ಪ್ರಧಾನ ಮಂತ್ರಿಯವರ ಕಛೇರಿ

12 ನೇ ಬ್ರಿಕ್ಸ್ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾಸ್ತಾವಿಕ ನುಡಿ

Posted On: 17 NOV 2020 5:45PM by PIB Bengaluru

ಗೌರವಾನ್ವಿತ ಅಧ್ಯಕ್ಷರಾದ ಪುಟಿನ್ ಅವರೇ,

ಗೌರವಾನ್ವಿತ ಅಧ್ಯಕ್ಷರಾದ ಕ್ಸಿ ಅವರೇ,

ಗೌರವಾನ್ವಿತ ಅಧ್ಯಕ್ಷರಾದ ರಮಾಫೋಸಾ ಅವರೇ,

ಗೌರವಾನ್ವಿತ ಅಧ್ಯಕ್ಷರಾದ ಬೋಲ್ಸನಾರೊ ಅವರೇ,

ಮೊದಲನೆಯದಾಗಿ, ಬ್ರಿಕ್ಸ್ ನ ಯಶಸ್ವಿ ನಿರ್ವಹಣೆಗಾಗಿ ಅಧ್ಯಕ್ಷ ಪುಟಿನ್ ಅವರಿಗೆ ನನ್ನ ಅಭಿನಂದನೆಗಳು. ನಿಮ್ಮ ಮಾರ್ಗದರ್ಶನ ಮತ್ತು ಉಪಕ್ರಮಗಳಿಂದಾಗಿ, ಜಾಗತಿಕ ಸಾಂಕ್ರಾಮಿಕದ ಸಮಯದಲ್ಲೂ  ಬ್ರಿಕ್ಸ್ ತನ್ನ ಹುರುಪನ್ನು ಕಾಯ್ದುಕೊಂಡಿದೆ. ನನ್ನ ಮಾತುಗಳನ್ನು ಪ್ರಾರಂಭಿಸುವ ಮುನ್ನ, ಅಧ್ಯಕ್ಷ ರಮಾಫೋಸಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

ಗೌರವಾನ್ವಿತರೇ,

ಈ ವರ್ಷದ ಶೃಂಗಸಭೆಯ ವಿಷಯ - 'ಜಾಗತಿಕ ಸ್ಥಿರತೆ, ಹಂಚಿಕೆಯ ಭದ್ರತೆ ಮತ್ತು ನವೀನ ಬೆಳವಣಿಗೆಗೆ ಬ್ರಿಕ್ಸ್ ಸಹಭಾಗಿತ್ವ' ಇದು ಸದ್ಯದ ಅವಶ್ಯಕತೆ ಮಾತ್ರವಲ್ಲ, ದೂರಗಾಮಿಯೂ ಆಗಿದೆ. ಜಗತ್ತಿನಾದ್ಯಂತ ಸ್ಥಿರತೆ, ಸುರಕ್ಷತೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಗಮನಾರ್ಹವಾದ ಭೌಗೋಳಿಕ-ಆಯಕಟ್ಟಿನ ಬದಲಾವಣೆಗಳು ನಡೆಯುತ್ತಿವೆ. ಈ ಮೂರು ಕ್ಷೇತ್ರಗಳಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ.

ಗೌರವಾನ್ವಿತರೇ,

ಈ ವರ್ಷ, ಎರಡನೆಯ ಮಹಾಯುದ್ಧದ 75 ನೇ ವಾರ್ಷಿಕೋತ್ಸವ. ಯುದ್ಧದಲ್ಲಿ ನಾವು ಕಳೆದುಕೊಂಡ ಎಲ್ಲಾ ಧೀರ ಸೈನಿಕರಿಗೆ ಗೌರವ ಸಲ್ಲಿಸುತ್ತೇವೆ. ಯುರೋಪ್, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಹಲವು ಸ್ಥಳಗಳಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಭಾರತದ ದಿಟ್ಟ ಸೈನಿಕರು ಈ ಯುದ್ಧದಲ್ಲಿ ಸಕ್ರಿಯರಾಗಿದ್ದರು. ಈ ವರ್ಷ ನಾವು ವಿಶ್ವಸಂಸ್ಥೆಯ 75 ವರ್ಷಗಳನ್ನು ಆಚರಿಸುತ್ತಿದ್ದೇವೆ. ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯನಾಗಿ ಭಾರತವು ಬಹುಪಕ್ಷೀಯತೆಯ ಬಲವಾದ ಬೆಂಬಲಿಗ ರಾಷ್ಟ್ರವಾಗಿದೆ. ಭಾರತೀಯ ಸಂಸ್ಕೃತಿ ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ. ಆದ್ದರಿಂದ ವಿಶ್ವಸಂಸ್ಥೆಯಂತಹ ಸಂಸ್ಥೆಯನ್ನು ಬೆಂಬಲಿಸುವುದು ನಮಗೆ ಸಹಜವಾಗಿತ್ತು. ವಿಶ್ವಸಂಸ್ಥೆಯ ಮೌಲ್ಯಗಳಿಗೆ ನಮ್ಮ ಬದ್ಧತೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರೆದಿದೆ. ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಾಚರಣೆಯಲ್ಲಿ ಭಾರತವು ಹೆಚ್ಚಿನ ಸೈನಿಕರನ್ನು ಕಳೆದುಕೊಂಡಿದೆ. ಆದರೆ ಇಂದು ಬಹುಪಕ್ಷೀಯ ವ್ಯವಸ್ಥೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಗತಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವ ಎರಡನ್ನೂ ಪ್ರಶ್ನಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇವುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿಲ್ಲ. 75 ವರ್ಷಗಳ ಹಿಂದಿನ ಚಿಂತನೆ ಮತ್ತು ವಾಸ್ತವದಲ್ಲಿಯೇ ಇವು ಇನ್ನೂ ಬೇರಿ ಬಿಟ್ಟು ನಿಂತಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳು ಅತ್ಯಗತ್ಯ ಎಂದು ಭಾರತ ನಂಬಿದೆ. ಈ ವಿಷಯದಲ್ಲಿ ನಮ್ಮ ಬ್ರಿಕ್ಸ್ ಸಂಗಾತಿಗಳ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ. ವಿಶ್ವಸಂಸ್ಥೆಯನ್ನು ಹೊರತುಪಡಿಸಿ, ಇತರ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಸಹ ಸದ್ಯದ ವಾಸ್ತವಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಡಬ್ಲ್ಯುಟಿಒ, ಐಎಂಎಫ್, ಡಬ್ಲ್ಯುಎಚ್‌ಒ ಮುಂತಾದ ಸಂಸ್ಥೆಗಳಲ್ಲಿ ಸಹ ಸುಧಾರಣೆಯಾಗಬೇಕು.

ಗೌರವಾನ್ವಿತರೇ,

ಇಂದು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಭೀತಿಯೆಂದರೆ ಭಯೋತ್ಪಾದನೆ. ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ನೆರವು ನೀಡುವ ದೇಶಗಳನ್ನೂ ಸಹ ಇದಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು ಮತ್ತು ಈ ಸಮಸ್ಯೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕು. ರಷ್ಯಾ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗಿರುವುದು ನಮಗೆ ಸಂತೋಷ ತಂದಿದೆ. ಇದೊಂದು ಗಮನಾರ್ಹ ಸಾಧನೆ. ಭಾರತವು ತನ್ನ ಅಧ್ಯಕ್ಷತೆಯಲ್ಲಿ ಈ ಕೆಲಸವನ್ನು ಮತ್ತಷ್ಟು ಮುಂದುವರಿಸಲಿದೆ.

ಗೌರವಾನ್ವಿತರೇ,

ಕೋವಿಡ್ ನಂತರದ ಜಾಗತಿಕ ಚೇತರಿಕೆಯಲ್ಲಿ ಬ್ರಿಕ್ಸ್ ದೆಶಗಳ ಆರ್ಥಿಕತೆಗಳು ಪ್ರಮುಖ ಪಾತ್ರವಹಿಸುತ್ತವೆ. ನಾವು ವಿಶ್ವದ ಶೇ.42 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದೇವೆ ಮತ್ತು ನಮ್ಮ ದೇಶಗಳು ಜಾಗತಿಕ ಆರ್ಥಿಕತೆಯ ಚಾಲನಾ ಎಂಜಿನ್‌ಗಳಾಗಿವೆ. ಬ್ರಿಕ್ಸ್ ದೇಶಗಳ ನಡುವೆ ಪರಸ್ಪರ ವ್ಯಾಪಾರ ವಹಿವಾಟು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ನಮ್ಮ ಪರಸ್ಪರ ಸಂಸ್ಥೆಗಳು ಮತ್ತು ವ್ಯವಸ್ಥೆಗಳಾದ ಬ್ರಿಕ್ಸ್ ಇಂಟರ್-ಬ್ಯಾಂಕ್ ಸಹಕಾರ ಕಾರ್ಯವಿಧಾನ, ಹೊಸ ಅಭಿವೃದ್ಧಿ ಬ್ಯಾಂಕ್, ಅನಿಶ್ಚಿತ ಮೀಸಲು ವ್ಯವಸ್ಥೆ ಮತ್ತು ಕಸ್ಟಮ್ಸ್ ಸಹಕಾರ ಮುಂತಾದುವು  ಜಾಗತಿಕ ಚೇತರಿಕೆಯಲ್ಲಿ ನಮ್ಮ ಕೊಡುಗೆಯನ್ನು ಪರಿಣಾಮಕಾರಿಯಾಗಿಸಬಹುದು. ಭಾರತದಲ್ಲಿ ನಾವು 'ಸ್ವಾವಲಂಬಿ ಭಾರತ' ಅಭಿಯಾನದಡಿಯಲ್ಲಿ ಸಮಗ್ರ ಸುಧಾರಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಕೋವಿಡ್ ನಂತರದ ಆರ್ಥಿಕತೆಗೆ ಸ್ವಾವಲಂಬಿ ಮತ್ತು ಸ್ಥಿತಿಸ್ಥಾಪಕ ಭಾರತವು ಶಕ್ತಿವರ್ಧಕವಾಗಬಹುದು ಮತ್ತು ಜಾಗತಿಕ ಮೌಲ್ಯ ಸರಪಳಿಗಳಿಗೆ ಬಲವಾದ ಕೊಡುಗೆ ನೀಡಬಹುದು. ನಾವು ಕೋವಿಡ್ ಸಮಯದಲ್ಲಿ ಭಾರತದ ಔಷಧ ಉದ್ಯಮದ ಸಾಮರ್ಥ್ಯದಿಂದಾಗಿ 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದೇವೆ. ನಾನು ಮೊದಲೇ ಹೇಳಿದಂತೆ, ನಮ್ಮ ಲಸಿಕೆ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯಗಳು ಇಡೀ ಮನುಕುಲಕ್ಕೆ ಪ್ರಯೋಜನವನ್ನು ನೀಡಲಿವೆ. ಭಾರತ ಮತ್ತು ದಕ್ಷಿಣ ಆಫ್ರಿಕಾವು ಕೋವಿಡ್-19 ಲಸಿಕೆ, ಚಿಕಿತ್ಸೆ ಮತ್ತು ತನಿಖೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಒಪ್ಪಂದಗಳಿಂದ ವಿನಾಯಿತಿ ಪಡೆಯಲು ಪ್ರಸ್ತಾಪಿಸಿವೆ. ಇದನ್ನು ಇತರ ಬ್ರಿಕ್ಸ್ ರಾಷ್ಟ್ರಗಳು ಸಹ ಬೆಂಬಲಿಸುತ್ತವೆ ಎಂದು ನಾವು ಭಾವಿಸುತ್ತೇವೆ. ತನ್ನ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ, ಡಿಜಿಟಲ್ ಆರೋಗ್ಯ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಬ್ರಿಕ್ಸ್ ಸಹಯೋಗವನ್ನು ಹೆಚ್ಚಿಸಲು ಭಾರತವು ಕೆಲಸ ಮಾಡುತ್ತದೆ. ಈ ಸಂಕಷ್ಟದ ವರ್ಷದಲ್ಲಿ, ರಷ್ಯಾದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಯುವ ವಿಜ್ಞಾನಿಗಳು ಮತ್ತು ಯುವ ರಾಜತಾಂತ್ರಿಕರ ಸಭೆಗಳು ಸೇರಿದಂತೆ ಜನರು-ಜನರು ನಡುವಿನ ಸಂಪರ್ಕವನ್ನು ಹೆಚ್ಚಿಸಲು ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಇದಕ್ಕಾಗಿ ನಾನು ಅಧ್ಯಕ್ಷ ಪುಟಿನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಗೌರವಾನ್ವಿತರೇ,

2021 ರಲ್ಲಿ ಬ್ರಿಕ್ಸ್ 15 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ನಮ್ಮ 'ಶೆರ್ಪಾಗಳು' ಇಷ್ಟು ವರ್ಷಗಳಲ್ಲಿ ನಾವು ಕೈಗೊಂಡ ವಿವಿಧ ನಿರ್ಧಾರಗಳ ಮೌಲ್ಯಮಾಪನದ ವರದಿಯನ್ನು ನೀಡಬಹುದು. 2021 ರಲ್ಲಿ ನಮ್ಮ ಅಧ್ಯಕ್ಷತೆಯಲ್ಲಿ, ನಾವು ಮೂರು ಸ್ತಂಭಗಳನ್ನು ಬಲಪಡಿಸುವ ಮೂಲಕ ಬ್ರಿಕ್ಸ್ ನೊಳಗಿನ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಬ್ರಿಕ್ಸ್ ನೊಳಗಿನ ಒಗ್ಗಟ್ಟನ್ನು ಹೆಚ್ಚಿಸಲು ಮತ್ತು ಈ ಉದ್ದೇಶಕ್ಕಾಗಿ ದೃಢವಾದ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸುತ್ತೇವೆ. ಅಧ್ಯಕ್ಷ ಪುಟಿನ್ ಅವರ ಎಲ್ಲಾ ಪ್ರಯತ್ನಗಳಿಗೆ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಧನ್ಯವಾದಗಳು.

ಸೂಚನೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣ ಹಿಂದಿಯಲ್ಲಿದೆ.

***



(Release ID: 1673738) Visitor Counter : 156