ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತದ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿಗಳ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ

Posted On: 04 NOV 2020 8:14PM by PIB Bengaluru

2014 ರಲ್ಲಿ ಹೊರಡಿಸಿರುವ “ಭಾರತದ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿಗಳನ್ನು” ಪರಿಶೀಲಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇಂದು ಸಮಿತಿಯೊಂದನ್ನು ರಚಿಸಿದೆ.

ಭಾರತದ ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಪ್ರಸ್ತುತ ಮಾರ್ಗಸೂಚಿಗಳನ್ನು ಸಂಸದೀಯ ಸಮಿತಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರಚಿಸಿದ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳ ಸಮಿತಿ (ಟಿಆರ್‌ಪಿ) ಮತ್ತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಶಿಫಾರಸುಗಳ ವಿವರವಾದ ಚರ್ಚೆಯ ನಂತರ ಪ್ರಕಟಿಸಲಾಗಿತ್ತು.

ಕೆಲವು ವರ್ಷಗಳ ಮಾರ್ಗಸೂಚಿಗಳ ಕಾರ್ಯಾಚರಣೆಯ ಆಧಾರದ ಮೇಲೆ, ಭಾರತೀಯ ದೂರಸಂಪರ್ಕನಿಯಂತ್ರಣ ಪ್ರಾಧಿಕಾರ (TRAI)ದ  ಇತ್ತೀಚಿನ ಶಿಫಾರಸುಗಳು, ತಾಂತ್ರಿಕ ಪ್ರಗತಿಗಳು / ಮಧ್ಯಸ್ಥಿಕೆಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ವಿಶ್ವಾಸಾರ್ಹ ಮತ್ತು ಪಾರದರ್ಶಕ ರೇಟಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸುವ  ಅವಶ್ಯಕತೆಯಿದೆ ಎಂದು ಕಂಡುಬಂದಿದೆ.

ಭಾರತದಲ್ಲಿ ಟೆಲಿವಿಷನ್ ರೇಟಿಂಗ್ ವ್ಯವಸ್ಥೆಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಈ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಮೌಲ್ಯಮಾಪನವನ್ನು ನಡೆಸುತ್ತದೆ, ಕಾಲಕಾಲಕ್ಕೆ TRAI ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸುತ್ತದೆ, ಒಟ್ಟಾರೆ ಉದ್ಯಮದ ಸನ್ನಿವೇಶ ಮತ್ತು ಪಾಲುದಾರರ ಅಗತ್ಯತೆಗಳನ್ನು ಈಡೇರಿಸಲು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಲ್ಲಿ ಅಗತ್ಯ ಬದಲಾವಣೆಗಳ ಮೂಲಕ ದೃಢ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೇಟಿಂಗ್ ವ್ಯವಸ್ಥೆಗೆ ಶಿಫಾರಸುಗಳನ್ನು ಮಾಡುತ್ತದೆ.

ಸಮಿತಿಯ ಈ ಕೆಳಗಿನಂತಿದೆ

i)  ಶ್ರೀ ಶಶಿ ಎಸ್.ವೆಂಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಾರ  ಭಾರತಿ,  ಅಧ್ಯಕ್ಷರು

ii)  ಡಾ.ಶಲಭ್, ಅಂಕಿಅಂಶಗಳ ಪ್ರಾಧ್ಯಾಪಕರು, ಗಣಿತ ಮತ್ತು ಅಂಕಿಅಂಶ ವಿಭಾಗ,  ಐಐಟಿ ಕಾನ್ಪುರ, ಸದಸ್ಯ

iii)  ಡಾ.ರಾಜ್‌ಕುಮಾರ್ ಉಪಾಧ್ಯಾಯ, ಕಾರ್ಯನಿರ್ವಾಹಕ ನಿರ್ದೇಶಕ , ಸಿ-ಡಾಟ್ , ಸದಸ್ಯ

iv)  ಪ್ರೊಫೆಸರ್ ಪುಲಕ್ ಘೋಷ್, ನಿರ್ಧಾರ ವಿಜ್ಞಾನ, ಸಾರ್ವಜನಿಕ ನೀತಿ ಕೇಂದ್ರ (ಸಿಪಿಪಿ) , ಸದಸ್ಯ

ಸಮಿತಿಯ ಕಾರ್ಯಚಟುವಟಿಕೆಗಳು ಈ ಕೆಳಗಿನಂತಿವೆ:

ಎ. ಭಾರತದಲ್ಲಿ ಟೆಲಿವಿಷನ್ ರೇಟಿಂಗ್ ವ್ಯವಸ್ಥೆಗಳು ಮತ್ತು ಈ ಕುರಿತು ವಿವಿಧ ವೇದಿಕೆಗಳು ಮಾಡಿರುವ ಹಿಂದಿನ ಶಿಫಾರಸುಗಳನ್ನು ಅಧ್ಯಯನ ಮಾಡುವುದು

ಬಿ. ಈ ವಿಷಯದ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಇತ್ತೀಚಿನ ಶಿಫಾರಸುಗಳನ್ನು ಅಧ್ಯಯನ ಮಾಡುವುದು

           ಸಿ. ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕ್ರಮಗಳನ್ನು ಸೂಚಿಸುವುದು

ಡಿ. ಪ್ರಸ್ತುತ ಹೊರಡಿಸಿರುವ ಮಾರ್ಗಸೂಚಿಗಳು ನಿಗದಿತ ಉದ್ದೇಶಗಳನ್ನು ಸಾಧಿಸಿವೆಯೇ ವಿವಿಧ ಪಾಲುದಾರರ ಅಗತ್ಯತೆಗಳನ್ನು ಪೂರೈಸುತ್ತಿವೆಯೇ ಎಂದು ಪರಿಶೀಲಿಸುವುದು. ಲೋಪಗಳೇನಾದರೂ ಇದ್ದರೆ ವಿಶೇಷವಾಗಿ ಪರಿಹಾರ ಸೂಚಿಸುವುದು.

            ಇ. ವಿಷಯಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ಯಾವುದೇ ಸಮಸ್ಯೆಗಳ ಪರಿಶೀಲನೆ

ಎಫ್. ಭಾರತದಲ್ಲಿ ದೃಢವಾದ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೇಟಿಂಗ್ ವ್ಯವಸ್ಥೆಗೆ ಶಿಫಾರಸುಗಳನ್ನು ಮಾಡುವುದು

ಜಿ. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾಲಕಾಲಕ್ಕೆ ನಿಯೋಜಿಸುವ ಯಾವುದೇ ಸಂಬಂಧಿತ ಸಮಸ್ಯೆಗಳ ಪರಿಶೀಲನೆ

ಸಮಿತಿಯು ಯಾವುದೇ ತಜ್ಞರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬಹುದು. ಸಮಿತಿ ತನ್ನ ವರದಿಯನ್ನು ವಾರ್ತಾಮತ್ತು ಪ್ರಸಾರ ಸಚಿವರಿಗೆ ಎರಡು ತಿಂಗಳಲ್ಲಿ ಸಲ್ಲಿಸಲಿದೆ.



(Release ID: 1670242) Visitor Counter : 188