ಹಣಕಾಸು ಸಚಿವಾಲಯ 
                
                
                
                
                
                
                    
                    
                        ಜಮ್ಮು-ಕಾಶ್ಮೀರ ಮತ್ತು ಲಡಖ್ ಕೇಂದ್ರಾಡಳಿತ ಪ್ರದೇಶಗಳ ಸಬ್ಕಾ ವಿಶ್ವಾಸ್ (ಪಿತ್ರಾರ್ಜಿತ ಆಸ್ತಿ ತೆರಿಗೆ ವಿವಾದ  ಪರಿಹಾರ) ಯೋಜನೆ ಅರ್ಜಿ ಸಲ್ಲಿಕೆ ಗಡುವು 31 ಡಿಸೆಂಬರ್ 2020ರ ವರೆಗೆ ವಿಸ್ತರಣೆ
                    
                    
                        
                    
                
                
                    Posted On:
                12 NOV 2020 6:43PM by PIB Bengaluru
                
                
                
                
                
                
                ಹೊಸದಾಗಿ ರಚನೆಯಾಗಿರುವ ಜಮ್ಮು-ಕಾಶ್ಮೀರ ಮತ್ತು ಲಡಖ್ ಕೇಂದ್ರಾಡಳಿತ ಪ್ರದೆಶದಲ್ಲಿ ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ, ಅರ್ಹ ತೆರಿಗೆದಾರರಿಗೆ ನೆರವು ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಸಬ್ಕಾ ವಿಶ್ವಾಸ್ ಯೋಜನೆ ಅಡಿ, ಪಿತ್ರಾರ್ಜಿತ ಆಸ್ತಿಯ ತೆರಿಗೆ ವಿವಾದ ಪರಿಹಾರ(ಎಸ್ ವಿಎಲ್ ಡಿಆರ್ ಎಸ್)ಕ್ಕೆ ನೀಡಲಾಗಿದ್ದ ಗಡುವನ್ನು 30 ಜೂನ್ 2019ರಿಂದ 31 ಡಿಸೆಂಬರ್ 2020ರ ವರೆಗೆ ವಿಸ್ತರಣೆ ಮಾಡಿದೆ.
ಹಾಗಾಗಿ, ಜಮ್ಮು-ಕಾಶ್ಮೀರ ಮತ್ತು ಲಡಖ್ ಕೇಂದ್ರಾಡಳಿತ ಪ್ರದೇಶಗಳ ಅರ್ಹ ತೆರಿಗೆದಾರರು ಪಿತ್ರಾರ್ಜಿತ ಆಸ್ತಿಯ ತೆರಿಗೆ ವಿವಾದಗಳಿದ್ದರೆ, 2020 ಡಿಸೆಂಬರ್ 31ರ ಒಳಗೆ ಪರಿಹರಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ. ಸಬ್ಕಾ ವಿಶ್ವಾಸ್ ಯೋಜನೆ ಅಡಿ, 2019 ಡಿಸೆಂಬರ್ ಒಳಗೆ ಪಿತ್ರಾರ್ಜಿತ ಆಸ್ತಿಯ ತೆರಿಗೆ ವಿವಾದಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ನೈಜ ತೊಂದರೆಗಳನ್ನು ಎದುರಿಸಿದ್ದ ಅರ್ಹ ತೆರಿಗೆದಾರರಿಗೆ ಕೇಂದ್ರ ಸರಕಾರದ ಗಡುವು ವಿಸ್ತರಣೆ ನಿರ್ಧಾರದಿಂದ ಮಹತ್ವದ ಪರಿಹಾರ ದೊರೆತಂತಾಗಿದೆ. ಗಡುವು ವಿಸ್ತರಣೆಯು ಹಳೆಯ ತೆರಿಗೆ ವಿವಾದಗಳನ್ನು ಪರಿಹರಿಸಿಕೊಳ್ಳಲು ಹೊಸ ಅವಕಾಶ ನೀಡಿದಂತಾಗಿದೆ.
ಪಿತ್ರಾರ್ಜಿತ ಆಸ್ತಿಗಳಿಗೆ ಸಂಬಂಧಿಸಿದ ಹಳೆಯ ತೆರಿಗೆ ಅಂದರೆ “ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ (ಸಿಇಎಸ್ ಟಿ)’’ಯ ವ್ಯಾಜ್ಯ ಮತ್ತು ವಿವಾದಗಳನ್ನು ನಿಯಂತ್ರಿಸುವ ಮೂಲಕ ಈ ತೆರಿಗೆದಾರರನ್ನು ಜಿಎಸ್ ಟಿ ತೆರಿಗೆ ವ್ಯವಸ್ಥೆಗೆ ತರುವ ಉದ್ದೇಶದಿಂದ ಕೇಂದ್ರ ಸರಕಾರ, 2019 ಸೆಪ್ಟೆಂಬರ್ 1ರಂದು ಸಬ್ಕಾ ವಿಶ್ವಾಸ್ (ಪಿತ್ರಾರ್ಜಿತ ಆಸ್ತಿಯ ತೆರಿಗೆ ವಿವಾದ ಪರಿಹಾರ) ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಲ್ಲಿ ತೆರಿಗೆದಾರರಿಗೆ ವಿವಾದಿತ ತೆರಿಗೆ ಮೊತ್ತ ಪಾವತಿಗೆ ಕೆಲವು ವಿನಾಯಿತಿ ನೀಡಲಾಗಿದೆ. ತೆರಿಗೆ ಮೊತ್ತದ ಶೇಕಡ 70ರಷ್ಟು ಬಾಬ್ತು ಪಾವತಿಗೆ ಬದಲಾಗಿ ಶೇಕಡ 40ರಷ್ಟು ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ, ಈ ಯೋಜನೆ ಅಡಿ, ಸಂಪೂರ್ಣ ಬಡ್ಡಿ ಮತ್ತು ದಂಡ ಮನ್ನಾಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಾಸ್ತವವಾಗಿ, ಈ ಯೋಜನೆ 2020 ಜೂನ್ 30ಕ್ಕೆ ಮುಕ್ತಾಯವಾಗಿತ್ತು.
ಕೋವಿಡ್-19ರ ಪ್ರತೀಕೂಲ ಪರಿಸ್ಥಿತಿಯ ನಡುವೆ, ಜಮ್ಮು-ಕಾಶ್ಮೀರ ಮತ್ತು ಲಡಖ್ ನಲ್ಲಿ ಸಬ್ಕಾ ವಿಶ್ವಾಸ್ ಯೋಜನೆಗೆ ಅತ್ಯುತ್ಸಾಹದ ಸ್ಪಂದನೆ ವ್ಯಕ್ತವಾಗಿದೆ. 1,89,225 ಪಿತ್ರಾರ್ಜಿತ ಆಸ್ತಿಯ ತೆರಿಗೆದಾರರು ತಮ್ಮ ತೆರಿಗೆ ವಿವರಗಳನ್ನು ಘೋಷಿಸಿದ್ದಾರೆ. ಇದರಲ್ಲಿ 89,823 ಕೋಟಿ ರೂ. ತೆರಿಗೆ ಬಾಕಿ ಒಳಗೊಂಡಿದೆ. ಒಟ್ಟಾರೆ, 27,866 ಕೋಟಿ ರೂ. ತೆರಿಗೆ ವಸೂಲಾತಿಯಾಗುವ  ಮೂಲಕ, ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯ ಇತಿಹಾಸದಲ್ಲಿ ‘ಸಬ್ಕಾ ವಿಶ್ವಾಸ್’ ಅತ್ಯತ್ತಮ ಯೋಜನೆಯಾಗಿ ಹೊರಹೊಮ್ಮಿದೆ.
ಜಮ್ಮು-ಕಾಶ್ಮೀರ ಮತ್ತು ಲಡಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಸಬ್ಕಾ ವಿಶ್ವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರಕಾರದ ನಿರ್ಧಾರದಿಂದ ಕಣಿವೆ ಪ್ರದೇಶದ ಎಲ್ಲ ತೆರಿಗೆದಾರರಿಗೆ ಸಮಾನ ಅವಕಾಶ ಕಲ್ಪಿಸಿದಂತಾಗಿದೆ. ಜತೆಗೆ, ದೇಶದ ಇತರೆ ಭಾಗಗಳ ಸಾವಿರಾರು ತೆರಿಗೆದಾರರು ಸಹ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ಸಬ್ಕಾ ವಿಶ್ವಾಸ್ ಯೋಜನೆಯ ಗಡುವು ವಿಸ್ತರಣೆಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ಸರಕಾರ, ಶೀಘ್ರವೇ ಹೊರಡಿಸಲಿದೆ.
***
                
                
                
                
                
                (Release ID: 1672509)
                Visitor Counter : 318