ಪ್ರಧಾನ ಮಂತ್ರಿಯವರ ಕಛೇರಿ
ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಘಟಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
19 OCT 2020 1:39PM by PIB Bengaluru
ನಮಸ್ಕಾರ!
ಕರ್ನಾಟಕದ ರಾಜ್ಯಪಾಲರು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ವಜೂಭಾಯಿ ವಾಲಾ ಜೀ, ಕರ್ನಾಟಕದ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್. ಅಶ್ವತ್ಥ ನಾರಾಯಣ ಜೀ , ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಹೇಮಂತ ಕುಮಾರ್ ಜೀ, ಎಲ್ಲಾ ಶಿಕ್ಷಕರೇ, ವಿದ್ಯಾರ್ಥಿಗಳೇ ಮತ್ತು ಈ ಸಂದರ್ಭದಲ್ಲಿ ಹಾಜರಿರುವ ಪೋಷಕರೇ ಮತ್ತು ಮಹಿಳೆಯರೇ ಹಾಗು ಮಹನೀಯರೇ !. ಮೊದಲಿಗೆ , ’ಮೈಸೂರು ದಸರಾ” ಮತ್ತು “ನಾಡ ಹಬ್ಬ” ಕ್ಕಾಗಿ ನಿಮಗೆ ಹೃದಯಪೂರ್ವಕ ಶುಭಾಶಯಗಳು.!.
ಕೆಲವು ನಿಮಿಷಗಳ ಹಿಂದೆ , ನಾನು ಚಿತ್ರಗಳನ್ನು ನೋಡುತ್ತಿದ್ದೆ. ಕೊರೋನಾ ಅಪಾಯದ ಕಾರಣದಿಂದಾಗಿ ಅಲ್ಲಿ ಕೆಲವು ನಿರ್ಬಂಧಗಳು ಇರಬಹುದು, ಆದರೆ ಹಬ್ಬದ ಉತ್ಸಾಹ ಈ ಮೊದಲಿನಂತೆಯೇ ಇದೆ. ಕೆಲವು ದಿನಗಳ ಹಿಂದೆ ಭಾರೀ ಮಳೆ ಬಿದ್ದಿತ್ತಾದರೂ , ಉತ್ಸಾಹಕ್ಕೆ ಭಂಗ ತರಲು ಅದು ಯತ್ನಿಸಿತ್ತಾದರೂ ಉತ್ಸಾಹ ಕಡಿಮೆಯಾಗಿಲ್ಲ. ಸಂತ್ರಸ್ಥ ಎಲ್ಲಾ ಕುಟುಂಬಗಳಿಗೆ ನನ್ನ ಸಾಂತ್ವನವಿದೆ. ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರ ಅವರಿಗೆ ಪರಿಹಾರ ಒದಗಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ.
ಸ್ನೇಹಿತರೇ, ಇಂದು ನಿಮಗೆ ಬಹಳ ಮಹತ್ವದ ದಿನ. ಸಹಜವಾಗಿ, ನಾನು ಇಂತಹ ಸಂದರ್ಭಗಳಲ್ಲಿ ನನ್ನ ಯುವ ಮಿತ್ರರನ್ನು ಮುಖಾಮುಖಿಯಾಗಿ ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ನಾನು ಮೈಸೂರಿಗೆ ಬಂದು ಮೈಸೂರು ವಿಶ್ವವಿದ್ಯಾಲಯದ ಸಂಭ್ರಮದ ಅದ್ದೂರಿ ಪರಂಪರೆಯ ಘಟಿಕೋತ್ಸವದಲ್ಲಿ ಭಾಗವಹಿಸುವುದು ಒಂದು ವಿಭಿನ್ನ ಅನುಭವ. ಆದರೆ ಕೊರೊನಾದಿಂದಾಗಿ , ನಾವು ವರ್ಚುವಲ್ ಆಗಿ ಸಂಪರ್ಕಿಸಲ್ಪಟ್ಟಿದ್ದೇವೆ.
ಸ್ನೇಹಿತರೇ, ಮೈಸೂರು ವಿಶ್ವವಿದ್ಯಾನಿಲಯ ಪ್ರಾಚೀನ ಭಾರತದ ಶ್ರೇಷ್ಟ ಶಿಕ್ಷಣ ವ್ಯವಸ್ಥೆಯ ಪ್ರಮುಖ ಕೇಂದ್ರ ಮತ್ತು ಭವಿಷ್ಯದ ಭಾರತದ ಆಶೋತ್ತರಗಳು ಮತ್ತು ಸಾಮರ್ಥ್ಯಗಳ ಕೇಂದ್ರ. ಈ ವಿಶ್ವವಿದ್ಯಾನಿಲಯವು “ರಾಜರ್ಷಿ” ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ. ವಿಶ್ವೇಶ್ವರಯ್ಯ ಜೀ ಅವರ ಚಿಂತನೆಯನ್ನು ನನಸು ಮಾಡಿದೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 102 ವರ್ಷಗಳ ಹಿಂದೆ ಈ ದಿನದಂದು ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಿದರೆನ್ನುವುದು ನನಗೆ ಸಂತೋಷ ತರುವ ಕಾಕತಾಳೀಯವಾದ ಸಂಗತಿ. ಅಂದಿನಿಂದ ಈ ಪ್ರಖ್ಯಾತ ಕ್ಯಾಂಪಸ್ ಇಂತಹ ಕಾರ್ಯಕ್ರಮಗಳಲ್ಲಿ ಇಂತಹ ಅನೇಕ ಸ್ನೇಹಿತರು ಭಾಗವಹಿಸಿರುವುದನ್ನು ಸಾಕ್ಷೀಕರಿಸಿದೆ. ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿದೆ. ಅನೇಕ ದಿಗ್ಗಜರಾದಂತಹ ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜೀ, ಅವರಂತಹವರು ಈ ಶಿಕ್ಷಣ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದಾರೆ. ಆದುದರಿಂದ , ನಾವು ನಿಮ್ಮ ಕುಟುಂಬಗಳೊಂದಿಗೆ ನಿಮ್ಮಲ್ಲಿ ಬಹಳ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ ಮತ್ತು ಇದೇ ಸಮಯದಲ್ಲಿ ಅಲ್ಲಿ ನಿಮ್ಮ ಮೇಲೆ ಭಾರೀ ನಿರೀಕ್ಷೆಗಳಿವೆ. ಇಂದು ನಿಮ್ಮ ವಿಶ್ವವಿದ್ಯಾಲಯ , ಶಿಕ್ಷಕರು, ಮತ್ತು ಪ್ರಾಧ್ಯಾಪಕರು ರಾಷ್ಟ್ರದ ಮತ್ತು ಸಮಾಜದ ಜವಾಬ್ದಾರಿಯನ್ನು ನಿಮ್ಮ ಪದವಿಗಳೊಂದಿಗೆ ನಿಮಗೆ ಹಸ್ತಾಂತರಿಸುತ್ತಿದ್ದಾರೆ.
ಸ್ನೇಹಿತರೇ, ಶಿಕ್ಷಣ ಮತ್ತು ದೀಕ್ಷೆಯ ಮೂಲಕ ನಿರ್ಧಾರಗಳನ್ನು ನಮ್ಮ ದೇಶದ ಯುವಜನರ ಎರಡು ಪ್ರಮುಖ ಘಟ್ಟಗಳೆಂದು ಪರಿಗಣಿಸಲಾಗುತ್ತದೆ. ಇದು ಸಾವಿರಾರು ವರ್ಷಗಳಿಂದ ನಮ್ಮ ಪರಂಪರೆ. ನಾವು ದೀಕ್ಷೆಯ ಬಗ್ಗೆ ಮಾತನಾಡುವಾಗ , ಇದು ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಾದ ಅವಕಾಶವಲ್ಲ. ಇಂದಿನ ದಿನ ನಮಗೆ ಮುಂದಿನ ಹಂತದ ಜೀವನದ ಬಗ್ಗೆ ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಉತ್ತೇಜನ ನೀಡುತ್ತದೆ. ನೀವು ಈಗ ಔಪಚಾಕ ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನಿಂದ ನೈಜ ಬದುಕಿನ ದೊಡ್ಡ ಕ್ಯಾಂಪಸ್ಸಿಗೆ ಸಾಗುತ್ತಿದ್ದೀರಿ. ಇಂತಹ ಈ ಕ್ಯಾಂಪಸ್ಸಿನಲ್ಲಿ ನೀವು ಗಳಿಸಿಕೊಂಡ ಜ್ಞಾನ ಸಹಾಯಕ್ಕೆ ಬರಲಿದೆ.
ಸ್ನೇಹಿತರೇ, ಕನ್ನಡದ ಶ್ರೇಷ್ಟ ಬರಹಗಾರರಾದ ಮತ್ತು ಚಿಂತಕರಾದ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಜೀ ಅವರು ಹೇಳಿದ್ದಾರೆ- शिक्षणवे जीवनद बेलकु.(ಶಿಕ್ಷಣವೇ ಜೀವನದ ಬೆಳಕು) . ಇದರರ್ಥ ಶಿಕ್ಷಣವು ಜೀವನದ ಕಠಿಣ ಸಂದರ್ಭಗಳಲ್ಲಿ ಬೆಳಕು ತೋರಿಸುವ ಮಾಧ್ಯಮ ಎಂಬುದಾಗಿ. ನಮ್ಮ ದೇಶವು ವ್ಯಾಪಕ ಬದಲಾವಣೆಗಳಿಗೆ ಒಳಪಡುತ್ತಿರುವಾಗ, ಅವರ ಮಾತುಗಳು ಬಹಳ ಸಕಾಲಿಕ. ಕಳೆದ 5-6 ವರ್ಷಗಳಲ್ಲಿ ಭಾರತದ ಶಿಕ್ಷಣ ವ್ಯವಸ್ಥೆ 21 ನೇ ಶತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ರೂಪಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಮತ್ತು ರಾಚನಿಕ ಸುಧಾರಣೆಗಳಿಗಾಗಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಭಾರತವನ್ನು ಗುಣನಾತ್ಮಕವಾಗಿ, ಮತ್ತು ಪ್ರಮಾಣವನ್ನವಲಂಭಿಸಿ ಆ ಮಟ್ಟದಲ್ಲಿ ಉನ್ನತ ಶಿಕ್ಷಣದ ಜಾಗತಿಕ ತಾಣವನ್ನಾಗಿ ರೂಪಿಸಲು ಪ್ರಯತ್ನಗಳು ನಡೆದಿವೆ ಮತ್ತು ಆ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕಗೊಳಿಸಲಾಗುತ್ತಿದೆ.
ಸ್ನೇಹಿತರೇ, ಸ್ವಾತಂತ್ರ್ಯ ಬಂದು ಬಹಳಷ್ಟು ವರ್ಷಗಳು ಕಳೆದರೂ 2014ರಲ್ಲಿ ದೇಶದಲ್ಲಿ ಬರೇ 16 ಐ.ಐ.ಟಿ. ಗಳಿದ್ದವು. ಕಳೆದ ಆರು ವರ್ಷಗಳಲ್ಲಿ ಸರಾಸರಿ ಎಂಬಂತೆ ಪ್ರತೀ ವರ್ಷ ಹೊಸ ಐ.ಐ.ಟಿ. ಯನ್ನು ತೆರೆಯಲಾಗಿದೆ. ಇವುಗಳಲ್ಲಿ ಒಂದು ಕರ್ನಾಟಕದ ಧಾರವಾಡದಲ್ಲಿದೆ. 2014ರಲ್ಲಿ ಬರೇ 9 ಐ.ಐ.ಐ.ಟಿ. ಗಳಿದ್ದವು. ಬಳಿಕದ ಐದು ವರ್ಷಗಳಲ್ಲಿ 16 ಐ.ಐ.ಐ.ಟಿ. ಗಳನ್ನು ಸ್ಥಾಪಿಸಲಾಗಿದೆ. ಕಳೆದ 5-6 ವರ್ಷಗಳಲ್ಲಿ ಏಳು ಹೊಸ ಐ.ಐ.ಎಂ. ಗಳನ್ನು ಸ್ಥಾಪಿಸಲಾಗಿದೆ. ಅದಕ್ಕೆ ಮೊದಲು ಬರೇ 13 ಐ.ಐ.ಎಂ. ಗಳು ದೇಶದಲ್ಲಿದ್ದವು. ಅದೇ ರೀತಿ ಸುಮಾರು ಆರು ದಶಕಗಳಿಂದ ಬರೇ ಏಳು ಎ.ಐ.ಐ.ಎಂ.ಎಸ್. ಗಳು ಸೇವೆ ಒದಗಿಸುತ್ತಿದ್ದವು. 2014ರಿಂದೀಚೆಗೆ , 15 ಎ.ಐ.ಐ.ಎಂ.ಎಸ್. ಗಳನ್ನು ಒಂದೋ ಸ್ಥಾಪಿಸಲಾಗಿದೆ ಅಥವಾ ಆರಂಭದ ಪ್ರಕ್ರಿಯೆಯಲ್ಲಿವೆ.
ಸ್ನೇಹಿತರೇ, ಕಳೆದ 5-6 ವರ್ಷಗಳಲ್ಲಿ ಹೊಸ ಸಂಸ್ಥೆಗಳನ್ನು ತೆರೆಯುವುದಕ್ಕಷ್ಟೇ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಸೀಮಿತವಾಗಿಲ್ಲ, ಈ ಸಂಸ್ಥೆಗಳ ಆಡಳಿತದಲ್ಲಿಯೂ , ಲಿಂಗ ಸಮಾನತೆ ಮತ್ತು ಸಾಮಾಜಿಕ ಸಹಭಾಗಿತ್ವವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕೆಲಸಗಳಾಗಿವೆ. ಇಂತಹ ಸಂಸ್ಥೆಗಳಿಗೆ ಅವುಗಳ ಅಗತ್ಯಾನುಸಾರ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ಹೆಚ್ಚಿನ ಸ್ವಾಯತ್ತೆಯನ್ನು ನೀಡಲಾಗಿದೆ. ಮೊದಲ ಐ.ಐ.ಎಂ. ಕಾಯ್ದೆ ದೇಶಾದ್ಯಂತ ಐ.ಐ.ಎಂ. ಗಳಿಗೆ ಹೆಚ್ಚಿನ ಅಧಿಕಾರವನ್ನು ಒದಗಿಸಿದೆ. ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಈ ದೋಷವನ್ನು ಸರಿಪಡಿಸಲು ಆದ್ಯತೆಯನ್ನು ನೀಡಲಾಗಿದೆ. ಇಂದು ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆಯನ್ನು ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಸ್ಥಾಪಿಸಲಾಗಿದೆ. ಹೋಮಿಯೋಪಥಿ ಮತ್ತು ಇತರ ಭಾರತೀಯ ವೈದ್ಯ ಪದ್ದತಿಗಳ ಚಿಕಿತ್ಸಾ ಕ್ರಮಗಳಿಗೆ ಸಂಬಂಧಿಸಿ ಎರಡು ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆಗಳ ಜೊತೆಗೆ ವೈದ್ಯಕೀಯ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳನ್ನು ಖಾತ್ರಿಪಡಿಸಲಾಗಿದೆ.
ಸ್ನೇಹಿತರೇ , ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಮೊದಲ ಘಟಿಕೋತ್ಸವ ಭಾಷಣದಲ್ಲಿ “ ನಾನು ಒಬ್ಬರಲ್ಲ 10 ಮಂದಿ ಮಹಿಳಾ ಪದವೀಧರರನ್ನು ನೋಡಿದ್ದರೆ ಇನ್ನಷ್ಟು ಸಂತುಷ್ಟನಾಗುತ್ತಿದ್ದೆ” ಎಂದಿದ್ದರು. ಇಂದು , ಪದವಿ ಪಡೆದ ಅನೇಕ ಹೆಣ್ಣು ಮಕ್ಕಳನ್ನು ನಾನು ನೋಡುತ್ತಿದ್ದೇನೆ. ಇಂದು ಪದವಿ ಪಡೆದವರಲ್ಲಿ ಗಂಡು ಮಕ್ಕಳ ಸಂಖ್ಯೆಗಿಂತ ಹೆಣ್ಣು ಮಕ್ಕಳ ಸಂಖ್ಯೆ ಅಧಿಕ ಎಂದು ನನಗೆ ತಿಳಿಸಲಾಗಿದೆ. ಇದು ಭಾರತ ಪರಿವರ್ತನೆಯಾಗುತ್ತಿರುವುದಕ್ಕೆ ಇನ್ನೊಂದು ಗುರುತು. ಇಂದು ಹೆಣ್ಣು ಮಕ್ಕಳ ಒಟ್ಟು ದಾಖಲಾತಿ ಪ್ರಮಾಣ ಶಿಕ್ಷಣದ ಎಲ್ಲಾ ಮಟ್ಟದಲ್ಲಿಯೂ ಗಂಡು ಮಕ್ಕಳ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಅನ್ವೇಷಣೆ ಮತ್ತು ತಂತ್ರಜ್ಞಾನ ಸಂಬಂಧಿತ ಅನೇಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿದೆ. ನಾಲ್ಕು ವರ್ಷಗಳ ಹಿಂದೆ , ಐ.ಐ.ಟಿ. ಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಬರೇ ಎಂಟು ಪ್ರತಿಶತದಷ್ಟಿತ್ತು. ಈ ವರ್ಷ ಅದು ದುಪ್ಪಟ್ಟಿಗೂ ಅಧಿಕವಾಗಿ 20 ಪ್ರತಿಶತದಷ್ಟಿದೆ.
ಸ್ನೇಹಿತರೇ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿಯ ಎಲ್ಲಾ ಸುಧಾರಣೆಗಳಿಗೆ ಹೊಸ ದಿಕ್ಕು ಮತ್ತು ವೇಗವನ್ನು ಒದಗಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ನರ್ಸರಿ ಪೂರ್ವದಿಂದ ಹಿಡಿದು ಪಿ.ಎಚ್.ಡಿ. ವರೆಗೆ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಆಂದೋಲನವಾಗಲಿದೆ. ನಮ್ಮ ಯುವಕರನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ, ಬಹು ಆಯಾಮದ ಧೋರಣೆಗೆ ಗಮನವನ್ನು ನೀಡಲಾಗುತ್ತಿದೆ. ನಮ್ಮ ಯುವಜನತೆ ಉದ್ಯೋಗದ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಮರ್ಥರಾಗಿರುವಂತೆ ಅವರಿಗೆ ಕೌಶಲ್ಯಗಳನ್ನು ಒದಗಿಸಿಕೊಡುವ ಮತ್ತು ಮರು ಕೌಶಲ್ಯಗಳನ್ನು ಮೈಗೂಢಿಸಿಕೊಳ್ಳುವಂತೆ ಮಾಡುವ ಅವಶ್ಯಕತೆ ಇಂದು ಬಹಳಷ್ಟಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ನಿಟ್ಟಿನಲ್ಲಿ ಬಹಳಷ್ಟು ಗಮನವನ್ನು ನೀಡಿದೆ.
ಸ್ನೇಹಿತರೇ, ಮೈಸೂರು ವಿಶ್ವವಿದ್ಯಾನಿಲಯವು ಈ ನೀತಿಯನ್ನು ಅನುಷ್ಟಾನಿಸುವಲ್ಲಿ ತೋರಿದ ಆಸಕ್ತಿ ಮತ್ತು ಬದ್ದತೆಯು ನನಗೆ ಸಂತೋಷವನ್ನುಂಟು ಮಾಡಿದೆ. ನೀವು ಎನ್.ಇ.ಪಿ. ಆಧಾರದಲ್ಲಿ ಬಹು ಶಿಸ್ತೀಯ ಕಾರ್ಯಕ್ರಮಗಳನ್ನು ಆರಂಭಿಸುತ್ತಿರುವಿರಿ ಎಂಬುದಾಗಿ ನಾನು ಭಾವಿಸುತ್ತೇನೆ. ಈಗ ನೀವು ನಿಮ್ಮ ಕನಸು ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ನಿಮ್ಮ ಅಧ್ಯಯನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಜಾಗತಿಕ ತಂತ್ರಜ್ಞಾನದ ಜೊತೆಗೆ ಸ್ಥಳೀಯ ಸಂಸ್ಕೃತಿಯನ್ನು ಏಕಕಾಲದಲ್ಲಿ ಅಧ್ಯಯನ ಮಾಡಬಹುದು. ನೀವು ಆ ತಂತ್ರಜ್ಞಾನವನ್ನು ಸ್ಥಳೀಯ ಉತ್ಪಾದನೆಗಳ ಬಳಕೆಗೆ ಬಳಸಬಹುದು.
ಸ್ನೇಹಿತರೇ, ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಸರ್ವಾಂಗೀಣ ಸುಧಾರಣೆಗಳು ಈ ಹಿಂದೆಂದೂ ನಡೆದಿರಲಿಲ್ಲ. ಏನಾದರೂ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತಾದರೂ ಅವುಗಳು ನಿರ್ದಿಷ್ಟ ವಲಯವನ್ನು ಕೇಂದ್ರೀಕರಿಸಿರುತ್ತಿದ್ದವು ಮತ್ತು ಇದರಿಂದ ಇತರ ವಲಯಗಳು ಅವುಗಳ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದವು. ಕಳೆದ ಆರು ವರ್ಷಗಳಲ್ಲಿ , ಬಹು ವಲಯಗಳಲ್ಲಿ, ಬಹು ಮಾದರಿಯ ಸುಧಾರಣೆಗಳು ಜಾರಿಗೆ ಬಂದಿವೆ. ಎನ್.ಇ.ಪಿ.ಯು ದೇಶದ ಶಿಕ್ಷಣ ವಲಯದ ಭವಿಷ್ಯವನ್ನು ಖಾತ್ರಿಪಡಿಸುತ್ತಿದ್ದರೆ, ಇನ್ನೊಂದೆಡೆ ಅದು ಯುವಕರನ್ನು ಸಶಕ್ತೀಕರಣಗೊಳಿಸುತ್ತಿದೆ. ಕೃಷಿ ಕ್ಷೇತ್ರದ ಸುಧಾರಣೆಗಳು ರೈತರನ್ನು ಸಶಕ್ತೀಕರಣಗೊಳಿಸುತ್ತಿದ್ದರೆ, ಕಾರ್ಮಿಕ ಸುಧಾರಣೆಗಳು ಕಾರ್ಮಿಕರಿಗೆ ಮತ್ತು ಕೈಗಾರಿಕೆಗಳಿಗೆ ಬೆಳವಣಿಗೆಯ ಅವಕಾಶ, ಭದ್ರತೆಯನ್ನು ಒದಗಿಸುತ್ತಿವೆ. ನೇರ ನಗದು ವರ್ಗಾವಣೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಖಾತ್ರಿಪಡಿಸುತ್ತಿದ್ದರೆ, ’ರೇರಾ’ ಮನೆ ಕೊಳ್ಳುವವರಿಗೆ ಭದ್ರತೆಯನ್ನು ಒದಗಿಸುತ್ತದೆ. ದೇಶವನ್ನು ತೆರಿಗೆಗಳ ಜಾಲದಿಂದ ಮುಕ್ತಗೊಳಿಸುವುದಕ್ಕಾಗಿ ಜಿ.ಎಸ್.ಟಿ. ಯನ್ನು ಜಾರಿಗೆ ತರಲಾಗಿದ್ದರೆ , ತೆರಿಗೆ ಪಾವತಿದಾರರ ಸಮಸ್ಯೆಗಳನ್ನು ಬಗೆಹರಿಸಲು ಇತ್ತೀಚೆಗೆ ಮುಖರಹಿತ ಮೌಲ್ಯಮಾಪನ ಉಪಕ್ರಮ ಜಾರಿಗೆ ತರಲಾಗಿದೆ. ಇದೇ ಮೊದಲ ಬಾರಿಗೆ ದಿವಾಳಿ ಸಂಹಿತೆಯು ಸಾಲ ಸುಸ್ತಿಗೆ ಸಂಬಂಧಿಸಿ ಕಾನೂನು ಚೌಕಟ್ಟನ್ನು ಒದಗಿಸಿದೆ ಮತ್ತು ದೇಶದಲ್ಲಿ ಎಫ್.ಡಿ.ಐ. ಸುಧಾರಣೆಗಳ ಮೂಲಕ ಹೂಡಿಕೆ ಹೆಚ್ಚುತ್ತಿದೆ.
ಸ್ನೇಹಿತರೇ, ಕಳೆದ 6-7 ತಿಂಗಳಲ್ಲಿ ಸುಧಾರಣೆಗಳ ವ್ಯಾಪ್ತಿ ಮತ್ತು ವೇಗ ಹೆಚ್ಚಿರುವುದನ್ನು ನೀವು ಗಮನಿಸಿರಬಹುದು. ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯು ಯಾನ ಅಥವಾ ಕಾರ್ಮಿಕ ಕ್ಷೇತ್ರ ಸಹಿತ ಪ್ರತೀ ರಂಗದ ಬೆಳವಣಿಗೆಗೆ ಅವಶ್ಯ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈಗ ಪ್ರಶ್ನೆ ಏನೆಂದರೆ ಅವುಗಳನ್ನು ಯಾಕಾಗಿ ಜಾರಿಗೆ ತರಲಾಗುತ್ತಿದೆ ಎಂಬುದಾಗಿದೆ ?. ಇದನ್ನು ನಿಮ್ಮಂತಹ ಕೋಟ್ಯಾಂತರ ಯುವಕರಿಗಾಗಿ ಮಾಡಲಾಗುತ್ತಿದೆ. ಇದನ್ನು ಈ ದಶಕವು ಭಾರತದ ದಶಕವನ್ನಾಗಿ ರೂಪಿಸುವುದಕ್ಕಾಗಿ ಮಾಡಲಾಗುತ್ತಿದೆ. ನಾವು ನಮ್ಮ ನೆಲೆಗಟ್ಟನ್ನು ಬಲಿಷ್ಟಗೊಳಿಸಿದರೆ ಈ ದಶಕವು ಭಾರತದ್ದಾಗುತ್ತದೆ. ಈ ದಶಕವು ಯುವ ಭಾರತಕ್ಕಾಗಿ ಹಲವಾರು ಅವಕಾಶಗಳನ್ನು ತಂದಿದೆ.
ಸ್ನೇಹಿತರೇ, ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ , ಮೈಸೂರು ವಿಶ್ವವಿದ್ಯಾನಿಲಯವು ಹೊಸದಾಗಿ ಉದಯಿಸುತ್ತಿರುವ ಪರಿಸ್ಥಿತಿಯಲ್ಲಿ ಅದಕ್ಕನುಗುಣವಾಗಿ ನಾವಿನ್ಯತೆಯನ್ನು ಅಳವಡಿಸಿಕೊಳ್ಳಬೇಕಾಗಿದೆ.ನೀವು ಸತತವಾಗಿ ಮಾಜಿ ಕುಲಪತಿ, ದೊಡ್ಡ ಕವಿ-ಬರಹಗಾರ ’ಕುವೆಂಪು’ ಜೀ ಅವರಿಂದ ಪ್ರೇರಣೆಯನ್ನು ಪಡೆಯುತ್ತಿರಬೇಕು. ನೀವು ಇನ್ಕ್ಯುಬೇಶನ್ ಕೇಂದ್ರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು, ಕೈಗಾರಿಕೆ-ಶೈಕ್ಷಣಿಕ ಸಂಪರ್ಕ, ಮತ್ತು ಅಂತರ್ ಶಿಸ್ತೀಯ ಸಂಶೋಧನೆಗಳತ್ತ ನೀವು ಗಮನ ನೀಡಬೇಕು. ವಿಶ್ವವಿದ್ಯಾನಿಲಯವು ಸ್ಥಳೀಯ ಸಂಸ್ಕೃತಿ, ಸ್ಥಳೀಯ ಕಲೆ, ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂಬಂಧಿತ ಜಾಗತಿಕ ಮತ್ತು ಸಮಕಾಲೀನ ವಿಷಯಗಳನ್ನು ಒಳಗೊಂಡಂತೆ ಸಂಶೋಧನೆಯನ್ನು ಉತ್ತೇಜಿಸುವ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ನಿರೀಕ್ಷೆ ಇದೆ.
ಸ್ನೇಹಿತರೇ, ನಾನು ನಿಮ್ಮಲ್ಲಿ ಒಂದು ಕೋರಿಕೆಯನ್ನಿಡುತ್ತೇನೆ. –ಈಗ ನೀವು ಈ ಶ್ರೇಷ್ಟ ಕ್ಯಾಂಪಸ್ಸಿನಿಂದ ಉತ್ತೀರ್ಣರಾಗಿ ಹೊರನಡೆಯುತ್ತಿದ್ದೀರಿ. ನೀವು ನಿಮ್ಮ ವೈಯಕ್ತಿಕ ಬಲದ ಮೇಲೆ ಶ್ರೇಷ್ಟವಾದುದನ್ನು ಸಾಧಿಸಲು ಸದಾ ಪ್ರಯತ್ನಿಸಬೇಕು. ನೀವು ನಿಮ್ಮನ್ನು ಒಂದು ಪೆಟ್ಟಿಗೆಗೆ ಸೀಮಿತವಾಗಿರಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬದಲು, ನೀವು ಹೊಂದಿಕೊಳ್ಳಲು ಪ್ರಯತ್ನಿಸುವ ಪೆಟ್ಟಿಗೆಯು ನಿಮಗಾಗಿ ಮಾಡಿದ್ದಲ್ಲ. ನಿಮಗಾಗಿ ಸಮಯವನ್ನು ಹೊಂದಿಸಿಕೊಳ್ಳಿ, ಅಂತರ್ಮುಖಿಯಾಗಿ ಚಿಂತಿಸಿ, ಮತ್ತು ಜೀವನ ನಿಮ್ಮೆದುರು ಹಾಜರು ಮಾಡುವ ಪ್ರತಿಯೊಂದರ ಅನುಭವವನ್ನು ಪಡೆಯಿರಿ. ಇದು ನಿಮಗೆ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನವಭಾರತ ಎಂಬುದು ಅವಕಾಶಗಳ ಭೂಮಿ. ನೀವು ಗಮನಿಸಿರಬಹುದು, ನಮ್ಮ ವಿದ್ಯಾರ್ಥಿಗಳು ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಹಲವಾರು ನವೋದ್ಯಮಗಳನ್ನು ರೂಪಿಸಿದ್ದಾರೆ. ಈ ನವೋದ್ಯಮಗಳು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ದೊಡ್ಡ ಶಕ್ತಿಯಾಗಿರುವಂತಹವು. ನೀವು ನಿಮ್ಮ ಶಕ್ತಿ ಮತ್ತು ಪ್ರತಿಭೆ ಆಧರಿಸಿ ದೇಶಕ್ಕಾಗಿ ಬಹಳಷ್ಟನ್ನು ಸಾಧಿಸುತ್ತೀರಿ ಎಂಬ ಭರವಸೆ ನನ್ನದಾಗಿದೆ. ನಿಮ್ಮ ಬೆಳವಣಿಗೆ ನಿಮ್ಮದು ಮಾತ್ರ ಅಲ್ಲ, ಅದು ದೇಶದ ಬೆಳವಣಿಗೆ ಕೂಡಾ. ನೀವು ಸ್ವಾವಲಂಬಿಯಾದರೆ ಆಗ ಭಾರತ ಕೂಡಾ ಸ್ವಾವಲಂಬಿಯಾಗುತ್ತದೆ.ಮತ್ತೊಮ್ಮೆ , ನನ್ನೆಲ್ಲಾ ಸ್ನೇಹಿತರಿಗೆ , ಅವರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ.
ಬಹಳ ಬಹಳ ಧನ್ಯವಾದಗಳು.
***
(Release ID: 1666332)
Visitor Counter : 203
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam