ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸ್ಪಂದನೆ, ನಿರ್ವಹಣೆಯ ಸ್ಥಿತಿ ಮತ್ತು ಸನ್ನದ್ಧತೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ


ಕೋವಿಡ್-19 ಲಸಿಕೆ ವಿತರಣೆ ಮತ್ತು ನೀಡುವ ವಿಧಾನಗಳ ಬಗ್ಗೆ ಚರ್ಚೆ

ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ಜೀವವನ್ನೂ ಉಳಿಸಲು ಗಮನಹರಿಸಿದಂತೆಯೇ, ಎಲ್ಲರಿಗೂ ಲಸಿಕೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ: ಪ್ರಧಾನಿ

ಮುಖ್ಯಮಂತ್ರಿಗಳಿಂದ ತಮ್ಮ ರಾಜ್ಯಗಳ ಸದ್ಯದ ಪರಿಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ

Posted On: 24 NOV 2020 3:09PM by PIB Bengaluru

ಕೋವಿಡ್-19 ಸ್ಪಂದನೆ ಹಾಗೂ ನಿರ್ವಹಣೆಯ ಸ್ಥಿತಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಹರಿಯಾಣ, ದೆಹಲಿ, ಛತ್ತೀಸ್ಗಢ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಯಿತು.  ಕೋವಿಡ್-19 ಲಸಿಕೆ ವಿತರಣೆ ಮತ್ತು ನೀಡುವ ವಿಧಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು

ಸಂಘಟಿತ ಪ್ರಯತ್ನಗಳ ಮೂಲಕ ದೇಶವು ಸಾಂಕ್ರಾಮಿಕ ರೋಗವನ್ನು ಎದುರಿಸಿದೆ. ಚೇತರಿಕೆ ದರ ಮತ್ತು ಸಾವಿನ ಪ್ರಮಾಣ ಎರಡರಲ್ಲೂ, ಭಾರತದ ಪರಿಸ್ಥಿತಿ ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ಪ್ರಧಾನಿ ಹೇಳಿದರು. ಪರೀಕ್ಷೆ ಮತ್ತು ಚಿಕಿತ್ಸಾ ಜಾಲದ ವಿಸ್ತರಣೆಯ ಕುರಿತು ಅವರು ಮಾತನಾಡಿದರು. ಪಿಎಂ ಕೇರ್ಸ್ ನಿಧಿಯಿಂದ ಆಮ್ಲಜನಕ ಲಭ್ಯವಾಗುವಂತೆ ಮಾಡಲು ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಆಮ್ಲಜನಕದ ಉತ್ಪಾದನೆಯಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ ಅವರು, 160 ಕ್ಕೂ ಹೆಚ್ಚು ಹೊಸ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಜನರ ಪ್ರತಿಕ್ರಿಯೆಯ ನಾಲ್ಕು ಹಂತಗಳು

ಸಾಂಕ್ರಾಮಿಕ ರೋಗಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದ ಪ್ರಧಾನಿ, ಇದನ್ನು ನಾಲ್ಕು ಹಂತಗಳಾಗಿ ವಿಂಗಡಿಸಬಹುದು ಎಂದರು. ಮೊದಲನೆಯ ಹಂತದಲ್ಲಿ ಜನರು ಆತಂಕದಿಂದ ಪ್ರತಿಕ್ರಿಯಿಸಿದಾಗ ಭಯದ ವಾತಾವರಣವಿತ್ತು  ಎರಡನೇ ಹಂತದಲ್ಲಿ ಹಲವಾರು ಜನರು ವೈರಾಣುವಿನಿಂದ ಬಳಲುತ್ತಿದ್ದರೂ ಅದನ್ನು ಮರೆಮಾಚಲು ಪ್ರಯತ್ನಿಸಿದಾಗ ವೈರಾಣುವಿನ ಬಗ್ಗೆ ಅನುಮಾನಗಳು ಹೆಚ್ಚಾದವು. ಮೂರನೇ ಹಂತದಲ್ಲಿ ಜನರು ವೈರಾಣುವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡರು ಮತ್ತು ಹೆಚ್ಚಿನ ಜಾಗರೂಕತೆಯನ್ನು ತೋರಿದರು. ನಾಲ್ಕನೇ ಹಂತದಲ್ಲಿ, ಚೇತರಿಕೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಜನರು ವೈರಾಣುವಿನ ಬಗ್ಗೆ  ತಪ್ಪು ಕಲ್ಪನೆಯನ್ನು ಬೆಳೆಸಿಕೊಂಡಿದ್ದಾರೆ, ಇದರಿಂದಾಗಿ ನಿರ್ಲಕ್ಷ್ಯದ ನಿದರ್ಶನಗಳು ಹೆಚ್ಚಾಗುತ್ತಿವೆ. ನಾಲ್ಕನೇ ಹಂತದಲ್ಲಿ ವೈರಸ್ ಗಂಭೀರತೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಾಂಕ್ರಾಮಿಕ ರೋಗದ ಹರಡುವಿಕೆಯ ಕಡಿಮೆಯಾಗುತ್ತಿದ್ದ ದೇಶಗಳಲ್ಲಿ ಮತ್ತೆ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ. ನಮ್ಮ ಕೆಲವು ರಾಜ್ಯಗಳಲ್ಲಿಯೂ ಸಹ ಇದನ್ನು ಕಾಣಬಹುದಾಗಿದೆ, ಇದರ ಬಗ್ಗೆ ಆಡಳಿತಗಳು ಹೆಚ್ಚಿನ ಸಿದ್ಧತೆ ಮತ್ತು ಎಚ್ಚರಿಕೆಯ ಅಗತ್ಯವಿದೆ ಎಂದು ಅವರು ಹೇಳಿದರು.

ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವುದು, ಮನೆಯ ಪ್ರತ್ಯೇಕವಾಸದಲ್ಲಿರುವ ರೋಗಿಗಳ ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು, ಗ್ರಾಮ ಮತ್ತು ಸಮುದಾಯ ಮಟ್ಟದಲ್ಲಿ ಆರೋಗ್ಯ ಕೇಂದ್ರಗಳನ್ನು ಉತ್ತಮವಾಗಿ ಸಜ್ಜುಗೊಳಿಸುವುದು ಮತ್ತು ವೈರಸ್ನಿಂದ ಸುರಕ್ಷತೆಗಾಗಿ ಜಾಗೃತಿ ಅಭಿಯಾನಗಳನ್ನು ನಡೆಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಸಾವಿನ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.

ಸುಗಮ, ವ್ಯವಸ್ಥಿತ ಮತ್ತು ಸುಸ್ಥಿರ ಲಸಿಕೆಯನ್ನು ಖಚಿತಪಡಿಸುವುದು

ಲಸಿಕೆಗಳ ಅಭಿವೃದ್ಧಿಯ ಬಗ್ಗೆ ಸರ್ಕಾರವು ನಿಗಾ ವಹಿಸುತ್ತಿದೆ. ಜಾಗತಿಕ ನಿಯಂತ್ರಕರು, ಇತರ ದೇಶಗಳ ಸರ್ಕಾರಗಳು, ಬಹುಪಕ್ಷೀಯ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ಭಾರತೀಯ ಅಭಿವರ್ಧಕರು ಮತ್ತು ತಯಾರಕರೊಂದಿಗೆ ಸರ್ಕಾರ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಭರವಸೆ ನೀಡಿದರು. ನಾಗರಿಕರಿಗೆ ಎಲ್ಲಾ ವೈಜ್ಞಾನಿಕ ಮಾನದಂಡಗಳನ್ನು ಪೂರೈಸುವ ಲಸಿಕೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ಜೀವವನ್ನು ಉಳಿಸುವತ್ತ ಗಮನಹರಿಸಿರುವಂತೆಯೇ, ಲಸಿಕೆ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ಅವರು ಒತ್ತಿಹೇಳಿದರು. ಲಸಿಕೆ ನೀಡುವಿಕೆಯು ಸುಗಮ, ವ್ಯವಸ್ಥಿತ ಮತ್ತು ನಿರಂತರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹಂತದ ಆಡಳಿತಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಲಸಿಕೆಯ ಆದ್ಯತೆಯ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೆಚ್ಚುವರಿ ಕೋಲ್ಡ್ ಚೈನ್ ಸ್ಟೋರೇಜ್ಗಳ ಅವಶ್ಯಕತೆಗಳ ಬಗ್ಗೆ ರಾಜ್ಯಗಳೊಂದಿಗೆ ಚರ್ಚಿಸಲಾಗಿದೆ. ಉತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮಟ್ಟದ ಚಾಲನಾ ಸಮಿತಿ ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಪಡೆಯ ನಿಯಮಿತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಹಿಂದಿನ ಅನುಭವಗಳ ಪ್ರಕಾರ, ಲಸಿಕೆಗಳ ಬಗ್ಗೆ ಹಲವಾರು ಮಿಥ್ಯೆಗಳು ಮತ್ತು ವದಂತಿಗಳು ಹರಡುತ್ತವೆ ಎಂದು ಪ್ರಧಾನಿ ಮುನ್ಸೂಚನೆ ನೀಡಿದರು. ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ವದಂತಿಗಳು ಹರಡಬಹುದು. ನಾಗರಿಕ ಸಮಾಜ, ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಮತ್ತು ಮಾಧ್ಯಮ ಸೇರಿದಂತೆ ಎಲ್ಲರ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಇಂತಹ ವದಂತಿಗಳನ್ನು ನಿಭಾಯಿಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.

ಮುಖ್ಯಮಂತ್ರಿಗಳಿಂದ ಮಾಹಿತಿ

ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ರಾಜ್ಯಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಅಗತ್ಯ ನೆರವು ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅವರು ತಮ್ಮ ರಾಜ್ಯಗಳಲ್ಲಿನ ಪರಿಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪ್ರಕರಣಗಳಲ್ಲಿ ಏರಿಕೆ, ಕೋವಿಡ್ ನಂತರದ ತೊಡಕುಗಳು, ಪರೀಕ್ಷೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು, ರಾಜ್ಯಗಳ ಗಡಿಗಳಲ್ಲಿ ಪರೀಕ್ಷೆ ನಡೆಸಲು ಕೈಗೊಂಡ ಕ್ರಮಗಳು, ಮನೆ ಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸುವುದು, ಸಾರ್ವಜನಿಕ ಸಭೆಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ನಿರ್ಬಂಧಗಳು, ಕರ್ಫ್ಯೂ ಹೇರಿಕೆ ಮತ್ತು ಇತರ ಜನಸಂದಣಿಯನ್ನು ನಿರ್ಬಂಧಿಸುವ ಕ್ರಮಗಳು ಜಾಗೃತಿ ಅಭಿಯಾನಗಳು ಮತ್ತು ಮುಖಗವಸುಗಳ ಬಳಕೆಯನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಕ್ರಮಗಳನ್ನು ಕುರಿತು ಚರ್ಚಿಸಲಾಯಿತು, ಲಸಿಕೆ ನೀಡುವ ಅಭಿಯಾನದ ಬಗ್ಗೆಯೂ ಬಗ್ಗೆ ಅವರು ಚರ್ಚಿಸಿ, ಅನೇಕ ಸಲಹೆಗಳನ್ನು ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಪ್ರಸ್ತುತ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ನೀಡಿ, ಸನ್ನದ್ಧತೆಯ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಉದ್ದೇಶಿತ ಪರೀಕ್ಷೆ, 72 ಗಂಟೆಗಳ ಒಳಗೆ ಎಲ್ಲಾ ಸಂಪರ್ಕಗಳನ್ನು ಪತ್ತೆಹಚ್ಚುವುದು ಮತ್ತು ಪರೀಕ್ಷಿಸುವುದು, ಆರ್ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸುವುದು, ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಪ್ರಯತ್ನಗಳು ಮತ್ತು ರಾಜ್ಯಗಳಿಂದ ವರದಿಯಾದ ದತ್ತಾಂಶಗಳನ್ನು ಉತ್ತಮಗೊಳಿಸುವ ಕುರಿತು ಅವರು ಚರ್ಚಿಸಿದರು. ಲಸಿಕೆ ವಿತರಣೆ ಮತ್ತು ಅದನ್ನು ನೀಡುವ ವಿಧಾನಗಳನ್ನು ಕುರಿತು ನೀತಿ ಅಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಪ್ರಸ್ತುತಿ ನೀಡಿದರು.

***



(Release ID: 1675341) Visitor Counter : 263