ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಪಿ ಎಂ - ಸ್ವನಿಧಿ ಯೋಜನೆ: 27,33,497 ಲಕ್ಷಕ್ಕೂ ಅಧಿಕ ಅರ್ಜಿಗಳ ಸ್ವೀಕಾರ; ಸುಮಾರು 14 ಲಕ್ಷಕ್ಕೂ ಅಧಿಕ ಸಾಲದ ಅರ್ಜಿಗಳಿಗೆ ಅನುಮೋದನೆ

Posted On: 18 NOV 2020 1:15PM by PIB Bengaluru

ಪಿಎಂ-ಸ್ವನಿಧಿ - ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಈವರೆಗೆ 27ಲಕ್ಷದ 33ಸಾವಿರದ 497ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವಿಶೇಷ ಕಿರು ಹಣಕಾಸು ಸಾಲ ಸೌಲಭ್ಯ ಕಲ್ಪಿಸುವ ಯೋಜನೆಯಲ್ಲಿ ಈವರೆಗೆ 14ಲಕ್ಷದ 34ಸಾವಿರದ 436 ಸಾಲದ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದ್ದು, ಸುಮಾರು 7ಲಕ್ಷದ 88ಸಾವಿರದ 438 ಸಾಲಗಳನ್ನು ವಿತರಿಸಲಾಗಿದೆ. ಉತ್ತರ ಪ್ರದೇಶ ರಾಜ್ಯ ಒಂದರಿಂದಲೇ 6.5 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಬೀದಿ ಬದಿ ವ್ಯಾಪಾರಿಗಳು ಸಹ ವಾಪಸ್ ಬಂದ ನಂತರ ಅವರು ಕೂಡ ಸಾಲಕ್ಕೆ ಅರ್ಹರಾಗಿದ್ದಾರೆ. ಸಾಲ ಪಡೆಯಲು ಅತ್ಯಂತ ಸುಗಮ ಅಡೆತಡೆ ರಹಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವ್ಯಾಪಾರಿಗಳು ಯಾವುದೇ ಸಾಮಾನ್ಯ ಸೇವಾ ಕೇಂದ್ರ ಅಥವಾ ಮುನ್ಸಿಪಲ್ ಕಚೇರಿ ಅಥವಾ ಬ್ಯಾಂಕುಗಳಿಗೆ ಹೋಗಿ ಅಲ್ಲಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಪ್ ಲೋಡ್ ಮಾಡಬಹುದು. ಬ್ಯಾಂಕ್ ಗಳು ವ್ಯಾಪಾರಿಗಳ ಮನೆ ಬಾಗಿಲಿಗೆ ತೆರಳಿ ಸಾಲವನ್ನು ನೀಡಿ, ಅವರು ತಮ್ಮ ವಹಿವಾಟವನ್ನು ಪುನರಾರಂಭಿಸಲು ನೆರವಾಗುತ್ತಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ಯಾಂಕ್ ಸಿಬ್ಬಂದಿಯ ಕಠಿಣ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು, “ಬೀದಿ ಬದಿ ವ್ಯಾಪಾರಿಗಳು ಬ್ಯಾಂಕ್ ಗಳ ಒಳಗೆ ಹೋಗದಂತಹ ಕಾಲವೊಂದಿತ್ತು. ಆದರೆ ಇಂದು ಬ್ಯಾಂಕ್ ಗಳೇ ಅವರ ಮನೆ ಬಾಗಿಲಿಗೆ ಧಾವಿಸುತ್ತಿವೆಎಂದು ಹೇಳಿದ್ದಾರೆ.

ಯೋಜನೆಯನ್ನು ಅತ್ಯಂತ ಪಾರದರ್ಶಕ, ಹೊಣೆಗಾರಿಕೆಯಿಂದ ಮತ್ತು ಸ್ಥಿರವಾಗಿ ತ್ವರಿತ ರೀತಿಯಲ್ಲಿ ಜಾರಿಗೊಳಿಸಲು ವೆಬ್ ಪೋರ್ಟಲ್/ಮೊಬೈಲ್ ಆಪ್ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವ್ಯವಸ್ಥೆಯಲ್ಲೇ ಎಲ್ಲಾ ಪರಿಹಾರಗಳನ್ನು ನೀಡಲಾಗಿದೆ. ಐಟಿ ವೇದಿಕೆ, ವೆಬ್ ಪೋರ್ಟಲ್ ಮತ್ತು ಮೊಬೈಲ್ ಆಪ್ ನಲ್ಲಿ ಸಂಯೋಜನೆಗೊಂಡಿದ್ದು, ಎಸ್ಐಡಿಬಿಐನ ಉದ್ಯೋಗ ಮಿತ್ರ ಪೋರ್ಟಲ್ ನಲ್ಲೂ ಸೇರ್ಪಡೆಯಾಗಿದೆ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪೈಸಾ ಪೋರ್ಟಲ್, ಬಡ್ಡಿ ಸಬ್ಸಿಡಿ ಕುರಿತು ಸ್ವಯಂಚಾಲಿತವಾಗಿ ನಿರ್ವಹಣೆ ಮಾಡಲಿದೆ. ಯೋಜನೆ ಅಡಿ ಡಿಜಿಟಲ್ ವಹಿವಾಟುಗಳನ್ನು ನಡೆಸುವವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದರೆ ಸ್ವೀಕೃತಿ ಮತ್ತು ಪಾವತಿಗಳನ್ನು ಯುಪಿಐ, ಕ್ಯೂಆರ್ ಕೋಡ್, ರುಪೆ ಡೆಬಿಟ್ ಕಾರ್ಡ್ ಮತ್ತಿತರ ಡಿಜಿಟಲ್ ವಿಧಾನಗಳ ಮೂಲಕ ಮಾಡಬಹುದಾಗಿದೆ. ಅದಕ್ಕೆ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತಿ ತಿಂಗಳು ನಗದು ವಾಪಸ್ ಜಮೆ ಆಗಲಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ) ಕಾರ್ಯದರ್ಶಿ ತಮ್ಮ ಟ್ವೀಟ್ ನಲ್ಲಿ, ಆತ್ಮ ನಿರ್ಭರ ಭಾರತ್ ಉದ್ದೇಶ ಸಾಕಾರಕ್ಕೆ ಸುಗಮ ಮತ್ತು ಸುಲಭವಾಗಿ ಪ್ರಕ್ರಿಯೆ ನಡೆಸಲು ಸಚಿವಾಲಯ ಸಂಬಂಧಿಸಿದ ಎಲ್ಲ ಭಾಗಿದಾರರೊಡನೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ವೇಳೆ ಸ್ಥಳೀಯ ವರ್ತಕರು ಸ್ಥಿತಿ ಸ್ಥಾಪಕತ್ವ ಪ್ರದರ್ಶಿಸಿದ್ದಾರೆ ಮತ್ತು ಅವರ ವ್ಯಾಪಾರ ಮತ್ತು ಜೀವನೋಪಾಯ ಬಲವರ್ಧನೆಗೆ ಸರ್ಕಾರದ ಸಹಾಯದಿಂದ ಅವರು ವ್ಯಾಪಾರ ಮತ್ತು ಜೀವನೋಪಾಯ ಬಲವರ್ಧನೆ ಮೂಲಕ ಖಂಡಿತ ಪುನಃ ಯಥಾಸ್ಥಿತಿಗೆ ಮರಳುವ ವಿಶ್ವಾಸವಿದೆ. ಸ್ವನಿಧಿ ಯೋಜನೆ ಅಡಿ ಸಾಲ ಪಡೆದ ಬಹುತೇಕ ಬೀದಿ ಬದಿ ವ್ಯಾಪಾರಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದಾರೆ ಮತ್ತು ಮೂಲಕ ಸಣ್ಣ ಪ್ರಮಾಣದ ಸಾಲಗಾರರು ತಮ್ಮ ಪ್ರಾಮಾಣಿಕತೆ ಮತ್ತು ದಕ್ಷತೆಯಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ನಿರೂಪಿಸಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಪಿಎಂ-ಸ್ವನಿಧಿ ಯೋಜನೆ ಜಾರಿಯ ಪ್ರಗತಿ ಮತ್ತು ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದ ನಂತರ ಟ್ವೀಟ್ ನಲ್ಲಿ, ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದೆ. ರಾಷ್ಟ್ರದ ಪ್ರಗತಿ ಮತ್ತು ಮುನ್ನಡೆಯಲ್ಲಿ ಪ್ರತಿಯೊಬ್ಬ ಭಾರತೀಯರೂ ಪಾಲುದಾರರು ಎಂದು ಹೇಳಿದ್ದಾರೆ.

ಯೋಜನೆ ಅನುಷ್ಠಾನದಲ್ಲಿ ಸ್ಥಳೀಯ ಸಂಸ್ಥೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಯೋಜನೆಯ ಎಲ್ಲ ಭಾಗಿದಾರರ ದೊಡ್ಡ ಜಾಲದ ಮೂಲಕ ಅಂದರೆ, ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ವಾಣಿಜ್ಯ ಪ್ರತಿನಿಧಿಗಳು(ಬಿಸಿಎಸ್)/ಬ್ಯಾಂಕ್ ಏಜೆಂಟ್ ಗಳು/ಕಿರು ಹಣಕಾಸು ಸಂಸ್ಥೆಗಳು(ಎಂಎಫ್ಐ), ಸ್ವಸಹಾಯ ಗುಂಪುಗಳು(ಎಸ್ಎಚ್ ಜಿಎಸ್) ಮತ್ತು ಅವುಗಳ ಒಕ್ಕೂಟಗಳು ಡಿಜಿಟಲ್ ಪಾವತಿ ಸಂಸ್ಥೆಗಳಾದ ಭೀಮ್, ಪೇಟಿಎಂ, ಗೂಗಲ್ ಪೆ, ಭಾರತ್ ಪೆ, ಅಮೆಜಾನ್ ಪೆ, ಫೋನ್ ಪೆ ಇತ್ಯಾದಿಗಳು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ.

***



(Release ID: 1673878) Visitor Counter : 260