ್ಯ ಭಾರತಿಯವರಿಂದ ನಮ್ಮ ಇಂದಿನ ಯುವಕರು ಕಲಿಯಬೇಕಾಗಿರುವುದು ಬಹಳಷ್ಟಿದೆ. ಅದರಲ್ಲಿ ಬಹಳ ಮುಖ್ಯವಾದುದು ಧೈರ್ಯ. ಸುಬ್ರಮಣ್ಯ ಭಾರತಿ ಅವರಿಗೆ ಭಯ ಎಂಬುದೇ ಗೊತ್ತಿರಲಿಲ್ಲ. ಅವರು ಹೇಳಿದ್ದಾರೆ:
அச்சமில்லை அச்சமில்லை அச்சமென்பதில்லையே
இச்சகத்து ளோரெலாம் எதிர்த்து நின்ற போதினும்,
அச்சமில்லை அச்சமில்லை அச்சமென்பதில்லையே
ಇದರ ಅರ್ಥ: ಭಯ ನನಗಿಲ್ಲ, ಭಯ ನನಗಿಲ್ಲ, ಇಡೀ ವಿಶ್ವವೇ ನನಗೆ ವಿರುದ್ಧವಾಗಿದ್ದರೂ. ನಾನು ಇಂತಹ ಸ್ಪೂರ್ತಿಯನ್ನು ಇಂದು ಯುವ ಭಾರತದಲ್ಲಿ ಕಾಣುತ್ತಿದ್ದೇನೆ. ಅವರು ಅನ್ವೇಷಣೆಯ ಮತ್ತು ಪ್ರಾವೀಣ್ಯತೆಯ ಮುಂಚೂಣಿಯಲ್ಲಿದ್ದಾಗ ನಾನು ಅವರಲ್ಲಿ ಈ ಸ್ಪೂರ್ತಿಯನ್ನ್ನು ಕಾಣುತಿದ್ದೇನೆ. ಭಾರತದ ನವೋದ್ಯಮ ಅವಕಾಶ ಮಾನವತೆಗೆ ಹೊಸತೇನನ್ನಾದರೂ ನೀಡುವ ಭಯರಹಿತ ಯುವಜನತೆಯಿಂದ ತುಂಬಿದೆ. ಇಂತಹ “ಮಾಡಬಹುದು” ಎಂಬ ಸ್ಪೂರ್ತಿ ನಮ್ಮ ದೇಶಕ್ಕೆ ಮತ್ತು ನಮ್ಮ ಭೂಗ್ರಹಕ್ಕೆ ಅದ್ಭುತವಾದುದನ್ನು ತರಬಲ್ಲದು.
ಸ್ನೇಹಿತರೇ,
ಭಾರತೀಯಾರ್ ಅವರು ಪ್ರಾಚೀನತೆ ಮತ್ತು ಆಧುನಿಕತೆಯ ಆರೋಗ್ಯಪೂರ್ಣ ಮಿಶ್ರಣದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಅವರು ನಮ್ಮ ಬೇರುಗಳ ಜೊತೆ ಸಂಪರ್ಕ ಉಳಿಸಿಕೊಂಡು, ಜೊತೆಗೆ ಭವಿಷ್ಯದತ್ತ ಕಣ್ಣು ನೆಟ್ಟುಕೊಂಡು ಜ್ಞಾನವನ್ನರಸುವವರಾಗಿದ್ದರು, ಅವರು ತಮಿಳು ಭಾಷೆ ಮತ್ತು ಭಾರತ ಮಾತೆಯನ್ನು ತಮ್ಮ ಎರಡು ಕಣ್ಣುಗಳೆಂಬಂತೆ ಪರಿಗಣಿಸಿದ್ದರು. ಅವರು ಪ್ರಾಚೀನ ಭಾರತದ ಶ್ರೇಷ್ಟತೆಯನ್ನು, ವೇದಗಳ ಮತ್ತು ಉಪನಿಷತ್ ಗಳ ಶ್ರೇಷ್ಟತೆಯನ್ನು, ಸಾರುವ ಗೀತೆಗಳನ್ನು ಹಾಡಿದ್ದರು. ನಮ್ಮ ಸಂಸ್ಕೃತಿ, ಪರಂಪರೆ, ಮತ್ತು ನಮ್ಮ ಹಿಂದಿನ ಕಾಲದ ವೈಭವದ ಕುರಿತೂ ಅವರ ಹಾಡುಗಳಿದ್ದವು. ಆದರೆ ಅವರು ಹಿಂದಿನ ವೈಭವದ ರಮಾರಮಣೀಯತೆಯಲ್ಲಿ ಬದುಕಿದರೆ ಸಾಲದು ಎಂಬ ಎಚ್ಚರಿಕೆಯನ್ನೂ ನಮಗೆ ನೀಡಿದ್ದರು. ಪ್ರಗತಿಯತ್ತ ಮುನ್ನಡೆಯಲು ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದೂ ಅವರು ಹೇಳಿದ್ದರು.
ಸ್ನೇಹಿತರೇ,
ಮಹಾಕವಿ ಭಾರತೀಯಾರ್ ಅವರ ಪ್ರಗತಿಯ ವ್ಯಾಖ್ಯೆಯಲ್ಲಿ ಮಹಿಳೆಯರಿಗೆ ಬಹಳ ಮಹತ್ವದ ಪಾತ್ರವಿದೆ, ಅದರಲ್ಲಿ ಪ್ರಮುಖವಾದ ದೃಷ್ಟಿಕೋನವೆಂದರೆ ಸ್ವತಂತ್ರ ಮತ್ತು ಸಶಕ್ತ ಮಹಿಳೆಯರಿಗೆ ಸಂಬಂಧಿಸಿದ್ದು. ಮಹಾಕವಿ ಭಾರತೀಯಾರ್ ಅವರು ಬರೆದಿದ್ದಾರೆ, ಜನರನ್ನು ಕಣ್ಣಿನಲ್ಲಿ ನೋಡುತ್ತಾ ಮಹಿಳೆಯರು ತಲೆ ಎತ್ತಿ ನಡೆಯಬೇಕು ಎಂದು. ಈ ಚಿಂತನೆಯಿಂದ ನಾವು ಪ್ರೇರಣೆ ಪಡೆದು, ಮಹಿಳಾ ನಾಯಕತ್ವ ಕೇಂದ್ರಿತ ಅಭಿವೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ಸರಕಾರದ ಕಾರ್ಯಚಟುವಟಿಕೆಯ ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಯರ ಘನತೆಗೆ ಮಹತ್ವ ನೀಡಲಾಗಿದೆ ಎಂಬುದು ನಿಮ್ಮನ್ನು ಸಂತೋಷಗೊಳಿಸುವ ಸಂಗತಿಯಾಗಿದೆ.
ಇಂದು ಸುಮಾರು 15 ಕೋಟಿ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನಾದಂತಹ ಯೋಜನೆಗಳಿಂದ ಹಣಕಾಸು ಒದಗಿಸಲಾಗಿದೆ. ಅವರು ತಮ್ಮ ತಲೆ ಎತ್ತಿ ನಡೆಯುತ್ತಿದ್ದಾರೆ, ನಮ್ಮನ್ನು ಕಣ್ಣಿನಲ್ಲಿ ನೋಡುತ್ತಿದ್ದಾರೆ ಮತ್ತು ನಮಗೆ ತಾವು ಹೇಗೆ ಸ್ವಾವಲಂಬಿಗಳಾಗುತ್ತಿದ್ದೇವೆ ಎಂಬುದನ್ನು ಹೇಳುತ್ತಿದ್ದಾರೆ.
ಇಂದು ಮಹಿಳೆಯರು ನಮ್ಮ ಸಶಸ್ತ್ರ ಪಡೆಗಳ ಭಾಗವಾಗಿದ್ದಾರೆ, ಅವರಿಗೆ ಖಾಯಂ ಕಮಿಶನಿಂಗ್ ಒದಗಿಸಲಾಗಿದೆ. ಅವರು ತಮ್ಮ ತಲೆ ಎತ್ತಿ ನಡೆಯುತ್ತಿದ್ದಾರೆ, ನಮ್ಮನ್ನು ಕಣ್ಣಿನಲ್ಲಿ ನೋಡುತ್ತಿದ್ದಾರೆ ಮತ್ತು ದೇಶವು ಸುರಕ್ಷಿತ ಕೈಗಳಲ್ಲಿದೆ ಎಂಬ ವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತಿದ್ದಾರೆ. ಇಂದು ಬಡವರಲ್ಲಿ ಅತ್ಯಂತ ಬಡ ಮಹಿಳೆ, ಸುರಕ್ಷಿತ ನೈರ್ಮಲ್ಯದ ಕೊರತೆಯನ್ನು ಅನುಭವಿಸುತ್ತಿದ್ದವರು ಈಗ ಸುಮಾರು 10 ಕೋಟಿಗೂ ಅಧಿಕ ಸುರಕ್ಷಿತ ಮತ್ತು ನೈರ್ಮಲ್ಯ ಕಾಪಾಡುವಂತಹ ಶೌಚಾಲಯಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಇನ್ನು ಅವರು ಇಂತಹ ಸಮಸ್ಯೆಗಳನ್ನು ಎದುರಿಸುವ ಅಗತ್ಯ ಇಲ್ಲ. ಅವರು ಮಹಾಕವಿ ಭಾರತೀಯಾರ್ ಅವರು ಕಲ್ಪಿಸಿಕೊಂಡಂತೆ ತಮ್ಮ ತಲೆ ಎತ್ತಿ, ಪ್ರತಿಯೊಬ್ಬರನ್ನೂ ಕಣ್ಣಿನಲ್ಲಿ ನೋಡಿ ಮುನ್ನಡೆಯಬಹುದು. ಇದು ನವಭಾರತದ ನಾರೀ ಶಕ್ತಿಯ ಯುಗ. ಅವರು ಅಡೆ ತಡೆಗಳನ್ನು ಮುರಿಯುತ್ತಿದ್ದಾರೆ ಮತ್ತು ಪರಿಣಾಮಗಳನ್ನುಂಟು ಮಾಡುತ್ತಿದ್ದಾರೆ. ಇದು ಸುಬ್ರಮಣ್ಯ ಭಾರತಿ ಅವರಿಗೆ ನವಭಾರತದ ಗೌರವ.
ಸ್ನೇಹಿತರೇ,
ಮಹಾಕವಿ ಭಾರತೀಯಾರ್ ಅವರು ವಿಭಜನೆಗೊಂಡ ಯಾವುದೇ ಸಮಾಜ ಯಶಸ್ಸನ್ನು ಸಾಧಿಸಲು ಶಕ್ತವಾಗಲಾರದು ಎಂಬುದನ್ನುಅರಿತುಕೊಂಡಿದ್ದರು. ಇದೇ ವೇಳೆ ಅವರು ಸಾಮಾಜಿಕ ಅಸಮಾನತೆಯನ್ನು, ಸಾಮಾಜಿಕ ಅನಿಷ್ಟಗಳನ್ನು ಪರಿಹರಿಸದ ರಾಜಕೀಯ ಸ್ವಾತಂತ್ರ್ಯದ ಖಾಲಿತನದ ಬಗ್ಗೆಯೂ ಬರೆದಿದ್ದರು. ಅವರು ಹೇಳಿದ್ದಾರೆ ಮತ್ತು ನಾನು ಅದನ್ನು ಉಲ್ಲೇಖಿಸುತ್ತೇನೆ:
இனியொரு விதி செய்வோம் - அதை
எந்த நாளும் காப்போம்
தனியொரு வனுக்குணவிலை யெனில்
ஜகத்தினை யழித்திடுவோம்
ಇದರರ್ಥ: ಈಗ ನಾವು ಕಾನೂನು ಮಾಡುತ್ತೇವೆ, ಮತ್ತು ಅದನ್ನು ಎಂದೆಂದೂ ಜಾರಿಗೆ ತರುತ್ತೇವೆ. ಯಾರಾದರೊಬ್ಬರು ಹಸಿವೆಯಿಂದ ಬಳಲುತ್ತಿದ್ದರೆ ವಿಶ್ವವು ಆ ಹಾನಿಯ, ನೋವಿನ ಪ್ರಾಯಶ್ಚಿತ್ತ ಮಾಡಬೇಕಾಗುತ್ತದೆ. ಅವರ ಬೋಧನೆಗಳು ನಾವು ಸದಾ ಒಗ್ಗಟ್ಟಾಗಿರುವುದಕ್ಕೆ ಮತ್ತು ಪ್ರತೀ ವ್ಯಕ್ತಿಯೂ, ಅದರಲ್ಲೂ ವಿಶೇಷವಾಗಿ ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ, ಸಶಕ್ತೀಕರಣಕ್ಕೆ ಬದ್ಧತೆಯಿಂದಿರುವುದಕ್ಕೆ ಬಲಿಷ್ಟವಾದ ನೆನಪೋಲೆಗಳಿದ್ದಂತೆ
ಸ್ನೇಹಿತರೇ,
ಭಾರತೀ ಅವರಿಂದ ನಮ್ಮ ಯುವ ಜನತೆ ಕಲಿಯುವುದು ಬಹಳಷ್ಟಿದೆ. ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರೂ ಅವರ ಬರಹಗಳನ್ನು ಓದಬೇಕು ಮತ್ತು ಅದರಿಂದ ಪ್ರೇರಣೆ ಪಡೆಯುವಂತಾಗಬೇಕು ಎಂದು ನಾನು ಆಶಿಸುತ್ತೇನೆ. ಭಾರತೀಯಾರ್ ಅವರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಅದ್ಭುತ ಕಾರ್ಯವನ್ನು ಮಾಡುತ್ತಿರುವ ವನವಿಲ್ ಸಾಂಸ್ಕೃತಿಕ ಕೇಂದ್ರವನ್ನು ನಾನು ಅಭಿನಂದಿಸುತ್ತೇನೆ. ಈ ಉತ್ಸವವು ಭಾರತವನ್ನು ಹೊಸ ಭವಿಷ್ಯದತ್ತ ಮುನ್ನಡೆಸಲು ಸಹಾಯ ಮಾಡುವಂತಹ ಫಲಪ್ರದ ಚರ್ಚೆಗಳನ್ನು ನಡೆಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.
ಧನ್ಯವಾದಗಳು
ನಿಮಗೆ ಬಹಳ ಧನ್ಯವಾದಗಳು.
***
(Release ID: 1680486)
Visitor Counter : 252
Read this release in:
Bengali
,
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam