ಪ್ರಧಾನ ಮಂತ್ರಿಯವರ ಕಛೇರಿ

33ನೇ ಪ್ರಗತಿ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ

Posted On: 25 NOV 2020 8:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒಳಗೊಂಡು  ಆಡಳಿತ ಪರವಾದ ಮತ್ತು ಸಕಾಲದ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ - ಪ್ರಗತಿಯ ಮೂಲಕ ಪ್ರಧಾನಮಂತ್ರಿ ನಡೆಸಿದ ಮೂವತ್ತಮೂರನೇ ಸಂವಾದ ಇದಾಗಿತ್ತು.

ಇಂದಿನ ಪ್ರಗತಿ ಸಭೆಯಲ್ಲಿ ಬಹು ಯೋಜನೆಗಳು, ಕುಂದುಕೊರತೆಗಳು ಮತ್ತು ಕಾರ್ಯಕ್ರಮಗಳ ಪರಾಮರ್ಶೆ ನಡೆಸಲಾಯಿತು. ರೈಲ್ವೆ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಡಿಪಿಐಐಟಿ ಮತ್ತು ಇಂಧನ ಸಚಿವಾಲಯ ಕೈಗೊಂಡಿರುವ ಯೋಜನೆಗಳ ಚರ್ಚೆಯಾಯಿತು. ಯೋಜನೆಗಳ ಒಟ್ಟು ವೆಚ್ಚ 1.41 ಲಕ್ಷ ಕೋಟಿ ರೂ. ಆಗಿದ್ದು, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ. ಕೇಂದ್ರ ಸರ್ಕಾರದ ಸಂಬಂಧಪಟ್ಟ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿಗದಿತ ಕಾಲಮಿತಿಗೆ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕೆಂದು ಪ್ರಧಾನಮಂತ್ರಿ ಹೇಳಿದರು.

ಸಭೆಯ ವೇಳೆ ಕೋವಿಡ್-19 ಮತ್ತು ಪಿಎಂ ಆವಾಸ್ ಯೋಜನೆ (ಗ್ರಾಮೀಣ)ಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಪಿಎಂ ಸ್ವಾನಿಧಿ, ಕೃಷಿ ಸುಧಾರಣೆ ಮತ್ತು ಜಿಲ್ಲೆಗಳನ್ನು ರಫ್ತು ತಾಣಗಳಾಗಿ ಸುಧಾರಿಸುವ ಕುರಿತು ಪರಾಮರ್ಶಿಸಲಾಯಿತು. ಪ್ರಧಾನಮಂತ್ರಿಯವರು ರಾಜ್ಯಗಳ ರಫ್ತು ಕಾರ್ಯತಂತ್ರ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.

ಪ್ರಧಾನಮಂತ್ರಿಯವರು ಕುಂದುಕೊರತೆ ನಿವಾರಣೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅಂಥ ಕುಂದುಕೊರತೆಗಳ ಗಾತ್ರ ಹೆಚ್ಚಿಸುವ ಬಗ್ಗೆಯಷ್ಟೇ ಗಮನ ಹರಿಸುವುದಲ್ಲ, ಗುಣಮಟ್ಟದ ಬಗ್ಗೆಯೂ ಗಮನ ಕೊಡಬೇಕು ಎಂದರು. ಒಬ್ಬರು ಇದನ್ನು ಮಾಡಿದಾಗ ಮಾತ್ರ ಸುಧಾರಣೆಗಳು ಪ್ರಯೋಜನಕಾರಿಯಾಗುತ್ತವೆ ಮತ್ತು ದೇಶವನ್ನು ಪರಿವರ್ತಿಸಲು ಇದು ಮುಂದಿನ ಮಾರ್ಗವಾಗುತ್ತದೆ ಎಂದು ಅವರು ತಿಳಿಸಿದರು.

ಹಿಂದಿನ ಇಂಥ 32 ಸಭೆಗಳಲ್ಲಿ, ಒಟ್ಟು 12.5 ಲಕ್ಷ ಕೋಟಿ ರೂ. ಮೌಲ್ಯದ 275 ಯೋಜನೆಗಳನ್ನು ಪರಾಮರ್ಶಿಸಲಾಗಿದೆ. ಜೊತೆಗೆ 47 ಕಾರ್ಯಕ್ರಮಗಳು/ ಯೋಜನೆಗಳು ಮತ್ತು 17 ವಲಯಗಳಲ್ಲಿನ ಕುಂದುಕೊರತೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

***(Release ID: 1675970) Visitor Counter : 12