ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಚಿವ ಸಂಪುಟದ ಸಂತಾಪ
ಶ್ರೀ ಸುರೇಶ್ ಅಂಗಡಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ
Posted On:
24 SEP 2020 12:09PM by PIB Bengaluru
2020 ರ ಸೆಪ್ಟೆಂಬರ್ 23 ರಂದು ನವದೆಹಲಿಯಲ್ಲಿ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ.ಅಂಗಡಿ ಅವರ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ ಸೂಚಿಸಿದೆ.
ಶ್ರೀ ಸುರೇಶ್ ಸಿ.ಅಂಗಡಿ ಅವರ ಸ್ಮರಣಾರ್ಥ ಸಂಪುಟವು ಎರಡು ನಿಮಿಷಗಳ ಮೌನವನ್ನು ಆಚರಿಸಿತು.
ಸಂಪುಟ ಸಭೆಯು ಇಂದು ಈ ನಿರ್ಣಯವನ್ನು ಅಂಗೀಕರಿಸಿತು:
2020 ರ ಸೆಪ್ಟೆಂಬರ್ 23 ರಂದು ನವದೆಹಲಿಯಲ್ಲಿ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ.ಅಂಗಡಿ ಅವರ ನಿಧನಕ್ಕೆ ಸಂಪುಟವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರು ನಿಧನದಿಂದ, ರಾಷ್ಟ್ರವು ಒಬ್ಬ ಶ್ರೇಷ್ಠ ನಾಯಕ, ಶಿಕ್ಷಣ ತಜ್ಞ, ಪ್ರಸಿದ್ಧ ಸಂಸದ ಮತ್ತು ಸಮರ್ಥ ಆಡಳಿತಗಾರನನ್ನು ಕಳೆದುಕೊಂಡಿದೆ.
1955 ರ ಜೂನ್ 1 ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಜನಿಸಿದ ಶ್ರೀ ಅಂಗಡಿ ಅವರು ಬೆಳಗಾವಿಯ ಎಸ್.ಎಸ್.ಎಸ್. ಸಮಿತಿ ಕಾಲೇಜಿನಲ್ಲಿ ಪದವಿ ಪೂರೈಸಿದರು. ನಂತರ ಬೆಳಗಾವಿಯ ರಾಜ ಲಖಮಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.
ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ಅವರು 1996 ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದರು. 2001 ರಲ್ಲಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು ಮತ್ತು 2004ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುವವರೆಗೂ ಆ ಹುದ್ದೆಯನ್ನು ನಿಭಾಯಿಸಿದರು. ಅವರು ಬೆಳಗಾವಿಯಿಂದ ದೊಡ್ಡ ಅಂತರದಲ್ಲಿ ಗೆದ್ದು 14 ನೇ ಲೋಕಸಭೆಯ ಸದಸ್ಯರಾದರು. 2009, 2014 ಮತ್ತು 2019 ರಲ್ಲಿ ಬೆಳಗಾವಿಯಿಂದ ಲೋಕಸಭೆಗೆ ಮರು ಆಯ್ಕೆಯಾದರು.
ಅವರು ಆಹಾರ, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ರಕ್ಷಣಾ ಸ್ಥಾಯಿ ಸಮಿತಿಯ ಸದಸ್ಯರಾಗಿ; ಹಾಗೂ ಹಣಕಾಸು ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಸಂಸತ್ ಸದಸ್ಯರ ಪಿಂಚಣಿ, ಸಂಬಳ ಮತ್ತು ಭತ್ಯೆಗಳ ಜಂಟಿ ಸಮಿತಿ, ಕೇಂದ್ರೀಯ ನೇರ ತೆರಿಗೆಗಳ ಸಲಹಾ ಸಮಿತಿ, ಸದನ ಸಮಿತಿ ಮತ್ತು ಅರ್ಜಿಗಳ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಮೇ, 2019 ರಲ್ಲಿ ಶ್ರೀ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದರು.
ಕೈಗಾರಿಕೆ, ಕೃಷಿ ಮತ್ತು ಬಡವರ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿಯಿದ್ದ ಇವರು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು 2009 ರಿಂದ ಬೆಳಗಾವಿಯ ಸುರೇಶ್ ಅಂಗಡಿ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷರೂ ಆಗಿದ್ದರು. ಅವರು ಓದುವ ಮತ್ತು ಪ್ರಯಾಣದ ಬಗ್ಗೆ ಒಲವು ಹೊಂದಿದ್ದರು.
ಸರ್ಕಾರ ಮತ್ತು ಇಡೀ ದೇಶ ಪರವಾಗಿ ಅವರ ದುಃಖತಪ್ತ ಕುಟುಂಬಕ್ಕೆ ಸಂಪುಟವು ತನ್ನ ಹೃದಯಾಂತರಾಳದ ಸಂತಾಪವನ್ನು ಸಲ್ಲಿಸುತ್ತದೆ.”
***
(Release ID: 1658588)
Visitor Counter : 165