ಗೃಹ ವ್ಯವಹಾರಗಳ ಸಚಿವಾಲಯ

ದೆಹಲಿಯಲ್ಲಿ ಕೋವಿಡ್ -19 ಪ್ರಸರಣ ನಿಯಂತ್ರಣಕ್ಕೆ ಪರಿಶೀಲನಾ ಸಭೆಯಲ್ಲಿ ಕ್ರಮಗಳನ್ನು ಸೂಚಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


ದೆಹಲಿಯಲ್ಲಿ ದುಪ್ಪಟ್ಟಾಗಲಿರುವ ಆರ್.ಟಿ –ಪಿ.ಸಿ.ಆರ್. ಪರೀಕ್ಷಾ ಸಾಮರ್ಥ್ಯ

ದೆಹಲಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯ ಹಿನ್ನೆಲೆಯಲ್ಲಿ ಸಿಎಪಿಎಫ್ ಗಳಿಂದ ಹೆಚ್ಚುವರಿಯಾಗಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಒದಗಿಸಲು ಮತ್ತು ಶೀಘ್ರವೇ ಅವರನ್ನು ದೆಹಲಿಗೆ ವಿಮಾನದ ಮೂಲಕ ಕರೆತರಲು ನಿರ್ಧಾರ

ಮುಂದಿನ 48 ಗಂಟೆಗಳಲ್ಲಿ ದೆಹಲಿ ಸರ್ಕಾರಕ್ಕೆ ಅಗತ್ಯ ಸಂಖ್ಯೆಯ ಬಿಪಾಪ್ ಯಂತ್ರಗಳು ಮತ್ತು ಹೆಚ್ಚಿನ ಹರಿವಿನ ಮೂಗಿನ ತೂರು ನಳಿಗೆಗಳ ವ್ಯವಸ್ಥೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಶ್ರೀ ಅಮಿತ್ ಶಾ ನಿರ್ದೇಶನ

ಇಡೀ ದೆಹಲಿಯಲ್ಲಿ ಏಮ್ಸ್, ದೆಹಲಿ ಎನ್.ಸಿ.ಟಿ ಸರ್ಕಾರ ಮತ್ತು ಎಂಸಿಡಿ ತಂಡಗಳಿಂದ ಮನೆ ಮನೆ ಸಮೀಕ್ಷೆ

ಕೋವಿಡ್ -19 ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲು ಪ್ಲಾಸ್ಮಾ ಚಿಕಿತ್ಸೆ ಮತ್ತು ಪ್ಲಾಸ್ಮಾ ಆಡಳಿತಕ್ಕೆ ಪ್ರಮಾಣಿತ ಶಿಷ್ಟಾಚಾರ ಪ್ರಕಟಿಸಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಮಾಜದ ದುರ್ಬಲ ಮತ್ತು ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐಸಿಎಂಆರ್ ನಿಂದ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳ ನಿಯೋಜನೆ

ಧೌಲಾ ಕುವಾ ನ ಡಿಆರ್.ಡಿ.ಓದಲ್ಲಿ ಹಾಲಿ ಇರುವ ವೈದ್ಯಕೀಯ ಸೌಲಭ್ಯಕ್ಕೆ ಐಸಿಯು ಸಹಿತವಾದ 250-300 ಹಾಸಿಗೆಗಳ ಸೇರ್ಪಡೆ

ಆಕ್ಸಿಜನ್ ಸಾಮರ್ಥ್ಯದ ಹಾಸಿಗೆಗಳ ಲಭ್ಯತೆಯ ಹೆಚ್ಚಳದ ದೃಷ್ಟಿಯಿಂದ
ಛತ್ತಾರ್ ಪುರದಲ್ಲಿ ಸ್ಥಾಪಿಸಲಾಗಿರುವ 10,000 ಕೋವಿಡ್ ಹಾಸಿಗೆಗಳ ಆರೈಕೆ ಕೇಂದ್ರದ ಬಲವರ್ಧನೆ

ದೆಹಲಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲಾತಿ ಸ್ಥಿತಿಗೆ ಅನುಗುಣವಾಗಿ ಕೋವಿಡ್ -19 ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆಯನ್ನು ಭೌತಿಕವಾಗಿ ಪರಿಶೀಲಿಸಲಿರುವ ಬಹು-ವಿಭಾಗೀಯ ಸಮರ್ಪಿತ ತಂಡ

ಗೃಹದಲ್ಲೇ ಪ್ರತ್ಯೇಕವಾಗಿರುವ ಕೋವಿಡ್ -19 ರೋಗಿಗಳ ಬಗ್ಗೆ ನಿಗಾ ಇಡಲು ಮತ್ತು ತುರ್ತು ವೈದ್ಯಕೀಯ ನಿಗಾ ಅಗತ್ಯಬಿದ್ದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ನಿಯಮಿತ ಆಸ್ಪತ್ರೆಗಳಿಗೆಸ್ಥಳಾಂತರಿಸುವುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನು ವಿಶೇಷವಾಗಿ ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವರು

ಮಾಸ್ಕ್ ಧರಿಸುವ ಮೂಲಕ ಕೋವಿಡ್ -19 ಸೂಕ್ತ ನಡವಳಿಕೆಯ ಆನುಸರಣೆಯಲ್ಲಿ ಯಾವುದೇ ಸಡಿಲಿಕೆ ಇಲ್ಲದಂತೆ ಕಟ್ಟುನಿಟ್ಟಾಗಿ ಅಗತ್ಯ ಕ್ರಮಗಳನ್ನು ಜಾರಿ ಮಾಡಲಿರುವ ದೆಹಲಿ ಸರ್ಕಾರದ ಅಧಿಕಾರಿಗಳು ಮತ್ತು ದೆಹಲಿಯ ಪೊಲೀಸ್ ಆಯುಕ್ತರು.

Posted On: 15 NOV 2020 8:36PM by PIB Bengaluru

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಮತ್ತು ಆಸ್ಪತ್ರೆಗಳಲ್ಲಿನ ವೈದ್ಯಕೀಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಬಿಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಂದು ದೆಹಲಿಯ ಕೋವಿಡ್ -19 ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. 

ಮೊದಲಿಗೆ ಡಾ. ವಿ.ಕೆ. ಪಾಲ್ ಪ್ರಾತ್ಯಕ್ಷಿಕೆ ನೀಡಿ, ದೆಹಲಿಯಲ್ಲಿ ಹದಗೆಡುತ್ತಿರುವ ಕೋವಿಡ್ 19 ಪರಿಸ್ಥಿತಿಯ ಬಗ್ಗೆ ವಿವರಿಸಿದರು.  ದೈನಂದಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದನ್ನು ಪ್ರಸ್ತಾಪಿಸಲಾಯಿತು. ಆದಾಗ್ಯೂ ಪ್ರಕರಣಗಳ ಮರಣ ದರ (ಸಿಎಫ್‌.ಆರ್) ನಿಯಂತ್ರಣದಲ್ಲಿ ಮುಂದುವರಿದಿದ್ದು, ಕೋವಿಡ್ -19ಕ್ಕೆ ಮೀಸಲಾದ ಆರೋಗ್ಯ ಮತ್ತು ವೈದ್ಯಕೀಯ ಮೂಲಸೌಕರ್ಯಗಳಾದ ಹಾಸಿಗೆಗಳು, ವೆಂಟಿಲೇಟರ್‌ ಗಳೊಂದಿಗಿನ ಹಾಸಿಗೆಗಳು ಮತ್ತು ಐಸಿಯುಗಳು ಈಗಾಗಲೇ ಒತ್ತಡಕ್ಕೆ ಒಳಗಾಗಿರುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ, ನಿಗಾ ಹೆಚ್ಚಿಸಲು, ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಪರೀಕ್ಷೆಯನ್ನು ಹೆಚ್ಚಿಸುವುದು ಮತ್ತು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ವೇಗವಾಗಿ ನಿರ್ಮಿಸುವುದು ಅತ್ಯಗತ್ಯವಾಗಿದೆ.
.

ಕೇಂದ್ರ ಗೃಹ ಸಚಿವರು ಈ ಸಭೆಯಲ್ಲಿ ಹಲವಾರು ನಿರ್ದೇಶನಗಳನ್ನು ನೀಡಿದರು. ಮೊದಲಿಗೆ ಸ್ವತಃ ದೆಹಲಿಯಲ್ಲಿ ಲಭ್ಯವಿರುವ ಪ್ರಯೋಗಾಲಯಗಳ ಸಾಮರ್ಥ್ಯದ ಗರಿಷ್ಠ ಬಳಕೆಯೊಂದಿಗೆ ಆರ್.ಟಿ. ಪಿ.ಸಿಆರ್. ಪರೀಕ್ಷೆ ಸಾಮರ್ಥ್ಯವನ್ನು ದೆಹಲಿಯಲ್ಲಿ ದುಪ್ಪಟ್ಟು ಮಾಡಬೇಕು; ಬಡವರು ಮತ್ತು ಸಮಾಜದ ದುರ್ಬಲ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಸಂಚಾರಿ ಪ್ರಯೋಗಾಲಯಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐ.ಸಿ.ಎಂ.ಆರ್. ನಿಯೋಜಿಸಬೇಕು; ಬೇರೆ ರಾಜ್ಯಗಳಲ್ಲಿ ಬಳಕೆಯಾಗದೆ ಇರುವ ಕೆಲವು ಪ್ರಯೋಗಾಲಯಗಳನ್ನು ದೆಹಲಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕು; ಮತ್ತು ದೆಹಲಿಯ ನೆರೆಯ ಪ್ರದೇಶಗಳಲ್ಲಿನ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ದೆಹಲಿಯಲ್ಲಿ ಇತ್ತೀಚಿನ ವಾರಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ಸಕ್ರಿಯ ಪ್ರಕರಣ ಪ್ರಮಾಣವನ್ನು ತಗ್ಗಿಸಲು ಅಗತ್ಯವೆಂದು ಪರಿಗಣಿಸಲಾಯಿತು.
 

 ಆಸ್ಪತ್ರೆಯ ಸಾಮರ್ಥ್ಯ ಮತ್ತು ಇತರ ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಶ್ರೀ ಅಮಿತ್ ಶಾ ನಿರ್ದೇಶನ ನೀಡಿದರು. ಧೌಲಾ ಕುವಾನ್‌ ನಲ್ಲಿರುವ ಡಿಆರ್‌.ಡಿಒದ ವೈದ್ಯಕೀಯ ಸೌಲಭ್ಯಕ್ಕೆ ಐಸಿಯು ಸಹಿತವಾದ 250-300 ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಯಿತು, ಪ್ರಸ್ತುತ, ಲಭ್ಯವಿರುವ ಒಟ್ಟು 1000 ಕೋವಿಡ್ -19 ಹಾಸಿಗೆಗಳಲ್ಲಿ ಸುಮಾರು 250 ಹಾಸಿಗೆಗಳಿಗೆ ಐಸಿಯು ಸೌಲಭ್ಯ ಒದಗಿಸಬೇಕು. ಛತ್ತಾರ್ಪುರದಲ್ಲಿ ಸ್ಥಾಪಿಸಲಾಗಿರುವ 10 ಸಾವಿರ ಕೋವಿಡ್ ಹಾಸಿಗೆಗಳ ಆರೈಕೆ ಕೇಂದ್ರವನ್ನು ಆಕ್ಸಿಜನ್ ಸಾಮರ್ಥ್ಯದ ಹಾಸಿಗೆಗಳ ಲಭ್ಯತೆಯ ಅಗತ್ಯದೊಂದಿಗೆ ಬಲಪಡಿಸಬೇಕು ಎಂದರು. ಕೇಂದ್ರ ಗೃಹ ಸಚಿವರು, ಅಗತ್ಯ ಸಂಖ್ಯೆಯ ಬಿಪಾಪ್ ಯಂತ್ರಗಳು ಮತ್ತು ಉನ್ನತ ಹರಿವಿನ ಮೂಗಿನ ತೂರು ನಳಿಗೆಗಳನ್ನು ಮುಂದಿನ 48 ಗಂಟೆಗಳ ಒಳಗಾಗಿ ದೆಹಲಿ ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವರು ನಿರ್ದೇಶಿಸಿದರು. 
ದೆಹಲಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯ ಹಿನ್ನೆಲೆಯಲ್ಲಿ ಸಿಎಪಿಎಫ್ ಗಳಿಂದ ಹೆಚ್ಚುವರಿಯಾಗಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲು ಮೋದಿ ಸರ್ಕಾರ ನಿರ್ಧರಿಸಿದ್ದು, ಅವರನ್ನು ಶೀಘ್ರವೇ ವಿಮಾನಗಳ ಮೂಲಕ ದೆಹಲಿಗೆ ಕರೆತರಲಾಗುವುದು. ಕೋವಿಡ್ 19 ವೈದ್ಯಕೀಯ ಮೂಲಸೌಕರ್ಯಗಳು ದಾಖಲಾತಿಯ ಸ್ಥಿತಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಈ ಹಿಂದೆ ನಿರ್ದೇಶಿಸಿರುವ ರೀತಿಯಲ್ಲಿ ಪ್ರಮುಖವಾಗಿ ಕಾಣುವಂತೆ ಸರಿಯಾದ ಸ್ಥಿತಿಯ ಲಭ್ಯತೆಗಳನ್ನು ಪ್ರದರ್ಶಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಹು ಇಲಾಖೆಗಳ ತಂಡಗಳು ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ನಿರ್ದೇಶಿಸಲಾಯಿತು. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ ಗಳ (ಎಂಸಿಡಿ) ಕೆಲವು ಗುರುತಿಸಲಾದ ಆಸ್ಪತ್ರೆಗಳನ್ನು ಕೋವಿಡ್ -19 ಚಿಕಿತ್ಸೆಗಾಗಿ ವಿಶೇಷವಾಗಿ ಅಲ್ಪ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಸ್ಥಳಾವಕಾಶಕ್ಕಾಗಿ ಮೀಸಲಾದ ಆಸ್ಪತ್ರೆಗಳಾಗಿ ಪರಿವರ್ತಿಸಬೇಕು. ವೈದ್ಯಕೀಯ ಮೂಲಸೌಕರ್ಯಗಳ ಬಲವರ್ಧನೆಯು ದೆಹಲಿಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಕಾಳಜಿ ವಹಿಸಲು ಸಾಕಷ್ಟು ಸಂಖ್ಯೆಯ ಹಾಸಿಗೆಗಳು / ವೆಂಟಿಲೇಟರ್‌ ಗಳು / ಐಸಿಯುಗಳು ಲಭ್ಯವಾಗುವಂತೆ ಖಾತ್ರಿಪಡಿಸಬೇಕು. ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ಚಿಕಿತ್ಸೆ ಮತ್ತು ಪ್ಲಾಸ್ಮಾ ಆಡಳಿತಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಮಾಣಿತ ಶಿಷ್ಟಾಚಾರಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಲಾಯಿತು. 

ಕಂಟೈನ್ಮೆಂಟ್ ವಲಯಗಳ ಸ್ಥಾಪನೆ, ಸಂಪರ್ಕ ಪತ್ತೆ ಮತ್ತು ಸಂಪರ್ಕತಡೆಯನ್ನು ನಿಗದಿಪಡಿಸುವುದು, ಮತ್ತು ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳ ಸ್ಕ್ರೀನಿಂಗ್ ಮುಂತಾದ ಸಂಪೂರ್ಣ ನಿಯಂತ್ರಣ ಕ್ರಮಗಳನ್ನು ನಿರಂತರವಾಗಿ ಪರಿಶೀಲಿಸಬೇಕು, ಅನುಷ್ಠಾನದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಗೃಹ ಸಚಿವರು ಒತ್ತಿ ಹೇಳಿದರು. ಈ ಕಂಟೈನ್ಮೆಂಟ್ ತಂತ್ರಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಯಾವುದೇ ಸಡಿಲಿಕೆ ಇರಬಾರದು. ಸಂಬಂಧಪಟ್ಟ ಅಧಿಕಾರಿಗಳು, ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ, ಈ ವಿಷಯದಲ್ಲಿ ಅನುಸರಣೆ ಖಾತ್ರಿಪಡಿಸಿಕೊಳ್ಳಲು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ ಮತ್ತು ಈ ವಿಷಯದಲ್ಲಿ ಗಮನಿಸಿದ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ಕೋವಿಡ್ -19 ರೋಗಿಗಳ ಬಗ್ಗೆ ನಿಗಾ ಇಡಬೇಕಾದ ಅಗತ್ಯವನ್ನು ಗೃಹ ಸಚಿವರು ನಿರ್ದಿಷ್ಟವಾಗಿ ಒತ್ತಿ ಹೇಳಿದರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವೆಂದು ಪರಿಗಣಿಸಿದ ಕೂಡಲೇ ಅವರನ್ನು ನಿಯಮಿತ ಆಸ್ಪತ್ರೆಗಳಿಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಏಮ್ಸ್, ದೆಹಲಿಯ ಎನ್‌.ಸಿಟಿ ಸರ್ಕಾರ ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ಸ್ (ಎಂಸಿಡಿ) ತಂಡಗಳು ಇಡೀ ದೆಹಲಿಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸಬೇಕು ಎಂದು ನಿರ್ಧರಿಸಲಾಯಿತು; ತದ ನಂತರ, ಸಮೀಕ್ಷೆಯಲ್ಲಿ ಕಂಡುಬರುವ ಎಲ್ಲಾ ರೋಗಲಕ್ಷಣದ ವ್ಯಕ್ತಿಗಳನ್ನು ಪರೀಕ್ಷಿಸಬೇಕು ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡಬೇಕು ಎಂದು ನಿರ್ಧರಿಸಲಾಯಿತು.
ಕೋವಿಡ್ -19 ಸೂಕ್ತ ನಡವಳಿಕೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಬಲವಾದ ಸಂವಹನ ಕಾರ್ಯತಂತ್ರ ಇರಬೇಕು ಮತ್ತು ದೀರ್ಘಾವಧಿಯ ವೈದ್ಯಕೀಯ ಮತ್ತು ಆರೋಗ್ಯ ನಿಯತಾಂಕಗಳ ಮೇಲೆ ರೋಗದ ನೇತ್ಯಾತ್ಮಕ ಪರಿಣಾಮದ ಬಗ್ಗೆ ತಿಳಿಸಿ ಎಂದು ಗೃಹ ಸಚಿವರು ನಿರ್ದೇಶನ ನೀಡಿದರು. ಕೋವಿಡ್ -19 ಸೂಕ್ತ ನಡವಳಿಕೆಯನ್ನು ಪಾಲಿಸುವಲ್ಲಿ ಯಾವುದೇ ಸಡಿಲಿಕೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅವರು ದೆಹಲಿ ಸರ್ಕಾರ ಮತ್ತು ದೆಹಲಿಯ ಪೊಲೀಸ್ ಆಯುಕ್ತ (ಸಿಪಿ) ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊನೆಯದಾಗಿ, ಗೃಹ ಸಚಿವರು ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳನ್ನು ತಗ್ಗಿಸುವ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು ಮತ್ತು ಬಾಧಿತ ವ್ಯಕ್ತಿಗಳಿಗೆ ಅದರಲ್ಲೂ ಬಡವರು ಮತ್ತು ದುರ್ಬಲರಿಗೆ ಸೂಕ್ತ ಕಾಲದಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ದೊರಕುವುದರಲ್ಲಿ ಯಾವುದೇ ಅಂತರ ಇರಬಾರದು ಎಂದು ತಿಳಿಸಿದರು. ದೆಹಲಿಯ ಹಾಗೂ ನೆರೆಯ ಪ್ರದೇಶಗಳಾದ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌.ಸಿ.ಆರ್)ಲ್ಲಿ ಮುಂಬರುವ ವಾರಗಳಲ್ಲಿ ನಿರಂತರವಾಗಿ ಕೋವಿಡ್ -19 ರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.   
ಈ ಸಭೆಯಲ್ಲಿ ಕೇಂದ್ರ ಗೃಹಸಚಿವರು, ದೆಹಲಿಯ ಲೆಫ್ಟಿನೆಂಟ್ ಗೌರ್ನರ್; ದೆಹಲಿಯ ಮುಖ್ಯಮಂತ್ರಿ;, ದೆಹಲಿಯ ಆರೋಗ್ಯ ಸಚಿವರು; ಗೃಹ ಕಾರ್ಯದರ್ಶಿ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ; ಡಾ. ವಿಕೆ. ಪಾಲ್; ನಿರ್ದೇಶಕರು ಏಮ್ಸ್, ; ಐಸಿಎಂಆರ್ ಮಹಾ ನಿರ್ದೇಶಕರು; ಡಿಆರ್.ಡಿ.ಓ. ಕಾರ್ಯದರ್ಶಿ; ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಯ ಮಹಾ ನಿರ್ದೇಶಕರು (ಡಿಜಿಎಎಫ್.ಎಂ.ಎಸ್) ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. 


*****

 



(Release ID: 1673087) Visitor Counter : 219