ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಈರುಳ್ಳಿ ಬೆಲೆ ನಿಯಂತ್ರಣ- ಲಭ್ಯತೆಗೆ ಕೇಂದ್ರ ಸರ್ಕಾರದಿಂದ ಕ್ರಮ

ಇಂದಿನಿಂದ ಜಾರಿಗೆ ಬರುವಂತೆ 2020ರ ಡಿಸೆಂಬರ್ 31ರವರೆಗೆ ಸಗಟು ಮಾರಾಟಗಾರಿಗೆ 25 ಮೆಟ್ರಿಕ್ ಟನ್ ಮತ್ತು ಚಿಲ್ಲರೆ ಮಾರಾಟಗಾರರಿಗೆ 2 ಮೆಟ್ರಿಕ್ ಟನ್ ದಾಸ್ತಾನು ಮಿತಿ ನಿಗದಿ

ದಾಸ್ತಾನು ಮಾಡಲಾಗಿರುವ ಈರುಳ್ಳಿ ಪೂರೈಕೆಗೆ ಕ್ರಮಗಳನ್ನು ಚುರುಕುಗೊಳಿಸಿದ ಕೇಂದ್ರ ಸರ್ಕಾರ

Posted On: 23 OCT 2020 4:57PM by PIB Bengaluru

ಕಳೆದ ತಿಂಗಳಿಂದ ಈರುಳ್ಳಿ ಬೆಲೆ ಏರಿಕೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ಡ್ಯಾಶ್ ಬೋರ್ಡ್ ಮೂಲಕ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪ್ರತಿ ದಿನ ನಿಗಾವಹಿಸಿ ಬೆಲೆ ನಿಯಂತ್ರಣಕ್ಕೆ ತಕ್ಷಣದ ಕ್ರಮಗಳನ್ನು ಕೈಗೊಳ್ಳುತ್ತಿದೆ. 

ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020ರ ಅನ್ವಯ ಬೆಲೆ ಏರಿಕೆಯ ಸಂದರ್ಭಗಳಲ್ಲಿ ದಾಸ್ತಾನು ಮಿತಿಗೆ ನಿರ್ಬಂಧ ಹೇರಲು ಅವಕಾಶವಿದೆ. ಅಖಿಲ ಭಾರತ ಮಟ್ಟದಲ್ಲಿ ಈರುಳ್ಳಿ ಚಿಲ್ಲರೆ ಬೆಲೆ ಕಳೆದ ಎರಡು ದಿನಗಳಯಿಂದ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.22ರಷ್ಟು, ಪ್ರತಿ ಕೆ.ಜಿ.ಗೆ 45.33 ರೂ.ಗಳಿಂದ 55.60 ರೂ.ಗಳವರೆಗೆ ಮತ್ತು ಕಳೆದ ಐದು ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.114.96ರಷ್ಟು, ಪ್ರತಿ ಕೆ.ಜಿ.ಗೆ 25.87 ರೂ.ಗಳಿಂದ 55.60 ರೂ.ಗಳವರೆಗೆ ಹೆಚ್ಚಳವಾಗಿದ್ದು, ಕಳೆದ ಐದು ವರ್ಷಗಳ ಸರಾಸರಿಗೆ ಹೋಲಿಸಿದರೆ ಈರುಳ್ಳಿ ಬೆಲೆ ಶೇ.100ಕ್ಕೂ ಅಧಿಕ ಹೆಚ್ಚಳವಾಗಿದೆ, ಇದು ಬೆಲೆಗಳು ಅಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿದೆ. ಇಂದಿನಿಂದ ಈ ಸಾಲಿನ ಡಿಸೆಂಬರ್ 31ರ ವರೆಗೆ ಚಾಲ್ತಿಯಲ್ಲಿರುವಂತೆ ಸಗಟು ಮಾರಾಟಗಾರರಿಗೆ 25 ಮೆಟ್ರಿಕ್ ಟನ್ ಹಾಗೂ ಚಿಲ್ಲರೆ ಮಾರಾಟಗಾರರಿಗೆ ಎರಡು ಮೆಟ್ರಿಕ್ ಟನ್  ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. 

ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಖಾತ್ರಿಪಡಿಸಲು ಮತ್ತು ಮುಂಗಾರು ಹಂಗಾಮಿನ ಈರುಳ್ಳಿ ಮಾರುಕಟ್ಟೆಗೆ ಆಗಮನದ ಮುನ್ನವೇ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ನೋಡಿಕೊಳ್ಳಲು ಕಳೆದ ಸೆಪ್ಟಂಬರ್ 14ರಿಂದ ಈರುಳ್ಳಿ ರಫ್ತನ್ನು ನಿಷೇಧಿಸಲಾಗಿತ್ತು. ಹಾಗಾಗಿ ಸ್ವಲ್ಪಮಟ್ಟಿಗೆ ಚಿಲ್ಲರೆ ಮಾರಾಟ ಬೆಲೆ ಸ್ಥಿರವಾಗಿತ್ತು. ಆದರೆ ಈರುಳ್ಳಿ ಹೆಚ್ಚು ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಮುಂಗಾರು ಬೆಳೆಗೆ ಹಾನಿಯಾಗಿರುವುದರಿಂದ ಸ್ವಲ್ಪಮಟ್ಟಿಗೆ ಬೆಲೆ ಹೆಚ್ಚಳವಾಗಿದೆ. 

ಹವಾಗುಣದಲ್ಲಿನ ಈ ಬದಲಾವಣೆಗಳಿಂದಾಗಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದೆ. ಸದ್ಯದ ಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದು, 2020ರ ಹಿಂಗಾರು ಹಂಗಾಮಿನಲ್ಲಿ ದಾಸ್ತಾನು ಮಾಡಲಾದ ಒಂದು ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಇದೀಗ ಪೂರೈಸಲಾಗುತ್ತಿದೆ. ಸೆಪ್ಟೆಂಬರ್ ದ್ವಿತೀಯಾರ್ಧದ ನಂತರ ಹಂತ ಹಂತವಾಗಿ ಈರುಳ್ಳಿ ದಾಸ್ತಾನು ಬಿಡುಗಡೆಗೆ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖ ಮಂಡಿಗಳು ಹಾಗೂ ಚಿಲ್ಲರೆ ಪೂರೈಕೆದಾರರಾದ ಸಫಲ್, ಕೇಂದ್ರೀಯ ಭಂಡಾರ, ಎನ್ ಸಿಸಿಎಫ್, ತಾನ್ ಹೋಡಾ ಮತ್ತು ತಾನ್ಫೆಡ್ (ತಮಿಳುನಾಡು ಸರ್ಕಾರ) ಮತ್ತು ಪ್ರಮುಖ ನಗರಗಳಲ್ಲಿ ನಾಫೆಡ್ ಮಳಿಗೆಗಳ ಮೂಲಕ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಪೂರೈಸಲಾಗುತ್ತಿದೆ. ಪ್ರಸ್ತುತ ಅಸ್ಸಾಂ ಸರ್ಕಾರ ಮತ್ತು ಕೇರಳ ಸರ್ಕಾರ (ತೋಟಗಾರಿಕಾ ಉತ್ಪನ್ನ ಅಭಿವೃದ್ಧಿ ನಿಗಮ ನಿಯಮಿತ)ದ ಮೂಲಕ ಚಿಲ್ಲರೆ ಮಾರಾಟಕ್ಕಾಗಿ ಪೂರೈಸುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳಿಂದ ಈರುಳ್ಳಿಗೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಅಲ್ಲಿಗೆ ಈಗಾಗಲೇ ರವಾನಿಸಲಾಗಿದೆ. 

ಅಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟದ ಮೂಲಕ ಈರುಳ್ಳಿಯನ್ನು ತಲುಪಿಸಲಾಗುತ್ತಿದೆ. ಬೆಲೆ ಏರಿಕೆಯನ್ನು ಇಳಿಸಲು ಈ ಕ್ರಮವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. 

ಮುಂಗಾರು ಹಂಗಾಮಿನ 37 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಇದೀಗ ಮಂಡಿಗೆ ಬರಲಾರಂಭಿಸಿದ್ದು, ಇದರಿಂದಾಗಿ ಈರುಳ್ಳಿ ಲಭ್ಯತೆ ಮತ್ತಷ್ಟು ಸುಧಾರಿಸಲಿದೆ. 

ಮಂಡಿಗಳಲ್ಲಿ ಈರುಳ್ಳಿ ಲಭ್ಯತೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಈರುಳ್ಳಿ ಆಮದಿಗೆ ನೆರವು ನೀಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ 21.10.2020ರಂದು ಪ್ಲಾಂಟ್ ಕ್ವಾರಂಟೈನ್ ಆದೇಶ 2003ರ ಅನ್ವಯ 2020ರ ಡಿಸೆಂಬರ್ 15ರ ವರೆಗೆ ಫ್ಯುಮುಗೇಷನ್ ಮತ್ತು ಸೈಟೋಸಾನಟರಿ ಪ್ರಮಾಣಪತ್ರ ಸೇರಿ ಆಮದಿಗೆ ಕೆಲವು ರಿಯಾಯಿತಿ ಘೋಷಿಸಿದೆ. 

ಸಂಬಂಧಿಸಿದ ದೇಶಗಳಲ್ಲಿನ ಭಾರತೀಯ ಹೈಕಮಿಷನರ್ ಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವರು ಸಂಬಂಧಿಸಿದ ವಾಣಿಜೋದ್ಯಮಿಗಳನ್ನು ಸಂಪರ್ಕಿಸಿ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆಮದು ಮಾಡಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಆಮದಾಗುವ ಅಂತಹ ಈರುಳ್ಳಿ ಕನ್ಸೈನ್ ಮೆಂಟ್ ಗಳು ಭಾರತೀಯ ಬಂದರುಗಳು, ರಸ್ತೆ ಮಾರ್ಗ ಅಥವಾ ಸಮುದ್ರ ಮಾರ್ಗದ ಮೂಲಕ ಆಗಮಿಸಲಿದ್ದು ಅವುಗಳಿಗೆ ಫ್ಯುಮಿಗೇಷನ್ ಮತ್ತು ಪಿಎಸ್ ಸಿಗೆ ಸಂಬಂಧಿಸಿದ ಸ್ವೀಕೃತಿ ಅಗತ್ಯವಿರುವುದಿಲ್ಲ. ಭಾರತದಲ್ಲಿಯೇ ಮಾನ್ಯತೆ ಇರುವ ಸಂಸ್ಕರಣಾದಾರರಿಂದ ಫ್ಯುಮುಗೇಷನ್ ಮಾಡಿಸಲಾಗುವುದು. ಅಂತಹ ಕನ್ಸೈನ್ ಮೆಂಟ್ ಗಳಿಗೆ ಹೆಚ್ಚಿನ ತಪಾಸಣೆ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು ಆಮದುದಾರರಿಂದ ಈರುಳ್ಳಿಯನ್ನು ಕೇವಲ ಬಳಕೆ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಎಂದು ಮುಚ್ಚಳಿಕೆ ಪಡೆದುಕೊಳ್ಳಲಾಗುವುದು. ಅಂತಹ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ ಪಿಕ್ಯೂ ಆದೇಶ 2003ರ ಅನ್ವಯ ಷರತ್ತುಗಳಿಗೆ ಒಳಪಟ್ಟು ಈ ಮೊದಲು ವಿಧಿಸಲಾಗುತ್ತಿದ್ದ ನಾಲ್ಕು ಪಟ್ಟು ಹೆಚ್ಚುವರಿ ತಪಾಸಣಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು. 

ಅಲ್ಲದೆ, ಖಾಸಗಿ ವ್ಯಾಪಾರಿಗಳಿಗೆ ಆಮದು ಮಾಡಿಕೊಳ್ಳಲು ನೆರವು ನೀಡಲಾಗುವುದು, ಜೊತೆಗೆ ಈರುಳ್ಳಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ನೀಗಿಸಲು ಕೆಂಪು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಎಂಎಂಟಿಸಿಯಿಂದ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಈರುಳ್ಳಿಯನ್ನು ಅಕ್ರಮ ದಾಸ್ತಾನು, ಸಂಗ್ರಹ ಮಾಡುವುದನ್ನು ನಿಯಂತ್ರಿಸಲು, ಯಾರಾದರೂ ದಾಸ್ತಾನು ಮಾಡಿದರೆ ಅಂತಹವರ ವಿರುದ್ಧ ಅಕ್ರಮ ದಾಸ್ತಾನು ನಿಯಂತ್ರಣ ಮತ್ತು ಅತ್ಯವಶ್ಯಕ ವಸ್ತುಗಳ ಪೂರೈಕೆ ನಿರ್ವಹಣಾ ಕಾಯಿದೆ 1980ರಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

 

***



(Release ID: 1667153) Visitor Counter : 210