ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹಾಗು ನೂತನ ಮುಖ್ಯ ಮಾಹಿತಿ ಆಯುಕ್ತ ಶ್ರೀ ವೈ.ಕೆ. ಸಿನ್ಹ ಭೇಟಿ


ಆರ್‌.ಟಿ.ಐ ಅರ್ಜಿಗಳ ವಿಲೇವಾರಿ ಹಾಗು ಸುಧಾರಣಿ ಕ್ರಮಗಳ ಕುರಿತು ಮುಖ್ಯ ಮಾಹಿತಿ ಆಯುಕ್ತರಿಂದ ಸಚಿವರಿಗೆ ಮಾಹಿತಿ

Posted On: 15 NOV 2020 6:05PM by PIB Bengaluru

ನೂತನವಾಗಿ ನೇಮಕಗೊಂಡಿರುವ ಭಾರತದ ಮುಖ್ಯ ಮಾಹಿತಿ ಆಯುಕ್ತ, ಶ್ರೀ ಯಶ್ ವರ್ಧನ್ ಕುಮಾರ್ ಸಿನ್ಹ ಅವರು ಪ್ರಧಾನಮಂತ್ರಿಗಳ ಕಾರ್ಯಾಲಯ ಹಾಗು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು. 

62 ವರ್ಷದ ಶ್ರೀ ಸಿನ್ಹ ಅವರು ಮಾಹಿತಿ ಆಯುಕ್ತರಾಗಿ ನೇಮಕಗೊಳ್ಳುವ ಮುನ್ನ ಯುನೈಟೆಡ್ ಕಿಂಗ್ಡಮ್ ನ ಭಾರತೀಯ ಹೈಕಮಿಷನರ್ ಆಗಿ ನಿವೃತ್ತರಾಗಿದ್ದರು, ಈಗ ಅವರು ಮುಖ್ಯ ಮಾಹಿತಿ ಆಯುಕ್ತರಾಗಿ ಬಡ್ತಿ ಪಡೆದಿದ್ದಾರೆ. ಸಿನ್ಹ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂನ ಮಾಜಿ ರಾಜ್ಯಪಾಲರಾಗಿದ್ದ ಮತ್ತು ಸೇನೆಯ ಮಾಜಿ ಉಪ ಮುಖ್ಯಸ್ಥರಾಗಿದ್ದ  ದಿವಂಗತ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹ ಅವರ ಪುತ್ರ.  

ನೂತನ ಮುಖ್ಯ ಮಾಹಿತಿ ಆಯುಕ್ತರು ಆರ್.ಟಿ.ಐ. ಅರ್ಜಿಗಳ ವಿಲೇವಾರಿ ಹಂತಹಂತವಾಗಿ ಸುಧಾರಿಸುವ ಬಗ್ಗೆ ಮತ್ತು ಜೂನ್ ತಿಂಗಳಲ್ಲಿ, ಕೋವಿಡ್ ಸಾಂಕ್ರಾಮಿಕದ ನಡುವೆಯೂ, ಆರ್‌.ಟಿ.ಐ ಅರ್ಜಿಗಳ ಮಾಸಿಕ ವಿಲೇವಾರಿ ದರ ಕಳೆದ ವರ್ಷ ಅಂದರೆ ಜೂನ್ 2019ರ ದರಕ್ಕಿಂತ ಹೆಚ್ಚಾಗಿರುವ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡಿದರು.  ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆನ್‌ ಲೈನ್, ವರ್ಚುವಲ್ ಮತ್ತು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಕೇಂದ್ರ ಮಾಹಿತಿ ಆಯೋಗವು ಕೋವಿಡ್ ಕಾಲದಲ್ಲೂ ತನ್ನ ಕಾರ್ಯಚಟುವಟಿಕೆಯನ್ನು ನಿರಂತರವಾಗಿ ನಡೆಸುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಈ ವರ್ಷದ ಆರಂಭದಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರ ಮಾಹಿತಿ ಆಯೋಗದ ವ್ಯಾಪ್ತಿಗೆ ಕಳೆದ ವರ್ಷ ತಂದ ತರುವಾಯ ಅಲ್ಲಿನ ಆರ್.ಟಿ.ಐ. ಅರ್ಜಿಗಳ ವಿಲೇವಾರಿ ಸ್ಥಿತಿ ಕುರಿತಂತೆಯೂ ಶ್ರೀ ಸಿನ್ಹ ಅವರು ಡಾ. ಜಿತೇಂದ್ರ ಸಿಂಗ್ ಅವರಿಗೆ ವಿವರ ನೀಡಿದರು.  ಸರ್ಕಾರದಿಂದ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ದೊರೆಯುತ್ತಿರುವ ನಿರಂತರ ಬೆಂಬಲ ಮತ್ತು ಸಹಯೋಗಕ್ಕೆ ಅವರು ಸಚಿವರಿಗೆ ಧನ್ಯವಾದ ಅರ್ಪಿಸಿದರು. 

ಕೇಂದ್ರ ಮಾಹಿತಿ ಆಯೋಗದ ಕಾರ್ಯವೈಖರಿಯನ್ನು ಸುಧಾರಿಸಲು ಮತ್ತು ಆರ್‌.ಟಿ.ಐ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡಿರುವ ಹಲವಾರು ಹೊಸ ಉಪಕ್ರಮಗಳನ್ನು ಡಾ. ಜಿತೇಂದ್ರ ಸಿಂಗ್ ಉಲ್ಲೇಖಿಸಿದರು. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ, ಈಗ ಆಗಿರುವ ವ್ಯತ್ಯಾಸವೆಂದರೆ ಜಮ್ಮು ಮತ್ತು ಕಾಶ್ಮೀರದ ನಿವಾಸಿಯೇತರ ಅಥವಾ ರಾಜ್ಯೇತರ ವಿಷಯಗಳು ಕೇಂದ್ರಾಡಳಿತ ಪ್ರದೇಶ ವಿಷಯಗಳು ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕೂಡ ಆರ್‌.ಟಿ.ಐ. ಸಲ್ಲಿಸಲು ಅರ್ಹವಾಗಿವೆ ಎಂದರು.

ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಯಾವುದೇ ಮೂಲೆಯಿಂದ ಅಥವಾ ವಿದೇಶದಿಂದ ಕೂಡ ಯಾವುದೇ ಸಮಯದಲ್ಲಿ  ಹಗಲಾಗಲಿ ಅಥವಾ ರಾತ್ರಿಯಾಗಲೀ ಯಾರು ಬೇಕಾದರೂ ಆರ್.ಟಿ.ಐ. ಅರ್ಜಿಗಳನ್ನು ಇ- ಸಲ್ಲಿಕೆ ಮಾಡಲು ಸರ್ಕಾರದ 24 ಗಂಟೆಗಳ ಪೋರ್ಟಲ್ ಸೇವೆಯನ್ನು ಪರಿಚಯಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕಾಲದಲ್ಲಿ, ಕೇಂದ್ರ ಮಾಹಿತಿ ಆಯುಕ್ತರ ಕಚೇರಿಯನ್ನು ಸ್ವಂತ ಕಚೇರಿ ಸಮುಚ್ಛಯಕ್ಕೆ ಸ್ಥಳಾಂತರಿಸಲಾಯಿತು ಎಂದೂ ತಿಳಿಸಿದರು. 

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನರ ಪಾಲ್ಗೊಳ್ಳುವಿಕೆ ಕುರಿತ ಪ್ರಧಾನಮಂತ್ರಿ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಅತಿ ಮುಖ್ಯವಾಗಿದೆ ಎಂದು  ಡಾ. ಜಿತೇಂದ್ರ ಸಿಂಗ್ ಪುನರುಚ್ಚರಿಸಿದರು. 

***



(Release ID: 1673079) Visitor Counter : 169