ಗೃಹ ವ್ಯವಹಾರಗಳ ಸಚಿವಾಲಯ

ವಲಸೆ ಕಾರ್ಮಿಕರಿಗೆ ಆರ್ಥಿಕ ನೆರವು

Posted On: 15 SEP 2020 6:00PM by PIB Bengaluru

ಅನಿವಾರ್ಯ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಕೊರತೆ ಉಂಟಾಗಬಾರದು ಎಂಬುದನ್ನು ಕೇಂದ್ರ ಸರ್ಕಾರ ಸಂಪೂರ್ಣ ಮನ ಗಂಡು, ಅಗತ್ಯ ಕ್ರಮಗಳ ಬಗ್ಗೆ ಗಂಭೀರ ಗಮನಹರಿಸಿತ್ತು. ರಾಷ್ಟ್ರಮಟ್ಟದಲ್ಲಿ ದಿನದ 24 ಗಂಟೆಗಳು ಪರಿಸ್ಥಿತಿಯನ್ನು ಕಂಟ್ರೋಲ್ ರೂಂಗಳ ಮೂಲಕ ನಿಗಾವಹಿಸಲಾಗುತ್ತಿತ್ತು. ವಲಸೆ ಕಾರ್ಮಿಕರು ಸೇರಿದಂತೆ ಎಲ್ಲ ನಿರಾಶ್ರಿತರಿಗೆ ಆಹಾರ, ಆರೋಗ್ಯ ರಕ್ಷಣೆ ಮತ್ತು ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 28.03.2020ರಂದು ಆದೇಶ ಹೊರಡಿಸಿ, ಆ ಉದ್ದೇಶಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್ ಡಿ ಆರ್ ಎಫ್) ಬಳಕೆಗೆ ರಾಜ್ಯ ಸರ್ಕಾರಗಳಿಗೆ ಅನುಮೋದನೆ ನೀಡಿತ್ತು.
ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಕೂಡ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರವಾಗಿ ಸಲಹೆಗಳನ್ನು ನೀಡುತ್ತಾ ವಲಸೆ ಕಾರ್ಮಿಕರಿಗೆ ಸೂಕ್ತ ಆಪ್ತ ಸಮಾಲೋಚನೆ ಮತ್ತು ವಸತಿ, ಆಹಾರ, ನೀರು ಹಾಗೂ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು
2020ರ ಏಪ್ರಿಲ್ 19ರಂದು ಎಂಎಚ್ಎ, ಕೃಷಿ, ಕಟ್ಟಡ ನಿರ್ಮಾಣ, ಉತ್ಪಾದನಾ ಚಟುವಟಿಕೆ ಮತ್ತು ಮನ್ರೇಗಾ ಚಟುವಟಿಕೆಗಳಲ್ಲಿ ತೊಡಗಿದ್ದ ವಲಸೆ ಕಾರ್ಮಿಕರಿಗೆ ಅಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಳಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು ಮತ್ತು 20.04.2020ರಿಂದ ಜಾರಿಯಾಗುವಂತೆ ನಿರ್ಬಂಧಿತ ಪ್ರದೇಶಗಳ ಹೊರಗೆ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿತ್ತು. ಎಂಎಚ್ಎ, 2020ರ ಏಪ್ರಿಲ್ 29 ಹಾಗೂ ಮೇ 1 ರಂದು ಆದೇಶಗಳನ್ನು ಹೊರಡಿಸಿ, ಬಸ್ ಮತ್ತು ಶ್ರಮಿಕ ರೈಲುಗಳ ಮೂಲಕ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿತ್ತು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ತವರಿಗೆ ಮರಳಲು ರಸ್ತೆಗಳ ಮೇಲೆ ನಡೆದು ಹೋಗುತ್ತಿದ್ದಾಗ ಸಾವನ್ನಪ್ಪಿದ ವ್ಯಕ್ತಿಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ನಿರ್ವಹಿಸಿಲ್ಲ. ಆದರೂ ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿತ್ತು

ಕೇಂದ್ರ ಸರ್ಕಾರ 2020ರ ಮಾರ್ಚ್ 26ರಂದು “ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ” ಅಡಿ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದು, ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದ ಬಡವರಿಗೆ ಒಟ್ಟು 1.70 ಲಕ್ಷ ಕೋಟಿ ರೂ. ನೆರವು ಘೋಷಿಸಲಾಯಿತು. ಸುಮಾರು 42 ಕೋಟಿ ಬಡಜನರು ಈ ಯೋಜನೆಯಡಿ 68,820 ಕೋಟಿ ರೂ. ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ 2020ರ ಜೂನ್ 20ರಂದು “ಗರೀಬ್  ಕಲ್ಯಾಣ ರೋಜ್ಗಾರ್ ಅಭಿಯಾನ”ವನ್ನು ಆರಂಭಿಸಿದ್ದು, ಆ ಮೂಲಕ ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಜೀವನೋಪಾಯ ಅವಕಾಶಗಳು ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ  ಕ್ರಮಗಳನ್ನು ಕೈಗೊಂಡಿದೆ.

ಗೃಹ ಖಾತೆ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಅವರು, ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

***



(Release ID: 1654678) Visitor Counter : 197