ಪ್ರಧಾನ ಮಂತ್ರಿಯವರ ಕಛೇರಿ

ನಾಲ್ಕನೇ ಭಾರತೀಯ ಇಂಧನ ವೇದಿಕೆ ಉದ್ಘಾಟನೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ದೀರ್ಘಾವಧಿಯಲ್ಲಿ ಭಾರತದ ಇಂಧನ ಬಳಕೆ ಬಹುತೇಕ ದುಪ್ಪಟ್ಟಾಗಲಿದೆ

ಸುಸ್ಥಿರ ಬೆಳವಣಿಗೆಗೆ ಜಾಗತಿಕ ಬದ್ಧತೆಗಳಿಗೆ ಅನುಗುಣವಾಗಿ ಇಂಧನ ನ್ಯಾಯ ಒದಗಿಸುವುದು ಭಾರತದ ಇಂಧನ ಯೋಜನೆ ಗುರಿ

ಭಾರತದ ಇಂಧನ ವಲಯ ಬೆಳವಣಿಗೆ ಕೇಂದ್ರಿತ, ಕೈಗಾರಿಕಾ ಸ್ನೇಹಿ ಮತ್ತು ಪರಿಸರ ಪ್ರಜ್ಞೆ ಹೊಂದಿದೆ

ತೈಲ ಮತ್ತು ಅನಿಲ ಎರಡಕ್ಕೂ ಸರಳ ಮತ್ತು ಪಾರದರ್ಶಕ ಮಾರುಕಟ್ಟೆ ಒದಗಿಸಲು ಉದ್ಯಮಕ್ಕೆ ಪ್ರಧಾನಮಂತ್ರಿ ಕರೆ

ಭಾರತದ ಇಂಧನ ನಕ್ಷೆಯ ಏಳು ಪ್ರಮುಖ ಚಾಲನಾ ಅಂಶಗಳ ಪಟ್ಟಿ ಪ್ರಕಟ

Posted On: 26 OCT 2020 7:31PM by PIB Bengaluru

ಭಾರತದ ಇಂಧನ ವಲಯ ಬೆಳವಣಿಗೆ ಕೇಂದ್ರಿತ, ಕೈಗಾರಿಕಾ ಸ್ನೇಹಿ ಮತ್ತು ಪರಿಸರ ಪ್ರಜ್ಞೆ ಹೊಂದಿದ್ದು, ಸುಸ್ಥಿರ ಬೆಳವಣಿಗೆಗೆ ಜಾಗತಿಕ ಬದ್ಧತೆಗಳನ್ನು ಸಂಪೂರ್ಣವಾಗಿ ಪಾಲಿಸುವ ಜೊತೆಗೆ ಇಂಧನ ನ್ಯಾಯವನ್ನು ಒದಗಿಸುವುದು ಭಾರತೀಯ ಇಂಧನ ಯೋಜನೆಯ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅವರು, ಸೆರಾ ವೀಕ್ ಆಯೋಜಿಸಿರುವ 4ನೇ ಭಾರತೀಯ ಇಂಧನ ವೇದಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಮಾವೇಶದ ಘೋಷ ವಾಕ್ಯ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಇಂಧನ ಭವಿಷ್ಯ”.

ಪ್ರಧಾನಮಂತ್ರಿ ಅವರು, ಭಾರತ ಸಂಪೂರ್ಣ ಇಂಧನವನ್ನು ಹೊಂದಿದೆ ಮತ್ತು ಅದರ ಇಂಧನ ಭವಿಷ್ಯ ಅತ್ಯಂತ ಪ್ರಕಾಶಮಾನವಾಗಿದೆ ಮತ್ತು ಸುಭದ್ರವಾಗಿದೆ ಎಂದರು. ಅವರು ಇಂಧನ ಬೇಡಿಕೆ ಪ್ರಮಾಣ ಬಹುತೇಕ ಮೂರನೇ ಒಂದರಷ್ಟು ಇಳಿಕೆ, ಸದ್ಯದ ಬೆಲೆ ಅಸ್ಥಿರತೆ, ಹೂಡಿಕೆ ನಿರ್ಧಾರಗಳ ಪರಿಣಾಮಗಳು, ಮುಂದಿನ ಕೆಲವು ವರ್ಷಗಳ ಕಾಲ ಜಾಗತಿಕ ಇಂಧನ ಬೇಡಿಕೆಯಲ್ಲಿ ವ್ಯತಿರಿಕ್ತ ಬದಲಾವಣೆಗಳ ಅಂದಾಜು ಮತ್ತಿತರ ಸವಾಲುಗಳ ನಡುವೆಯೂ ಭಾರತ ಇಂಧನ ಬಳಕೆಯಲ್ಲಿ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ದೀರ್ಘಾವಧಿಯಲ್ಲಿ ಅದರ ಇಂಧನ ಬಳಕೆ ಪ್ರಮಾಣ ಬಹುತೇಕ ದುಪ್ಪಟ್ಟಾಗಲಿದೆ ಎಂದರು ಹೇಳಿದರು.

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತ ಮೂರನೇ ಅತಿದೊಡ್ಡ ಹಾಗೂ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದೆ ಮತ್ತು ಭಾರತೀಯ ವಿಮಾನಗಳು 2024 ವೇಳೆಗೆ ತಮ್ಮ ಗಾತ್ರವನ್ನು 600 ರಿಂದ 1200ಕ್ಕೆ ಹೆಚ್ಚಿಸಿಕೊಳ್ಳಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಇಂಧನ ಲಭ್ಯತೆ ಕೈಗೆಟಕುವಂತೆ ಮತ್ತು ವಿಶ್ವಾಸಾರ್ಹವಾಗಿರಬೇಕು ಎಂಬುದು ಭಾರತದ ನಂಬಿಕೆಯಾಗಿದೆ. ಆಗ ಮಾತ್ರ ಸಾಮಾಜಿಕ-ಆರ್ಥಿಕ ಪರಿವರ್ತನೆಗಳು ಸಾಧ್ಯ ಎಂದು ಅವರು ಹೇಳಿದರು. ಇಂಧನ ವಲಯ ಜನರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಜೀವನವನ್ನು ಸುಗಮಗೊಳಿಸುತ್ತದೆ ಎಂದ ಅವರು, ಅದನ್ನು ಸಾಧಿಸಲು ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದರು. ಸರ್ಕಾರದ ಎಲ್ಲ ಕ್ರಮಗಳಿಂದಾಗಿ ಗ್ರಾಮೀಣ ಜನರು, ಮಧ್ಯಮ ವರ್ಗ ಮತ್ತು ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಸಹಾಯಕವಾಗಿದೆ ಎಂದರು.

ಸುಸ್ಥಿರ ಬೆಳವಣಿಗೆಗೆ ಜಾಗತಿಕ ಬದ್ಧತೆಗಳನ್ನು ಸಂಪೂರ್ಣವಾಗಿ ಪಾಲನೆ ಮಾಡುವ ಜೊತೆಗೆ ಇಂಧನ ನ್ಯಾಯವನ್ನು ಒದಗಿಸುವುದು ಭಾರತೀಯ ಇಂಧನ ಯೋಜನೆಯ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರ ಅರ್ಥ ಕಡಿಮೆ ಇಂಗಾಲದ ಅಂಶವಿರುವ ಇಂಧನ ಬಳಸಿ, ಭಾರತೀಯರ ಜೀವನವನ್ನು ಸುಧಾರಿಸುವುದು ಅತ್ಯಗತ್ಯವಾಗಿದೆ ಎಂದರು. ಭಾರತದ ಇಂಧನ ವಲಯ ಬೆಳವಣಿಗೆ ಆಧಾರಿತ, ಕೈಗಾರಿಕಾ ಸ್ನೇಹಿ ಮತ್ತು ಪರಿಸರ ಪ್ರಜ್ಞೆಯುಳ್ಳದ್ದಾಗಿದೆ ಎಂದು ಹೇಳಿದರು. ಅದೇ ಕಾರಣಕ್ಕಾಗಿ ಭಾರತ ನವೀಕರಿಸಬಹುದಾದ ಇಂಧನ ಮೂಲಗಳ ವಲಯದಲ್ಲಿ ಅತ್ಯಂತ ಸಕ್ರಿಯ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

36 ಕೋಟಿಗೂ ಅಧಿಕ ಎಲ್ಇಡಿ ಬಲ್ಬ್ ಗಳ ವಿತರಣೆ, ಎಲ್ಇಡಿ ಬಲ್ಬ್ ಗಳ ವೆಚ್ಚ ಸುಮಾರು ಹತ್ತು ಪಟ್ಟು ತಗ್ಗಿಸಿರುವುದು, ಕಳೆದ ಆರು ವರ್ಷಗಳಲ್ಲಿ ಸುಮಾರು 1.1 ಕೋಟಿ ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಿರುವುದು ಸೇರಿದಂತೆ ಶುದ್ಧ ಇಂಧನ ಹೂಡಿಕೆಗೆ ಭಾರತವನ್ನು ಅತ್ಯಾಕರ್ಷಕ ಮಾರುಕಟ್ಟೆಯನ್ನಾಗಿ ಮಾಡಲು ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ವಿವರಿಸಿದರು. ಕ್ರಮಗಳಿಂದಾಗಿ ಪ್ರತಿ ವರ್ಷ ಸುಮಾರು 60 ಬಿಲಿಯನ್ ಯೂನಿಟ್ ಇಂಧನ ಉಳಿತಾಯವಾಗುತ್ತಿದೆ, ಹಸಿರುಮನೆ ಗಾಜಿನ ಪರಿಣಾಮ ಬೀರುವ ವಾರ್ಷಿಕ ಸುಮಾರು 4.5 ಕೋಟಿ ಟನ್ ಕಾರ್ಬನ್ ಡೈಆಕ್ಸೈಡ್ ತಗ್ಗಿದೆ ಹಾಗೂ ವಾರ್ಷಿಕ ಸುಮಾರು 24,000 ಕೋಟಿ ರೂ. ಹಣ ಉಳಿತಾಯವಾಗಿದೆ ಎಂದು ಹೇಳಿದರು.

ಜಾಗತಿಕ ಬದ್ಧತೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸೂಕ್ತ ಮಾರ್ಗದಲ್ಲಿ ಮುನ್ನಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಮೂಲಗಳ ಸಾಮರ್ಥ್ಯವನ್ನು 2022 ವೇಳೆಗೆ 175 ಗಿಗಾವ್ಯಾಟ್ ಸಾಮರ್ಥ್ಯದ ಗುರಿ ಹೊಂದಲಾಗಿತ್ತು, ಇದೀಗ ಅದನ್ನು 2030 ವೇಳೆಗೆ 450 ಗಿಗಾವ್ಯಾಟ್ ಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ವಿಶ್ವದ ಕೈಗಾರಿಕಾ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತಿ ಕಡಿಮೆ ಇಂಗಾಲ ಹೊರಹಾಕುವ ದೇಶಗಳಲ್ಲಿ ಒಂದಾಗಿದೆ, ಆದರೂ ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟದ ಎಲ್ಲ ಪ್ರಯತ್ನಗಳನ್ನು ಭಾರತ ಮುಂದುವರಿಸಲಿದೆ ಎಂದರು.

ಕಳೆದ ಆರು ವರ್ಷಗಳಿಂದೀಚೆಗೆ ಇಂಧನ ವಲಯದಲ್ಲಿ ಸುಧಾರಣೆಗಳು ವೇಗ ಪಡೆದುಕೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಶೋಧನಾ ಮತ್ತು ಪರವಾನಗಿ ನೀತಿಯಲ್ಲಿನ ಸುಧಾರಣೆಗಳು, ‘ಆದಾಯದಿಂದ ಉತ್ಪತ್ತಿಗರಿಷ್ಠಗೊಳಿಸಲು ಹೆಚ್ಚಿನ ಆದ್ಯತೆ, ಹೆಚ್ಚಿನ ಪಾರದರ್ಶಕತೆ ಹಾಗೂ 2025 ವೇಳೆಗೆ ವಾರ್ಷಿಕ ಸಂಸ್ಕರಣಾ ಸಾಮರ್ಥ್ಯವನ್ನು 250 ರಿಂದ 400 ಮಿಲಿಯನ್ ಮೆಟ್ರಿಕ್ ಟನ್ ಗೆ ಹೆಚ್ಚಿಸುವುದು ಸೇರಿದಂತೆ ಇತ್ತೀಚೆಗೆ ಕೈಗೊಂಡಿರುವ ಕೆಲವು ಮಹತ್ವದ ಸುಧಾರಣೆಗಳನ್ನು ಅವರು ಉಲ್ಲೇಖಿಸಿದರು. ಗೃಹ ಬಳಕೆ ಅನಿಲ ಉತ್ಪಾದನೆ ಮಾಡುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದ ಅವರು,  ‘ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್ಮೂಲಕ ರಾಷ್ಟ್ರವನ್ನು ಅನಿಲ ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸಲಾಗುವುದು ಎಂದರು.

ಕಚ್ಚಾ ತೈಲ ಬೆಲೆ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಪ್ರಧಾನಮಂತ್ರಿ ಅವರು ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು. ಅನಿಲ ಮತ್ತು ತೈಲ ಎರಡಕ್ಕೂ ಪಾರದರ್ಶಕ ಮತ್ತು ಸರಳ ಮಾರುಕಟ್ಟೆ ನಿರ್ಮಾಣ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು. ಅನಿಲ ಶೋಧನಾ ಮಾರುಕಟ್ಟೆ ಬೆಲೆ ಏಕರೂಪವಾಗಿರಬೇಕು ಮತ್ತು ನೈಸರ್ಗಿಕ ಅನಿಲದ ದೇಶೀಯ ಉತ್ಪಾದನೆ ಹೆಚ್ಚಳವಾಗಬೇಕು ಎಂದ ಅವರು, ಸರ್ಕಾರ ನೈಸರ್ಗಿಕ ಅನಿಲ ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೊಳಿಸಿದ್ದು, ಇದರಿಂದ -ಬಿಡ್ಡಿಂಗ್ ಮೂಲಕ ನೈಸರ್ಗಿಕ ಅನಿಲ ಮಾರಾಟದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ ಎಂದರು. ವರ್ಷದ ಜೂನ್ ನಲ್ಲಿ ಭಾರತದ ಮೊದಲ ಸ್ವಯಂಚಾಲಿತ ರಾಷ್ಟ್ರಮಟ್ಟದ ಅನಿಲ ವ್ಯಾಪಾರ ವೇದಿಕೆಯನ್ನು ಉದ್ಘಾಟಿಸಲಾಯಿತು. ಅದು ಅನಿಲದ ಮಾರುಕಟ್ಟೆ ದರ ಶೋಧಕ್ಕೆ ನಿರ್ದಿಷ್ಟ ಮಾನದಂಡವನ್ನು ನಿಗದಿಪಡಿಸಲಿದೆ ಎಂದರು.

ಸರ್ಕಾರ ಆತ್ಮನಿರ್ಭರ ಭಾರತನಿರ್ಮಾಣ ನಿಟ್ಟಿನಲ್ಲಿ ಮುನ್ನಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾವಲಂಬಿ ಭಾರತ, ಜಾಗತಿಕ ಆರ್ಥಿಕತೆಯ ಶಕ್ತಿಯನ್ನು ಹಲವು ಪಟ್ಟು ಹೆಚ್ಚಿಸಲಿದೆ ಮತ್ತು ಎಲ್ಲ ಪ್ರಯತ್ನಗಳಿಗೆ ಇಂಧನ ಭದ್ರತೆ ಅತ್ಯಂತ ಮುಖ್ಯವಾದುದು ಎಂದರು. ಸರ್ಕಾರದ ಎಲ್ಲ ಪ್ರಯತ್ನಗಳಿಂದಾಗಿ ಇಂತಹ ಸಂಕಷ್ಟದ ಸಮಯದಲ್ಲೂ  ತೈಲ ಮತ್ತು ಅನಿಲ ಮೌಲ್ಯ ಸರಣಿಯಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆಯಾಗುತ್ತಿದ್ದು, ಸಕಾರಾತ್ಮಕ ಫಲಿತಾಂಶಗಳನ್ನು ಕಾಣುತ್ತಿದ್ದೇವೆ ಮತ್ತು ಇತರೆ ವಲಯಗಳಲ್ಲೂ ಸಹ ಅದೇ ರೀತಿಯ ಶುಭ ಸೂಚನೆಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು. ಪ್ರಮುಖ ಜಾಗತಿಕ ಇಂಧನ ರಾಷ್ಟ್ರಗಳೊಂದಿಗೆ ಸರ್ಕಾರ ಕಾರ್ಯತಾಂತ್ರಿಕ ಮತ್ತು ಸಮಗ್ರ ಇಂಧನ ಪಾಲುದಾರಿಕೆಗಳನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು. ಭಾರತದ ನೆರೆ-ಹೊರೆ ಮೊದಲು ನೀತಿಯ ಭಾಗವಾಗಿ ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಇಂಧನ ಕಾರಿಡಾರ್ ಅಭಿವೃದ್ಧಿಗೊಳಿಸುವುದಕ್ಕೆ ಒತ್ತು ನೀಡಲಾಗಿದ್ದು, ಅದು ಪರಸ್ಪರ ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದರು.

ಏಳು ಕುದುರೆಗಳು ಸೂರ್ಯದೇವರ ರಥವನ್ನು ಎಳೆದೊಯ್ಯುತ್ತಿರುವಂತೆ ಭಾರತದ ಇಂಧನ ನಕ್ಷೆ, ಏಳು ಪ್ರಮುಖ ಚಾಲನಾ ಅಂಶಗಳನ್ನು ಒಳಗೊಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು.

1.     ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸುವುದು.

2.    ಬರಿದಾಗುವ ಇಂಧನಗಳು ವಿಶೇಷವಾಗಿ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಶುದ್ಧ ರೀತಿಯಲ್ಲಿ ಬಳಕೆ ಮಾಡುವುದು.

3.    ಜೈವಿಕ ಇಂಧನಗಳಿಗೆ ಒತ್ತು ನೀಡಲು ದೇಶೀಯ ಮೂಲಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.

4.   2030 ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 450 ಗಿಗಾವ್ಯಾಟ್ ಇಂಧನ ಉತ್ಪಾದಿಸುವ ಗುರಿ ಸಾಧಿಸುವುದು.

5.    ಸಾರಿಗೆ ವ್ಯವಸ್ಥೆಯಲ್ಲಿ ಇಂಗಾಲವನ್ನು ತಗ್ಗಿಸುವ ದೃಷ್ಟಿಯಿಂದ ವಿದ್ಯುನ್ಮಾನ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವುದು.

6.    ಹೈಡ್ರೋಜನ್ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಇಂಧನಗಳತ್ತ ಸಾಗುವುದು.

7.   ಎಲ್ಲ ಇಂಧನ ವ್ಯವಸ್ಥೆಗಳಲ್ಲಿ ಡಿಜಿಟಲ್ ಅನುಶೋಧನೆಗೆ ಒತ್ತು ನೀಡುವುದು

ಕಳೆದ ಆರು ವರ್ಷಗಳಿಂದೀಚೆಗೆ ಎಲ್ಲಾ ಅಂಶಗಳನ್ನೊಳಗೊಂಡ ಉತ್ಕೃಷ್ಟ ಇಂಧನ ನೀತಿಗಳನ್ನು ಹೊಂದಿದ್ದು, ಅವುಗಳನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.

ಭಾರತ ಇಂಧನ ವೇದಿಕೆ ಸೆರಾ ವೀಕ್ ಇದು ಉದ್ಯಮ, ಸರ್ಕಾರ ಮತ್ತು ಸಮಾಜದ ನಡುವೆ ಒಂದು ಉತ್ತಮ ವೇದಿಕೆಯಾಗಿದೆ ಎಂದ ಅವರು, ಸಮಾವೇಶದಲ್ಲಿ ಉತ್ತಮ ಇಂಧನ ಭವಿಷ್ಯಕ್ಕಾಗಿ ಫಲಪ್ರದ ಸಮಾಲೋಚನೆಗಳು ನಡೆಯಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಕೋರಿದರು.

***(Release ID: 1667675) Visitor Counter : 27