ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಬುಡಕಟ್ಟು ಸಮುದಾಯದ ಸಬಲೀಕರಣದ ಅವಕಾಶಗಳನ್ನು ಕುರಿತು ಪೆಟ್ರೋಲಿಯಂ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಚರ್ಚೆ
Posted On:
11 DEC 2020 5:15PM by PIB Bengaluru
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ನಿನ್ನೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಸಭೆ ನಡೆಸಿ ಬುಡಕಟ್ಟು ಸಬಲೀಕರಣಕ್ಕಿರುವ ಅವಕಾಶಗಳ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ ಉಪಸ್ಥಿತರಿದ್ದರು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಟ್ರೈಫೆಡ್, ಬುಡಕಟ್ಟು ಸಮುದಾಯದ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ಮತ್ತು ಬುಡಕಟ್ಟು ಜನರ ಸಬಲೀಕರಣಕ್ಕಾಗಿ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಸರ್ಕಾರದ ಇಲಾಖೆಗಳು ಮತ್ತು ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಸಮನ್ವಯ ಮತ್ತು ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸುತ್ತಿದೆ.
ಈ ಸಭೆಯಲ್ಲಿ, ಬುಡಕಟ್ಟು ಜನರ ಅಭಿವೃದ್ಧಿಯ ಗುರಿಯೊಂದಿಗೆ ಸಚಿವಾಲಯಗಳ ಸಾಮಾನ್ಯ ಸಾಮರ್ಥ್ಯ ಮತ್ತು ಪರಿಣತಿಯನ್ನು ಬಳಸಿಕೊಳ್ಳುವ ಸಹಯೋಗದ ಹಲವಾರು ಅಂಶಗಳನ್ನು ಚರ್ಚಿಸಲಾಯಿತು. ಸ್ಥಳೀಯವಾಗಿ ಲಭ್ಯವಿರುವ ರತನ್ಜೋಟ್ (ಉಬ್ಬಿರುವ ರಕ್ತನಾಳಗಳು, ಹಾಸಿಗೆ ಹುಣ್ಣುಗಳು, ಹುಣ್ಣುಗಳು ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸುವ ನೈಸರ್ಗಿಕ ಮೂಲ), ಟೊಮೆಟೊ, ರೇಷ್ಮೆ ಕೃಷಿ ಮುಂತಾದ ಸ್ಥಳೀಯವಾಗಿ ಲಭ್ಯವಿರುವ ಉತ್ಪಾದನೆಗಳಿಗಾಗಿ ಜಾರ್ಖಂಡ್ನ TRIFOOD, ವನಧನ ಕೇಂದ್ರಗಳ ಮೂಲಕ ಬುಡಕಟ್ಟು ಅಭಿವೃದ್ಧಿ ಉದ್ಯಮಶೀಲತೆ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಾರ್ವಜನಿಕ ಉದ್ಯಮಗಳ ಕಾರ್ಪೊರೇಷನ್ ಒಡೆತನದ ಹಾಗೂ ಕಾರ್ಪೊರೇಷನ್ ನಡೆಸುವ ಆವರಣಗಳಲ್ಲಿ ಟ್ರೈಬ್ಸ್ ಇಂಡಿಯಾ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅರ್ಜುನ್ ಮುಂಡಾ ಅವರು ಟ್ರೈಬ್ಸ್ ಇಂಡಿಯಾದ ಸುಂದರವಾದ ಕರಕುಶಲ ಮುಖಗವಸುಗಳನ್ನು ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಉಡುಗೊರೆಯನ್ನು ಸ್ವೀಕರಿಸಿದ ಶ್ರೀ ಪ್ರಧಾನ್, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆಯ ಭಾಗವಾಗಿ ಈ ಕರಕುಶಲ ಮುಖಗವಸುಗಳು ಪ್ರತಿಯೊಬ್ಬ ಭಾರತೀಯರನ್ನು ತಲುಪಬೇಕು ಎಂದರು.
ಬುಡಕಟ್ಟು ಕಲ್ಯಾಣ ಮತ್ತು ಅಭಿವೃದ್ಧಿಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಟ್ರೈಫೆಡ್, ಬುಡಕಟ್ಟು ಜನಾಂಗದವರಿಗೆ ಸುಸ್ಥಿರ ಜೀವನೋಪಾಯ ಮತ್ತು ಆದಾಯದ ಅವಕಾಶಗಳನ್ನು ಸುಧಾರಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ, ಆಯುಷ್ ಸಚಿವಾಲಯದ ಐಸಿಎಆರ್ ಸೇರಿದಂತೆ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಪರಿಣಿತ ಸಂಸ್ಥೆಗಳೊಂದಿಗೆ ಸಮನ್ವುಯ ಸಾಧಿಸುತ್ತಿದೆ. ಸಮನ್ವಯವು ಅಭಿವೃದ್ಧಿಯ ವಿವಿಧ ಆಯಾಮಗಳಲ್ಲಿರುತ್ತದೆ. ಬುಡಕಟ್ಟು ಜೀವನೋಪಾಯ ಕಾರ್ಯಕ್ರಮದೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಸಣ್ಣ ಉದ್ಯಮಶೀಲತೆ ಕಾರ್ಯಕ್ರಮವನ್ನು ವಿಸ್ತರಿಸಲು ಟ್ರೈಫೆಡ್ ಯೋಜಿಸಿದೆ. ರಾಷ್ಟ್ರಮಟ್ಟದ ಉಪಕ್ರಮಗಳಾದ “ಆತ್ಮನಿರ್ಭರ ಅಭಿಯಾನ’, “ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ”ಮತ್ತು ಸಚಿವಾಲಯಗಳ ಇತರ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಈ ಸಹಯೋಗದ ಯಶಸ್ವಿ ಅನುಷ್ಠಾನ ಮತ್ತು ಇನ್ನೂ ಅನೇಕ ಮುಂಬರುವ ಸಮನ್ವಯಗಳು, ದೇಶಾದ್ಯಂತ ಬುಡಕಟ್ಟು ಜನರ ಜೀವನ ಮತ್ತು ಜೀವನೋಪಾಯಗಳ ಸಂಪೂರ್ಣ ಪರಿವರ್ತನೆಗೆ ಕಾರಣವಾಗುತ್ತವೆ. ಎಂದು ಟ್ರೈಫೆಡ್ ಆಶಿಸಿದೆ.
***
(Release ID: 1680213)
Visitor Counter : 185