ಹಣಕಾಸು ಸಚಿವಾಲಯ

ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ: 7,376 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಅನುಮತಿ


ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿ  ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯ ಯಶಸ್ವಿ ಅನುಷ್ಠಾನ

Posted On: 02 OCT 2020 10:52AM by PIB Bengaluru

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಸುಲಭ ವ್ಯವಹಾರ ಸುಧಾರಣೆಗಳನ್ನು ಯಶಸ್ವಿಯಾಗಿ ಕೈಗೊಂಡಿರುವ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹಣಕಾಸು ಸಚಿವಾಲಯವು ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿದೆ. ಇದರಿಂದಾಗಿ ರಾಜ್ಯಗಳು ಹೆಚ್ಚುವರಿಯಾಗಿ 7,376 ಕೋಟಿ ರೂ. ಸಾಲ ಪಡೆಯಬಹುದಾಗಿದೆ.

ಉತ್ತರ ಪ್ರದೇಶವು ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯನ್ನು ಜಾರಿಗೆ ತರಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ 6 ನೇ ರಾಜ್ಯವಾಗಿದೆ. ಇದರಿಂದಾಗಿ ರಾಜ್ಯವು 4,851 ಕೋಟಿ ರೂ.ಗಳ ಮುಕ್ತ ಮಾರುಕಟ್ಟೆ ಸಾಲ (ಒಎಂಬಿ) ಪಡೆಯಬಹುದಾಗಿದೆ.. ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯವಾದ ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಕಲೆಹಾಕಲು ಮೊತ್ತವು ರಾಜ್ಯಕ್ಕೆ ಸಹಾಯ ಮಾಡುತ್ತದೆ.

ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವುದನ್ನು ಖಾತ್ರಿಗೊಳಿಸುತ್ತದೆ. ಇದು ಫಲಾನುಭವಿಗಳಿಗೆ ಉತ್ತಮ ಸೇವೆ, ನಕಲಿ / ಅನರ್ಹ ಕಾರ್ಡ್ ಗಳನ್ನು ನಿರ್ಮೂಲನೆ ಮಾಡುತ್ತದೆ. ಹೀಗಾಗಿ, ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯು ಫಲಾನುಭವಿಗಳ ಕ್ಷೇಮಾಭ್ಯುದಯವನ್ನು ಹೆಚ್ಚಿಸುತ್ತದೆ ಮತ್ತು ಸೋರಿಕೆಯನ್ನು ಕಡಿಮೆ ಮಾಡುತ್ತದೆ.

ಪಡಿತರ ಚೀಟಿಯ ಅಡಚಣೆ ರಹಿತ ಅಂತರ-ರಾಜ್ಯ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (-ಪಿಒಎಸ್) ಸಾಧನಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ಪಡಿತರ ಕಾರ್ಡ್ಗಳ ಆಧಾರ್ ಜೋಡಣೆ ಮತ್ತು ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ರಾಜ್ಯಗಳ ಸುಧಾರಣಾ ಹಕ್ಕುಗಳನ್ನು ನಿರ್ಣಯಿಸಲು ಮತ್ತು ಜಿಎಸ್ಡಿಪಿಯ ಶೇಕಡಾ 0.25 ರಷ್ಟು ಹೆಚ್ಚುವರಿ ಸಾಲ ಮಿತಿಯನ್ನು ಬಿಡುಗಡೆ ಮಾಡಲು ಶಿಫಾರಸು ಮಾಡುವ ನೋಡಲ್ ಸಚಿವಾಲಯವಾಗಿದೆ.

ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ ಮತ್ತು ತ್ರಿಪುರಾ ರಾಜ್ಯಗಳು ಪಡಿತರ ವ್ಯವಸ್ಥೆಯಲ್ಲ್ಲಿ ಮೇಲಿನ ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯನ್ನು ಜಾರಿಗೆ ತಂದಿವೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ತಿಳಿಸಿದೆ.

ಸುಲಭ ವ್ಯವಹಾರ ಸುಧಾರಣೆಗಳನ್ನು ಯಶಸ್ವಿಯಾಗಿ ಕೈಗೊಂಡ ದೆಶದ ಮೊದಲ ರಾಜ್ಯ ಎಂಬ ಅಗ್ಗಳಿಕೆಗೆ ಆಂಧ್ರಪ್ರದೇಶ ಪಾತ್ರವಾಗಿದೆ. ಹೀಗಾಗಿ ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ ಹೆಚ್ಚುವರಿಯಾಗಿ 2,525 ಕೋಟಿ ರೂ. ಪಡೆಯಲು ರಾಜ್ಯ ಅರ್ಹವಾಗಿದೆ. ಹಿಂದೆ ಆಂಧ್ರಪ್ರದೇಶವು ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪಡಿತರ ವ್ಯವಸ್ಥೆ ಸುಧಾರಣೆಗಳನ್ನೂ ಸಹ ಪೂರ್ಣಗೊಳಿಸಿತ್ತು.

ಸುಲಭ ವ್ಯವಹಾರವು ದೇಶದ ಹೂಡಿಕೆ ಸ್ನೇಹಿ ವಾತಾವರಣದ ಪ್ರಮುಖ ಸೂಚಕವಾಗಿದೆ. ವ್ಯವಹಾರವನ್ನು ಸುಲಭಗೊಳಿಸುವುದರಿಂದ ರಾಜ್ಯದ ಆರ್ಥಿಕತೆಯು ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ, ವ್ಯವಹಾರ ಸುಲಭವಾಗುವಂತೆ ಜಿಲ್ಲಾ ಮಟ್ಟದ ಅನುಷ್ಠಾನ ಮತ್ತು ಪರವಾನಗಿ ಸುಧಾರಣೆಗಳನ್ನು ಉತ್ತೇಜಿಸುವ ಸಲುವಾಗಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ (ಡಿಪಿಐಐಟಿ) ಶಿಫಾರಸಿನ ಮೇರೆಗೆ ಜಿಎಸ್ಡಿಪಿಯ ಶೇಕಡಾ 0.25 ರಷ್ಟು ಹೆಚ್ಚುವರಿ ಸಾಲ ಸೌಲಭ್ಯವನ್ನು ಪಡೆಯಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ. ಸುಧಾರಣೆಯು ರಾಜ್ಯ ಸರ್ಕಾರಗಳ ಕೆಳಗಿನ ಎಲ್ಲಾ ಕ್ರಮಗಳನ್ನು ಒಳಗೊಂಡಿರುತ್ತದೆ:

.        ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಸೂಚಿಸಿದಂತೆ ರಾಜ್ಯವುಜಿಲ್ಲಾ ಮಟ್ಟದ ವ್ಯವಹಾರ ಸುಧಾರಣಾ ಕ್ರಿಯಾ ಯೋಜನೆ ಮೊದಲ ಮೌಲ್ಯಮಾಪನವನ್ನು ಪೂರ್ಣಗೊಳಿಸುತ್ತದೆ.

ಬಿ.        ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು ವಿತರಿಸಿದ ಪಟ್ಟಿಯ ಪ್ರಕಾರ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳಿಂದ ವಿವಿಧ ಚಟುವಟಿಕೆಗಳಿಗಾಗಿ ವ್ಯವಹಾರಗಳು ಪಡೆದ ಪ್ರಮಾಣಪತ್ರಗಳು/ ಅನುಮೋದನೆಗಳು / ಪರವಾನಗಿಗಳ ನವೀಕರಣಗಳನ್ನು ರಾಜ್ಯವು ರದ್ದು ಮಾಡುತ್ತದೆ. ಸಮಂಜಸವಾದ ಶುಲ್ಕ ಸಂಗ್ರಹದೊಂದಿಗೆ ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಸ್ವಯಂಚಾಲಿತ ಆನ್ಲೈನ್ ಮಾದರಿಯ ನವೀಕರಣಗಳನ್ನೂ ಸಹ ಸುಧಾರಣೆ ಎಂದು ಪರಿಗಣಿಸಲಾಗುವುದು.

ಸಿ.        ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು ವಿತರಿಸಿದ ಪಟ್ಟಿಯ ಪ್ರಕಾರ ರಾಜ್ಯವು ಗಣಕೀಕೃತ ಕೇಂದ್ರೀಯ ತಪಾಸಣೆ ವ್ಯವಸ್ಥೆಯನ್ನು ಜಾರಿಗೆ ತರುತ್ತದೆ, ಇದರಲ್ಲಿ ತನಿಖಾಧಿಕಾರಿಗಳ ಹಂಚಿಕೆಯನ್ನು ಕೇಂದ್ರೀಯವಾಗಿಯೇ ಮಾಡಲಾಗುತ್ತದೆ, ನಂತರದ ವರ್ಷಗಳಲ್ಲಿ ಅದೇ ಇನ್ಸ್ಪೆಕ್ಟರ್ ಅನ್ನು ಮತ್ತೆ ಅದೇ ಘಟಕಕ್ಕೆ ನಿಯೋಜಿಸಲಾಗುವುದಿಲ್ಲ, ವ್ಯವಹಾರಗಳ ಮಾಲೀಕರಿಗೆ ಪರಿಶೀಲನೆಯ ಪೂರ್ವ ಸೂಚನೆಯನ್ನು ನೀಡಲಾಗುತ್ತದೆ, ಮತ್ತು ವರದಿಯನ್ನು ಪರಿಶೀಲನೆಯ 48 ಗಂಟೆಗಳೊಳಗೆ ಅಪ್ಲೋಡ್ ಮಾಡಲಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು 2020 ಮೇ ತಿಂಗಳಲ್ಲಿ 2020-21ನೇ ಸಾಲಿಗೆ ರಾಜ್ಯಗಳಿಗೆ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್ಡಿಪಿ) ಶೇಕಡಾ 2 ರಷ್ಟು ಹೆಚ್ಚುವರಿ ಸಾಲಕ್ಕೆ ಅನುಮತಿ ನೀಡಿತ್ತು. ಇದರಿಂದಾಗಿ ರಾಜ್ಯಗಳಿಗೆ 4,27,302 ಕೋಟಿ ರೂ.ಗಳವರೆಗೆ ಹಣಕಾಸು ಲಭ್ಯವಾಯಿತು. ಇದರಲ್ಲಿ ಶೇಕಡಾ ಒಂದರಷ್ಟನ್ನು ಪ್ರತಿ ಸುಧಾರಣೆಯ ಅನುಷ್ಠಾನಕ್ಕೆ ಜಿಎಸ್ಡಿಪಿಯ 0.25 ಪ್ರತಿಶತದಂತೆ ನಾಲ್ಕು ನಿರ್ದಿಷ್ಟ ರಾಜ್ಯ ಮಟ್ಟದ ಸುಧಾರಣೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬೇಕು.

ಅವುಗಳೆಂದರೆ:

.        ಒಂದು ದೇಶ, ಒಂದು ಪಡಿತರ ಚೀಟಿ ವ್ಯವಸ್ಥೆಯ ಅನುಷ್ಠಾನ

ಬಿ.        ಸುಲಭ ವ್ಯವಹಾರ ಸುಧಾರಣೆ

ಸಿ.        ನಗರ ಸ್ಥಳೀಯ ಸಂಸ್ಥೆ / ಅಗತ್ಯತೆ ಸುಧಾರಣೆಗಳು

ಡಿ.        ವಿದ್ಯುತ್ ವಲಯದ ಸುಧಾರಣೆಗಳು

***


(Release ID: 1661091) Visitor Counter : 256