ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೋವಿಡ್-19: ಕಾರ್ಯಸ್ಥಳಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಇ.ಎಸ್.ಐ.ಸಿ. ಮಾರ್ಗಸೂಚಿ
Posted On:
29 SEP 2020 6:14PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಖಾತೆ ಸಚಿವ ಡಾ. ಹರ್ಷವರ್ಧನ್ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ಕೋವಿಡ್ 19 ನಿಗ್ರಹ ಕುರಿತಂತೆ ಕೈಗಾರಿಕೆಗಳು ಮತ್ತು ಸ್ಥಾಪನೆಗಳ ಸುರಕ್ಷಿತ ಕಾರ್ಯಸ್ಥಳ ಮಾರ್ಗಸೂಚಿಗಳನ್ನು ಜಂಟಿಯಾಗಿ ಬಿಡುಗಡೆ ಮಾಡಿದರು. ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರ ನಿರಂತರ ಮಾರ್ಗದರ್ಶನದಲ್ಲಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀ ಹೀರಾ ಲಾಲ್ ಸಮಾರಿಯಾ, ಇ.ಎಸ್.ಐ.ಸಿ.ಯ ಮಹಾ ನಿರ್ದೇಶಕ ಶ್ರೀಮತಿ ಅನುರಾಧಾ ಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಆರತಿ ಅಹುಜಾ ಮತ್ತು ಇಎಸ್.ಐ.ಸಿ. ಸದಸ್ಯ ಹಾಗೂ ಡಿಜಿಎಚ್.ಎಸ್. ಪ್ರೊ. (ಡಾ.) ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು. ದೇಶಾದ್ಯಂತದಿಂದ ಕಾರ್ಮಿಕ ಸಂಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಆನ್ ಲೈನ್ ಮೂಲಕ ಜೊತೆಗೂಡಿದರು.
ಮಾರ್ಗಸೂಚಿಗಳ ಮಹತ್ವವನ್ನು ಶ್ಲಾಘಿಸಿದ ಡಾ. ಹರ್ಷವರ್ಧನ್, ಕೋವಿಡ್ 19 ಮಹಾಮಾರಿಯ ನಿಯಂತ್ರಣಕ್ಕೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಕಾರ್ಯ ಸ್ಥಳದಲ್ಲಿ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಅಗತ್ಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಾಲ ಕಾಲಕ್ಕೆ ಬಿಡುಗಡೆ ಮಾಡುವ ಸುರಕ್ಷತೆ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಇ.ಎಸ್.ಐ.ಸಿ.ಕೋವಿಡ್ -19 ವಿರುದ್ಧ ಹೋರಾಟಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ಭಾರತದಾದ್ಯಂತ ಇ.ಎಸ್.ಐ.ಸಿ. ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಕೋವಿಡ್ -19 ಆರೈಕೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೈಗಾರಿಕೆಗಳು ಮತ್ತು ಸ್ಥಾಪನೆಗಳು ಸರ್ಕಾರ ಹೊರಡಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಕಾರ್ಯ ಸ್ಥಳಗಳಲ್ಲಿ ಅಗತ್ಯ ಮಾರ್ಪಾಡುಗಳು/ ಬದಲಾವಣೆಗಳನ್ನು ಮಾಡಬೇಕು ಮತ್ತು ಕಾರ್ಯಪಡೆಗಳನ್ನು ಸುರಕ್ಷಿತವಾಗಿರಿಸುವುದರೊಂದಿಗೆ ವ್ಯಾಪಾರ ಚಟುವಟಿಕೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಸಕ್ರಿಯೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಮಾತನಾಡಿ, ಇತ್ತೀಚೆಗೆ ಸಂಸತ್ತಿನ ಅನುಮೋದನೆ ಪಡೆದ ಮೂರು ಕಾರ್ಮಿಕ ಸಂಹಿತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂರು ಮಸೂದೆಗಳು ಅನುಮೋದನೆ ಪಡೆಯುವುದರೊಂದಿಗೆ ಹೆಚ್ಚಿನ ಕಾರ್ಮಿಕರು ಸಾಮಾಜಿಕ ಭದ್ರತೆಯ ಸೌಲಭ್ಯ ಪಡೆಯಲಿದ್ದಾರೆ ಎಂದರು. ಈ ಮಸೂದೆಗಳು ಸುಗಮ ವಾಣಿಜ್ಯವನ್ನು ಖಾತ್ರಿಪಡಿಸುತ್ತವೆ ಎಂದೂ ಅವರು ಹೇಳಿದರು. ಇ.ಎಸ್.ಐ.ಸಿ. ಆರಂಭವಾದ ದಿನಗಳಿಂದಲೂ ಕಡಿಮೆ ಆದಾಯದ ಕಾರ್ಮಿಕರಿಗೆ ವಿಮಾ ವ್ಯಾಪ್ತಿಗೆ ಬರುವ ವ್ಯಕ್ತಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಶ್ರಮಿಸುತ್ತಿದೆ, ಈಗ ಸಾಮಾಜಿಕ ಭದ್ರತಾ ಸಂಹಿತೆಯ ಅಂಗೀಕಾರದೊಂದಿಗೆ ಅದರ ವ್ಯಾಪ್ತಿಯು ಪ್ರಸ್ತುತ ಅಂದಾಜು 12 ಕೋಟಿ ಫಲಾನುಭವಿಗಳ ನೆಲೆಯಿಂದ ಅನೇಕ ಪಟ್ಟುಗಳನ್ನು ಹೆಚ್ಚಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಸ್ತುತ ದೇಶದ ಅಧಿಸೂಚಿತ ಜಿಲ್ಲೆಗಳಿಗೆ ಪ್ರತಿಯಾಗಿ ಇಡೀ ದೇಶದಲ್ಲಿ ಇಎಸ್.ಐ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು. ಇ.ಎಸ್.ಐ.ಸಿ. ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ವಿಮಾ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಹಣಕಾಸು ಪರಿಹಾರ, ಆರೋಗ್ಯ ಸುರಕ್ಷತೆ ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಗಂಗ್ವಾರ್ ತಿಳಿಸಿದರು. ಅಟಲ್ ಬಿಮಿತ್ ಕಲ್ಯಾಣ ಯೋಜನೆ ಅಡಿಯಲ್ಲಿ ಪಾವತಿಸಬೇಕಾದ ನಿರುದ್ಯೋಗ ಪರಿಹಾರದ ದರವನ್ನು, 24.3.2020 ರಿಂದ 31.12.2020 ರವರೆಗೆ ಉದ್ಯೋಗ ನಷ್ಟದ ಅರ್ಹತಾ ಮಾನದಂಡಗಳಲ್ಲಿ ವಿನಾಯಿತಿಯೊಂದಿಗೆ ಸರಾಸರಿ ವೇತನವನ್ನು ಶೇ.25 ರಿಂದ ಶೇ.50 ಕ್ಕೆ ದ್ವಿಗುಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಈ ಮೊದಲು, ಇಎಸ್.ಐ.ಸಿ. ಯಾವುದೇ ದಂಡವನ್ನು ವಿಧಿಸದೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವಂತಿಗೆಯನ್ನು 2020 ರ ಮೇ 15 ರವರೆಗೆ ಪಾವತಿಸಲು ಉದ್ಯೋಗದಾತರಿಗೆ ಅವಕಾಶ ನೀಡಿದೆ ಎಂದು ತಿಳಿಸಿದರು.
ಕೋವಿಡ್ -19 ಚಿಕಿತ್ಸೆಯಲ್ಲಿ ಇಎಸ್.ಐಸಿ ಮತ್ತಷ್ಟು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ಭಾರತದಾದ್ಯಂತ ಸುಮಾರು 3597 ಹಾಸಿಗೆಗಳನ್ನು ಹೊಂದಿರುವ ಒಟ್ಟು 23 ಇಎಸ್.ಐಸಿ ಆಸ್ಪತ್ರೆಗಳು ಕೋವಿಡ್-19 ಸಮರ್ಪಿತ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಿದ್ದು, ಈ ಪ್ರದೇಶದ ಸಾರ್ವಜನಿಕರಿಗೆ ಕೋವಿಡ್ ವೈದ್ಯಕೀಯ ಸೇವೆಗಳನ್ನು ಪ್ರತ್ಯೇಕವಾಗಿ ಒದಗಿಸುತ್ತಿದೆ. ಜೊತೆಗೆ 213 ವೆಂಟಿಲೇಟರ್ ಗಳನ್ನು ಹೊಂದಿರುವ ಒಟ್ಟು 555 ಐಸಿಯು / ಎಚ್.ಡಿಯು ಹಾಸಿಗೆಗಳು ಸಹ ಈ ಆಸ್ಪತ್ರೆಗಳಲ್ಲಿ ಲಭ್ಯವಿದೆ. 500 ಹಾಸಿಗೆಗಳು ಮತ್ತು 125 ಐಸಿಯು ಹಾಸಿಗೆಗಳ ಸೌಲಭ್ಯ ಹೊಂದಿರುವ ಬಿಹ್ಟಾದ ಇಎಸ್.ಐಸಿ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆಯ ಕಾರ್ಯಾಚರಣೆಯ ಬಗ್ಗೆ ಸಚಿವರು ಮಾಹಿತಿ ನೀಡಿದರು. ಫರಿದಾಬಾದ್ (ಹರಿಯಾಣ), ಸನತ್ ನಗರ, ಹೈದರಾಬಾದ್ (ತೆಲಂಗಾಣ), ಗುಲ್ಬರ್ಗಾ (ಕರ್ನಾಟಕ), ಕೆ.ಕೆ.ನಗರ (ಚೆನ್ನೈ), ರಾಜಾಜಿನಗರ (ಬೆಂಗಳೂರು)ದ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮತ್ತು ಬಸೈದರಾಪುರ (ದೆಹಲಿ) ಯಲ್ಲಿನ ಇಎಸ್.ಐಸಿ ಪಿಜಿಐಎಂಎಸ್.ಆರ್, ಐಸಿಎಂಆರ್ ಅನುಮೋದನೆಯೊಂದಿಗೆ ತಮ್ಮಲ್ಲೇ ಕೋವಿಡ್ -19 ಪ್ರಯೋಗಾಲಯ ಪರೀಕ್ಷೆ ಸೇವೆ ಆರಂಭಿಸಿದೆ. ಫರಿದಾಬಾದ್ (ಹರಿಯಾಣ) ಮತ್ತು ಸನತ್ ನಗರ, ಹೈದರಾಬಾದ್ (ತೆಲಂಗಾಣ) ನಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದರು.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್, ನಮ್ಮ ದೇಶದ ಕೈಗಾರಿಕೆಗಳ ಕಾರ್ಮಿಕರಿಗೆ ಕೋವಿಡ್ -19 ರೋಗ ಹಬ್ಬದಂತೆ ತಡೆಯಲು ಕಾರ್ಯಸ್ಥಳದ ಮಾರ್ಗಸೂಚಿಗಳು ಅತ್ಯಂತ ಮಹತ್ವವನ್ನು ಹೊಂದಿವೆ ಎಂದು ತಿಳಿಸಿದರು. ಇದು ಸಾಂಕ್ರಾಮಿಕಕ್ಕೆ ಹೆದರದೆ ದೇಶದ ಉತ್ಪಾದನೆ ಮತ್ತು ಆರ್ಥಿಕತೆಯನ್ನು ಖಾತ್ರಿಪಡಿಸಲು ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಅದೇ ವೇಳೆ, ಕೈಗಾರಿಕಾ ಕಾರ್ಮಿಕರು ಮತ್ತು ಅವರ ಕುಟುಂಬದವರನ್ನು ಭಯವಿಲ್ಲದಂತೆ ಮುಕ್ತವಾಗಿ ಸುರಕ್ಷಿತವಾಗಿಡುತ್ತದೆ. ಈ ಮಾರ್ಗಸೂಚಿಗಳು ಸಕಾಲಿಕವಾಗಿದ್ದು, ಇದನ್ನು ವ್ಯಾಪಕವಾಗಿ ಪ್ರಸಾರ ಮಾಡಿ, ಅದನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೈಗಾರಿಕೆಗಳು ಮತ್ತು ಸ್ಥಾಪನೆಗಳ ಕಾರ್ಯಸ್ಥಳದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಮಾರ್ಗಸೂಚಿಗಳು;
ಉದ್ಯೋಗದಾತರು ಮತ್ತು ಕಾರ್ಮಿಕರು ತಮ್ಮ ಆವರಣದಲ್ಲಿ ಪ್ರತ್ಯೇಕ ಕಾರ್ಯ ಸ್ಥಳ ಸ್ಥಾಪನೆಗಳಲ್ಲಿ ಕೋವಿಡ್ -19 ರ ಅಪಾಯದ ಮಟ್ಟವನ್ನು ಗುರುತಿಸಲು ಮತ್ತು ಸೂಕ್ತ ನಿಯಂತ್ರಣ ಕ್ರಮಗಳನ್ನು ನಿರ್ಧರಿಸಲು ಸಹಾಯ ಮಾಡಲು ಇದನ್ನು ಬಳಸುವಂತೆ ಈ ಮಾರ್ಗಸೂಚಿಗಳನ್ನು ಸಮಗ್ರ ಯೋಜನಾ ಮಾರ್ಗದರ್ಶಿಯಾಗಿ ರೂಪಿಸಲಾಗಿದೆ. ಈ ಮಾರ್ಗಸೂಚಿಗಳು ಕೈಪಿಡಿಯ ರೂಪದಲ್ಲಿದ್ದು, ಇದು ಕಾರ್ಯಸ್ಥಳವನ್ನು ಸುರಕ್ಷಿತವಾಗಿಸಲು ಎಲ್ಲಾ ಪ್ರಮುಖ ಕ್ರಮಗಳನ್ನು ಕ್ರಿಯಾಶೀಲ ಬಿಂದುಗಳಲ್ಲಿ. ಉಸಿರಾಟದ ನೈರ್ಮಲ್ಯ, ಆಗಾಗ್ಗೆ ಕೈ ತೊಳೆಯುವುದು, ವ್ಯಕ್ತಿಗತ ಅಂತರ ಮತ್ತು ಕಾರ್ಯ ಸ್ಥಳದ ನಿಯಮಿತ ನೈರ್ಮಲ್ಯೀಕರಣದಂತಹ ಸೋಂಕು ನಿಯಂತ್ರಣ ಕ್ರಮಗಳ ಭದ್ರಕೋಟೆಯಾಗಿ ಮಾಡಲು ನೆರವಾಗುತ್ತದೆ. ಇದು ಕಾರ್ಯಸ್ಥಳದಲ್ಲಿ ಕೋವಿಡ್ -19 ಸೋಂಕು ಹರಡದಂತೆ ನಿಯಂತ್ರಿಸಲು ಬಳಕೆಗಾಗಿ ವಿನ್ಯಾಸಿತ ಮತ್ತು ಆಡಳಿತಾತ್ಮಕ ಕ್ರಮಗಳು ಮತ್ತು ಮಾನವ ಸಂಪನ್ಮೂಲ ನೀತಿಗಳನ್ನು ವಿವರಿಸುತ್ತದೆ. ಕೋವಿಡ್ -19 ಗೆ ವೈವಿಧ್ಯಮಯ ಕೆಲಸ ಸಂಬಂಧಿತ ಮಾನ್ಯತೆಗಳಿಗೆ ಸಂಬಂಧಿಸಿದ ಅಪಾಯದ ಮೌಲ್ಯಮಾಪನ, ವರ್ಗೀಕರಣ ಮತ್ತು ತಗ್ಗಿಸುವಿಕೆಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಮಾರ್ಗಸೂಚಿಯಲ್ಲಿ ತುರ್ತು ಯೋಜನೆಯನ್ನೂ ಒದಗಿಸಲಾಗಿದೆ. ಕೆಲಸದ ಸ್ಥಳದಲ್ಲಿ ಅನಾರೋಗ್ಯದ ಪ್ರತ್ಯೇಕತೆ ಮತ್ತು ನಿರ್ವಹಣೆಯನ್ನು ವಿವರವಾಗಿ ಪರಿಗಣಿಸಲಾಗಿದೆ. ಸುರಕ್ಷತಾ ಮಾರ್ಗಸೂಚಿಗಳಲ್ಲಿ ಎಲ್ಲಾ ಮಧ್ಯಸ್ಥಗಾರರಿಗಾಗಿ ಸಾಮಾಜಿಕ ನಡವಳಿಕೆಗಾಗಿ ಮಾಡಬೇಕಾದ ಮತ್ತು ಮಾಡಬಾರದವುಗಳನ್ನು ಸಹ ಪಟ್ಟಿ ಮಾಡಲಾಗಿದೆ.
ಶ್ರೀ ಗಂಗ್ವಾರ್ ಅವರು ವಾಣಿಜ್ಯ ಸಮುದಾಯಕ್ಕೆ ಮತ್ತು ಕಾರ್ಯಪಡೆಗಳಿಗೆ ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮತ್ತು ಕೋವಿಡ್ -19 ಸಾಂಕ್ರಾಮಿಕ ತಡೆಯಲು ಮತ್ತು ವಾಣಿಜ್ಯ ಚಟವಟಿಕೆಯ ನಿರಂತರತೆ ಕಾಪಾಡಲು ಮನವಿ ಮಾಡಿದ್ದಾರೆ.
ಭಾರತದಲ್ಲಿ ಇಎಸ್.ಐ. ಯೋಜನೆ:
ಕಾರ್ಮಿಕರ ರಾಜ್ಯ ವಿಮಾ ನಿಗಮ ಒಂದು ಮುಂಚೂಣಿಯ ಸಾಮಾಜಿಕ ಭದ್ರತಾ ಸಂಸ್ಥೆಯಾಗಿದ್ದು, ಇದು ಸಾಮಾಜಿಕ ಸುರಕ್ಷತಾ ಸೌಲಭ್ಯಗಳು ಅಂದರೆ ಸಮಂಜಸ ಆರೋಗ್ಯ ಆರೈಕೆ ಮತ್ತು ಅಗತ್ಯವಿರುವ ಸಂದರ್ಭದಲ್ಲಿ ಅಂದರೆ ಔದ್ಯೋಗಿಕ ಗಾಯ, ಕಾಯಿಲೆ, ಮರಣ ಇತ್ಯಾದಿಯ ವೇಳೆ ಶ್ರೇಣೀಯ ನಗದು ಸೌಲಭ್ಯ ಒದಗಿಸುತ್ತದೆ. ಇದು ಸುಮಾರು 3.49 ಕೋಟಿ ಕಾರ್ಮಿಕರ ಕುಟುಂಬಗಳ ವ್ಯಾಪ್ತಿಯನ್ನು ಒಳಗೊಂಡಿದೆ ಮತ್ತು ಅದರ 13.56 ಕೋಟಿ ಫಲಾನುಭವಿಗಳಿಗೆ ಸಾಟಿಯಿಲ್ಲದ ನಗದು ಪ್ರಯೋಜನಗಳನ್ನು ಮತ್ತು ಸಮಂಜಸವಾದ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ. ಇಂದು, ಅದರ ಮೂಲಸೌಕರ್ಯವು 1520 ಔಷಧಾಲಯಗಳು (ಸಂಚಾರಿ ಔಷಧಾಲಯಗಳು ಸೇರಿದಂತೆ) / 307 ಐಎಸ್.ಎಂ ಘಟಕಗಳು ಮತ್ತು 159 ಇಎಸ್.ಐ ಆಸ್ಪತ್ರೆಗಳು, 793 ಶಾಖೆ / ವೇತನ ಕಚೇರಿಗಳು ಮತ್ತು 64 ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಕಚೇರಿಗಳೊಂದಿಗೆ ಅನೇಕ ಪಟ್ಟು ಹೆಚ್ಚಾಗಿದೆ. ಇಎಸ್.ಐ ಯೋಜನೆ ಇಂದು ದೇಶದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 566 ಜಿಲ್ಲೆಗಳಲ್ಲಿ ಜಾರಿಯಲ್ಲಿದೆ.
***
(Release ID: 1660349)
Visitor Counter : 389