ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯವರ ‘ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ ಕರೆಗೆ ಆಧ್ಯಾತ್ಮಿಕ ಮುಖಂಡರ ಬೆಂಬಲ
ಆತ್ಮನಿರ್ಭರ ಭಾರತ ಆಂದೋಲನಕ್ಕೆ ಸಂತ ಸಮಾಜದ ಆಶೀರ್ವಾದ
Posted On:
17 NOV 2020 1:50PM by PIB Bengaluru
‘ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ಯ ಮೂಲಕ ಆತ್ಮನಿರ್ಭರ ಭಾರತ ಆಂದೋಲನವನ್ನು ಜನಪ್ರಿಯಗೊಳಿಸಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಆಧ್ಯಾತ್ಮಿಕ ಮುಖಂಡರಿಗೆ ಮಾಡಿದ ಮನವಿಗೆ ದೇಶದ ಪ್ರಮುಖ ಆಧ್ಯಾತ್ಮಿಕ ನಾಯಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನ ಮಂತ್ರಿಯವರ ಮನವಿಗೆ ‘ಸಂತ ಸಮಾಜವು ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದೆ. ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಆಧ್ಯಾತ್ಮಿಕ ನಾಯಕರು ಸಾರ್ವಜನಿಕ ಬದ್ಧತೆಯೊಂದಿಗೆ ಮುಂದೆ ಬಂದಿದ್ದಾರೆ ಮತ್ತು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಅಂಗವಾಗಿ ನಿನ್ನೆ ‘ಶಾಂತಿ ಪ್ರತಿಮೆ’ಅನಾವರಣ ಮಾಡಿದ ಪ್ರಧಾನ ಮಂತ್ರಿಯವರು ಈ ಕರೆ ಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಮೂಲ ಭಕ್ತಿ ಚಳವಳಿಯಾಗಿತ್ತು. ಅದೇ ರೀತಿ ಇಂದು, ಆತ್ಮನಿರ್ಭರ ಭಾರತ ಆಂದೋಲನಕ್ಕೆ ನಮ್ಮ ದೇಶದ ಸಂತರು, ಮಹಾತ್ಮರು, ಮಹಾಂತರು ಮತ್ತು ಆಚಾರ್ಯರು ಬುನಾದಿ ಒದಗಿಸಲಿದ್ದಾರೆ ಎಂದು ಶ್ರೀ ಮೋದಿ ಹೇಳಿದ್ದರು, ತಮ್ಮ ಉಪದೇಶ ಮತ್ತು ಅವರ ಅನುಯಾಯಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಆತ್ಮನಿರ್ಭರ ಭಾರತವನ್ನು ಉತ್ತೇಜಿಸುವಂತೆ ಅವರು ಆಧ್ಯಾತ್ಮಿಕ ಮುಖಂಡರಿಗೆ ಕರೆ ನೀಡಿದ್ದರು,
ಪ್ರಧಾನಿಯವರ ಕರೆಗೆ ಬೆಂಬಲವಾಗಿ ತಮ್ಮ ಸಂಸ್ಥೆಗಳಲ್ಲಿ ಯುವಕರು ಆ್ಯಪ್ ರಚಿಸಿದ್ದಾರೆ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ದಿನನಿತ್ಯದ ವಿಷಯಗಳಲ್ಲಿ ಆತ್ಮನಿರ್ಭರ ಭಾರತಕ್ಕೆ ತಮ್ಮ ಬದ್ಧತೆಯನ್ನು ಶ್ರೀ ಶ್ರೀಗಳು ಪುನರುಚ್ಚರಿಸಿದ್ದಾರೆ.
ಪತಂಜಲಿ ಸಂಸ್ಥೆ ಮತ್ತು ತಮ್ಮ ಉದ್ಯಮದ ಅನುಯಾಯಿಗಳ ಬೆಂಬಲ ಆತ್ಮನಿರ್ಭರ ಭಾರತಕ್ಕಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಇತರ ಆಧ್ಯಾತ್ಮಿಕ ಮುಖಂಡರೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರನ್ನು ‘ಸ್ಥಳೀಯತೆಗೆ ಆದ್ಯತೆ’ವೇದಿಕೆಯೊಳಗೆ ತರಲು ಮುಂದಾಗುವುದಾಗಿ ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿಯವರ ಕರೆಗೆ ಪ್ರತಿಕ್ರಿಯೆಯಾಗಿ ಸದ್ಗುರು ಜಗ್ಗಿ ವಾಸುದೇವ್ ಅವರು ಟ್ವೀಟ್ ಮಾಡಿದ್ದಾರೆ “ಸ್ವಾವಲಂಬನೆ ಎಂಬುದು ಒಂದು ಮೂಲಭೂತ ಶಕ್ತಿ, ಅದು ದೃಢ ಮತ್ತು ಸ್ಥಿರ ರಾಷ್ಟ್ರಕ್ಕೆ ಅತ್ಯಗತ್ಯ. ಸ್ವಾವಲಂಬನೆಯು ಪ್ರತ್ಯೇಕವಾಗಿ ನಿಲ್ಲುವುದಲ್ಲ, ಬದಲಿಗೆ ರಾಷ್ಟ್ರೀಯತೆಯೊಂದಿಗೆ ಜಗತ್ತಿನಲ್ಲಿ ಮಹತ್ವ ಪಡೆಯುವಂತಗಿರಬೇಕು. ಇದು ಬದ್ಧತೆಯುಳ್ಳ ನಾಗರಿಕರಿಂದ ಮಾತ್ರ ಸಾಧ್ಯ” ಎಂದು ಅವರು ಹೇಳಿದ್ದಾರೆ.
ಪ್ರಮುಖ ಆಧ್ಯಾತ್ಮಿಕ ನಾಯಕರ ಪರವಾಗಿ ಸ್ವಾಮಿ ಅವಧೇಶಾನಂದ ಅವರು ಒಗ್ಗಟ್ಟಿನ ಬೆಂಬಲ ಘೋಷಿಸಿದ್ದಾರೆ. ಪ್ರಧಾನ ಮಂತ್ರಿಯವರ ಕರೆಯು ಸ್ಪೂರ್ತಿದಾಯಕವಾದುದು ಎಂದು ಅವರು ಹೇಳಿದ್ದಾರೆ.
ಭಾಗವತ ಕಥೆಗಾರ ಮತ್ತು ಆಧ್ಯಾತ್ಮಿಕ ನಾಯಕ ದೇವಕಿ ನಂದನ್ ಠಾಕೂರ್ ಅವರು ಪ್ರಧಾನಿಯವರ ಕರೆಯ ಮೇರೆಗೆ ತಮ್ಮ ಅನುಯಾಯಿಗಳು ‘ಸ್ಥಳೀಯತೆಗೆ ಆದ್ಯತೆ’ ಯನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಆತ್ಮನಿರ್ಭರ ಭಾರತದ ಕರೆಗೆ ಬೆಂಬಲ ಮತ್ತು ಮೆಚ್ಚುಗೆಯ ಭಾವನೆ ಆಧ್ಯಾತ್ಮಿಕ ನಾಯಕರ ಸಂದೇಶಗಳ ಮೂಲಕ ಅನುರಣಿಸುತ್ತಿದೆ. ಈ ನಾಯಕರು ವೈಯಕ್ತಿಕವಾಗಿ ಪ್ರಧಾನಿಯವರ ಕರೆಯನ್ನು ಬೆಂಬಲಿಸುತ್ತಿರುವುದು ಮಾತ್ರವಲ್ಲದೆ 'ಸಂತ ಸಮಾಜ'ದ ಪ್ರತಿಕ್ರಿಯೆಯನ್ನು ಸಮನ್ವಯಗೊಳಿಸಲು ಮುಂದಾಗುತ್ತಿದ್ದಾರೆ,' ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ’ಯ ಆದರ್ಶಗಳನ್ನು ಅಳವಡಿಸಿಕೊಳ್ಳಲು ತಮ್ಮ ಬೆಂಬಲಿಗರಿಗೆ ಕರೆ ನೀಡುತ್ತಿದ್ದಾರೆ ಮತ್ತು ಅವರು ತಮ್ಮ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಈ ಉದ್ದೇಶಕ್ಕೆ ಬಳಸಲು ಪ್ರತಿಜ್ಞೆ ಮಾಡುತ್ತಿದ್ದಾರೆ. ಆಂದೋಲನಕ್ಕೆ ಅವರ ಸ್ಥಿರವಾದ ಬೆಂಬಲವನ್ನು ಈ ಸಂದೇಶಗಳಲ್ಲಿ ಕಾಣಬಹುದು.
****
(Release ID: 1673473)
Visitor Counter : 206
Read this release in:
Tamil
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam