ಗೃಹ ವ್ಯವಹಾರಗಳ ಸಚಿವಾಲಯ
ವಾರ್ಷಿಕ ಡಿಜಿಪಿ/ ಐಜಿಪಿಗಳ ಸಮಾವೇಶದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಷಣ
ವರ್ಚುವಲ್ ರೂಪದಲ್ಲಿ ಆಯೋಜಿಸಲಾಗಿದ್ದ ಮೊದಲ ಸಮಾವೇಶ
ಹಿಂದಿನ ಸಮಾವೇಶಗಳ ಕ್ರಿಯಾ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಭಯೋತ್ಪಾದನೆ ವಿರುದ್ಧ ಶೂನ್ಯ ಸಂಯಮ ಕಾಯ್ದುಕೊಳ್ಳಬೇಕು ಎಂದು ಗೃಹ ಸಚಿವರ ಪ್ರತಿಪಾದನೆ; ನಾಗರಿಕರ ಘನತೆ ಮತ್ತು ಸುರಕ್ಷತೆ ಖಾತ್ರಿಗೆ ಒತ್ತು ನೀಡಲು ಕರೆ
50 ಪೊಲೀಸರಿಗೆ ಭಾರತೀಯ ಪೊಲೀಸ್ ಪದಕ ಪ್ರದಾನ ಮಾಡಿದ ಕೇಂದ್ರ ಗೃಹ ಸಚಿವರು
ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಭದ್ರತಾ ಸಂಸ್ಥೆಗಳು ಸಮನ್ವಯದ ಧೋರಣೆ ಅನುಸರಿಸಲು ಶ್ರೀ ಅಮಿತ್ ಷಾ ನಿರ್ದೇಶನ
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಪೊಲೀಸರ ಪಾತ್ರ ಮತ್ತು ಸುರಕ್ಷಿತ ಶಿಷ್ಟಾಚಾರ ಪಾಲನೆಯಲ್ಲಿ ಪೊಲೀಸರ ಕಾರ್ಯವೈಖರಿ ಕುರಿತಂತೆ ಚರ್ಚೆ
Posted On:
02 DEC 2020 10:49PM by PIB Bengaluru
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹಾಗೂ ಪೊಲೀಸ್ ಇನ್ಸಪೆಕ್ಟರ್ ಜನರಲ್ ಗಳ 55ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದರು. ಈ ಸಮಾವೇಶದಲ್ಲಿ ಆಯಾ ರಾಜ್ಯಗಳ ಡಿಜಿಪಿ, ಐಜಿಪಿಗಳು ಮತ್ತು ಕೇಂದ್ರ ಅರೆ ಮಿಲಿಟರಿ ಪಡೆಗಳ ಮುಖ್ಯಸ್ಥರು ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿ ಗುಪ್ತಚರ ಬ್ಯೂರೋ ವರ್ಚುವಲ್ ರೂಪದಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ. ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದ ಕೇಂದ್ರ ಗೃಹ ಸಚಿವರು 50 ಪೊಲೀಸರಿಗೆ ಭಾರತೀಯ ಪೊಲೀಸ್ ಪದಕವನ್ನು ನೀಡಿದರು ಮತ್ತು ಅವರ ಸಾಧನೆಗಾಗಿ ಅವರನ್ನು ಅಭಿನಂದಿಸಿದರು.
ಉದ್ಘಾಟನಾ ಭಾಷಣದಲ್ಲಿ ಶ್ರೀ ಅಮಿತ್ ಷಾ ಅವರು, ರಾಷ್ಟ್ರೀಯ ಭದ್ರತೆಯ ವಿಚಾರಗಳ ಕುರಿತ ನೀತಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆಯಲ್ಲಿ ಮುಂಚೂಣಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರ ಪಾತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಯೋತ್ಪಾದನೆ ವಿರುದ್ಧ ಶೂನ್ಯ ಸಂಯಮ ಕಾಯ್ದುಕೊಳ್ಳುವಂತೆ ಅವರು ಬಲವಾಗಿ ಪ್ರತಿಪಾದಿಸಿದರು. ಪ್ರಜೆಗಳ ಘನತೆ ಮತ್ತು ಸುರಕ್ಷತೆ ಖಾತ್ರಿಗೆ ಒತ್ತು ನೀಡುವಂತೆ ಪ್ರತಿಪಾದಿಸಿದ ಅವರು, ತುರ್ತು ಸಂದರ್ಭಗಳು ಮತ್ತು ವಿಪತ್ತುಗಳನ್ನು ಎದುರಿಸಲು ಪೊಲೀಸರ ಸಾಮರ್ಥ್ಯವೃದ್ಧಿಗೆ ಪ್ರಾಮುಖ್ಯತೆ ನೀಡುವುದನ್ನು ಒತ್ತಿ ಹೇಳಿದರು. ಭದ್ರತಾ ಸಂಸ್ಥೆಗಳು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ ಅವರು, ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸುರಕ್ಷಿತ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಧನೆಗೆ ಮುಂದಾಗುವಂತೆ ಕರೆ ನೀಡಿದರು.
ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವರ್ಚುವಲ್ ರೂಪದಲ್ಲಿ ಸಮಾವೇಶಕ್ಕೆ ಭಾಗವಹಿಸಿ, ಇಂದಿನ ಸಮ್ಮೇಳನದ ಅಂಶಗಳನ್ನು ಆಧರಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಆಂತರಿಕ ಭದ್ರತಾ ಸ್ಥಿತಿಗತಿ ಕುರಿತು ಪ್ರಧಾನಮಂತ್ರಿ ಅವರಿಗೆ ಮತ್ತು ಕೇಂದ್ರ ಗೃಹ ಸಚಿವರಿಗೆ ವಿವರಿಸಲಾಯಿತು. ಹೆಚ್ಚಿನ ಜನಸ್ನೇಹಿ ಉಪಕ್ರಮಗಳೊಂದಿಗೆ ಒಟ್ಟಾರೆ ಭದ್ರತಾ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಚರ್ಚೆಗಳು ನಡೆದವು.
ಎಡಪಂಥೀಯ ಬಂಡುಕೋರರ ಹಾವಳಿ ಇರುವ ಪ್ರದೇಶದಲ್ಲಿ ಭದ್ರತಾ ಪಡೆಗಳು ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಗೋಷ್ಠಿಯಲ್ಲಿ ಚರ್ಚೆ ನಡೆಸಲಾಯಿತು. ಜೊತೆಗೆ ಎಡಪಂಥೀಯ ಬಂಡುಕೋರರ ಬಾಧಿತ ಪ್ರದೇಶಗಳಲ್ಲಿ ಭದ್ರತಾ ಸ್ಥಿತಿಗತಿ ಸುಧಾರಣೆ ಕುರಿತು ಚರ್ಚಿಸಲಾಯಿತು. ಎಡಪಂಥೀಯ ಬಂಡುಕೋರರ ಉಪಟಳ ತಡೆಗೆ ರಾಜ್ಯಗಳೊಂದಿಗೆ ಸಮನ್ವಯದ ಕ್ರಮಗಳನ್ನು ಕೈಗೊಳ್ಳಲು ಒತ್ತು ನೀಡಲಾಯಿತು. ಜೊತೆಗೆ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಪೊಲೀಸರ ಪಾತ್ರದ ಬಗ್ಗೆ ಹಾಗೂ ಸುರಕ್ಷಿತ ಶಿಷ್ಟಾಚಾರ ಜಾರಿಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಚರ್ಚಿಸಲಾಯಿತು. ನಾನಾ ಬಗೆಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ನಿರ್ದಿಷ್ಟ ಕಾರ್ಯತಂತ್ರ ವಿಧಾನ (ಎಸ್ಒಪಿ) ರೂಪಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
***
(Release ID: 1678031)
Visitor Counter : 207