ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಪ್ಲಾಸ್ಟಿಕ್ ಸಂಸ್ಕರಣಾ ಉದ್ಯಮ ಒಗ್ಗೂಡಿಕೆ ಮತ್ತು ಸಂಯೋಜನೆಗೆ ಅತ್ಯಾಧುನಿಕ ಮೂಲಸೌಕರ್ಯ ಪ್ಲಾಸ್ಟಿಕ್ ಪಾರ್ಕ್ ಗಳ ನಿರ್ಮಾಣ: ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ
Posted On:
23 SEP 2020 12:40PM by PIB Bengaluru
ದೇಶೀಯ ಪ್ಲಾಸ್ಟಿಕ್ ಸಂಸ್ಕರಣಾ ಉದ್ಯಮದ ಸಾಮರ್ಥ್ಯವನ್ನು ಒಗ್ಗೂಡಿಸಲು ಹಾಗೂ ಸಂಯೋಜನೆ ಉದ್ದೇಶದಿಂದ ಕೇಂದ್ರ ಸರ್ಕಾರ ಕ್ಲಸ್ಟರ್ ಅಭಿವೃದ್ಧಿ ಮಾದರಿಯಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಒಳಗೊಂಡ ಪ್ಲಾಸ್ಟಿಕ್ ಪಾರ್ಕ್ ಗಳನ್ನು ಸ್ಥಾಪಿಸಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಅವರು, ಈ ಯೋಜನೆ ಅಡಿ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿ ವೆಚ್ಚದ ಯೋಜನೆ ಮಿತಿಗೆ ಒಳಪಟ್ಟು, ಯೋಜನಾ ವೆಚ್ಚದ, 50ರಷ್ಟು ಅನುದಾನವನ್ನು ಶೇಕಡ ಕೇಂದ್ರ ಸರ್ಕಾರ ಒದಗಿಸಲಿದೆ ಎಂದರು. ಉಳಿದ ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರಗಳು, ಫಲಾನುಭವಿ ಉದ್ಯಮ ಮತ್ತು ಹಣಕಾಸು ಸಂಸ್ಥೆಗಳ ಸಾಲದಿಂದ ಭರಿಸಲಾಗುವುದು ಎಂದರು.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ದೇಶದಲ್ಲಿ ಹತ್ತು ಪ್ಲಾಸ್ಟಿಕ್ ಪಾರ್ಕ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಅವುಗಳಲ್ಲಿ ಅಸ್ಸಾಂ, ಮಧ್ಯಪ್ರದೇಶ(ಎರಡು ಪಾರ್ಕ್), ಒಡಿಶಾ, ತಮಿಳುನಾಡು, ಜಾರ್ಖಂಡ್ ರಾಜ್ಯಗಳಿಗೆ ಆರು ಪಾರ್ಕ್ ಗಳ ನಿರ್ಮಾಣಕ್ಕೆ ಅಂತಿಮ ಅನುಮೋದನೆ ನೀಡಲಾಗಿದೆ. ಈ ಆರು ಪಾರ್ಕ್ ಗಳು ಅಭಿವೃದ್ಧಿಯ ನಾನಾ ಹಂತದಲ್ಲಿವೆ. ಉಳಿದ ನಾಲ್ಕು ಪ್ಲಾಸ್ಟಿಕ್ ಪಾರ್ಕ್ ಗಳ ಪೈಕಿ ಉತ್ತರಾಖಂಡ ಮತ್ತು ಛತ್ತೀಸ್ ಗಢದಲ್ಲಿ ಸ್ಥಾಪನೆಯಾಗಲಿರುವ ಪ್ಲಾಸ್ಟಿಕ್ ಪಾರ್ಕ್ ಗಳ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗಳ ಮೌಲ್ಯಮಾಪನ ಪ್ರಕ್ರಿಯ ಪ್ರಗತಿಯಲ್ಲಿದೆ. ಹಾಗೂ ಉಳಿದ ಎರಡು ಪ್ಲಾಸ್ಟಿಕ್ ಪಾರ್ಕ್ ಗಳ ಸ್ಥಾಪನೆ ಪ್ರಸ್ತಾವ ಪರಿಶೀಲನೆಯಲ್ಲಿದೆ.
ಆರು ಪ್ಲಾಸ್ಟಿಕ್ ಪಾರ್ಕ್ ಗಳ ವಿವರ ಈ ಕೆಳಗಿನಂತಿದೆ:
- ಮಧ್ಯಪ್ರದೇಶ: ತಮೋಟ್ ನಲ್ಲಿ ಸ್ಥಾಪನೆಯಾಗಲಿರುವ ಪ್ಲಾಸ್ಟಿಕ್ ಪಾರ್ಕ್ ಗಾಗಿ ಭೌತಿಕ ಮೂಲಸೌಕರ್ಯ ಒದಗಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಸಾಮಾನ್ಯ ಸೌಕರ್ಯ ಕೇಂದ್ರ(ಸಿಎಫ್ ಸಿ)ಕ್ಕಾಗಿ ಯಂತ್ರ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ಲಾಸ್ಟಿಕ್ ಪಾರ್ಕ್ ನಲ್ಲಿ ಒಂದು ಘಟಕ ಕಾರ್ಯಾರಂಭ ಮಾಡಿದೆ.
- ಮಧ್ಯಪ್ರದೇಶ: ಬಿಲಾಬಾ ನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಕಾರ್ಯ ಅನುಷ್ಠಾನ ಹಂತದಲ್ಲಿದ್ದು, ಭೌತಿಕ ಮೂಲಸೌಕರ್ಯವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
- ಒಡಿಶಾ: ಪಾರಾದೀಪ್ ನಲ್ಲಿ ಪ್ಲಾಸ್ಟಿಕ್ ಪಾರ್ಕ್ ಅನುಷ್ಠಾನ ಹಂತದಲ್ಲಿದ್ದು, ಭೌತಿಕ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
- ಜಾರ್ಖಂಡ್: ದಿಯೋಘರ್ ನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಅನುಷ್ಠಾನ ಹಂತದಲ್ಲಿದ್ದು, ಭೌತಿಕ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
- ತಮಿಳುನಾಡು: ತಿರುವಳ್ಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಕಾರ್ಯ ಇತ್ತೀಚೆಗೆ ಆರಂಭವಾಗಿದ್ದು, ಸ್ಥಳದಲ್ಲಿ ಭೂಭರ್ತಿ ಕಾಮಗಾರಿ ಪ್ರಗತಿಯಲ್ಲಿದೆ.
- ಅಸ್ಸಾಂ: ತಿನ್ ಸುಕಿಯಾ ದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಕಾರ್ಯ ಅನುಷ್ಠಾನ ಹಂತದಲ್ಲಿದ್ದು, ಭೌತಿಕ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರೀಯ ಸಂಸ್ಥೆ(ಸಿಪೆಟ್), ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೌಶಲ್ಯ ಮತ್ತು ತಾಂತ್ರಿಕ ನೆರವಿನ ಕೇಂದ್ರ(ಸಿಎಸ್ ಟಿಎಸ್) ಸ್ಥಾಪಿಸಿದ್ದು, ಅದು ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಗಳನ್ನು ನಡೆಸುತ್ತಿದೆ ಹಾಗೂ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಲಯದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಶ್ರೀ ಸದಾನಂದ ಗೌಡ ಹೇಳಿದರು
ಪ್ಲಾಸ್ಟಿಕ್ ಸಂಸ್ಕರಣೆ, ಪರೀಕ್ಷೆ, ಸಂಯೋಜನೆ (ಕಾಂಪೊಸೈಟ್ಸ್) ಮತ್ತು ಅಚ್ಚು ಉತ್ಪಾದನೆ, ವಿನ್ಯಾಸ ಮತ್ತಿತರ ವಲಯದಲ್ಲಿ ಪ್ಲಾಸ್ಟಿಕ್ ಉದ್ಯಮಕ್ಕೆ ತಾಂತ್ರಿಕ ಹಾಗೂ ಸಮಾಲೋಚನಾ ಸೇವೆಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ ಎಂದು ಅವರು ಹೇಳಿದರು.
***
(Release ID: 1658133)