ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಝೋಜಿಲಾ ಸುರಂಗ ಮಾರ್ಗದ ಮೊದಲ ಸ್ಪೋಟ ಕಾರ್ಯಕ್ಕೆ ಚಾಲನೆ


ಪ್ರಾಮಾಣಿಕ ಪ್ರಯತ್ನಗಳಿಂದ ದೇಶವನ್ನು ಮುನ್ನಡೆಸೋಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಸುರಂಗ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಲೇಹ್ ಮತ್ತು ಶ್ರೀನಗರ ಕಣಿವೆ ನಡುವೆ ಸರ್ವ ಋತು ಸಂಪರ್ಕ

ಯೋಜನೆಯ ಮರುವಿನ್ಯಾಸದಿಂದ ಸುಮಾರು 4ಸಾವಿರ ಕೋಟಿ ಯೋಜನಾ ವೆಚ್ಚ ಉಳಿತಾಯ ಮತ್ತು ಪ್ರಯಾಣದ ಅವಧಿ 4 ಗಂಟೆ ಕಡಿತ: ಕೇಂದ್ರ ಸಚಿವ ನಿತಿನ್ ಗಡ್ಕರಿ

Posted On: 15 OCT 2020 2:01PM by PIB Bengaluru

ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್ ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಝೋಜಿಲಾ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಸಾಂಕೇತಿಕ ಸ್ಪೋಟಕ್ಕೆ ಚಾಲನೆ ನೀಡಿದರು. ಅವರು, ಈ ಸುರಂಗ ಮಾರ್ಗ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಲೇಹ್ ಮತ್ತು ಶ್ರೀನಗರ ಕಣಿವೆ ನಡುವೆ ಸರ್ವ ಋತು ಸಂಪರ್ಕ ಲಭ್ಯವಾಗಲಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ (ಇದೀಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶ) ಸಮಗ್ರ ಅಭಿವೃದ್ಧಿಗೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಬೆಸುಗೆಗೆ ನೆರವಾಗಲಿದೆ ಎಂದರು.

https://ci6.googleusercontent.com/proxy/P0h1gWNwfUy4oEGaCUWAxBiO5FErURTCq1xJ8bSULeHH79C6Bzi3Ekv4clHHv2GAg0JTeYMvqjlqRXnxdp3lxi4rZHt1_RuPZ-I_WbueW8wWFV9XISY_yr_u=s0-d-e1-ft#http://static.pib.gov.in/WriteReadData/userfiles/image/image001B48J.jpg

ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್ ಎಂಇ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು, ಗುಂಡಿಯನ್ನು ಒತ್ತುವ ಮೂಲಕ ಇಂದು ಸಾಂಕೇತಿಕವಾಗಿ ಜಮ್ಮು ಮತ್ತು ಕಾಶ್ಮೀರದ ಝೋಜಿಲಾದ ಸುರಂಗ ಮಾರ್ಗ ನಿರ್ಮಾಣದ ಮೊದಲ ಸ್ಫೋಟಕ್ಕೆ ಚಾಲನೆ ನೀಡಿದರು.

ಝೋಜಿಲಾದ ಪಾಸ್ ಮಾರ್ಗದಲ್ಲಿ ಸುಮಾರು 3000 ಮೀಟರ್ ಎತ್ತರದಲ್ಲಿ 14.15 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಮೋಟಾರು ವಾಹನಗಳು ಸಂಚರಿಸುವಂತಹ ಸ್ಥಿತಿ ಇದೆ. ಸುರಂಗಮಾರ್ಗ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ದ್ರಾಸ್ ಮತ್ತು ಕಾರ್ಗಿಲ್ ಮೂಲಕ ಶ್ರೀನಗರ ಮತ್ತು ಲೇಹ್ ಗೆ ಸಂಪರ್ಕ ಕಲ್ಪಿಸಲಾಗುವುದು. ಈ ಮಾರ್ಗ ವಾಹನ ಚಾಲನೆಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಮಾರ್ಗಗಳಲ್ಲಿ ಒಂದಾಗಿದೆ ಮತ್ತು ಈ ಯೋಜನೆ ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮವಾದುದಾಗಿದೆ ಎಂದರು. ಸುರಂಗ ಮಾರ್ಗ ನಿರ್ಮಾಣದ ನಂತರ ಇದು ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗವಾಗಲಿದೆ. ಇದರಿಂದಾಗಿ ಈ ಪ್ರದೇಶದ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು. ಯೋಜನೆಯ ಮರುವಿನ್ಯಾಸದಿಂದಾಗಿ ಸುಮಾರು 4 ಸಾವಿರ ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದೆ ಎಂದು ಶ್ರೀ ಗಡ್ಕರಿ ಹೇಳಿದರು. ಪ್ರಾಮಾಣಿಕ ಪ್ರಯತ್ನಗಳಿಂದಾಗಿ ಕಡಿಮೆ ವೆಚ್ಚದಲ್ಲಿ ನಾವು ದೇಶವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಕೊಂಡೊಯ್ಯಬಹುದಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ಯೋಜನೆ ನಿಗದಿಯಂತೆ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ ಪ್ರಸ್ತುತ ಹಾಲಿ ಕೇಂದ್ರ ಸರ್ಕಾರದ ಅಧಿಕಾರಾವಧಿ ಮುಗಿಯುವ ಮುನ್ನವೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಮತ್ತು ಪ್ರಧಾನಮಂತ್ರಿಗಳೇ ಅದನ್ನು ಉದ್ಘಾಟಿಸಲಿದ್ದಾರೆ ಎಂದು ಶ್ರೀ ಗಡ್ಕರಿ ಹೇಳಿದರು.

ಸುರಂಗ ಮಾರ್ಗ ನಿರ್ಮಾಣ ಕಾರ್ಯದ ಬಗ್ಗೆ ನಿಗಾವಹಿಸಲು ಮತ್ತು ಸ್ಥಳೀಯವಾಗಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಲೇಹ್ ನ ಲೆಫ್ಟಿನೆಂಟ್ ಗವರ್ನರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗುವುದು, ಅದರಲ್ಲಿ ಸಂಬಂಧಿಸಿದ ಮುಖ್ಯ ಕಾರ್ಯದರ್ಶಿಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಎನ್ಎಚ್ಐಡಿಸಿಎಲ್ ಅಧಿಕಾರಿಗಳು ಇರಲಿದ್ದಾರೆ ಎಂದು ಅವರು ಭರವಸೆ ನೀಡಿದರು.

ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಏಳು ಸುರಂಗ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಶ್ರೀ ಗಡ್ಕರಿ ಹೇಳಿದರು. ಖಾಝಿಗುಂಡ್ ಮತ್ತು ಬನಿಹಾಲ್ ನಡುವಿನ 8450 ಮೀಟರ್ ಉದ್ದದ ಎರಡು ಕೊಳವೆ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಬರುವ ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದರು. ಆನಂತರ ರಂಬನ್ ಮತ್ತು ಬನಿಹಾಲ್ ನಡುವಿನ 2968 ಮೀಟರ್ ಉದ್ದದ 6 ಏಕ ಕೊಳವೆಯ ಸುರಂಗ ರಸ್ತೆಗಳ ನಿರ್ಮಾಣ ಕಾರ್ಯ 2021ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಖಿಲಾನಿ ಮತ್ತು ಕಿಷ್ತವಾರ್ ನಡುವೆ 450 ಮೀಟರ್ ಉದ್ದದ ಸುರಂಗ ಮಾರ್ಗ 2022ರ ಜೂನ್ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳಿದರು.

          ಅಲ್ಲದೆ, 4.5 ಕಿ.ಲೋಮೀಟರ್ ಉದ್ದದ ಚೆನಾನಿ-ಅನಂತನಾಗ್ ಸುರಂಗಮಾರ್ಗ, 4,600 ಕೋಟಿ ರೂ. ವೆಚ್ಚದ 10.2 ಕಿಲೋಮೀಟರ್ ಉದ್ದದ ಸಿಂಥಾನ್ ಪಾಸ್ ಸುರಂಗಮಾರ್ಗ, 350 ಕೋಟಿ ರೂ. ವೆಚ್ಚದ ಖಾಖ್ಲಾನಿ ಬೈಪಾಸ್ ಸುರಂಗಮಾರ್ಗ ಮತ್ತು 5,400 ಕೋಟಿ ರೂ. ವೆಚ್ಚದ ಛಾತ್ರು ಮತ್ತು ಅನಂತನಾಗ್ ನಡುವಿನ 10 ಕಿಲೋಮೀಟರ್ ಸುರಂಗಮಾರ್ಗ ನಿರ್ಮಾಣಕ್ಕೆ ವಿಸ್ತೃತ ಕ್ರಿಯಾ ಯೋಜನೆ(ಡಿಪಿಆರ್) ಸಿದ್ಧವಾಗಿದ್ದು, ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಹೇಳಿದರು.

https://ci5.googleusercontent.com/proxy/dYZ3ZBRxCAMn06ggO3oBRqOzpyFOjYyrjs5IWs_SoVuoy08AkcPB3y9cVpGCvyVFlf5Id8hb0f5Aedz1dTR899ei-rIwVANHOjzW_gT2RK14A5jW1mae-Rxe=s0-d-e1-ft#http://static.pib.gov.in/WriteReadData/userfiles/image/image002KA0F.jpg

ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್ ಎಂಇ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಝೋಜಿಲಾ ಸುರಂಗಮಾರ್ಗ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದರು.

 ಸುಮಾರು 21,000 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ದೆಹಲಿ-ಕತ್ರಾ ಹಸಿರು ಎಕ್ಸ್ ಪ್ರೆಸ್ ವೆ ನಿರ್ಮಾಣ ಕಾಮಗಾರಿಯನ್ನು ಉಲ್ಲೇಖಿಸಿದ ಶ್ರೀ ಗಡ್ಕರಿ ಅವರು, ಈ ಯೋಜನೆ ಎರಡು ಪ್ರಮುಖ ಸ್ಥಳಗಳ ನಡುವೆ ಅಂತರವನ್ನು ಕೇವಲ 650 ಕಿಲೋಮೀಟರ್ ಗೆ ತಗ್ಗಿಸಲಿದೆ ಎಂದರು. ಈ ಯೋಜನೆಗಾಗಿ ಭೂಸ್ವಾಧೀನ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಆ ಮಾರ್ಗದಲ್ಲಿ ಡಿಸೆಂಬರ್ ವೇಳೆಗೆ ಕಾಮಗಾರಿ ಆರಂಭವಾಗಲಿದೆ ಎಂದರು. ಚಾಲಕರಿಗೆ ಹವಾಮಾನದ ಮಾಹಿತಿ ಲಭ್ಯವಾಗುವಂತೆ ಲಂಡನ್ ನಲ್ಲಿನ ಸಾರಿಗೆ ವ್ಯವಸ್ಥೆಯನ್ನು ಆಧರಿಸಿ ಆಧುನಿಕ ರೀತಿಯಲ್ಲಿ ಈ ಹೆದ್ದಾರಿಯ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಎಕ್ಸ್ ಪ್ರೆಸ್ ವೆ ಅಮೃತಸರ್ ಸೇರಿದಂತೆ ಹಲವು ಗುರುದ್ವಾರಗಳಿಗೆ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಜಮ್ಮು ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದ್ದು, ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದರು.

        ನಾಲ್ಕು ಪಥಗಳ ಜಮ್ಮು-ಉಧಂಪುರ್ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದರು. ಉಧಂಪುರ್ ನಿಂದ ರಂಬನ್ ವರೆಗಿನ ರಸ್ತೆ ನಿರ್ಮಾಣ ಕಾರ್ಯ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಛೆನಾನಿ-ನೆಶಾರಿ ಸುರಂಗಮಾರ್ಗ ಪೂರ್ಣಗೊಂಡಿದ್ದು 2017ರಲ್ಲೇ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ ರಂಬನ್ ನಿಂದ ಬನಿಹಾಲ್ ವರೆಗಿನ 33 ಕಿಲೋಮೀಟರ್ ಉದ್ದದ ರಸ್ತೆಯನ್ನು 2,168 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಆ ಕಾಮಗಾರಿ ಡಿಸೆಂಬರ್ 2021ರ ವೇಳೆಗೆ ಪೂರ್ಣಗೊಳ್ಳಲಿದೆ. ಶ್ರೀನಗರ್ ಮತ್ತು ಬನಿಹಾಲ್ ನಡುವಿನ 65 ಕಿಲೋಮೀಟರ್ ಉದ್ದದ ಚತುಷ್ಪಥ ರಸ್ತೆ ನಿರ್ಮಾಣವನ್ನು 1,433 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದರು.

ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯದ ಸಹಾಯಕ ಸಚಿವ(ಸ್ವತಂತ್ರ ಹೊಣೆಗಾರಿಕೆ), ಪ್ರಧಾನಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಅಣುಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ  ಡಾ. ಜಿತೇಂದ್ರ ಸಿಂಗ್ ಅವರು, ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು. ಸರ್ಕಾರ, ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು. ಈ ಪ್ರಾಂತ್ಯಗಳ ಪ್ರತಿಯೊಬ್ಬ ಪ್ರಜೆಗಳ ಸಬಲೀಕರಣಕ್ಕೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. ಭಾರತದ ಮೊದಲ ಸುರಂಗ ರಸ್ತೆ ನಿರ್ಮಾಣ ಯೋಜನೆ ಛೆನಾಹಿ-ನೆಶಾರಿ ಸುರಂಗಮಾರ್ಗಕ್ಕೆ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನಿಡಲಾಗಿದೆ ಎಂದು ಸಚಿವರು ಹೇಳಿದರು.  

2014ರ ನಂತರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ಆಧುನಿಕ ಭಾರತದ ಕೊಡುಗೆಗಳಾಗಿವೆ ಎಂದು ಅವರು ಹೇಳಿದರು. ಶ್ರೀ ಗಡ್ಕರಿ ಅವರ ಶ್ರೇಷ್ಠ ನಾಯಕತ್ವ, ಅತ್ಯುತ್ಸಾಹ ಮತ್ತು ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸುರಂಗಮಾರ್ಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಭೌತಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನು ಬಲವರ್ಧನೆಗೊಳಿಸಲಿವೆ ಎಂದು ಹೇಳಿದರು. ಈ ಸರ್ಕಾರದ ಕಳೆದ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಕೆಲಸದ ಸಂಸ್ಕೃತಿಯಲ್ಲಿ ಭಾರೀ ಬದಲಾವಣೆಯಾಗಿವೆ ಮತ್ತು ಅಗತ್ಯತೆಗಳನ್ನು ಆಧರಿಸಿ ಯೋಜನೆಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಇಲ್ಲಿ ಇತರೆ ಯಾವುದೇ ಅಂಶಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದರು. ಸರ್ಕಾರ ಕಳೆದ ಆರು ವರ್ಷಗಳಲ್ಲಿ ಆರಂಭವಾಗಿರುವ ಎಲ್ಲ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲು ದೃಢಸಂಕಲ್ಪ ಮಾಡಿವೆ ಎಂದ ಅವರು, ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಅಡೆತಡೆಗಳ ನಡುವೆಯೂ ಕಾಮಗಾರಿ ಮುಂದುವರಿದಿವೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಮರೋಪಾದಿಯಲ್ಲಿ ಹಲವು ಹೊಸ ಹೆದ್ದಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು ಕೆಲವು 200ಕ್ಕೂ ಅಧಿಕ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.

         ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್(ನಿವೃತ್ತ) ಡಾ. ವಿ.ಕೆ. ಸಿಂಗ್ ಝೋಜಿಲಾ ಸುರಂಗಮಾರ್ಗದ ಕುರಿತು ಮಾತನಾಡಿ, ಆ ಮಾರ್ಗದಲ್ಲಿ ನಾನು ಸಂಚರಿಸಿದ್ದೇನೆ. ಅಲ್ಲಿನ ಜನರು ಎದುರಿಸುತ್ತಿರುವ ಕಷ್ಟಗಳನ್ನು ನಾನು ಕಂಡಿದ್ದೇನೆ ಎಂದು ಹೇಳಿದರು. ಈ ಸುರಂಗಮಾರ್ಗ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನ ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ನಡುವಿನ ಸಮನ್ವಯತೆಯನ್ನು ಸುಧಾರಿಸಲಿದೆ ಎಂದು ಹೇಳಿದರು. ರಸ್ತೆ ಮತ್ತು ರೈಲು ಎರಡೂ ಜಾಲಕ್ಕಾಗಿ ಕಾರ್ಯಕ್ಕಾಗಿ ನಿರ್ವಹಿಸಲು ಎನ್ಎಚ್ಎಐ ಅಥಾವಾ ಎನ್ಎಚ್ಐಡಿಸಿಎಲ್ ಮಾದರಿಯಲ್ಲಿ ಸುರಂಗಮಾರ್ಗಗಳ ನಿರ್ಮಾಣಕ್ಕೆ ಪ್ರತ್ಯೇಕ ಸಂಸ್ಥೆಯೊಂದನ್ನು ರಚಿಸುವ ಅಗತ್ಯವಿದೆ ಎಂದು ಸಚಿವರು ಸಲಹೆ ನೀಡಿದರು.

          ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಈ ಕಾರ್ಯಕ್ರಮ ಈ ಭಾಗದ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ ಎಂದರು. ಈ ಸುರಂಗಮಾರ್ಗ ಆಧುನಿಕ ಯುಗದ ಅದ್ಭುತ ಎಂದು ಅವರು ಬಣ್ಣಿಸಿದರು. ಈ ಯೋಜನೆಯಿಂದಾಗಿ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಶ್ರೀ ರಾಧಾಕೃಷ್ಣ ಮಾಥೂರ್, ಪದೇ ಪದೇ ಗುತ್ತಿಗೆದಾರರು ಬದಲಾಗುತ್ತಿದ್ದಂತಹ ಸನ್ನಿವೇಶದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿದರು. ಈ ಸುರಂಗಮಾರ್ಗ ಲೇಹ್ ಅಭಿವೃದ್ಧಿಗೆ ದೀರ್ಘಾವಧಿಯಲ್ಲಿ ಕೊಡುಗೆ ನೀಡಲಿದೆ ಎಂದರು. 1948ರಲ್ಲಿ ವಿರೋಧಿಗಳಿಂದ ಈ ಪ್ರಾಂತ್ಯವನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದ್ದನ್ನು ಸ್ಮರಿಸಿದರು ಮತ್ತು ಇಂದಿನ ಕಾರ್ಯಕ್ರಮ ಝೋಜಿಲಾದಲ್ಲಿ ಎರಡನೇ ವಿಮೋಚನೆಯನ್ನು ಪ್ರಮುಖವಾಗಿ ಪ್ರತಿಬಿಂಬಿಸುತ್ತದೆ ಎಂದರು. ಅವರು ಈ ಭಾಗದಲ್ಲಿ ಎಲ್ಲ ರಸ್ತೆ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆ ನಡೆಸಲು ಕೇಂದ್ರೀಯ ಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿದರು ಮತ್ತು ಸಂಕಷ್ಟದ ಸಮಯದಲ್ಲಿ ರಸ್ತೆ ಆಡಳಿತಕ್ಕೆ ಸಂಬಂಧಿಸಿದಂತೆ ದೈನಂದಿನ ಆಗು ಹೋಗುಗಳ ಬಗ್ಗೆ ನಿಗಾವಹಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಜಂಟಿ ಸಮಿತಿಯನ್ನು ರಚಿಸಲು ಅವರು ಸಲಹೆ ನೀಡಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರ್ಮಾನೆ ಅವರು, ಲಡಾಖ್ ಪ್ರಾಂತ್ಯಕ್ಕೆ ವರ್ಷವಿಡೀ ಸಂಪರ್ಕ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಚಿವಾಲಯದ ಏಜೆನ್ಸಿಗಳು ಪರಿಶ್ರಮವಹಿಸಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಈ ಉದ್ದೇಶಕ್ಕಾಗಿ ತಾಂತ್ರಿಕ ಮತ್ತು ಸಾರಿಗೆ ಬೆಂಬಲ ನೀಡುತ್ತಿರುವುದನ್ನು ಅವರು ಪ್ರಶಂಸಿಸಿದರು.

***


(Release ID: 1664823) Visitor Counter : 187