ಉಪರಾಷ್ಟ್ರಪತಿಗಳ ಕಾರ್ಯಾಲಯ

ನೂತನ ಶಿಕ್ಷಣ ನೀತಿ ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಶಕ್ತಿಯಾಗಿಸುವ ಗುರಿ ಹೊಂದಿದೆ: ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು


ಭಾರತ ವಿಶ್ವ ಗುರು ಆಗಬೇಕೆಂಬುದು ಆಕಾಂಕ್ಷೆ

ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಭಾರತವನ್ನು ಜ್ಞಾನ ಮತ್ತು ಆವಿಷ್ಕಾರದ ತಾಣವನ್ನಾಗಿಸಲು ಉಪರಾಷ್ಟ್ರಪತಿ ಕರೆ

ನೂತನ ಶಿಕ್ಷಣ ನೀತಿ ಭಾರತೀಯ ಶಿಕ್ಷಣವನ್ನು ಸಮಗ್ರ ಬಹುಶಿಸ್ತೀಯ ಮತ್ತು ವಾಸ್ತವಗೊಳಿಸಲಿದೆ  

ವಿದ್ಯಾರ್ಥಿಗಳ ಕನಸು ನನಸಾಗಿಸುವಲ್ಲಿ ಬದ್ಧತೆ ಮತ್ತು ಶಿಸ್ತು ಕಾರ್ಯೋನ್ಮುಖವಾಗಬೇಕು

ವಿದ್ಯಾರ್ಥಿಗಳು ಗ್ರಾಮೀಣ ವಾಸ್ತವ್ಯ ಹೂಡಿ, ಕಷ್ಟ ಕಾರ್ಪಣ್ಯಗಳನ್ನು ಅರ್ಥಮಾಡಿಕೊಳ್ಳಬೇಕು

ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಉದ್ಯೋಗ ಸೃಷ್ಟಿಕರ್ತರನ್ನಾಗಿ ಮಾಡಬೇಕೇ ಹೊರತು ಉದ್ಯೋಗ ಆಕಾಂಕ್ಷಿಗಳನ್ನಾಗಿ ಮಾಡಬಾರದು – ಉಪರಾಷ್ಟ್ರಪತಿ ಸಲಹೆ

ಪ್ರಮುಖ ಸಂಶೋಧನಾ ಯೋಜನೆಗಳಿಗೆ ಆರ್ಥಿಕ ನೆರವು ನೀಡುವಂತೆ ಕಾರ್ಪೊರೇಟ್ ವಲಯಕ್ಕೆ ಉಪರಾಷ್ಟ್ರಪತಿ ಕರೆ

ಹೈದರಾಬಾದ್ ನಿಂದ ವರ್ಚುವಲ್ ಮೂಲಕ ಅಗರ್ತಲಾ ಎನ್ಐಟಿಯ 13ನೇ ಘಟಿಕೋತ್ಸವ ಉದ್ದೇಶಿಸಿ ಭಾಷಣ

Posted On: 17 NOV 2020 2:27PM by PIB Bengaluru

ನೂತನ ಶಿಕ್ಷಣ ನೀತಿ ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದೆ ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಭಾರತವನ್ನು ಮತ್ತೊಮ್ಮೆ ವಿಶ್ವ ಗುರುವನ್ನಾಗಿ ಮಾಡಲು ದೇಶದಲ್ಲಿ ಒತ್ತು ನೀಡಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.  

ನೂತನ ಶಿಕ್ಷಣ ನೀತಿ, ಪುರಾತನ ಭಾರತೀಯ ಶಿಕ್ಷಣ ಪದ್ಧತಿಯಿಂದ ಪ್ರೇರೇಪಣೆ ಪಡೆದಿದ್ದು, ಅದರಲ್ಲಿ ವ್ಯಕ್ತಿತ್ವದ ಸಮಗ್ರ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ಭಾರತೀಯ ಶಿಕ್ಷಣವನ್ನು ಸಮಗ್ರ, ಬಹುಶಿಸ್ತೀಯ ಮತ್ತು ವಾಸ್ತವಗೊಳಿಸುವುದು ಎನ್ಇಪಿಯ ಗುರಿಯಾಗಿದೆ ಎಂದು ಅವರು ಹೇಳಿದರು.

ಅಗರ್ತಲಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ಐಟಿ) 13ನೇ ಘಟಿಕೋತ್ಸವವನ್ನು ಉದ್ದೇಶಿಸಿ ವರ್ಚುವಲ್ ರೂಪದಲ್ಲಿ ಮಾತನಾಡಿದ ಶ್ರೀ ಎಂ. ವೆಂಕಯ್ಯನಾಯ್ಡು, ನಮ್ಮ ಪುರಾತನ ಶಿಕ್ಷಣ ಪದ್ಧತಿ ಸದಾ ನಮಗೆ ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬಾಳ್ವೆ ನಡೆಸಬೇಕು ಮತ್ತು ಎಲ್ಲರನ್ನೂ ಅಂದರೆ ಜೀವಿಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ತಿಳಿಸಿಕೊಟ್ಟಿವೆ. “ನಮ್ಮ ಶಿಕ್ಷಣ ವಾಸ್ತವದಿಂದ ಕೂಡಿದ್ದು, ಅದು ಜೀವನಕ್ಕೆ ಪೂರಕ ಮತ್ತು ಒಟ್ಟಾರೆ ನೆರವಾಗಲಿದೆ” ಎಂದು ಹೇಳಿದರು.

ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಭಾರತವನ್ನು ಜ್ಞಾನ ಮತ್ತು ಆವಿಷ್ಕಾರದ ತಾಣವನ್ನಾಗಿ ಮಾಡಬೇಕು ಎಂದು ಕರೆ ನೀಡಿದ ಶ್ರೀ ನಾಯ್ಡು ಅವರು, ಹಲವು ವಲಯಗಳಲ್ಲಿ ತೀವ್ರ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸ್ಥಾಪಿಸಬೇಕು ಮತ್ತು ಕ್ಯಾಂಪಸ್ ಗಳನ್ನು ಕ್ರಿಯಾಶೀಲತೆ ಮತ್ತು ಸಂಶೋಧನೆಯ ಉತ್ಸಾಹ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಎಂದರು.

ಮಾಜಿ ರಾಷ್ಟ್ರಪತಿ ಶ್ರೀ ಎಪಿಜೆ ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಕಲಾಂ ಅವರು ದೊಡ್ಡ ಕನಸುಗಳನ್ನು ಕಾಣುವಂತೆ ಹೇಳುತ್ತಿದ್ದರು, ಅಂತೆಯೇ ವಿದ್ಯಾರ್ಥಿಗಳು ಗುರಿಗಳನ್ನು ಹಾಕಿಕೊಂಡು ಅವುಗಳ ಸಾಧನೆ ನಿಟ್ಟಿನಲ್ಲಿ ಕಠಿಣ ಪರಿಶ್ರಮ ವಹಿಸಬೇಕು ಎಂದು ಹೇಳಿದರು. “ನೀವು ಆಯ್ಕೆ ಮಾಡಿಕೊಂಡಿರುವ ಮಾರ್ಗದಲ್ಲಿ ಯಾವುದಕ್ಕೂ ವಿಚಲಿತರಾಗದೆ ದೃಢತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ” ಎಂದು ಅವರು ಹೇಳಿದರು. 

ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಸಂಪಾದಿಸಿರುವ ಜ್ಞಾನ, ಕೌಶಲ್ಯ ಮತ್ತು ವಿವೇಚನೆಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಂಡು ಯಶಸ್ವಿ ವೃತ್ತಿಯನ್ನು ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಚುರುಕು ಬುದ್ದಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದ ಉಪರಾಷ್ಟ್ರಪತಿ ಅವರು, “ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರು ವಿಶ್ವದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಅವರು ನಿರಂತರವಾಗಿ ಕಲಿಯಬೇಕು. ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು( ಅಪ್ ಡೇಟ್ ಆಗಬೇಕು) ಮತ್ತು ಪ್ರತಿ ದಿನವೂ ಆವಿಷ್ಕಾರಕ್ಕೆ ಒಳಗಾಗಬೇಕು ಎಂದು ಹೇಳಿದರು.

ಯಾರು ಕಲಿಕೆಯನ್ನು ಮಾಡಿ ಅದನ್ನು ಅಳವಡಿಸಿಕೊಳ್ಳುತ್ತಾರೋ ಅವರ ಜೀವನ ಉಜ್ವಲವಾಗುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳು, ಐಐಟಿಗಳು, ಎನ್ಐಟಿಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಬೋಧನಾ ವಿಧಾನಗಳನ್ನು ಸಂಪೂರ್ಣವಾಗಿ ಪುನರ್ ರೂಪಿಸಲು ಮತ್ತು ಬೋಧಕರನ್ನು 21ನೇ ಶತಮಾನಕ್ಕೆ ಅಗತ್ಯವಾದ ಹೊಸ ಶಿಕ್ಷಣ ಶಾಸ್ತ್ರದ ಕೌಶಲ್ಯದಿಂದ ಸಜ್ಜಾಗಲು ಇದು ಸಕಾಲ ಎಂದು ಅವರು ಹೇಳಿದರು.  

ಬಡತನ ನಿರ್ಮೂಲನೆ, ಕೃಷಿ ಉತ್ಪಾದನೆ ಹೆಚ್ಚಳ, ಮಾಲಿನ್ಯ ಮತ್ತು ರೋಗಗಳ ನಿಯಂತ್ರಣ ಸೇರಿದಂತೆ ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಹತ್ತಿಕ್ಕಲು ಬಹುಶಿಸ್ತೀಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಶ್ರೀ ನಾಯ್ಡು ಅವರು ಪ್ರತಿಪಾದಿಸಿದರು.

ಹಲವು ಪ್ರಮುಖ ಸಂಶೋಧನಾ ವಲಯಗಳನ್ನು ಗುರುತಿಸುವಂತೆ ಮತ್ತು ತಮ್ಮ ಸಿಎಸ್ಆರ್ ಕ್ರಮಗಳಡಿ ಅವುಗಳಿಗೆ ಆರ್ಥಿಕ ನೆರವು ನೀಡುವಂತೆ ಉಪರಾಷ್ಟ್ರಪತಿಗಳು ಕಾರ್ಪೊರೇಟ್ ವಲಯಕ್ಕೆ ಕರೆ ನೀಡಿದರು. “ಸಂಶೋಧನಾ ವಲಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಹೆಚ್ಚಿಸುವುದು ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾದುದಾಗಿದೆ’’ ಎಂದು ಅವರು ಹೇಳಿದರು.  

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಜನರಿದ್ದಾರೆ ಎಂದ ಉಪರಾಷ್ಟ್ರಪತಿ ಅವರು, ಯುವ ಜನಾಂಗ ತಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಅವರಲ್ಲಿನ ಉದ್ಯಮಶೀಲತೆ ಉತ್ತೇಜನಕ್ಕೆ ಸೂಕ್ತ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದರು. “ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ. ಅಗರ್ತಲಾ ಎನ್ಐಟಿಯಂತಹ ಸಂಸ್ಥೆಗಳು ಯುವ ಜನಾಂಗವನ್ನು ಉದ್ಯೋಗ ಬಯಸುವವರನ್ನಾಗಿ ಮಾಡದೆ ಉದ್ಯೋಗ ಸೃಷ್ಟಿಕರ್ತರನ್ನಾಗಿ ಮಾಡಲು ಮುಂಚೂಣಿಗೆ ನಿಲ್ಲಬೇಕು” ಎಂದು ಅವರು ಹೇಳಿದರು.  

ಎನ್ಐಟಿ ಅಗರ್ತಲಾ ತನ್ನ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ‘ಅವುಗಳನ್ನು ಮಾದರಿ ಗ್ರಾಮ”ಗಳನ್ನಾಗಿ ಮಾಡುವ ಗುರಿ ಹೊಂದಿರುವುದಕ್ಕೆ ಉಪರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಎಲ್ಲ ವಿದ್ಯಾರ್ಥಿಗಳು ಗ್ರಾಮಗಳಲ್ಲಿ ಸ್ವಲ್ಪ ದಿನ ಕಾಲ ಕಳೆದು, ಗ್ರಾಮೀಣ ಭಾರತ ಎದುರಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು. ಅವರು ‘ಕೃಷಿ’ ನಮ್ಮ ‘ಮೂಲ ಸಂಸ್ಕೃತಿ’ ಎಂದು ಬಣ್ಣಿಸಿದರು ಹಾಗೂ ಕೃಷಿ ಸುಲಭ ಮತ್ತು ಲಾಭದಾಯಕ ಚಟುವಟಿಕೆಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಭಾರತದ ಶ್ರೇಷ್ಠ ನಾಗರಿಕ ಮೌಲ್ಯಗಳಾದ ವಸುದೈವ ಕುಟುಂಬಕಂ ಮತ್ತು ‘ಹಂಚಿಕೆ ಮತ್ತು ಆರೈಕೆ’ ಯನ್ನು ವಿದ್ಯಾರ್ಥಿಗಳಿಗೆ ನೆನಪು ಮಾಡಿದ ಅವರು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. “ಹಂಚಿಕೆ ಮಾಡಿಕೊಳ್ಳುವುದು ಹೆಚ್ಚಿನ ಸಂತೋಷ ನೀಡುತ್ತದೆ” ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಭಾರತದ ಪುರಾತನ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ತಿಳಿಸಿಕೊಡುವ ಮೂಲಕ ಅವರ ಜ್ಞಾನವನ್ನು ವೃದ್ಧಿಸಲು ಕ್ರಮ ಕೈಗೊಳ್ಳುವಂತೆ ಉಪರಾಷ್ಟ್ರಪತಿಗಳು ಶಿಕ್ಷಣ ಸಂಸ್ಥೆಗಳಿಗೆ ಕರೆ ನೀಡಿದರು.

ಜನರು ಪ್ರಕೃತಿಸ್ನೇಹಿಯಾಗುವ ಅಗತ್ಯವಿದೆ ಎಂದು ಕರೆ ನೀಡಿದ ಅವರು, ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಸಂರಕ್ಷಿಸಬೇಕು ಮತ್ತು ಸಂಸ್ಕೃತಿಯನ್ನು ಉತ್ತೇಜಿಸಬೇಕು ಎಂದರು. ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದು ಅವರು ಮನವಿ ಮಾಡಿದರು.

            ರಾಷ್ಟ್ರೀಯ ಶ್ರೇಯಾಂಕ ನೀತಿ ಸಂಸ್ಥೆಗಳು(ಎನ್ಐಆರ್ ಎಫ್) ಅಡಿಯಲ್ಲಿ 100 ಅತ್ಯುತ್ತಮ ಶ್ರೇಷ್ಠ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವುದಕ್ಕೆ ಎನ್ಐಟಿ ಅಗರ್ತಲಾ ಸಂಸ್ಥೆಯನ್ನು ಶ್ಲಾಘಿಸಿದರು.

ಎನ್ಐಟಿ ಅಗರ್ತಲಾದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಸತಿ, ಎನ್ಐಟಿ ಅಗರ್ತಲಾದ ನಿರ್ದೇಶಕ ಪ್ರೊ|| ಎಚ್.ಕೆ. ಶರ್ಮಾ, ರಿಜಿಸ್ಟ್ರಾರ್ ಡಾ. ಗೋವಿಂದ ಭಾರ್ಗವ, ಅಕಾಡೆಮಿಕ್ಸ್ ಡೀನ್ ಅಜಯ್ ಕುಮಾರ್ ದಾಸ್, ಅಮೆರಿಕದ ಪಿಯುಆರ್ ಡಿಯುಇ ವಿಶ್ವವಿದ್ಯಾಲಯದ ಪ್ರೊ|| ಗೌತಮ್ ದಮೂರಿ, ಮುಥಾ ಕೈಗಾರಿಕೆಗಳ ಶ್ರೀ ಅನಿಲ್ ಮುಥಾ, ಹಾಗೂ ವಿದ್ಯಾರ್ಥಿಗಳು ಬೋಧಕಾ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಉಪರಾಷ್ಟ್ರಪತಿಗಳ ಭಾಷಣದ ಪೂರ್ಣ ಪಠ್ಯ ಕೆಳಗಿನಂತಿದೆ -

“ಇಂದು ಅಗರ್ತಲಾದಲ್ಲಿ ನಡೆಯುತ್ತಿರುವ ಎನ್ಐಟಿ ಅಗರ್ತಲಾದ 13ನೇ ಘಟಿಕೋತ್ಸವದಲ್ಲಿ ವರ್ಚುವಲ್ ರೂಪದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಕೋರ್ಸ್ ಆರಂಭಿಸಿದಾಗ ನಾವು ರೂಪದಲ್ಲಿ ಪದವಿಗಳನ್ನು ಸ್ವೀಕರಿಸುತ್ತೇವೆ ಎಂದು ಖಂಡಿತ ಯೋಚಿಸಿರಲಿಕ್ಕಿಲ್ಲ. ಆದರೆ ಕೋವಿಡ್-19 ಸಾಂಕ್ರಾಮಿಕ ನಮ್ಮ ಜೀವನಗಳನ್ನು ಹಿಂದೆಂದಿಗೂ ಕಾಣದ ರೀತಿಯಲ್ಲಿ ಬದಲಾಯಿಸಿವೆ ಮತ್ತು ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮಗಳಾಗಿದ್ದು, ಆನ್ ಲೈನ್ ಶಿಕ್ಷಣ ಮತ್ತು ವರ್ಚುವಲ್ ಘಟಿಕೋತ್ಸವಗಳು ಹೊಸ ಸಾಮಾನ್ಯ ಪದ್ಧತಿಗಳಾಗಿವೆ.

ಇ-ಘಟಿಕೋತ್ಸವವನ್ನು ಆಯೋಜಿಸುವ ಮೂಲಕ ವರ್ಚುವಲ್ ವೇದಿಕೆಯಲ್ಲಿ ಇಂತಹ ಸ್ಮರಣೀಯ ಸಂದರ್ಭಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿದ ಕ್ರಮಕ್ಕಾಗಿ ನಾನು ಎನ್ಐಟಿಯನ್ನು ಅಭಿನಂದಿಸುತ್ತೇನೆ.

ಮೊದಲಿಗೆ ನಾನು ಇಂತಹ ಪ್ರತಿಷ್ಠಿತ ಸಂಸ್ಥೆಯಿಂದ ಪದವಿಯನ್ನು ಪೂರೈಸಿ, ಹೊರಬರುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಅವರನ್ನು ಬೆಂಬಲಿಸಿ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿ ಹಾಗೂ ಬೋಧಕರನ್ನು ನಾನು ಶ್ಲಾಘಿಸುತ್ತೇನೆ.  

2019-20ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯಿಂದ ಒಟ್ಟು 534 ವಿದ್ಯಾರ್ಥಿಗಳಿಗೆ ಬಿ-ಟೆಕ್ ಪದವಿ, ಒಟ್ಟು 181 ವಿದ್ಯಾರ್ಥಿಗಳಿಗೆ ಎಂ-ಟೆಕ್ ಪದವಿ, 29 ವಿದ್ಯಾರ್ಥಿಗಳಿಗೆ ಬಿಎಸ್ ಮತ್ತು ಬಿಟಿ ಪದವಿ, 31 ವಿದ್ಯಾರ್ಥಿಗಳಿಗೆ ಬಿಎಸ್ ಎಂಎಸ್ ಮತ್ತು ಬಿಟಿಎಂಟಿ ಪದವಿ, 24 ವಿದ್ಯಾರ್ಥಿಗಳಿಗೆ ಎಂಎಸ್ಸಿ ಪದವಿ, 20 ವಿದ್ಯಾರ್ಥಿಗಳಿಗೆ ಎಂಸಿಎ ಪದವಿ, 14 ವಿದ್ಯಾರ್ಥಿಗಳಿಗೆ ಎಂಬಿಎ ಪದವಿಯನ್ನು ಘಟಿಕೋತ್ಸವದಲ್ಲಿ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ವರ್ಷ 24 ಸಂಶೋಧಕರಿಗೆ ಪಿ ಎಚ್ ಡಿ ಪ್ರದಾನ ಮಾಡಲಾಗುತ್ತಿದೆ. 

2006ರಲ್ಲಿ ತ್ರಿಪುರಾ ಇಂಜಿನಿಯರಿಂಗ್ ಕಾಲೇಜನ್ನು ಎನ್ಐಟಿ ಅಗರ್ತಲಾ ಸಂಸ್ಥೆಯನ್ನಾಗಿ ಉನ್ನತೀಕರಿಸಿ 15 ವರ್ಷಗಳಾಗಿವೆ. ಈ ಅವಧಿಯಲ್ಲಿ ಎನ್ಐಟಿ ಅಗರ್ತಲಾ ಅತ್ಯುತ್ತಮ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಒದಗಿಸುವ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಹೊರಹೊಮ್ಮಿರುವುದು ಸಂತೋಷಕರ ಸಂಗತಿ. ಕಳೆದ ಮೂರು ವರ್ಷಗಳಿಂದ ಸಂಸ್ಥೆ ರಾಷ್ಟ್ರೀಯ ಶ್ರೇಯಾಂಕ ನೀತಿ ಸಂಸ್ಥೆ (ಎನ್ಐಆರ್ ಎಫ್) ಅಡಿಯಲ್ಲಿ ದೇಶದ 100 ಉತ್ತಮ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿ ಖ್ಯಾತಿ ಪಡೆದಿದೆ.

ಅಲ್ಲದೆ ಎನ್ಐಟಿ ಅಗರ್ತಲಾ ಸಂಸ್ಥೆ, ದೇಶದ ಬಾಹ್ಯಾಕಾಶ ತಂತ್ರಜ್ಞಾನದ ಅಗತ್ಯತೆಗಳನ್ನು ಪೂರೈಸಲು ಮತ್ತು ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಇಸ್ರೋದ ಬಾಹ್ಯಾಕಾಶ ತಂತ್ರಜ್ಞಾನ ಸಂಪೋಷಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಅತ್ಯುತ್ತಮ ಬೆಳವಣಿಗೆಯಾಗಿದೆ.

ನನ್ನ ನೆಚ್ಚಿನ ಮಿತ್ರರೇ,

ಎನ್ಐಟಿ ಅಗರ್ತಲಾ ಮತ್ತು ನಮ್ಮ ದೇಶದ ಇತರ ಪ್ರಮುಖ ಸಂಸ್ಥೆಗಳು ನಮ್ಮ ಪುರಾತನ ಶಿಕ್ಷಣ ವ್ಯವಸ್ಥೆಯ ವೈಭವದ ಉದಾಹರಣೆಯಾಗಿವೆ. ಭಾರತ ‘ವಿಶ್ವ ಗುರು’ ಎಂದು ಖ್ಯಾತಿಗಳಿಸಿತ್ತು ಮತ್ತು ವಿಶ್ವದ ಅತ್ಯುತ್ತಮ ಕಲಿಕಾ ಕೇಂದ್ರಗಳು ತಕ್ಷಶಿಲಾ, ನಳಂದ ಜಗತ್ತಿನ ಎಲ್ಲ ಮೂಲೆ ಮೂಲೆಗಳಿಂದ ಸಹಸ್ರಾರು ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಆಕರ್ಷಿಸುತ್ತಿದ್ದವು.

ಚರಕ, ಶುಶ್ರುತ, ಆರ್ಯಭಟ, ಭಾಸ್ಕರಾಚಾರ್ಯ, ಚಾಣಕ್ಯ, ಪತಂಜಲಿ ಮತ್ತು ಇತರ ಹಲವು ವಿದ್ವಾಂಸರನ್ನು ಭಾರತ ರೂಪಿಸಿದೆ ಮತ್ತು ಅವರು ನಾನಾ ಕ್ಷೇತ್ರಗಳಲ್ಲಿ ಅಸಮಾನ್ಯ ಕೊಡುಗೆಯನ್ನು ನೀಡಿದ್ದಾರೆ.

ನಮ್ಮ ಪುರಾತನ ಶೈಕ್ಷಣಿಕ ಪದ್ಧತಿ, ವ್ಯಕ್ತಿಯ ಸಮಗ್ರ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಒತ್ತು ನೀಡುತ್ತಿತ್ತು. ನಾವು ಸದಾ ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬಾಳ್ವೆ ನಡೆಸುವುದನ್ನು ಕಲಿಸಿದ್ದೇವೆ ಮತ್ತು ಎಲ್ಲ ಜೀವಿಗಳನ್ನು ಗೌರವಿಸುವುದನ್ನು ಕಲಿತಿದ್ದೇವೆ. ನಮ್ಮ ಶಿಕ್ಷಣ ಜೀವನಕ್ಕೆ ವಾಸ್ತವ, ಸಮಗ್ರ ಮತ್ತು ಪೂರಕವಾಗಿದೆ. ಶಿಕ್ಷಣದಲ್ಲಿ ನಿರಂತರ ಕಲಿಕೆ ಪ್ರಕ್ರಿಯೆ ಮುಂದುವರಿದಿದೆ.

ಮಿತ್ರರೇ,

ನೂತನ ಶಿಕ್ಷಣ ನೀತಿಯನ್ನು ಅದೇ ದೂರದೃಷ್ಟಿಯಿಂದ ರೂಪಿಸಲಾಗಿದೆ. ಅದರಲ್ಲಿ ಭಾರತವನ್ನು ಜ್ಞಾನದ ಸೂಪರ್ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಮತ್ತು ಇಡೀ ಶಿಕ್ಷಣ ವಲಯದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದೇವೆ. ನಮ್ಮ ಪುರಾತನ ಪದ್ಧತಿಯಿಂದ ಪ್ರೇರಣೆ ಪಡೆದು, ಭಾರತೀಯ ಶಿಕ್ಷಣವನ್ನು ಸಮಗ್ರ, ಬಹುಶಿಸ್ತೀಯ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಉನ್ನತ ಶಿಕ್ಷಣದಲ್ಲಿ ಸರಳೀಕರಣವನ್ನು ಪರಿಚಯಿಸಲಾಗಿದೆ. ಹಿಂದಿದ್ದ ನಾನಾ ವಿಭಾಗಗಳಲ್ಲಿ ಕಠಿಣ ಪ್ರತ್ಯೇಕಿಸುವಿಕೆ ತೆಗೆದು ಹಾಕಲಾಗಿದೆ. ಅದರ ಬದಲಿಗೆ ಪದವಿ ಕಾರ್ಯಕ್ರಮಗಳು ಬಹುಶಿಸ್ತೀಯವಾಗಿರುತ್ತವೆ. ವೈದ್ಯಕೀಯ ಮತ್ತು ಕಾನೂನು ಕಾಲೇಜುಗಳನ್ನು ಹೊರತುಪಡಿಸಿ, ಎಲ್ಲ ಸಂಸ್ಥೆಗಳ ಕಾರ್ಯವೈಖರಿ ಮೇಲೆ ನಿಗಾ ಇಡಲು ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡಲು ಏಕೈಕ ನಿಯಂತ್ರಣ ಸಂಸ್ಥೆ ಇರಲಿದೆ.

ಎಲ್ಲ ನೀತಿ ಸುಧಾರಣಾ ಕ್ರಮಗಳು ಹಲವು ವರ್ಷಗಳಿಂದ ಬಾಕಿ ಇದ್ದವು, ಇದೀಗ ತಂದಿರುವ ನೀತಿ ನಮ್ಮ ದೇಶದಲ್ಲಿ ಶೈಕ್ಷಣಿಕ ಆಯಾಮವನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಲಿದೆ. ಸುಧಾರಣೆಗಳನ್ನು ಪರಿಣಾಮಕಾರಿಯಾಗಿ, ದೂರದೃಷ್ಟಿಯನ್ನು ಈಡೇರಿಸುವ ಹೊಣೆಗಾರಿಕೆ ನಮ್ಮ ಗುರುಗಳು ಮತ್ತು ಶಿಕ್ಷಕರ ಮೇಲಿದೆ. ಎಲ್ಲ ವಿಶ್ವವಿದ್ಯಾಲಯಗಳು, ಐಐಟಿಗಳು ಮತ್ತು ಎನ್ಐಟಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಬೋಧನಾ ಕ್ರಮಗಳನ್ನು ಸಂಪೂರ್ಣವಾಗಿ ಪುನರ್ ರೂಪಿಸಲು ಮತ್ತು 21ನೇ ಶತಮಾನದ ಅಗತ್ಯತೆಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ಶಾಸ್ತ್ರದ ಕೌಶಲ್ಯವನ್ನು ಶಿಕ್ಷಕರಿಗೆ ತಿಳಿಸಿ, ಸಜ್ಜಾಗಲು ಇದು ಸಕಾಲ.

ಇದೇ ವೇಳೆ ನಾನಾ ವಲಯಗಳಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಹೊಣೆ ನಮ್ಮ ಸಂಸ್ಥೆಗಳ ಮೇಲಿದೆ. ಅವರು ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಬೇಕು ಮತ್ತು ನಮ್ಮ ಕ್ಯಾಂಪಸ್ ಗಳನ್ನು ಕ್ರಿಯಾಶೀಲತೆ ಮತ್ತು ಸಂಶೋಧನಾ ಕೇಂದ್ರಗಳ ಆಕರ್ಷಣೀಯ ತಾಣಗಳನ್ನಾಗಿ ಮಾಡಬೇಕು. ಪ್ರತಿಯೊಂದು ಸಂಸ್ಥೆಗಳೂ ಸಹ ಸಂದರ್ಭವನ್ನು ಬಳಸಿಕೊಳ್ಳಬೇಕು ಮತ್ತು ಭಾರತವನ್ನು ಜ್ಞಾನ ಮತ್ತು ಆವಿಷ್ಕಾರದ ತಾಣವನ್ನಾಗಿ ರೂಪಿಸಬೇಕು ಎಂದು ನಾನು ಬಯಸುತ್ತೇನೆ. ನಾವು ಮತ್ತೊಮ್ಮೆ ವಿಶ್ವ ಗುರು ಆಗುವ ಆಕಾಂಕ್ಷೆ ಹೊಂದಬೇಕು.

ನನ್ನ ಯುವ ಮಿತ್ರರೇ,

ನಿಮ್ಮ ಜೀವನದಲ್ಲಿ ಇಂದು ಅತ್ಯಂತ ಪ್ರಮುಖವಾದ ದಿನ. ಇಡೀ ಜೀವನದುದ್ದಕ್ಕೂ ದಿನ ನಿಮ್ಮ ನೆನಪಿನಲ್ಲಿ ಉಳಿಯುತ್ತದೆ. ನಿಮ್ಮ ಪರಿಶ್ರಮದಿಂದಾಗಿ ಇಂದು ನಿಮಗೆ ಪದವಿಯ ಮಾನ್ಯತೆ ದೊರಕುತ್ತಿದೆ.

ಮಿತ್ರರೇ, ಇದೀಗ ನಿಮ್ಮ ಜೇಬುಗಳಲ್ಲಿ ಅತ್ಯಂತ ಶಕ್ತಿಶಾಲಿ ಸಾಧನವನ್ನು ಹೊಂದಿದ್ದೀರಿ. ನೀವು ಇಂದು ಪಡೆಯುತ್ತಿರುವ ಪದವಿ ಅತ್ಯಂತ ಪ್ರಮುಖವಾದುದು. ಅದು ನಿಮಗೆ ವ್ಯಕಿತ್ವಕ್ಕೆ ಘನತೆ ತಂದುಕೊಡಲಿದೆ. ಅದಕ್ಕೂ ಮುಖ್ಯವಾದುದು ಏನೆಂದರೆ ನೀವು ನಿಮ್ಮ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಜ್ಞಾನ, ಕೌಶಲ್ಯ ಮತ್ತು ವಿವೇಕವನ್ನು, ಇಷ್ಟು ವರ್ಷ ನೀವು ಕಲಿತಿರುವ ಇವುಗಳನ್ನು ನೀವು ಉತ್ತಮ ಪ್ರಕಾಶಮಾನವಾದ ಹಾಗೂ ಯಶಸ್ವಿ ವೃತ್ತಿಯನ್ನು ಕಟ್ಟಿಕೊಳ್ಳಲು ಬಳಸಿಕೊಳ್ಳಿ. ಇಲ್ಲಿಂದ ಮುಂದೆ ನೀವಿಡುವ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಕನಸು ಮತ್ತು ಗುರಿಗಳ ಈಡೇರಿಕೆಯಲ್ಲಿ ಮಹತ್ವದ್ದಾಗುತ್ತದೆ.

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಸದಾ ಯುವಕರಿಗೆ ಸಣ್ಣ ಕನಸುಗಳನ್ನು ಹೊಂದಬೇಡಿ, ದೊಡ್ಡ ಕನಸುಗಳನ್ನು ಕಾಣಿ ಎಂದು ಹೇಳುತ್ತಿದ್ದರು. ಅದು ನಿಮಗೆ ಗುರಿಯಾಗಬೇಕು. ಕನಸು ದೊಡ್ಡದಾಗಿರಬೇಕು ಮತ್ತು ಗುರಿಯನ್ನು ಸಾಧಿಸಲು ನೀವು ಕಠಿಣ ಶ್ರಮ ವಹಿಸಬೇಕು. ನೀವು ಆಯ್ಕೆ ಮಾಡಿಕೊಂಡಿರುವ ಮಾರ್ಗದಲ್ಲಿ ವಿಚಲಿತರಾಗದೆ ನೀವು ದೃಢತೆ, ಬದ್ಧತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಖಂಡಿತ ಯಶಸ್ಸು ಸಾಧಿಸುತ್ತೀರ.

ನೀವು ಸಂಸ್ಥೆಯಿಂದ ಹೊರ ಹೋಗುತ್ತಿದ್ದಂತೆ ಹೊಸ ಆಕರ್ಷಕ ಜಗತ್ತು ನಿಮಗಾಗಿ ಕಾಯುತ್ತಿರುತ್ತದೆ. ಎಲ್ಲವೂ ತುಂಬಾ ಚೆನ್ನಾಗಿ ಇರುವುದಿಲ್ಲ. ಅಲ್ಲಿ ಸವಾಲುಗಳು ಇರುತ್ತವೆ ಮತ್ತು ಏಳುಬೀಳುಗಳು ಇರುತ್ತವೆ. ನೀವು ನಿಮ್ಮ ಶೋಧನೆಯನ್ನು ಮುಂದುವರಿಸಬೇಕು. ಸ್ವಾಮಿ ವಿವೇಕಾನಂದರು ಹೇಳಿದ್ದಂತೆ “ಗುರಿ ಸಾಧಿಸುವವರೆಗೆ ನಿಲ್ಲಬೇಡಿ”,  ನೀವು ಮುಂದುವರಿಯುತ್ತಲೇ ಇರಬೇಕು.  

 ಯಾರು ಹೊಸದನ್ನು ಕಲಿತು ಅಳವಡಿಸಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಯಶಸ್ಸುಗಳಿಸುತ್ತಾರೆ.

ಸಂಸ್ಥೆಗಳು ಮತ್ತು ಪದವಿಗಳು ಹೊಸ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೇವಲ ಕಲಾಕೃತಿಗಳಾಗಬಾರದು, ನಿಮ್ಮನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕಲಿಕೆಯಲ್ಲಿ ನಮ್ಮ ಮನೋಭಾವ ಬದಲಾಗಬೇಕು. ಸಂಕುಚಿತ ಭಾವನೆ ಇದ್ದರೆ ಜ್ಞಾನ ಹೊಂದುವುದಕ್ಕೆ ಅರ್ಥವೇ ಇರುವುದಿಲ್ಲ. ಬಡತನ ನಿರ್ಮೂಲನೆ, ಕೃಷಿ ಉತ್ಪಾದನೆ ಹೆಚ್ಚಳ, ಮಾಲಿನ್ಯ ಮತ್ತು ರೋಗಗಳ ನಿಯಂತ್ರಣ ಸೇರಿದಂತೆ ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಹತ್ತಿಕ್ಕಲು ಅಂತರ್ ಶಿಸ್ತೀಯ ಮನೋಭಾವವನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ.

ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಸಂಶೋಧನೆ ಅತ್ಯಂತ ಪ್ರಮುಖವಾಗಿದ್ದು, ಅದರಲ್ಲಿ ಖಾಸಗಿ ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆ ವೃದ್ಧಿಸಬೇಕು. ಕಾರ್ಪೊರೇಟ್ ಕಂಪನಿಗಳು ನಾನಾ ವಲಯಗಳಲ್ಲಿ ಪ್ರಮುಖ ಸಂಶೋಧನಾ ಯೋಜನೆಗಳನ್ನು ಗುರುತಿಸಬೇಕು ಮತ್ತು ಅವುಗಳಿಗೆ ಸಿಎಸ್ಆರ್ ಯೋಜನೆ ಅಡಿ ಆರ್ಥಿಕ ನೆರವು ನೀಡಬೇಕು ಎಂದು ಕರೆ ನೀಡುತ್ತೇನೆ.

ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿದೆ. ವಿಶ್ವ ಆರ್ಥಿಕ ವೇದಿಕೆ ವ್ಯಾಖ್ಯಾನಿಸಿರುವಂತೆ ನಾಲ್ಕನೇ ಕೈಗಾರಿಕಾ ಕ್ರಾಂತಿ ನಡೆಯುತ್ತಿದ್ದು, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ತ್ರಿಡಿ ಪ್ರಿಂಟಿಂಗ್ ತಂತ್ರಜ್ಞಾನ ಸಮ್ಮಿಶ್ರಣದ ಆವಿಷ್ಕಾರಗಳು ಹೆಚ್ಚಾಗಿದೆ. ಇದು ಭವಿಷ್ಯದ ದೂರದೃಷ್ಟಿಯಲ್ಲ. ಯುವ ಸ್ನೇಹಿತರೇ ಇದು ವಾಸ್ತವ.

ಹಾಗಾಗಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರು ಯಥಾಸ್ಥಿತಿ ಜಗತ್ತಿನಲ್ಲಿಯೇ ಮುಂದುವರಿಯುವಂತಿಲ್ಲ. ಅವರು ನಿರಂತರವಾಗಿ ಕಲಿಯಬೇಕು. ತಮಗೆ ತಾವೇ ನವೀಕರಣಗೊಳ್ಳಬೇಕು (ಅಪ್ ಡೇಟ್ ಮಾಡಿಕೊಳ್ಳಬೇಕು). ಪ್ರತಿ ದಿನವೂ ಆವಿಷ್ಕಾರಗಳನ್ನು ಮಾಡಬೇಕು. ಅವರು ಬುದ್ಧಿಯನ್ನು ಚುರುಕು ಮಾಡಿಕೊಳ್ಳಬೇಕು.

ನೆಚ್ಚಿನ ಸಹೋದರ ಸಹೋದರಿಯರೇ,

ಭಾರತಕ್ಕೆ ವಿಶಿಷ್ಟ ರೀತಿಯಲ್ಲಿ ಆಶೀರ್ವಾದವಿದೆ, ಏಕೆಂದರೆ ಇದು ಯುವ ರಾಷ್ಟ್ರ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಜನರಿದ್ದಾರೆ. ನಾವು ಯುವಕರ ಶಕ್ತಿಯನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳುವ ಅಗತ್ಯವಿದೆ ಮತ್ತು ಅವರಲ್ಲಿ ಉದ್ಯಮಶೀಲತೆ ಉತ್ತೇಜನಕ್ಕೆ ಸೂಕ್ತ ಪೂರಕ ವಾತಾವರಣಕ್ಕೆ ನಿರ್ಮಾಣ ಮಾಡಬೇಕು. ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಒತ್ತು ನೀಡುವ ಮೂಲಕ ಅವರಲ್ಲಿನ ಪ್ರತಿಭೆ ಮತ್ತು ಕೌಶಲ್ಯವನ್ನು ಬಳಸಿಕೊಳ್ಳಲು ಇದು ಸಕಾಲ. ಎನ್ಐಟಿ ಅಗರ್ತಲಾದಂತಹ ಸಂಸ್ಥೆಗಳು ಕೇವಲ ಉದ್ಯೋಗ ಬಯಸುವಂತಹ ವಿದ್ಯಾರ್ಥಿಗಳನ್ನಲ್ಲ. ಉದ್ಯೋಗ ಸೃಷ್ಟಿಸುವಂತಹವರನ್ನು ರೂಪಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು.

ಎನ್ಐಟಿ ಅಗರ್ತಲಾ, ಸಮಾಜ ಮತ್ತು ಕೈಗಾರಿಕೆಯ ಹೊಸ ಬೇಡಿಕೆಗಳನ್ನು ಅಳವಡಿಸಿಕೊಳ್ಳಲಿದೆ ಎಂಬ ಭರವಸೆ ನನಗಿದೆ. ಈ ಸಂಸ್ಥೆ ತನ್ನ ಸುತ್ತಮುತ್ತಲಿನ ಹಲವು ಗ್ರಾಮಗಳನ್ನು ದತ್ತು ಪಡೆದಿದೆ ಎಂದು ತಿಳಿದು ನನಗೆ ಸಂತಸವಾಗಿದೆ ಮತ್ತು ಸಂಸ್ಥೆ ಗ್ರಾಮಗಳನ್ನು ‘ಮಾದರಿ ಗ್ರಾಮ’ಗಳನ್ನಾಗಿ ಮಾಡುವ ಗುರಿ ಹೊಂದಿದೆ.

ಯುವಜನರ ಎಲ್ಲ ಪೋಷಕರನ್ನು ಮತ್ತು ಅವರ ಗುರುಗಳನ್ನು ನಾನು ಅಭಿನಂದಿಸುತ್ತೇನೆ. ಅವು ವಿದ್ಯಾರ್ಥಿಗಳ ಕಲಿಕೆ ಮತ್ತು ಅಭಿವೃದ್ಧಿಯನ್ನು ಪೋಷಿಸಿ, ಕೊಡುಗೆ ನೀಡಿದ್ದಾರೆ.

ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ನಾನು ಇಂದು ವರ್ಚುವಲ್ ರೂಪದಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ಇ-ಘಟಿಕೋತ್ಸವದ ಆಯೋಜನೆ ನಮ್ಮ ಯುವ ಮಿತ್ರರಿಗೆ ಸ್ವಲ್ಪ ಸ್ಫೂರ್ತಿದಾಯಕ ಉತ್ತೇಜನ ದೊರಕಿದೆ ಮತ್ತು ಅವರು ತಮ್ಮ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗಲಿದೆ ಎಂಬ ಆಶಯ ನನಗಿದೆ.

ವಿದ್ಯಾರ್ಥಿಗಳು, ಅವರ ಪೋಷಕರು, ಬೋಧನಾ ಸಿಬ್ಬಂದಿ ಮತ್ತು ಎನ್ಐಟಿ ಅಗರ್ತಲಾ ಜೊತೆ ಸಂಬಂಧ ಹೊಂದಿರುವ ಎಲ್ಲರಿಗೂ ನಾನು ಶುಭಾಶಯಗಳನ್ನು ಹೇಳಲು ಬಯಸುತ್ತೇನೆ.

ಉಪನಿಷತ್ ‘ಬೃಹದರಣ್ಯಕ’ದಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿದ್ಯಾರ್ಥಿಗಳು ಕುರಿತ ಮಾತುಗಳನ್ನು ಹೇಳುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

“ನೀವು ಎಷ್ಟು ಆಳವಾಗಿ ಯೋಚಿಸಬಲ್ಲಿರಿ, ನಿಮ್ಮಲ್ಲಿನ ಆಸೆ ಜೀವಂತವಾಗಿರಬೇಕು

“ನಿಮ್ಮ ಬಯಕೆ, ನಿಮ್ಮ ಸಂಕಲ್ಪ,

ನಿಮ್ಮ ಸಂಕಲ್ಪ, ನಿಮ್ಮ ಕೆಲಸ

ನಿಮ್ಮ ಕೆಲಸವೇ, ನಿಮ್ಮ ಭವಿಷ್ಯದ ಗುರಿಯಾಗಬೇಕು

ಧನ್ಯವಾದಗಳು”

***


(Release ID: 1673528) Visitor Counter : 351