ಚುನಾವಣಾ ಆಯೋಗ

ಕೇಂದ್ರ ಚುನಾವಣಾ ಆಯೋಗದಿಂದ ಅಭ್ಯರ್ಥಿಗಳ ವೆಚ್ಚದ ಮಿತಿ ಪರಿಶೀಲನೆಗೆ ಸಮಿತಿ ರಚನೆ

Posted On: 21 OCT 2020 7:09PM by PIB Bengaluru

ವೆಚ್ಚ ಹಣದುಬ್ಬರ ಸೂಚ್ಯಂಕ ಏರಿಕೆ, ಹೆಚ್ಚಾಗುತ್ತಿರುವ ಮತದಾರರ ಸಂಖ್ಯೆ ಮತ್ತು ಇನ್ನಿತರ ಕಾರಣಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚ ಹೆಚ್ಚಳ ಮಾಡುವ ಕುರಿತಂತೆ ಪರಿಶೀಲನೆ ನಡೆಸಲು ಕೇಂದ್ರ ಚುನಾವಣಾ ಆಯೋಗ, ಮಹಾನಿರ್ದೇಶಕರು (ತನಿಖೆ) ಮತ್ತು ಭಾರತೀಯ ಕಂದಾಯ ಸೇವೆಯ ನಿವೃತ್ತ ಅಧಿಕಾರಿ ಶ್ರೀ ಹರೀಶ್ ಕುಮಾರ್, ವೆಚ್ಚ ವಿಭಾಗದ (ಮಹಾನಿರ್ದೇಶಕರು) ಮತ್ತು ಮಹಾಪ್ರಧಾನ ಕಾರ್ಯದರ್ಶಿ ಶ್ರೀ ಉಮೇಶ್ ಸಿನ್ಹಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಕೋವಿಡ್ ಕಾರಣವನ್ನು ಪರಿಶೀಲಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯ 19.10.2020ರಂದು ಚುನಾವಣಾ ನಿಯಮ 1961ರ ನಿಯಮ 90ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳ ಹಾಲಿ ವೆಚ್ಚದ ಮಿತಿಯನ್ನು ಶೇ.10ರಷ್ಟು ಹೆಚ್ಚಳ ಮಾಡಿದೆ. ಈ ಶೇ.10ರಷ್ಟು ಹೆಚ್ಚಳ ಹಾಲಿ ನಡೆಯುತ್ತಿರುವ ಚುನಾವಣೆಗಳಿಗೆ ತಕ್ಷಣದಿಂದಲೇ ಅನ್ವಯವಾಗಲಿದೆ.

ಈ ಹಿಂದೆ 2014ರಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 28.02.2014ರಂದು ಪರಿಷ್ಕರಿಸಿ ಆದೇಶ ಹೊರಡಿಸಲಾಗಿತ್ತು. ಆನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ಚುನಾವಣೆಗೆ ಸಂಬಂಧಿಸಿದಂತೆ 10.10.2018ರಂದು ಮಿತಿ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.

ಕಳೆದ ಆರು ವರ್ಷಗಳಲ್ಲಿ ಮಿತಿಯನ್ನು ಹೆಚ್ಚಳ ಮಾಡಿಲ್ಲ. 2019ರಿಂದೀಚೆಗೆ ಮತದಾರರ ಸಂಖ್ಯೆ 834 ಮಿಲಿಯನ್ ದಿಂದ 910 ಮಿಲಿಯನ್ ಗೆ ಏರಿಕೆಯಾಗಿದೆ ಮತ್ತು ಸದ್ಯ 921 ಮಿಲಿಯನ್ ಮತದಾರರಿದ್ದಾರೆ. ಆದರೂ ಏರಿಕೆ ಮಾಡಿರಲಿಲ್ಲ. ಅಲ್ಲದೆ ವೆಚ್ಚ ಹಣದುಬ್ಬರ ಸೂಚ್ಯಂಕ ಕೂಡ 2019ರಲ್ಲಿ 220ರಿಂದ 280ಕ್ಕೆ ಹೆಚ್ಚಳವಾಗಿತ್ತು. ಸದ್ಯ ಅದು 301ರಷ್ಟಿದೆ.

ಸಮಿತಿ ಈ ಕೆಳಗಿನ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ.

  1. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಮತದಾರರ ಸಂಖ್ಯೆಯಲ್ಲಿನ ಬದಲಾವಣೆ ಪರಿಶೀಲನೆ ಮತ್ತು ಅದು ವೆಚ್ಚದ ಮೇಲಾಗುತ್ತಿರುವ ಪರಿಣಾಮ.
  2. ವೆಚ್ಚ ಹಣದುಬ್ಬರ ಸೂಚ್ಯಂಕದ ಬದಲಾವಣೆ ಬಗ್ಗೆ ಪರಿಶೀಲನೆ ಮತ್ತು ಇತ್ತೀಚಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ತಗಲುತ್ತಿರುವ ವೆಚ್ಚದ ಕುರಿತಂತೆ.
  3. ರಾಜಕೀಯ ಪಕ್ಷಗಳು ಮತ್ತು ಇತರೆ ಸಂಬಂಧಿಸಿದವರಿಂದ ಮಾಹಿತಿ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸುವುದು.
  4. ವೆಚ್ಚಕ್ಕೆ ಸಂಬಂಧಿಸಿದ ಇತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸುವುದು.
  5. ಇತರೆ ಸಂಬಂಧಿಸಿದ ವಿಷಯಗಳ ಕುರಿತಂತೆ ಪರಿಶೀಲಿಸುವುದು.

ಸಮಿತಿ ರಚನೆಯಾದ 120 ದಿನಗಳೊಳಗೆ ತನ್ನ ವರದಿಯನ್ನು ಸಲ್ಲಿಸತಕ್ಕದ್ದು.

***


(Release ID: 1666649) Visitor Counter : 240